ADVERTISEMENT

ಪುಟಾಣಿ ಕಲಾವಿದರ ಡಿಪ್‌ಟಿಕ್

ಸತೀಶ ಬೆಳ್ಳಕ್ಕಿ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST
ಪುಟಾಣಿ ಕಲಾವಿದರ ಡಿಪ್‌ಟಿಕ್
ಪುಟಾಣಿ ಕಲಾವಿದರ ಡಿಪ್‌ಟಿಕ್   

`ಡಿಪ್‌ಟಿಕ್~ ಒಂದೇ ಚಿತ್ರದಲ್ಲಿ ಪರಸ್ಪರ ಪೂರಕವಾಗುವ ಎರಡು ವಿಭಾಗಗಳನ್ನೊಳಗೊಂಡಂತೆ ರಚಿಸುವ ಶೈಲಿ. ವಿಶಿಷ್ಟ ಇತಿಹಾಸವಿರುವ ಈ ಶೈಲಿಯಲ್ಲಿ 5ರಿಂದ 15 ವಯಸ್ಸಿನ ಮಕ್ಕಳು ರಚಿಸಿರುವ `ಬೆಂಗಳೂರು ಡಿಪ್‌ಟಿಕ್~ ಕಲಾಕೃತಿಗಳ ಪ್ರದರ್ಶನ ಕಸ್ತೂರಬಾ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆಯುತ್ತಿದ್ದು ಗುರುವಾರ ಮುಕ್ತಾಯವಾಗಲಿದೆ.

ಬುಲ್‌ಟೆಂಪಲ್ ರಸ್ತೆಯಲ್ಲಿರುವ ವಿಷುಯಲ್ ಆರ್ಟ್ ವರ್ಕ್‌ಶಾಪ್ಸ್ ಮತ್ತು ಅನನ್ಯ ದೃಶ್ಯ ಸಂಸ್ಥೆ ಸಹಯೋಗದಲ್ಲಿ ನಡೆದ 12ನೇ ವಾರ್ಷಿಕ ಚಿತ್ರಕಲೆ ಹಾಗೂ ಛಾಯಾಚಿತ್ರ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 18 ಮಕ್ಕಳು ರಚಿಸಿದ ಕಲಾಕೃತಿಗಳನ್ನು ಇಲ್ಲಿ ನೋಡಬಹುದು. `ಬದಲಾಗುತ್ತಿರುವ ನಮ್ಮ ಬೆಂಗಳೂರು~ ವಿಷಯನ್ನು ಆಯ್ಕೆ ಮಾಡಿಕೊಂಡು ಮಕ್ಕಳು ತಮ್ಮ ಸೃಜನಶೀಲತೆ ತೋರ್ಪಡಿಸಿದ್ದಾರೆ. ಈ ಮಕ್ಕಳಿಗೆ ಕಲಾವಿದರಾದ ಆರ್.ರಾಜ, ಆರ್.ವೈದೇಹಿ, ಸಿ.ಪಿ.ಚಂದ್ರಮೋಹನ್ ಹಾಗೂ ಭರತ್ ಮಾರ್ಗದರ್ಶನ ನೀಡಿದ್ದಾರೆ.

ಪುಟ್ಟ ಕಲಾವಿದೆ ಎಂ.ಅದಿತಿಗೆ ಈಗಷ್ಟೇ 11 ತುಂಬಿದೆ. ಆದರೆ ಈಕೆಗೆ ಇರುವ ಪರಿಸರ ಕಾಳಜಿ ಅಪಾರ. ನಗರದ ಎಲ್ಲೆಡೆ ತಲೆ ಎತ್ತಿರುವ ಮೊಬೈಲ್ ಟವರ್‌ನಿಂದಾಗಿ ಪಕ್ಷಿ ಸಂಕುಲ ಕಣ್ಮರೆಯಾಗುತ್ತಿರುವುದರತ್ತ ಚಿತ್ತ ಹರಿಸಿದ್ದಾಳೆ. ನಗರಾಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಮರಗಳ ಮಾರಣ ಹೋಮದಿಂದ `ಗಾರ್ಡನ್ ಸಿಟಿ~ ಬರಡಾಗುತ್ತಿರುವುದಕ್ಕೆ ಆರ್.ಅರ್ಚನಾ ತನ್ನ ಚಿತ್ರಕಲೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾಳೆ.

