ADVERTISEMENT

ಶ್ರೇಷ್ಠ ಕೃಷಿಕನ ಕೃಷಿ ಯಶೋಗಾಥೆ..!

ಸಮಗ್ರ ಕೃಷಿ ಪದ್ಧತಿಯಡಿ ಯಶಸ್ಸು ಕಂಡ ಯುವ ರೈತ ವಿಜಯಕುಮಾರ ಕಲ್ಲಪ್ಪ ತಳವಾರ

ಅಮರನಾಥ ಹಿರೇಮಠ
Published 27 ಮೇ 2019, 14:55 IST
Last Updated 27 ಮೇ 2019, 14:55 IST
ದ್ರಾಕ್ಷಿ ಪಡದಲ್ಲಿ ಮುಳಸಾವಳಗಿ ಗ್ರಾಮದ ಯುವ ರೈತ ವಿಜಯಕುಮಾರ ತಳವಾರ
ದ್ರಾಕ್ಷಿ ಪಡದಲ್ಲಿ ಮುಳಸಾವಳಗಿ ಗ್ರಾಮದ ಯುವ ರೈತ ವಿಜಯಕುಮಾರ ತಳವಾರ   

ದೇವರಹಿಪ್ಪರಗಿ: ಸಮಗ್ರ ಕೃಷಿ ಅಳವಡಿಸಿಕೊಂಡರೆ ರೈತರು ಯಶಸ್ಸಿನ ಪಥದಲ್ಲಿ ಸಾಗಬಹುದು ಎಂಬುದಕ್ಕೆ ತಾಲ್ಲೂಕಿನ ಮುಳಸಾವಳಗಿಯ ಯುವ ರೈತ ವಿಜಯಕುಮಾರ ಕಲ್ಲಪ್ಪ ತಳವಾರ ನೈಜ ನಿದರ್ಶನವಾಗಿದ್ದಾರೆ.

ಈ ಯುವ ರೈತನ ಕೃಷಿ ಸಾಧನೆಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ಅರಸಿ ಬಂದಿದ್ದು, ಇದೀಗ ಈ ಭಾಗದ ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಇವರ ಸಾಧನೆಯ ಕೃಷಿ ಕಣ್ತುಂಬಿಕೊಳ್ಳಲು ತೋಟಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಗ್ರಾಮದಲ್ಲಿರುವ ತಮ್ಮ 28 ಎಕರೆ ಜಮೀನಿನಲ್ಲಿ 6 ಎಕರೆಯಲ್ಲಿ ದ್ರಾಕ್ಷಿ, 4 ಎಕರೆಯಲ್ಲಿ ನಿಂಬೆ, 3 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡುವ ಮೂಲಕ, ವರ್ಷದಿಂದ ವರ್ಷಕ್ಕೆ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದ್ದಾರೆ.

ADVERTISEMENT

‘ನಾನು ದಶಕದಿಂದ ದ್ರಾಕ್ಷಿ ಬೆಳೆಯುತ್ತಿರುವೆ. ಈ ಅವಧಿಯಲ್ಲಿ ಎರಡು ಬಾರಿ ಮಾತ್ರ ಸಕಾಲಿಕ ಮಳೆಯಾಗದ ಹಿನ್ನೆಲೆಯಲ್ಲಿ ಇಳುವರಿ ಕಡಿಮೆ ಸಿಕ್ಕಿತ್ತೇ ಹೊರತು; ಹಾನಿಯಾಗಿರಲಿಲ್ಲ. ಎಂಟು ವರ್ಷ ಖರ್ಚು–ವೆಚ್ಚ ಕಳೆದು, ಪ್ರತಿ ವರ್ಷವೂ ₹ 10 ಲಕ್ಷ ಸರಾಸರಿ ಆದಾಯ ದೊರೆತಿದೆ.

