ADVERTISEMENT

ಅನನ್ಯ ಕಲೆಗಳ ಅಪರೂಪದ ಭಂಡಾರ

ಪ್ರಜಾವಾಣಿ ವಿಶೇಷ
Published 19 ಆಗಸ್ಟ್ 2023, 23:30 IST
Last Updated 19 ಆಗಸ್ಟ್ 2023, 23:30 IST
ಅದಿತಿ ಆರ್ಟ್‌ ಗ್ಯಾಲರಿಯಲ್ಲಿ ಸಂಗ್ರಹಿಸಲಾಗಿರುವ ಮುಖವಾಡಗಳು
ಅದಿತಿ ಆರ್ಟ್‌ ಗ್ಯಾಲರಿಯಲ್ಲಿ ಸಂಗ್ರಹಿಸಲಾಗಿರುವ ಮುಖವಾಡಗಳು   

ಎಚ್ಎಸ್ ನವೀನ ಕುಮಾರ್

‘ಕಟ್ಟಿಗೆಯ ಹೊರೆಯನು ಹೊತ್ತರೂ ತಲೆ ಮೇಲೆ ಇರಲೊಂದು ಹೂವು.. ಹೊರೆ ಭಾರವಾದಾಗ ಹೂವಿನ ಕಂಪೊಳು ಕಡಿಮೆ ಎಂದೆನಿಪುದು ನೋವು’ ಎಂಬುದಾಗಿ ಹಿರಿಯ ಕವಿ ಎಸ್‌.ವಿ ಪರಮೇಶ್ವರ ಭಟ್ಟರು ತಮ್ಮ ‘ಇಂದ್ರ ಚಾಪ’ದಲ್ಲಿ ಹೇಳುತ್ತಾರೆ. ಬದುಕೆಂಬ ಪಯಣದಲ್ಲಿ ನಿತ್ಯವೂ ಹತ್ತು ಹಲವು ಒತ್ತಡಗಳ ಕಟ್ಟಿಗೆಯ ಹೊರೆಯನ್ನು ಹೊತ್ತು ಸಾಗುವ ನಮಗೆ ‘ಸದಭಿರುಚಿ’ ಎಂಬ ತುರುಬಿನ ಹೂವಿದ್ದರೆ, ಹೊರೆಯ ಭಾರ ಕಡಿಮೆ ಎನಿಸುವುದು ಖಚಿತ. ಅಂತಹ ಸದಭಿರುಚಿಯ ಅತ್ಯಂತ ಸೃಜನಾತ್ಮಕ ಅಭಿವ್ಯಕ್ತಿಯನ್ನು ಉಡುಪಿಯ ಪ್ರಖ್ಯಾತ ಮೂಳೆ ಶಸ್ತ್ರ ಚಿಕಿತ್ಸಕ ಡಾ.ಕಿರಣ್ ಆಚಾರ್ಯ ಅವರ ‘ಅದಿತಿ ಆರ್ಟ್ ಗ್ಯಾಲರಿ’ಯಲ್ಲಿ ನೋಡಬಹುದು. ರಾಜ್ಯದ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಸಚಿವರಾಗಿದ್ದ ಡಾ.ವಿ. ಎಸ್. ಆಚಾರ್ಯರ ಪುತ್ರರಾದ ಡಾ.ಕಿರಣ್ ಆಚಾರ್ಯ, ‘ಕೋಶ ಓದು ದೇಶ ಸುತ್ತು’ ಎಂಬ ಮಾತಿಗ ಅನುಸಾರವಾಗಿ ಪ್ರಪಂಚದ ಉದ್ದಗಲ ಸುತ್ತಿ, ಅನನ್ಯ ಅನುಭವಗಳ ಮೂಟೆ ಹೊತ್ತು, ಅದನ್ನು ನಮ್ಮ ನಾಡಿಗೆ ತಂದು, ಸಹೃದಯರಿಗೆ ಅದರ ಸವಿಯನ್ನು ಉಣಬಡಿಸುತ್ತಿರುವವರು. ತಮ್ಮ 50 ವರ್ಷ ವಯಸ್ಸಿನೊಳಗೆ ನೂರು ದೇಶ ಸುತ್ತ ಬೇಕೆಂಬ ಮಹತ್ವಾಕಾಂಕ್ಷೆಯ ಗುರಿಯನ್ನು 2019ರಲ್ಲಿಯೇ ಪೂರೈಸಿರುವ ಡಾ.