ADVERTISEMENT

ನಗರದ ಜಂಜಾಟದ ಬದುಕಿನಿಂದ ಬೇಸತ್ತ ಕುಟುಂಬವೊಂದು ಪ್ರಶಾಂತ ವಾತಾವರಣಕ್ಕೆ ಹೊರಟು ನಿಂತಂತೆ ಚಿತ್ರಿಸಿರುವ ಮದನ್‌ನ ಕಲಾಕೃತಿ  ಮಾರ್ಮಿಕವಾಗಿದೆ. ಹರ್ಷಿತಾಳ `ಟೂ ವ್ಯೆಸ್ ಆಫ್ ಸಿಟಿ~ ಚಿತ್ರದಲ್ಲಿ ಒಂದು ಭಾಗದಲ್ಲಿ ಮಲಿನಗೊಂಡ ಕಪ್ಪು, ಕೆಂಪು ಮೋಡಗಳು, ಮತ್ತೊಂದು ಭಾಗದಲ್ಲಿ ಸುಂದರ ಬೆಳ್ಳಿ ಮೋಡಗಳು ನಗರದ ಮೇಲೆ ತೇಲಿ ಬರುತ್ತಿರುವಂತೆ ಚಿತ್ರಣಗೊಂಡಿವೆ. ಇಲ್ಲಿ ಆಕೆಯ ಕಲಾ ಕೌಶಲ್ಯಮೆಚ್ಚುವಂತಹದ್ದು.

ಕಲಾವಿದರ ಕುಟುಂಬದಿಂದ ಬಂದ ಎಂ.ಪ್ರಥಮ್‌ನ ಚಿತ್ರದಲ್ಲಿ `ಮ್ಯಾಂಗೋ ಜ್ಯೂಸ್~ ಒಂಬತ್ತು ಲೋಟಗಳಲ್ಲಿ ಸ್ಟ್ರಾ ಸಮೇತ ಸಿದ್ಧವಾಗಿದೆ. ಇನ್ನೊಂದು ಚಿತ್ರದಲ್ಲಿ ಪಿಜ್ಜಾ ಸಂಸ್ಕೃತಿಯ ಸೂಕ್ಷ್ಮ ಚಿತ್ರಣವಿದೆ.

ಛಾಯಾಚಿತ್ರ ವಿಭಾಗದಲ್ಲಿ ಹರ್ಷಿತಾ ತೆಗೆದಿರುವ `ವಿಶ್ರಮಿಸುತ್ತಿರುವ ಅಜ್ಜಿ~ ಚಿತ್ರ ಅದ್ಭುತವಾಗಿದೆ. ಇದು ನೋಡುಗರಲ್ಲಿ ಮುಪ್ಪಿನ ಏಕಾಂತತೆಯ ಯಾತನೆಯನ್ನು ಮನಮುಟ್ಟಿಸುವಂತಿದೆ. ಎಂ.ಪ್ರಥಮ್ ತನ್ನ ಆಟದ ಸಾಮಾನುಗಳನ್ನು ಜೋಡಿಸಿ ಚಿತ್ರ ತೆಗೆದಿರುವ ಆಟೊ ಸ್ಟ್ಯಾಂಡ್ ಒಂದು ಗಮನಾರ್ಹ ಪ್ರಯೋಗ. `ಲಾಕ್ಡ್ ಆಪ್ ಸೈಕಲ್~ ಕೃತಿಯು ಆರ್.ಅರ್ಚನಾ ರಸ್ತೆಗೆ ತರಲಾರದೆ ಕೂಡಿಟ್ಟಿರುವ ಸೈಕಲ್‌ಗೆ ಕನ್ನಡಿ ಹಿಡಿದಿದೆ. ಸಂಯೋಜನೆ ದೃಷ್ಟಿಯಿಂದ ಇದೊಂದು ಉತ್ತಮ ಛಾಯಾಚಿತ್ರ. ಸಿ.ಶಿಲ್ಪಾ, ರಕ್ಷಿತಾ, ಅನನ್ಯ, ವಿವೇಕ್, ಅರ್ಜುನ್, ವಾಸುದೇವರಾಮ್, ಕಮಲಾ, ಮದನ್ ಗೋಪಾಲ್, ಮಂಥನ್ ಕುಮಾರ್, ಜಸ್ವಿತಾ, ಅಜಿತ್ ಕುಮಾರ್ ಮೊದಲಾದ ಪುಟ್ಟ ಕಲಾವಿದರು ರಚಿಸಿರುವ ಚಿತ್ರಗಳು ಅದ್ಭುತವಾಗಿವೆ. ಇವರನ್ನೆಲ್ಲಾ ಅನುಕರಣೆ ಹಾದಿಯನ್ನು ಹಿಡಿಸದೇ, ಸೃಜನಶೀಲತೆಯತ್ತ ಕೊಂಡೊಯ್ದಿರುವುದು ಈ ಕಾರ್ಯಾಗಾರದ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.