ADVERTISEMENT

ಅಕಾಲಿಕ ಮಳೆ, ರೋಗ ಬಾಧೆ: ಮಾವು ಇಳುವರಿ ಕುಸಿತದ ಭೀತಿ, ರೈತರಲ್ಲಿ ಆತಂಕ

ಚಿಂತಾಮಣಿ ತಾಲ್ಲೂಕಿನ ತೋಟಗಳತ್ತ ಸುಳಿಯದ ವ್ಯಾ‍ಪಾರಿಗಳು

ಎಂ.ರಾಮಕೃಷ್ಣಪ್ಪ
Published 6 ಏಪ್ರಿಲ್ 2021, 3:55 IST
Last Updated 6 ಏಪ್ರಿಲ್ 2021, 3:55 IST
ಚಿಂತಾಮಣಿ ತಾಲ್ಲೂಕಿನ ತೋಟವೊಂದರಲ್ಲಿರುವ ಮಾವಿನ ಮರ
ಚಿಂತಾಮಣಿ ತಾಲ್ಲೂಕಿನ ತೋಟವೊಂದರಲ್ಲಿರುವ ಮಾವಿನ ಮರ   

ಚಿಂತಾಮಣಿ: ತಾಲ್ಲೂಕಿನಲ್ಲಿ ಅಕಾಲಿಕ ಮಳೆ ಹಾಗೂ ರೋಗ ಬಾಧೆಯಿಂದ ಮಾವಿನ ಇಳುವರಿಯ ಕುಸಿತದ ಭೀತಿ ಉಂಟಾಗಿದೆ.

ತಾಲ್ಲೂಕಿನಲ್ಲಿ ಸುಮಾರು 6,500 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಚಿಂತಾಮಣಿ ಮತ್ತು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕುಗಳು ‘ಮಾವಿನ ಮಡಿಲು’ ಎಂದು ಪ್ರಸಿದ್ಧಿ ಪಡೆದಿವೆ. ಇಡೀ ರಾಜ್ಯದಲ್ಲಿ ಈ ತಾಲ್ಲೂಕಿನಲ್ಲಿ ಬೆಳೆಯುವ ಹಣ್ಣುಗಳು ಪ್ರಸಿದ್ಧಿ ಪಡೆದಿವೆ. ರಾಜ್ಯದ ಒಟ್ಟು ಮಾವಿನ ಉತ್ಪಾದನೆಯ ಅರ್ಧದಷ್ಟು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿದೆ.

ಬಾದಾಮಿ, ರಸಪೂರಿ, ನೀಲಂ, ಬೆನಿಶಾ, ಮಲ್ಲಿಕಾ, ರಾಜಗೀರ, ತೋತಾಪುರಿ ಇಲ್ಲಿನ ಪ್ರಮುಖ ತಳಿಗಳಾಗಿವೆ. ಇತರೆ ಹಣ್ಣುಗಳಿಗಿಂತಲೂ ಉತ್ತಮ ರುಚಿ ಹೊಂದಿರುವ ಮಾವು ಹಣ್ಣು ಪ್ರಿಯರ ಬಾಯಲ್ಲಿ ನೀರೂರಿಸುತ್ತದೆ. ರೋಗರುಜಿನುಗಳಿಂದ ಇಳುವರಿ, ಬೆಲೆ ಕುಸಿತ ಹಾಗೂ ಹೆಚ್ಚಿನ ಆದಾಯ ಇಲ್ಲದಿರುವುದರಿಂದ ಪ್ರತಿ ವರ್ಷ ಮಾವಿನ ಬೆಳೆಯೂ ಕಡಿಮೆಯಾಗುತ್ತಿದೆ.

ADVERTISEMENT

ಸಾಮಾನ್ಯವಾಗಿ ಮಾವಿನ ಬೆಳೆಯಲ್ಲಿ ಡಿಸೆಂಬರ್, ಜನವರಿಯಲ್ಲಿ ಹೂ ಬರುತ್ತದೆ. ತಡವಾದರೆ ಫೆಬ್ರುವರಿ ಮೊದಲ ಮತ್ತು ಎರಡನೇ ವಾರದಲ್ಲಿ ಹೂ ಬರುವುದು ವಾಡಿಕೆ. ಈ ವರ್ಷ ಮಾರ್ಚ್‌ ಅಂತ್ಯದವರೆಗೂ ಮರಗಳಲ್ಲಿ ವಿವಿಧ ಹಂತಗಳಲ್ಲಿ ಹೂ ಬರುತ್ತಿದೆ. ಹೂವಿನ ಆರೋಗ್ಯದ ಪರಿಸ್ಥಿತಿಯೂ ಸರಿ ಇಲ್ಲ. ಡಿಸೆಂಬರ್, ಜನವರಿಯಲ್ಲಿ ಕಾಣಿಸಿಕೊಂಡಿರುವ ಹೂವಿನಲ್ಲಿ ಹಿಡಿಗಾತ್ರದ ಕಾಯಿಗಳು ಆಗಿವೆ. ಎರಡನೇ ಹಂತದಲ್ಲಿ ಹೂ ಕಾಣಿಸಿಕೊಂಡಿರುವ ಮರಗಳಲ್ಲಿ ಪಿಂದೆಗಳಿವೆ. ರೋಗ ಬಾಧೆಯಿಂದ ಪಿಂದೆಗಳು ನೆಲಕಚ್ಚುತ್ತಿವೆ. ಮೂರನೇ ಹಂತದಲ್ಲಿ ಕಾಣಿಸಿಕೊಂಡಿರುವ ಹೂ ಗೊಂಚಲು ಒಣಗಿ, ಈಗಾಗಲೇ ಬಂದಿರುವ ಪಿಂದೆ ಮತ್ತು ಹಿಡಿ ಕಾಯಿಗಳ ಮೇಲೆ ಬಿದ್ದು ಮಚ್ಚೆಗಳು ಕಂಡುಬರುತ್ತಿವೆ ಎಂದು ಮಾವು ಅಭಿವೃದ್ಧಿ ಕೇಂದ್ರದ ಅಧಿಕಾರಿಗಳು ವಿವರಿಸುತ್ತಾರೆ.

