ADVERTISEMENT

ಕಾಡಿನ ಬೆಳೆ ‘ಶತಾವರಿ’ ನಾಡಿನಲ್ಲಿ..!

ಸರ್ವರೋಗಕ್ಕೂ ಮದ್ದಾದ ಔಷಧೀಯ ಸಸ್ಯ ಬೆಳೆದ ರಾಜಕುಮಾರ

ರಮೇಶ ಎಸ್.ಕತ್ತಿ
Published 13 ಮೇ 2019, 19:45 IST
Last Updated 13 ಮೇ 2019, 19:45 IST
ಶತಾವರಿ ಬೆಳೆಯಲ್ಲಿ ರೈತ ರಾಜಕುಮಾರ ಕೋಣಶಿರಸಗಿ
ಶತಾವರಿ ಬೆಳೆಯಲ್ಲಿ ರೈತ ರಾಜಕುಮಾರ ಕೋಣಶಿರಸಗಿ   

ಆಲಮೇಲ:ಪಟ್ಟಣದ ಯುವ ರೈತ ರಾಜಕುಮಾರ ಕೋಣಶಿರಸಗಿ ಆಲಮೇಲ ತಾಲ್ಲೂಕಿನಲ್ಲಿಯೇ ಹೊಸ ಪ್ರಯೋಗ ನಡೆಸಿದ್ದಾರೆ. ‘ಶತಾವರಿ’ ಎಂಬ ಔಷಧಿ ಸಸ್ಯ ಬೆಳೆಯನ್ನು ತಮ್ಮ ಹೊಲದಲ್ಲಿ ಬೆಳೆಯುವ ಮೂಲಕ ಕೃಷಿ ಕ್ರಾಂತಿಗೆ ಕೈ ಹಾಕಿದ್ದಾರೆ.

ಈ ಔಷಧಿ ಬೆಳೆಯನ್ನು ಬೆಳೆದ ಸಾಧಕರ ಕುರಿತು ಓದಿ, ಅದನ್ನು ಮಾಡುವ ಕುತೂಹಲದಿಂದ ಆರಂಭದಲ್ಲಿ ಒಂದು ಎಕರೆಯಲ್ಲಿ ಮಾಡಿರುವೆ ಎನ್ನುವ ರಾಜಕುಮಾರ, ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಉಮೇದು ಹೊಂದಿದ್ದಾರೆ. 15 ಎಕರೆ ಕೃಷಿ ಭೂಮಿ ಇವರಿಗಿದೆ.

‘ಶತಾವರಿ’ ಇದೊಂದು ಔಷಧ ಸಸ್ಯ. ಹೆಚ್ಚಾಗಿ ಕಾಡಲ್ಲಿ ಬೆಳೆಯುತ್ತದೆ. ಇದು ಎಂಥಹ ಭೂಮಿಯಲ್ಲಾದರೂ ಬೆಳೆಯಬಲ್ಲದು. ಮೇಲೆ ಉಗಡೆ ನೋಡಲು ಸಬ್ಬಸಿಗೆ ಸೊಪ್ಪಿನಂತಿದೆ, ಬಳ್ಳಿಯ ರೂಪದಲ್ಲಿ ಇರುತ್ತದೆ. ಗೆಣಸು ತರಹ ಭೂಮಿಯೊಳಗಡೆ ಬೇರು ಬಿಡುತ್ತದೆ. ಈ ಬೇರು ಒಣಗಿಸಿ ಅದನ್ನು ಸಂಸ್ಕರಿಸಿ, ನೂರಾರು ರೋಗಗಳಿಗೆ ಔಷಧ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ಬಹಳ ಬೇಡಿಕೆಯೂ ಇದೆ.

ADVERTISEMENT

ಇದೆಲ್ಲವನ್ನೂ ತಿಳಿದುಕೊಂಡ ರಾಜಕುಮಾರ, ಪ್ರಸಕ್ತ 5000 ಶತಾವರಿ ಸಸಿಗಳನ್ನು ಮಹಾರಾಷ್ಟ್ರದ ಮಂಗಳವೇಡಾದಿಂದ ತರಿಸಿಕೊಂಡು ನಾಟಿ ಮಾಡಿದ್ದಾರೆ. 18ನೇ ತಿಂಗಳಲ್ಲಿ ಈ ಬೆಳೆ ಕಟಾವಿಗೆ ಬರುತ್ತದೆ. ನಂತರ ಜೆಸಿಬಿ ಯಂತ್ರದ ಸಹಾಯದಿಂದ ಕಿತ್ತು, ಒಣಗಿಸಿ ಮಾರುಕಟ್ಟೆಗೆ ಸಾಗಿಸಲಾಗುತ್ತದೆ.

ಖರ್ಚು: ‘ಪ್ರತಿ ಸಸಿಗೆ ₹ 20ರಂತೆ, 5000 ಸಸಿಗೆ ₹ 1 ಲಕ್ಷ. ತುಂತುರು ನೀರು ಸರಬರಾಜಿಗೆ ₹ 50,000. ಆರಂಭದಲ್ಲಿ ಇತರೆ ₹ 50,000 ಖರ್ಚು ತಗುಲಲಿದೆ. ಒಟ್ಟಾರೆ ₹ 2 ಲಕ್ಷ ಖರ್ಚು ಬರುತ್ತದೆ. ಇದನ್ನು ನೋಡಿಕೊಳ್ಳಲು ಒಬ್ಬ ಕೆಲಸಗಾರ ಇದ್ದಾನೆ. ಇಳುವರಿ ಹೆಚ್ಚು ಬರಲು ತಿಪ್ಪೆಗೊಬ್ಬರ ಹಾಕಿದ್ದೇನೆ’ ಎನ್ನುವ ರಾಜಕುಮಾರ, ‘ಶತಾವರಿಗೆ ಯಾವುದೇ ರೋಗ ಬರುವುದಿಲ್ಲ’ ಎನ್ನುತ್ತಾರೆ.