400 ನಿಂಬೆ ಗಿಡಗಳಿಂದ ವಾರ್ಷಿಕ ₹ 3 ಲಕ್ಷ ಲಾಭ ಗಳಿಸಿರುವೆ. ರೇಷ್ಮೆ ಕೃಷಿಯನ್ನು ಇದೀಗ ಆರಂಭಿಸಲಾಗಿದ್ದು, 2018-19ನೇ ಸಾಲಿನ ರೇಷ್ಮೆ ಅಭಿವೃದ್ಧಿ ಯೋಜನೆಯಡಿ 1000 ಚದರಡಿಯ ಪ್ರತ್ಯೇಕ ರೇಷ್ಮೆ ಹುಳು ಸಾಕಣೆ ಮನೆ ನಿರ್ಮಿಸಲಾಗಿದೆ. ಇದು ವರ್ಷಕ್ಕೆ 4 ಬಾರಿ ಫಸಲು ನೀಡುತ್ತದೆ. ಈಗಾಗಲೇ ರೇಷ್ಮೆ ಕೃಷಿಯಿಂದ ಯಾಡ್‌ ಬಾರಿ ಫಸಲು ಪಡೆದು, ₹ 50,000ದವರೆಗೆ ಲಾಭ ಗಳಿಸಿದ್ದೇನೆ.

ಮುಂದಿನ ದಿನಗಳಲ್ಲಿ ಪ್ರತಿ ಎರಡು ತಿಂಗಳಿಗೊಮ್ಮೆ ₹ 50,000 ಆದಾಯ ಪಡೆಯುವುದರಲ್ಲಿ ಯಾವುದೇ ಸಂಶಯವಿಲ್ಲ. ಇನ್ನೂ ಉಳಿದ ಜಮೀನಿನಲ್ಲಿ ಸಾಂಪ್ರದಾಯಿಕ ಮುಂಗಾರು ಹಾಗೂ ಹಿಂಗಾರಿ ಬೆಳೆಗಳಾದ ತೊಗರಿ, ಜೋಳ, ಮೆಕ್ಕೆಜೋಳ, ಗೋಧಿಗಳನ್ನು ಬೆಳೆಯಲಾಗುತ್ತಿದೆ. ಇವುಗಳಿಂದಲೂ ವಾರ್ಷಿಕ ₹ 2 ಲಕ್ಷದವರೆಗೆ ಉತ್ಪನ್ನ ದೊರೆಯುತ್ತಿದೆ.

ಕೃಷಿಗೆ ಪೂರಕವಾಗಿ ಎರಡು ಆಕಳು, ನಾಲ್ಕು ಕುರಿ ಸಾಕಿರುವೆ. ನಿತ್ಯವೂ 10 ಲೀಟರ್ ಹಾಲು ದೊರಕುತ್ತಿದ್ದು, ಒಂದು ಲೀಟರ್ ಹಾಲಿಗೆ ₹ 50ರಂತೆ ಆರು ಲೀಟರ್‌ ಹಾಲನ್ನು ಮಾರಲಾಗುತ್ತಿದೆ. ಕೇವಲ ಹೈನುಗಾರಿಕೆಯಿಂದಲೇ ತಿಂಗಳಿಗೆ ₹ 9,000 ಹಣ ಸಿಗುತ್ತಿದೆ’ ಎಂದು ವಿಜಯಕುಮಾರ ತಳವಾರ ತಮ್ಮ ಸಮಗ್ರ ಕೃಷಿಯ ಯಶೋಗಾಥೆಯನ್ನು ಎಳೆ ಎಳೆಯಾಗಿ ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟರು.

ಕೃಷಿಗೆ ಅಗತ್ಯವಾದ ನೀರು ಪೂರೈಸಲು ಒಟ್ಟು ಆರು ಕೊಳವೆಬಾವಿಗಳಿದ್ದು, ಇವುಗಳ ನೀರನ್ನು ಸಂಗ್ರಹಣೆ ಮಾಡಲು 21 ಮೀಟರ್ ಸುತ್ತಳತೆಯ ಕೃಷಿ ಹೊಂಡ ನಿರ್ಮಿಸಿಕೊಂಡಿದ್ದಾರೆ. ಹೊಂಡದ ನೀರು ಕಲುಷಿತಗೊಳ್ಳದಂತೆ, ಮೀನು ಸಾಕಣೆ ಸಹ ಮಾಡಿದ್ದಾರೆ. ಸಂಪರ್ಕ ಸಂಖ್ಯೆ: 9108042981

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.