ADVERTISEMENT

ಮುಗ್ಧತೆಯ ಪ್ರತಿಬಿಂಬದಲ್ಲಿ...

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST
ಮುಗ್ಧತೆಯ ಪ್ರತಿಬಿಂಬದಲ್ಲಿ...
ಮುಗ್ಧತೆಯ ಪ್ರತಿಬಿಂಬದಲ್ಲಿ...   

ಗೋವುಗಳ ಮಧ್ಯೆ ಮಗುವಾಗಿ ನಿಂತಿರುವ ಮನುಷ್ಯನನ್ನು ಆ ಚಿತ್ರಪಟಗಳಲ್ಲಿ ನೋಡಿದಾಗ ಎಲ್ಲೋ ಒಂದೆಡೆ ಮುಗ್ಧತೆ ಇನ್ನೂ ಮರೆಯಾಗಿಲ್ಲ ಎಂಬ ಸತ್ಯ ಎದ್ದು ಕಾಣುತ್ತದೆ.

ಅದಕ್ಕೆ ಪುಷ್ಟಿ ಕೊಡುವಂತೆ `ಮನುಷ್ಯ ನಿಜಕ್ಕೂ ಮುಗ್ಧ. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಅವನಲ್ಲಿಯ ಮುಗ್ಧತೆ ಮಸುಕಾಗಿರುತ್ತದೆ. ಚಿಕ್ಕ ಮಗುವಿನ ನಗುವಿನಲ್ಲಿ, ಮನಸ್ಸು ಬಿಚ್ಚಿ ನಗುವಾಗ ಒಮ್ಮಮ್ಮೆ ಈ ಮುಗ್ಧತೆ ಮಿಂಚಿ ಮರೆಯಾಗುತ್ತದೆ. ಇಂದಿನ ಒತ್ತಡದ ದಿನಗಳಲ್ಲಿ ನಗುವುದಕ್ಕೂ ಹಿಂದೆ ಮುಂದೆ ನೋಡುತ್ತೇವೆ~ ಎಂದು ಹೇಳುತ್ತಾರೆ ಚಿತ್ರ ಕಲಾವಿದ ಜಿ.ಎಸ್.ಬಿ ಅಗ್ನಿಹೋತ್ರಿ.

`ನಾನು ಹುಟ್ಟಿ ಬೆಳೆದಿದ್ದು ಕುಮಟಾದಲ್ಲಿ. ನನ್ನ ಪಾಲಿಗೆ ಅದೇ ಸ್ವರ್ಗ. ಒಂದು ಕಡೆ ಕಿವಿಗೆ ಇಂಪನೀಯುವ ಸಮುದ್ರದ ಅಲೆಗಳ ಏರಿಳಿತ. ಕಾಲಿಟ್ಟರೆ ಮುತ್ತಿಕ್ಕುವ ಅಲೆಗಳು. ಬೇಸತ್ತ ಮನಸ್ಸಿನಲ್ಲಿ ಚೈತನ್ಯ ತುಂಬುವ ಸಮುದ್ರದ ಬಗ್ಗೆ ಏನು ಮಾತನಾಡಿದರೂ ಕಡಿಮೆ.

ಇನ್ನೊಂದು ಕಡೆ ಸಹ್ಯಾದ್ರಿ ಬೆಟ್ಟ. ಆ ಬೆಟ್ಟ, ಬಯಲುಗಳೇ ನನ್ನಲ್ಲಿ ಚಿತ್ರಕಲೆಯನ್ನು ಬಡಿದೆಬ್ಬಿಸಿದ ಪ್ರೇರಕ ಶಕ್ತಿಗಳು. ಓದಿದ್ದು ಮೈಸೂರಿನಲ್ಲಿ. ಡಾಕ್ಟರ್, ಎಂಜಿನಿಯರ್ ಕಡೆ ಎಲ್ಲರ ಗಮನವಿದ್ದರೆ ನಾನು ಬಂಧಿಯಾಗಿದ್ದು ಈ ಗೆರೆಗಳಲ್ಲಿ. ನನ್ನ ಭಾವಕ್ಕೆ ತಕ್ಕ ರೂಪ ನೀಡುತ್ತಾ ಅದರಲ್ಲಿಯೇ ನೆಮ್ಮದಿ ಕಾಣುತ್ತಿದ್ದೇನೆ~ ಎಂದು  ಹೇಳುತ್ತಾರೆ.