‘ವಾರಕ್ಕೆ ಕನಿಷ್ಠ ಎರಡು ಸಲ ಡ್ರಿಪ್ ಮೂಲಕ ನೀರುಣಿಸಬೇಕು. ಎರಡು ಬೋರ್‌ವೆಲ್‌ಗಳು ಹೊಲದಲ್ಲಿ ಇದ್ದು, ನೀರಿನ ಕೊರತೆಯಾಗಿಲ್ಲ. ಇದರ ಜತೆಗೆ ದ್ರಾಕ್ಷಿ ಬೆಳೆಯನ್ನು ಮಾಡಿರುವುದರಿಂದ ಎರಡೂ ಬೆಳೆಗೆ ನೀರು ಸಾಕಾಗುತ್ತದೆ’ ಎಂದು ಕೋಣಶಿರಸಗಿ ಹೇಳಿದರು.

ಇಳುವರಿ: ‘ಪ್ರತಿ ಗಿಡವು ಕನಿಷ್ಠ ಎರಡರಿಂದ ಮೂರು ಕೆ.ಜಿ.ಯಷ್ಟು ಶತಾವರಿ ಬೇರು (ಒಣಗಿಸಿದ ಮೇಲೆ) ಕೊಡುತ್ತದೆ. ಒಂದು ಎಕರೆಗೆ ಕನಿಷ್ಠ ಏನಿಲ್ಲವೆಂದರೂ ಎಲ್ಲಾ ಖರ್ಚು ಕಳೆದು, ಒಂದೂವರೆ ವರ್ಷಕ್ಕೆ ₹ 5 ಲಕ್ಷ ಕೈಗೆ ಸಿಗಲಿದೆ ಎಂಬ ಲೆಕ್ಕಾಚಾರವನ್ನು ಕಂಪನಿಯೊಂದು ನೀಡಿದೆಯಂತೆ. ಹೊಲಕ್ಕೆ ಬಂದು ಬೆಳೆಯನ್ನು ಒಪ್ಪಂದ ಮಾಡಿಕೊಂಡ ಕಂಪನಿಯವರು ತೆಗೆದುಕೊಂಡು ಹೋಗುತ್ತಾರೆ.’

‘ಈ ಬೆಳೆಗೆ ಯಾವುದೇ ಕೀಟನಾಶಕ ಸಿಂಪಡಿಸುವ ಖರ್ಚು ಬರುವುದಿಲ್ಲ. ಲಾಗೋಡಿ ಕಡಿಮೆ. ಈ ಔಷಧಿ ಸಸ್ಯವನ್ನು ಮಹಾರಾಷ್ಟ್ರದಲ್ಲಿ ಹೆಚ್ಚು ರೈತರು ಬೆಳೆಯುತ್ತಿದ್ದಾರೆ. ನಮ್ಮಲ್ಲಿ ಅತ್ಯಂತ ವಿರಳ, ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದರಿಂದ ಕಡಿಮೆ ಭೂಮಿ ಇದ್ದಾಗಲೂ, ರೈತ ಹೆಚ್ಚು ಸಂಪಾದನೆ ಮಾಡಬಹುದು ಎಂಬ ಆತ್ಮವಿಶ್ವಾಸ’ ಅವರದ್ದು.

ಪ್ರಯೋಗಗಳು ನಡೆಯಲಿ..!

15 ಎಕರೆಯಲ್ಲಿ ಮೂರು ಎಕರೆ ದ್ರಾಕ್ಷಿ ಮಾಡಿದ್ದಾರೆ. ಉಳಿದ ಭೂಮಿಯಲ್ಲಿ ಸಾಂಪ್ರದಾಯಿಕ ಆಹಾರ ಬೆಳೆಗಳನ್ನು ಬೆಳೆಯುತ್ತಿರುವುದಾಗಿ ಹೇಳಿದ ರಾಜಕುಮಾರ, ‘ರೈತನಿಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ಬೆಳೆ ಬೆಳೆಯುವ ಬಗ್ಗೆ ಹೇಳಿಕೊಡಬೇಕಿದೆ.’

‘ಬೇಸಿಗೆಯಲ್ಲಿ ಪಪ್ಪಾಯಿ, ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಈ ಬೆಳೆಗಳನ್ನು ಕಡಿಮೆ ಅವಧಿಯಲ್ಲಿ ಬೆಳೆಯಬಹುದು. ಮುಂದಿನ ಬೇಸಿಗೆಗೆ ಬರುವಂತೆ ಬೆಳೆಯುವ ಹಂಬಲವಿದೆ. ಕೃಷಿ ಬಗ್ಗೆ ಅಧ್ಯಯನ ಮಾಡಿಕೊಂಡು, ರೈತರು ಹೊಸ ಬೆಳೆಗಳನ್ನು ಈ ಭಾಗಕ್ಕೆ ತರಬೇಕಿದೆ. ಜತೆಗೆ ಅದನ್ನು ಎಲ್ಲರಿಗೂ ತಿಳಿಸುವ ಕೆಲಸ ನಡೆಸಬೇಕು’ ಎನ್ನುತ್ತಾರೆ ರಾಜಕುಮಾರ ಕೋಣಶಿರಸಗಿ.

ಸಂಪರ್ಕ ಸಂಖ್ಯೆ: 9845540876

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.