ADVERTISEMENT

ನಾವು ಕಳೆಗಳು, ನಾವು ಬೆಳೆಗಳು...!

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:30 IST
Last Updated 27 ಮೇ 2019, 19:30 IST

ನಾವು ಕಳೆಗಿಡಗಳು. ನಿಜ, ನೀವು ಬಯಸದೆಯೇ ಬೆಳೆದವರು. ಅದೂ ನಿಜ. ನಿಮ್ಮ ಹೊಲ-ತೋಟಗಳಲ್ಲಿ ಇರುತ್ತೇವೆ. ನಾವು ನಿಮಗೆ ತೊಂದರೆ ಕೊಡುತ್ತೇವೆಂದು, ನಮ್ಮನ್ನು ಬೇರೆ ಬೇರೆ ಕಾಲದಲ್ಲೂ ನೀವು ಹೊರಹಾಕಿದರೂ, ಮತ್ತೆ ಚಿಗುರುತ್ತಾ ಬರುವವರು - ಬೆಳೆಯುವವರು ನಾವು.

ನಮ್ಮನ್ನು ನಿರ್ಮೂಲನೆ ಮಾಡಲು ನಿಮಗೇಕೆ ಅಷ್ಟು ಆತುರ? ಅದೆಷ್ಟು ಬಗೆಯ ಆಯುಧಗಳನ್ನು ನಮ್ಮ ಮೇಲೆ ಪ್ರಯೋಗಿಸಿದ್ದೀರಿ. ಅದೆಷ್ಟು ಬಗೆಯ ಕಾರ್ಕೋಟಕ ವಿಷಗಳನ್ನು ನಮ್ಮ ಮೇಲೆ ಸುರಿದಿದ್ದೀರಿ? ನಮ್ಮನ್ನು ನಿರ್ನಾಮ ಮಾಡಲು ನೀವು ನಡೆಸಿರುವ ಒಂದೊಂದು ಪ್ರಯತ್ನವೂ ನಮಗೆ ವರವಾಗಿಯೇ ಇದೆ. ನಾವು ಇನ್ನಷ್ಟು - ಮತ್ತಷ್ಟು - ಮಗದಷ್ಟು ಬಲಿಷ್ಟವಾಗುತ್ತಿದ್ದೇವೆ, ಗೊತ್ತಾ? ನಿಮ್ಮ ಯಾವುದೇ ಅಸ್ತ್ರವೂ ನಮ್ಮನ್ನು ಮೂಲೋತ್ಪಾಟನೆ ಮಾಡಲಾಗದು.. ಏಕೆ ಗೊತ್ತೆ?

ನಾವೂ ನಿಸರ್ಗದೇವಿಯ ಮಕ್ಕಳು. ಮಣ್ಣಿನೊಂದಿಗೆ ಬೆಳೆಯುವ ನಮ್ಮನ್ನು ಸಸ್ಯಶಾಮಲೆಯೆನ್ನುತ್ತಾರೆ. ಮಣ್ಣನ್ನು ವಸುಧೆ / ಭೂಮಿ ಎಂದು ಗುರುತಿಸುತ್ತಾರೆ. ನಾವಿಬ್ಬರೂ ಒಂದು ರೀತಿಯಲ್ಲಿ ಪರಸ್ಪರಾವಲಂಬಿಗಳು. ಮೊದಲು ಹುಟ್ಟಿದವಳೇ ವಸುಧೆ (ಭೂಮಿ). ಅವಳಿಗೆ ಕೋಟ್ಯಂತರ ಮಕ್ಕಳು (ಮಣ್ಣು ಜೀವಾಣುಗಳು). ಈ ಮಕ್ಕಳು ಬದುಕಲು - ಬಾಳಲು ತಂಪು ವಾತಾವರಣ ಬೇಕಿತ್ತು. ತಿನ್ನಲು ಆಹಾರ ಬೇಕಿತ್ತು. ಇದನ್ನು ಅರಿತ ನಿಸರ್ಗದೇವಿ ನಮ್ಮನ್ನು (ಗಿಡಗಳನ್ನು) ಸೃಷ್ಟಿಸಿದಳು. ನಾವು ಹುಟ್ಟಲು ನಮಗೊಂದು ಆಧಾರ ಬೇಕಿತ್ತು. ವಸುಧೆಯೇ ನಮಗೆ ಹುಟ್ಟಿ ಬೆಳೆಯಲು ಆಧಾರವಾದಳು.

