ADVERTISEMENT

ಕಳೆ ಮುಕ್ತ ಕೃಷಿ; ಸಮೃದ್ಧ ಫಸಲು..!, ವೈವಿಧ್ಯಮಯ ಬೆಳೆ ಪದ್ಧತಿ

ನಿಶ್ಚಿತ ಆದಾಯ ಕಟ್ಟಿಟ್ಟ ಬುತ್ತಿ

ಚಂದ್ರಶೇಖರ ಕೊಳೇಕರ
Published 15 ಅಕ್ಟೋಬರ್ 2018, 19:30 IST
Last Updated 15 ಅಕ್ಟೋಬರ್ 2018, 19:30 IST
ಪುತ್ರ ಮಲ್ಲಿಕಾರ್ಜುನ ಜತೆ ಕಬ್ಬಿನ ಗದ್ದೆಯಲ್ಲಿ ಗುರಪ್ಪ ಶಿವಪ್ಪ ಕೋಟಿ
ಪುತ್ರ ಮಲ್ಲಿಕಾರ್ಜುನ ಜತೆ ಕಬ್ಬಿನ ಗದ್ದೆಯಲ್ಲಿ ಗುರಪ್ಪ ಶಿವಪ್ಪ ಕೋಟಿ   

ನಿಡಗುಂದಿ:‘ಆಳಾಗಿ ದುಡಿ, ಅರಸನಾಗಿ ಉಣ್ಣು’... ಎಂಬ ನಾಣ್ಣುಡಿಗೆ ತಕ್ಕಂತೆ ಕೃಷಿ ಕಾಯಕದಲ್ಲಿ ತಲ್ಲೀನರಾಗಿರುವವರು ಗೊಳಸಂಗಿಯ ಗುರಪ್ಪ ಶಿವಪ್ಪ ಕೋಟಿ.

ಮುತ್ತಗಿ ಕ್ರಾಸ್‌ನಿಂದ ಕೂಡಗಿ ಬಳಿ ಎನ್‌ಟಿಪಿಸಿ ಸ್ಥಾಪಿಸಿರುವ ಶಾಖೋತ್ಪನ್ನ ಸ್ಥಾವರದೆಡೆ ತೆರಳುವ ಮಾರ್ಗ ಮಧ್ಯದಲ್ಲಿ ಸಮತಟ್ಟಾದ, ಸ್ವಚ್ಛತೆಯಿಂದ ಕಾಣುವ ತೋಟವೇ ಕೋಟಿ ಅವರದ್ದು. 16 ಎಕರೆ ತೋಟದಲ್ಲಿ ಎಲ್ಲಿ ಸುತ್ತಿದರೂ; ಒಂದೇ ಒಂದು ಸ್ವಲ್ಪ ಕಸವೂ ಕಾಣಲ್ಲ. ಬೆಳೆಗೆ ಕಳೆಯೇ ಮಾರಕ ಎಂಬುದನ್ನರಿತು, ಸತತ ಕಸ ತೆಗೆಯುವ ಮೂಲಕ ಸಮೃದ್ಧಿ ಫಸಲು ಪಡೆಯುವುದು ಇವರ ಕೃಷಿ ಪದ್ಧತಿ.

ತೋಟದಲ್ಲಿಯೇ ಮನೆ. ಮುಂಜಾನೆಯಿಂದ ಮುಸ್ಸಂಜೆವರೆಗೂ ಬಿಡುವಿಲ್ಲದ ದುಡಿಮೆ. ಮನೆ ಮಂದಿಯೆಲ್ಲಾ ತೋಟದ ಕೆಲಸಲ್ಲಿ ತಲ್ಲೀನ. 65ರ ಇಳಿ ವಯಸ್ಸಿನಲ್ಲಿಯೂ ಗುರಪ್ಪ ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ನಿರತ. ಪ್ರತಿಯೊಬ್ಬ ರೈತರಿಗೂ ಮಾದರಿ. ಇವರ ಮೂವರು ಪುತ್ರರು ತಂದೆಯನ್ನೇ ಅನುಕರಿಸುತ್ತಾರೆ. ಕೃಷಿ ಕೂಲಿ ಕಾರ್ಮಿಕರು ಇವರ ಹೊಲಕ್ಕೆ ಕಾಲಿಟ್ಟಿದ್ದೇ ಅಪರೂಪ. ಎಲ್ಲವನ್ನೂ ಕುಟುಂಬದವರೇ ಒಟ್ಟಾಗಿ ನಿರ್ವಹಿಸುವುದು ವಿಶೇಷ.

ADVERTISEMENT

ವೈವಿಧ್ಯಮಯ ಬೆಳೆ

ಕಬ್ಬು, ಸೂರ್ಯಕಾಂತಿ, ಸಜ್ಜೆ, ಉಳ್ಳಾಗಡ್ಡಿ ಸೇರಿದಂತೆ ನಾನಾ ಬೆಳೆಗಳನ್ನು ವಿಭಾಗ ಮಾಡಿ ಬೆಳೆದಿದ್ದಾರೆ. ಸರದಿ ಬೆಳೆ ಪದ್ಧತಿ ಅನುಸರಿಸುವ ಗುರಪ್ಪ, ಪ್ರತಿ ಬಾರಿ ಬೇರೆ ಬೇರೆ ಬೆಳೆ ಬೆಳೆಯುತ್ತಾರೆ.

‘16 ಎಕರೆ ಭೂಮಿಯಲ್ಲೂ ಕಬ್ಬು ಬೆಳೆದು ಹೆಚ್ಚು ಹಣ ಗಳಿಸಬಹುದಿತ್ತು, ಆದರೆ ಅದರಿಂದ ಮಣ್ಣು ಹಾಳಾಗುತ್ತದೆ. ಆರು ಎಕರೆಯಲ್ಲಿ ಮಾತ್ರ ಕಬ್ಬು ಹಾಕಿದ್ದೇವೆ. ಎರಡು ವರ್ಷ ಮಾತ್ರ ಕಬ್ಬು ಪಡೆದು, ಅಲ್ಲಿ ಬೇರೆ ಬೆಳೆ ಹಾಕುತ್ತೇವೆ. ಮತ್ತೊಂದೆಡೆ ಆರು ಎಕರೆಯಲ್ಲಿ ಹೊಸ ಕಬ್ಬು ಹಾಕುತ್ತೇವೆ, ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ’ ಎನ್ನುತ್ತಾರೆ ಕೋಟಿ.

ಗೊಬ್ಬರ

ಪ್ರತಿ ಬಾರಿ ಎರಡರಿಂದ ಮೂರು ಎಕರೆ ಪ್ರದೇಶದಲ್ಲಿ ಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆ ಬೆಳೆದು, ಅದರ ಪೀಕನ್ನು ತೆಗೆದುಕೊಳ್ಳದೆ, ಪೀಕ (ಇಳುವರಿ) ಸಮೇತ, ಇಡೀ ಬೆಳೆಯನ್ನೇ ಟ್ರ್ಯಾಕ್ಟರ್‌ನ ರೂಟರ್‌ ಮೂಲಕ ಕತ್ತರಿಸಿ ಮಣ್ಣಿನೊಳಗೆ ಸೇರಿಸುತ್ತಾರೆ. ಇದರ ಜತೆಗೆ ಉಳಿದ ಬೆಳೆಗಳಲ್ಲಿಯ ಇಳುವರಿ ಪಡೆದು ದಂಟು, ಕಾಂಡವನ್ನು ಒಣಗಿಸಿ ಮಣ್ಣಿನೊಳಗೆ ಸೇರಿಸುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ.

ನೀರು

₹ 12 ಲಕ್ಷ ಖರ್ಚು ಮಾಡಿ 75 ಅಡಿ ಆಳ, 31 ಅಡಿ ಅಗಲದ ಬಾವಿಯನ್ನು ಕಾಂಕ್ರೀಟ್‌ನಿಂದ ನಿರ್ಮಿಸಲಾಗಿದ್ದು, ವರ್ಷ ಪೂರ್ತಿ ನೀರಿನ ಕೊರತೆಯಿಲ್ಲ.

ಹಗಲು 3 ಗಂಟೆ, ರಾತ್ರಿ 4 ಗಂಟೆ ವಿದ್ಯುತ್‌ ನೀಡಲಾಗುತ್ತಿದ್ದು, ರಾತ್ರಿ ನೀರುಣಿಸಲು ತೊಂದರೆಯಾಗುತ್ತಿದೆ, ಹೀಗಾಗಿ ಹಗಲು ವೇಳೆಯಲ್ಲಿಯೇ ಹೆಚ್ಚಿನ ವಿದ್ಯುತ್‌ ನೀಡಬೇಕು ಎನ್ನುತ್ತಾರೆ ಗುರಪ್ಪ ಪುತ್ರ ಮಲ್ಲಿಕಾರ್ಜುನ ಕೋಟಿ.

ತೋಟದಲ್ಲಿಯೇ ಮೂರು ಎಮ್ಮೆ, ಎರಡು ಎತ್ತು ಸಾಕಿದ್ದೇವೆ, ಪ್ರತಿ ವರ್ಷ ಖರ್ಚು ತೆಗೆದು ಕನಿಷ್ಠ ₹ 15ರಿಂದ ₹ 20 ಲಕ್ಷ ಆದಾಯ ಸಿಗುತ್ತದೆ. ಸರ್ಕಾರದ ಯಾವೊಂದು ಸೌಲಭ್ಯವನ್ನು ನಾವು ಕೃಷಿಗಾಗಿ ಪಡೆದಿಲ್ಲ ಎನ್ನುತ್ತಾರೆ ಕೋಟಿ.
ಸಂಪರ್ಕ ಸಂಖ್ಯೆ: 9901573151

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.