ADVERTISEMENT

ಬಳ್ಳಾರಿ: ‘ಸುಸ್ಥಿರ ಕೃಷಿ’ಗಾಗಿ ಸಾವಿರದ ಓಟ, ಬೆಂಗಳೂರಿನವರ ಮೇಲುಗೈ

ಸುಕೋ ಬ್ಯಾಂಕ್‌ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜನೆ, ಹಲವು ಜಿಲ್ಲೆಗಳ ಕ್ರೀಡಪಟುಗಳು ಭಾಗಿ, ಲಕ್ಷ್ಮಣ, ಮಹಾಂತೇಶ್‌ ಸಾಧನೆ

ಕೆ.ನರಸಿಂಹ ಮೂರ್ತಿ
Published 5 ಜನವರಿ 2019, 3:09 IST
Last Updated 5 ಜನವರಿ 2019, 3:09 IST
ಸುಸ್ಥಿರ ಕೃಷಿಗಾಗಿ ಸಾವಿರದ ಓಟ ಸ್ಪರ್ಧೆ ಶನಿವಾರ ನಡೆಯಿತು.
ಸುಸ್ಥಿರ ಕೃಷಿಗಾಗಿ ಸಾವಿರದ ಓಟ ಸ್ಪರ್ಧೆ ಶನಿವಾರ ನಡೆಯಿತು.   

ಬಳ್ಳಾರಿ:ಸುಕೋ ಬ್ಯಾಂಕ್‌ ಬೆಳ್ಳಿ ಹಬ್ಬದ ಅಂಗವಾಗಿ ನಗರದಲ್ಲಿ ಶನಿವಾರ ಮುಂಜಾನೆ ನಡೆದ ‘ಸುಸ್ಥಿರ ಕೃಷಿ’ಗಾಗಿ ಸಾವಿರದ ಓಟ ಸ್ಪರ್ಧೆಯಲ್ಲಿ ಬೆಂಗಳೂರಿನ ಲಕ್ಷ್ಮಣ (14:23:17) ಮೊದಲ ಗುರಿ ಮುಟ್ಟಿ ₹ 25 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡರು.

ಅವರಿಗೆ ಸರಿಸಮನಾಗಿ ಪೈಪೋಟಿ ನೀಡಿದ ಗದಗ್‌ನ ಮಹಾಂತೇಶ್‌ ಬಿಂಗಿ (14:24:92) ಎರಡನೇ ಸ್ಥಾನ ಪಡೆದು ₹ 15 ಸಾವಿರ ನಗದು ಬಹುಮಾನವನ್ನು ತನ್ನದಾಗಿಸಿಕೊಂಡರು. ಬೆಂಗಳೂರಿನ ಭಾನುಪ್ರಕಾಶ್‌ (14:26:14) ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ₹ 10 ಸಾವಿರ ನಗದು ಬಹುಮಾನ ಪಡೆದರು.

ಬಹುಮಾನ ಗಳಿಸಲು ಆಗದಿದ್ದರೂ ಮಹಿಳೆಯರ ವಿಭಾಗದಲ್ಲಿ ದಾವಣಗೆರೆಯ ಎ.ಅಕ್ಷತಾ (17:37:18) ಮೊದಲು ಗುರಿ ಮುಟ್ಟಿದರೆ, ಬಳ್ಳಾರಿಯ ಕ್ರೀಡಾಪಟುಗಳಾದ ಎಸ್‌.ಕಾವ್ಯ (20:25:30) ಹಾಗೂ ವಿ.ಸುದೀಕ್ಷಾ (20:27:14) ನಂತರದ ಸ್ಥಾನಗಳನ್ನು ಪಡೆದು ಗಮನ ಸೆಳೆದರು.