ADVERTISEMENT

ನಾವು ಸಾವಿರಾರು ಬಗೆಯಲ್ಲಿದ್ದೇವೆ. ಹೇಗ್ಹೋಗೋ ಬೆಳೆಯುತ್ತಾ, ವಸುಧೆಗೆ ಸೂರ್ಯನ ಬಿಸಿ ತಾಕದಂತೆ ನೆರಳು ನೀಡುತ್ತೇವೆ. ಕವಚವಾಗುತ್ತೇವೆ. ಆ ನೆರಳಿನಿಂದ ತಂಪಾದ ವಾತಾವರಣದಲ್ಲಿ ವಸುಧೆಯ ಮಕ್ಕಳಾದ ನೂರಾರು ಮಣ್ಣು ಜೀವಾಣುಗಳು ಹುಟ್ಟಿದರು. ಬೆಳೆದರು. ನಮ್ಮ ಬೇರುವಲಯದ ಸುತ್ತಮುತ್ತಲೂ ತಂಪಾಗಿ ಜೀವಿಸುತ್ತಿದ್ದಾರೆ.

ಮೊದಮೊದಲು ನಮ್ಮನ್ನು ಚೆನ್ನಾಗಿಯೇ ಬಳಸಿಕೊಳ್ಳುತ್ತಿದ್ದ ನಿಮಗೆ ಇದ್ದಕ್ಕಿದ್ದಂತೆ ನಾವೇಕೆ ಬೇಡವಾಗಿದ್ದೇವೆ? ನಮ್ಮಿಂದ ನಿಮಗಾಗುತ್ತಿದ್ದ ಪ್ರಯೋಜನಗಳು ಮರೆತುಹೋಯಿತೇ? ನೀವೇ ಅಲ್ಲವೆ ಈ ಹಿಂದೆ ನಮ್ಮನ್ನು ವಸುಧೆಯ ಪೋಷಕರೆಂದು ಕರೆದಿದ್ದು. ಕೃಷಿ ಆರಂಭಿಸಿದಾಗಿನಿಂದಲೂ, ನಿಮಗೆಲ್ಲ ಗೆಳೆಯರಾಗಿಯೇ ಇದ್ದ ನಮ್ಮನ್ನು ಈಗೀಗ ಖಳರೆಂದೇಕೆ ದೂರುತ್ತಿದ್ದೀರಿ? ನಮ್ಮಿಂದ ನಿಮಗೆ - ನಿಮ್ಮ ಸಮುದಾಯಕ್ಕೆ ನಾವು ಎಷ್ಟೆಲ್ಲ ಸಹಕಾರ ನೀಡುತ್ತಿದ್ದೇವೆ, ಗೊತ್ತಾ ?

ಮಣ್ಣು ಜೀವಾಣುಗಳಿಗೆ ನಾವೇ ಪ್ರಧಾನ ಪೋಷಕರು. ನಮ್ಮನ್ನು ನೋಡಿ, ಮಣ್ಣಿನ ಗುಣಗಳನ್ನು ಹೇಳಿಬಿಡುತ್ತಿದ್ದರು.

ಮಣ್ಣಿನ ಆರೋಗ್ಯ ಸಮತೋಲನದಲ್ಲಿರುವುದು ನಮ್ಮಿಂದಲೇ.

ನಾವು ಪೂರೈಸುವ ವಿಶೇಷ ಪೋಷಕಾಂಶಗಳಿಂದ ಮಾತ್ರವೇ ಮಣ್ಣು ಫಲವತ್ತಾಗಿದೆ.

ನಮ್ಮ ಬೇರುಗಳ ಮೂಲಕ ಮಣ್ಣನ್ನು ನಾವು ಬಲವಾಗಿ ಹಿಡಿದಿಟ್ಟಲ್ಲಿ, ಮಣ್ಣು ಸವಕಳಿ ಆಗುವುದಿಲ್ಲ.