ಮರಗಳಲ್ಲಿ ಈಗಲೂ ಚಿಗುರು ದಟ್ಟವಾಗಿದೆ. ಹೂವಿನೊಂದಿಗೆ ಚಿಗುರು ಬಂದರೆ ಸರಿಯಾಗಿ ಹೀಚು ಕಟ್ಟುವುದಿಲ್ಲ. ಚಿಗುರಿಗೆ ಬೀಳುವ ಅಂಟು ನೊಣ ಹೂವಿನ ನಾಶಕ್ಕೆ ಕಾರಣವಾಗುತ್ತದೆ. ಜಿಗಿಹುಳು ಸ್ರವಿಸುವ ಅಂಟು ಹೂವಿನ ಮೇಲೆ ಸುರಿದು ಹೂ ಹಾಳಾಗುತ್ತದೆ. ಇದರಿಂದ ಇಳುವರಿ ತೀವ್ರವಾಗಿ ಕುಸಿಯುವ ಭೀತಿ ಎದುರಾಗಿದೆ.
ಜತೆಗೆ ಜನವರಿಯಲ್ಲಿ ಬಂದ ಅಕಾಲಿಕ ಆಲಿಕಲ್ಲು ಮಳೆ ಮಾವಿನ ಹೂವಿಗೆ ಕಂಟಕವಾಗಿದೆ. ತಾಲ್ಲೂಕಿನಲ್ಲಿ ಸುರಿದ ಮಳೆ, ಬಿರುಗಾಳಿ, ಆಲಿಕಲ್ಲು ಹೊಡೆತಕ್ಕೆ ಸಿಕ್ಕಿ ಬಹುತೇಕ ಫಸಲು ಹಾಳಾಗಿದೆ. ಮುಖ್ಯವಾಗಿ ಹೂ ಉದುರಿ ಹಾನಿ ಸಂಭವಿಸಿದೆ. ಪಿಂದೆಗಳ ಮೇಲೆ ಆಲಿಕಲ್ಲು ಬಿದ್ದು ಹಾಳಾಗಿವೆ.

ಕೊರೊನಾ ಎರಡನೇ ಅಲೆಯಿಂದ ಮಾವಿನ ಮಾರಾಟಕ್ಕೂ ಅಡ್ಡಿಯಾಗುವ ಸಂಭವವಿದೆ. ಮಾರುಕಟ್ಟೆ ದೊರೆಯದೆ ಬೆಲೆ ಕುಸಿಯುವ ಭೀತಿ ಬೆಳೆಗಾರರು ಹಾಗೂ ವ್ಯಾಪಾರಿಗಳನ್ನು ಕಾಡುತ್ತಿದೆ. ಮಾರುಕಟ್ಟೆ ಕೊರತೆ, ಹಣ್ಣುಗಳ ಶೇಖರಣೆಗೆ ಶಿಥಲಕೇಂದ್ರದ ಕೊರತೆ, ಹೆಚ್ಚಿದ ಸಾಗಣೆ ವೆಚ್ಚ, ದಳ್ಳಾಳಿಗಳ ಹಾವಳಿಯಿಂದಾಗಿ ಮಾವು ಬೆಳೆ ಮತ್ತು ನಿರ್ವಹಣೆ ರೈತರಿಗೆ ಹೊರೆಯಾಗಿದ್ದು, ಇತರೆ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ.

‘ಈ ವರ್ಷ ಉತ್ತಮವಾಗಿ ಮಳೆಯಾಗಿದ್ದು ಭೂಮಿಯಲ್ಲಿ ತೇವಾಂಶ ಇದೆ. ಮಾವು ಚೆನ್ನಾಗಿ ಹೂ ಬಿಟ್ಟು ಕಣ್ಮನ ಸೆಳೆಯುತ್ತಿದ್ದವು. ಅಕಾಲಿಕ ಮಳೆಯಿಂದ ಸಾಕಷ್ಟು ಹೂ, ಪಿಂದೆ ಉದುರಿದೆ. ಈ ಬಾರಿ ಇಳುವರಿ ತೀವ್ರವಾಗಿ ಕುಸಿಯಲಿದ್ದು ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಲೆ ಕುಸಿತದ ಕಾರಣದಿಂದ ವ್ಯಾಪಾರಿಗಳು ತೋಟಗಳ ಕಡೆ ಕಾಲಿಡುತ್ತಿಲ್ಲ. ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯವಿಲ್ಲ’ ಎನ್ನುತ್ತಾರೆ ಮಾವು ಬೆಳೆಗಾರ ನಾಗಿರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.