ADVERTISEMENT

ನಗರದ ಕನಕದುರ್ಗಮ್ಮ ಗುಡಿ ಆವರಣದಲ್ಲಿ ಓಟಕ್ಕೆ, ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್‌ ಕೃಷಿ ಸಾಧಕ ಪ್ರಶಸ್ತಿಗೆ ಆಯ್ಕೆ ಮಾಡಿರುವ ಅಜ್ಜಪ್ಪ ಕುಲುಗೋಡು ಮತ್ತು ಧರ್ಮರೆಡ್ಡಿ ಲಕ್ಕಣ್ಣನವರ್‌ ಹಸಿರು ನಿಶಾನೆ ತೋರಿದರು.

ಸುಸ್ಥಿರ ಕೃಷಿಗಾಗಿ ಸಾವಿರದ ಓಟ ಸ್ಪರ್ಧೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ (ಎಡದಿಂದ) ಬೆಂಗಳೂರಿನ ಲಕ್ಷ್ಮಣ, ಗದಗ್‌ನ ಮಹಾಂತೇಶ್‌ ಬಿಂಗಿ ಬೆಂಗಳೂರಿನ ಭಾನುಪ್ರಕಾಶ್‌

ಗುಡಿಯ ಆವರಣದಿಂದ ಶುರುವಾದ ಓಟ ಗಡಿಗಿ ಚೆನ್ನಪ್ಪ ವೃತ್ತ, ರೈಲು ನಿಲ್ದಾಣ ರಸ್ತೆ, ಎಚ್‌.ಆರ್‌.ಗವಿಯಪ್ಪ ವೃತ್ತ, ಅಂಬೇಡ್ಕರ್‌ ವೃತ್ತ, ಎಸ್ಪಿ ವೃತ್ತದ ಮೂಲಕ ಗುಡಿಯಲ್ಲಿ ಕೊನೆಗೊಂಡಿತು.

ಜಿಲ್ಲಾ ಅಥ್ಲೆಟಿಕ್ಸ್‌ ತರಬೇತುದಾರ ಕೆ.ಎನ್‌.ರಾಮಸ್ವಾಮಿ, ವಿದ್ಯಾನಗರ ಕ್ರೀಡಾ ವಸತಿ ಶಾಲೆಯ ಅಥ್ಲೆಟಿಕ್ಸ್‌ ತರಬೇತುದಾರ ಅಶೋಕ್‌ ಮಂಟೂರ್ ತೀರ್ಪುಗಾರರಾಗಿದ್ದರು.

ನೀರಾ ವಿತರಣೆ: ಮಲೆನಾಡು ರೈತ ಉತ್ಪಾದಕ ಕಂಪನಿ ತಯಾರಿಸಿದ ನೀರಾ ಪಾನೀಯವನ್ನು ಸ್ಪರ್ಧಿಗಳಿಗೆ ವಿತರಿಸಿದ್ದು ವಿಶೇಷವಾಗಿತ್ತು.

ಬ್ಯಾಂಕಿನ ಅಧ್ಯಕ್ಷ ಮೋಹಿತ್‌ ಮಸ್ಕಿ, ಸಂಸ್ಥಾಪಕ ಅಧ್ಯಕ್ಷ ಮನೋಹರ್‌ ಮಸ್ಕಿ, ಕಾರ್ಯನಿರ್ವಾಹಕ ನಿರ್ದೇಶಕ ಪರಿಮಳಾಚಾರ್ಯ ಅಗ್ನಹೋತ್ರಿ, ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಶಿವಾನಂದ ಕಳವೆ ಇದ್ದರು.

ಪರಿಹಾರ ನಿಧಿಗೆ: ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕ್ರೀಡಾಪಟುಗಳು ಪಾವತಿಸಿದ ನೋಂದಣಿ ಶುಲ್ಕವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗುವುದು ಎಂದು ಬ್ಯಾಂಕ್‌ ಘೋಷಿಸಿದೆ.

ಸುಸ್ಥಿರ ಕೃಷಿಗಾಗಿ ಸಾವಿರದ ಓ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.