ಭೂಮಿಯ ಹೊದಿಕೆ ಸದಾಕಾಲ ಹಸಿರಾಗಿರುವುದು ನಮ್ಮಿಂದಲೇ.

ನಮ್ಮನ್ನು ಕಾಂಪೋಸ್ಟ್ ಮಾಡುವಾಗಲೂ ಸಹ ಬಳಸಬಹುದು.

ಬಹುತೇಕ ಕೀಟವಲಯಕ್ಕೆ ನಾವೇ ಪ್ರಮುಖ ಆಹಾರದ ಮೂಲ. ನಮ್ಮನ್ನು ನೋಡುತ್ತಲೇ ಮಣ್ಣಿನ ತಾಕತ್ತನ್ನು ತಿಳಿಯಬಹುದು.

ವಿವಿಧತೆಯಲ್ಲಿ ಏಕತೆ. ಇದು ನಮ್ಮ ತಾಯಿ ನಿಸರ್ಗಾದೇವಿಯ ಮೂಲ ನಿಯಮ. ನಾವು ಹಾಗೆಯೇ. ಯಾವುದೇ ರೂಪಗಳಲ್ಲಿದ್ದರೂ, ನಮ್ಮ ಕೆಲಸ ಹಾಗೂ ಕೊಡುಗೆ ಒಂದೇ ರೀತಿಯಲ್ಲಿರುತ್ತದೆ.

ನಾವಿದ್ದ ಕಡೆ ಮಣ್ಣು ತೇವಾಂಶದಲ್ಲಿರುತ್ತದೆ.

ಬಹುತೇಕ ಕೀಟಗಳು ತಮ್ಮ ಮುಂದಿನ ಸಂತತಿಯ ಬೆಳವಣಿಗೆಗಾಗಿ ಇಡುವ ಮೊಟ್ಟೆಗಳು ನಮ್ಮ ಮೇಲೆಯೇ. ನಮ್ಮ ಎಲೆಗಳ ಹಿಂಭಾಗದಲ್ಲಿಯೇ.

ಬಹುತೇಕ ಸಸ್ಯಾಹಾರಿ ಪಶುಗಳಿಗೆ ನಾವೇ ಆಹಾರದ ಮೂಲ.

ಈ ಹಿಂದೆ ನಮ್ಮನ್ನು ಆಪತ್ಕಾಲದ ನೆಂಟರೆಂದು ಭಾವಿಸಿದ್ದರು. ಬರಗಾಲದ ಸಮಯದಲ್ಲಿ, ನಮ್ಮನ್ನು ಹುಡುಕುತ್ತಾ, ಗುರುತಿಸುತ್ತಾ, ನಮ್ಮನ್ನು ಕಿತ್ತು ಅಡುಗೆ ಮಾಡಿ ತಿನ್ನುತ್ತಿದ್ದರು.

ಅಷ್ಟೇ ಏಕೆ, ನಿಮಗೆ ಹಾಗೂ ನಿಮ್ಮ ಜಾನುವಾರುಗಳಿಗೆ ಬರುವ ಕಾಯಿಲೆಗಳನ್ನು ಗುಣಪಡಿಸಲು ನಮ್ಮನ್ನೇ ಮೂಲಿಕೆಯಾಗಿ ಬಳಸುತ್ತಿದ್ದರು.

ಬಹುತೇಕ ವನ್ಯಪ್ರಾಣಿಗಳಿಗೆ ನಾವೇ ಆಶ್ರಯದಾತರು. ನಮ್ಮನ್ನೇ ಆಧರಿಸಿ ಬಹುತೇಕ ಪ್ರಾಣಿ - ಪಕ್ಷಿಗಳು ಬದುಕು ನಡೆಸುತ್ತಿದ್ದವು.

ಹೇಳುತ್ತಾ ಹೋದರೆ, ಇನ್ನೂ ಎಷ್ಟೋ ಇದೆ. ಇನ್ನಾದರೂ ನಮ್ಮನ್ನು ಬೆಳೆಯಲು ಬಿಡಿ. ಬದುಕಲು ಬಿಡಿ. ನಮ್ಮೊಂದಿಗೆ ನೀವೂ ಬೆಳೆಯಬೇಕು. ಬದುಕಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.