ರಿನೈಸನ್ಸ್ ಆರ್ಟ್ ಗ್ಯಾಲರಿಯಲ್ಲಿ ಏಳು ಕಲಾಕೃತಿಗಳನ್ನು ಪ್ರದರ್ಶನಕ್ಕಿಟ್ಟಿರುವ ಅಗ್ನಿಹೋತ್ರಿ ಕಲಾಕೃತಿಗಳ ಬಗ್ಗೆ, ಕಲಾ ರಚನೆಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. `ಒಂದು ಮರದ ಎಲೆ ನೋಡಿ ಎಷ್ಟು ಸುಂದರವಾಗಿದೆ ಎಂದು ಹೇಳಿ ಸುಮ್ಮನಾಗುತ್ತೇವೆಯೇ ಹೊರತು ಅದು ಯಾವ ಮರ, ಅದರ ಕಾಂಡ ಹೇಗಿದೆ ಎಂದು ಅರಿಯಲು ಹೋಗುವುದಿಲ್ಲ. ಕಾಂಡದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಒಂದು ಸುಂದರ ಪ್ರಪಂಚ ನಮ್ಮ ಕಣ್ಮುಂದೆ ತೆರೆದುಕೊಳ್ಳುತ್ತದೆ. ಆ ಕಾಂಡದ ವಿನ್ಯಾಸ ಅವರವರ ಭಾವಕ್ಕೆ ತಕ್ಕಂತೆ ಮೂಡಿಬರುತ್ತದೆ. ಪ್ರಕೃತಿಯೊಂದಿಗಿನ ಒಡನಾಟ ಮನುಷ್ಯನನ್ನು ಮುಗ್ಧ ಭಾವಜೀವಿಯನ್ನಾಗಿ ಮಾಡುತ್ತದೆ~ ಎಂದು ಹೇಳುತ್ತಾರೆ ಅಗ್ನಿಹೋತ್ರಿ.

`ಹೆಣ್ಣೆಂದರೆ ಭಾವಜೀವಿ. ಅನೇಕ ಕಷ್ಟಗಳ ಮಧ್ಯೆ ಅವಳು ನಗುತ್ತಾಳೆ. ತನ್ನ ಸುತ್ತಲಿನವರನ್ನು ನಗಿಸುತ್ತಾಳೆ. ಒಂದು ಚಿಕ್ಕ ವಿಷಯ ಕೂಡ ಅವಳಲ್ಲಿ ಕನಸನ್ನು ಬಿತ್ತುತ್ತದೆ~ ಎಂದು ಮಾತಿಗಿಳಿದವರು ಮತ್ತೊಬ್ಬ ಚಿತ್ರ ಕಲಾವಿದೆ ಡಾ. ಅರ್ಚನಾ ಗುಪ್ತಾ.
ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ನಗರಕ್ಕೆ ಬಂದ ಇವರಿಗೆ ತಮ್ಮ ಕಲೆಯನ್ನು ಪ್ರದರ್ಶಿಸುವ ಹಂಬಲ. `ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದು ದೇವರ ಉಡುಗೊರೆ.

ನನಗೆ ಬಾಲ್ಯದಿಂದಲೂ ಕಲೆಯತ್ತ ಆಸಕ್ತಿ ಹೆಚ್ಚು. ಸಿಕ್ಕ ಹಾಳೆಯಲ್ಲಿ ಏನೋ ಗೀಚಿ ಖುಷಿಪಡುತ್ತಿದ್ದೆ. ಇಂದು ಇದನ್ನೇ ವೃತ್ತಿಯಾಗಿಸಿಕೊಂಡಿದ್ದೇನೆ. ಕಲೆಯೆಂದರೆ ಒಂದು ಬಾರಿ ಕಲಿತು ಸಮಾಧಾನಪಡುವ ವಿಷಯವಲ್ಲ. ಹೆಣ್ಣು ಕೂಡ ಒಂದು ಪ್ರಕೃತಿ. ಅವಳ ಭಾವನೆಗಳು ತಂಗಾಳಿಯಾಗಿ ತಂಪು ಸೂಸಬಹುದು, ಕ್ಷಣ ಮಾತ್ರದಲ್ಲಿ ಅದೇ ಭಾವ ಬಿರುಗಾಳಿ ಕೂಡ ಆಗಬಹುದು. ನಾನು ಹೆಣ್ಣನ್ನೇ ಮುಖ್ಯವಾಗಿಸಿಕೊಂಡು ಆಕ್ರಿಲಿಕ್ ಪ್ರಕಾರದಲ್ಲಿ ಕ್ಯಾನ್ವಾಸ್ ಮೇಲೆ ಚಿತ್ರ ಮೂಡಿಸಿದ್ದೇನೆ. ಬೆಂಗಳೂರಿನ ಜನತೆ ಕಲಾಪ್ರೇಮಿಗಳು ಹಾಗಾಗಿ ನನಗೆ ಇಲ್ಲಿ ನನ್ನ ಕಲೆಯ ಪ್ರದರ್ಶನ ನೀಡುವುದಕ್ಕೆ ಹೆಮ್ಮೆಯಾಗುತ್ತದೆ~ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಅರ್ಚನಾ.

ಕನ್ನಿಂಗ್‌ಹ್ಯಾಮ್ ರಸ್ತೆಯ ಬಳಿಯಿರುವ ರಿನೈಸನ್ಸ್ ಗ್ಯಾಲರಿಯಲ್ಲಿ ಜುಲೈ 7ರವರೆಗೆ ಈ  ಪ್ರದರ್ಶನ ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ನಡೆಯಲಿದೆ.                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.