ಆಚಾರ್ಯ, ಈ ದೇಶಗಳಲ್ಲಿ ತಾವು ತೆಗೆದ ಅತ್ಯದ್ಭುತ ಛಾಯಾಚಿತ್ರಗಳನ್ನು, ಸಂಗ್ರಹಿಸಿದ ಅಮೂಲ್ಯ ವಸ್ತುಗಳು, ಅತ್ಯಪೂರ್ವ ಮುಖವಾಡಗಳನ್ನು ಒಟ್ಟಾಗಿ ಕಲೆ ಹಾಕಿ ಉಡುಪಿ ನಗರದಲ್ಲಿ ಸಮಾನಮನಸ್ಕರೊಡಗೂಡಿ ‘ಅದಿತಿ ಆರ್ಟ್ ಗ್ಯಾಲರಿ’ ಎಂಬ ಖಾಸಗಿ ಕಲಾ ಗ್ಯಾಲರಿಯನ್ನು ತೆರೆದಿದ್ದಾರೆ. ಅದಿತಿ ಅವರ ಮಗಳ ಹೆಸರೂ ಹೌದು ಜೊತೆಗೆ ADITI ಯನ್ನು ವಿಸ್ತರಿಸಿದರೆ, A- ART(ಕಲೆ), D-DANCE(ನೃತ್ಯ), I-IMAGING(ಛಾಯಾಗ್ರಹಣ), T- THEATRE (ರಂಗಭೂಮಿ), I- INTRERACTION(ಸಂವಹನ) ಎಂದಾಗುತ್ತದೆ. ಈ 5 ಸೃಜನಶೀಲ ಕಲೆಗಳಿಗೆ ಈ ಗ್ಯಾಲರಿ, ಕರಾವಳಿಯ ಸಾಂಸ್ಕೃತಿಕ ಜೀವನಾಡಿಯಾದ ಉಡುಪಿಯಲ್ಲಿ ಒಂದು ವಿಶಿಷ್ಟ ವೇದಿಕೆಯಾಗಿ ರೂಪುಗೊಂಡಿದೆ. ಡಾ.ಕಿರಣ್ ಆಚಾರ್ಯ ಅವರು ಹೇಳುವಂತೆ, ಅವರ ತಂದೆ ವಿ ಎಸ್ ಆಚಾರ್ಯ ‘Journey is a reward destination is a bonus’ ಎನ್ನುತ್ತಿದ್ದರಂತೆ. ಅದಕ್ಕೆ ಅನುಸಾರವಾಗಿ ಪ್ರಪಂಚದ ನಾಲ್ಕು ದಿಕ್ಕುಗಳಲ್ಲಿ ಸಂಚರಿಸಿರುವ ಡಾ.ಕಿರಣ್ ಆಚಾರ್ಯರು, ಪ್ರತಿಯೊಂದು ದೇಶಕ್ಕೂ ಇರುವ ವಿಶಿಷ್ಟ ಸಾಂಸ್ಕೃತಿಕ, ಪ್ರಾಕೃತಿಕ ಸೊಗಡನ್ನು ಆಸ್ವಾದಿಸಲು ಪಂಚತಾರಾ ಹೋಟೆಲ್‌ಗಳಲ್ಲಿ ಉಳಿಯುವುದರ ಬದಲು, ಅಲ್ಲಿನ ಸ್ಥಳೀಯರ, ಮೂಲ ನಿವಾಸಿಗಳ ಜೊತೆ ವಾಸ್ತವ್ಯ ಹೂಡುವುದಕ್ಕೆ ಆದ್ಯತೆ ನೀಡುತ್ತಾರೆ. ಅವರ ಜೊತೆಗಿದ್ದು ಅವರ ವಿಶಿಷ್ಟ ಸಂಪ್ರದಾಯ ಆಚರಣೆಗಳನ್ನು ದಾಖಲಿಸುತ್ತಾರೆ. ಆಯಾ ದೇಶಗಳಿಗೆ ವಿಶೇಷವಾದ ಸಾಕು ಪ್ರಾಣಿಗಳ, ವನ್ಯಜೀವಿಗಳ ಫೋಟೋಗಳನ್ನು ಕ್ಲಿಕ್ಕಿಸುತ್ತಾರೆ. ಪ್ರತಿ ದೇಶದಲ್ಲೂ ಮುಖ್ಯವಾಗಿ ಹಳ್ಳಿ ಬದಿಗಳನ್ನೇ ಕೇಂದ್ರವಾಗಿರಿಸಿಕೊಂಡು ಪಯಣಿಸುವ ಕಿರಣ್‌ ಆಚಾರ್ಯ ಸ್ಥಳೀಯ ಆಹಾರವನ್ನೇ ಆಸ್ವಾದಿಸುತ್ತಾರೆ. ಸಂಪೂರ್ಣ ಸಸ್ಯಹಾರಿ ಆದ ಅವರಿಗೆ ಅತ್ಯಂತ ವಿಚಿತ್ರ ಮಾಂಸ ಆಹಾರದ ಅನುಭವವೂ ಆಗಿದೆ. ಒಂದೆಡೆ ಹುರಿದ ಚೇಳೇ ಅಲ್ಲಿನ ಜನರ ಆಹಾರವಾಗಿತ್ತಂತೆ! ‘ನನ್ನ ಅದೃಷ್ಟಕ್ಕೆ ಅಲ್ಲಿ ಹುರಿದ ಬಾಳೆಹಣ್ಣು ಇತ್ತು’ ಎಂದು ನಗುತ್ತಾ ಹೇಳುತ್ತಾರೆ ಡಾಕ್ಟರ್ ಕಿರಣ್ ಆಚಾರ್ಯ.

ಈ ದೇಶ ಸುತ್ತುವ ಹವ್ಯಾಸವನ್ನು 1999ರಲ್ಲಿ ತಮ್ಮ ವೈದ್ಯ ವೃತ್ತಿಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದರ ಮೂಲಕ ಆರಂಭಿಸಿದ ಡಾಕ್ಟರ್ ಆಚಾರ್ಯರು ತಮ್ಮ ಪ್ರವಾಸವನ್ನು ಕೇವಲ ತಮ್ಮ ವೃತ್ತಿಗೆ ಮಾತ್ರ ಸೀಮಿತಗೊಳಿಸದೆ ಅಲ್ಲಿನ ವಿಶಿಷ್ಟ ವಸ್ತುಗಳು, ಮುಖವಾಡಗಳ ಸಂಗ್ರಹಣೆಗೆ ಹಾಗೂ ಅತ್ಯಪೂರ್ವ ಛಾಯಾಗ್ರಹಣಕ್ಕೆ ವಿಸ್ತರಿಸಿ ಅವನ್ನು ಅತ್ಯಂತ ವ್ಯವಸ್ಥಿತವಾಗಿ ಕೂಡಿಡುವ ಕೆಲಸವನ್ನು ಆರಂಭಿಸಿದರು. ಈ ವಿಶಿಷ್ಟ ಸಂಗ್ರಹಣೆಗೆ 2014ರಲ್ಲಿ ‘ಅದಿತಿ ಆರ್ಟ್ ಗ್ಯಾಲರಿ’ ಎಂಬ ಹೆಸರು ನೀಡಿ ತಮ್ಮ ಪತ್ನಿ ಭರತನಾಟ್ಯ ಹಾಗೂ ಕರ್ನಾಟಕ ಸಂಗೀತ ಕಲಾವಿದೆ ವಿದುಷಿ ಪ್ರತಿಮಾ ಕಿರಣ್, ಉಡುಪಿಯ ಹಿರಿಯ ಪ್ರಖ್ಯಾತ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋಮೋಹನ್ ಅವರ ಪತ್ನಿ ಭರತನಾಟ್ಯ ಕಲಾವಿದೆ ವಿದುಷಿ ಪ್ರವೀಣಾ ಮೋಹನ್ ಮುಂತಾದವರ ಜೊತೆಗೂಡಿ ಒಂದು ಟ್ರಸ್ಟ್ ಮೂಲಕ ಆರಂಭಿಸಿದರು. ಈ ವೇದಿಕೆಯಲ್ಲಿ ಚಿತ್ರಕಲೆ, ನೃತ್ಯ, ಸಂಗೀತ, ಸಂವಹನ, ಮುಂತಾದ ಸೃಜನಶೀಲ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾರಂಭಿಸಿದರು. ಈ ಆರ್ಟ್ ಗ್ಯಾಲರಿಯಲ್ಲಿ ಪ್ರತಿ ಬಾರಿಯೂ ಕೆಲ ತಿಂಗಳುಗಳ ಕಾಲ, ದೇಶ, ವಿದೇಶದ ಪ್ರಖ್ಯಾತ ಚಿತ್ರ ಕಲಾವಿದರ ಚಿತ್ರ ಪ್ರದರ್ಶನ ಆಯೋಜನೆಗೊಳ್ಳುತ್ತದೆ. ಈ ಕಲಾವಿದರು ತಮ್ಮದೇ ಆದ ಥೀಮ್ ನಲ್ಲಿ ಮೂಡಿಸಿರುವ ಅದ್ಭುತ ಚಿತ್ರಗಳ ಸವಿಯನ್ನು ಕಲಾಸಕ್ತರು ಸವಿಯುತ್ತಾರೆ. ಅತ್ಯಂತ ವಿಶಿಷ್ಟ ಮುಖವಾಡಗಳ ಪ್ರದರ್ಶನ, UNMASKING THE MASK ಸಹ ಇಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಪ್ರದರ್ಶನಗೊಳ್ಳುವ ಮುಖವಾಡಗಳಂತೂ ಅತ್ಯಂತ ಅನನ್ಯವಾಗಿವೆ. ಇವುಗಳ ಜೊತೆಗೆ ಬಹಳ ಹಿಂದಿನ ದಿನಗಳಲ್ಲಿ ಬಳಸಲ್ಪಡುತ್ತಿದ್ದ ವೈದ್ಯರ ಪೋರ್ಟಬಲ್ ಫಾರ್ಮಸಿ ಪೆಟ್ಟಿಗೆ, ಅತ್ಯಂತ ವಿಶಿಷ್ಟವಾದ ಬರವಣಿಗೆಯ ಮೇಜು, ಕಂಚಿನ ಪಡ್ಡು ಕಾವಲಿ, ಅತ್ಯಂತ ವಿಶಿಷ್ಟವಾದ ಕಲ್ಲಿನ ಶಿಲ್ಪಗಳು, ಪೂಜೆಗೆ ಬಳಸುತ್ತಿದ್ದ ಮರದ ವಿಭೂತಿ ಕರಡಿಗೆ, ಭಾರತ ಸಂವಿಧಾನದ ಕರಡು ಪ್ರತಿ, ಬಹಳ ಅಪರೂಪದ ಬೆಂಕಿ ಪೊಟ್ಟಣಗಳ ಸಂಗ್ರಹ, ವಿಶಿಷ್ಟವಾಗಿ ಶಬ್ದ ಮಾಡುವ ಮಲೇಷ್ಯಾದ ಮರದ ಕಪ್ಪೆ ಹೀಗೆ ಊಹಿಸಲಸಾಧ್ಯವಾದ ವಿಭಿನ್ನತೆ, ವೈವಿಧ್ಯಮಯವಾದ ಹತ್ತು ಹಲವಾರು ಅಪೂರ್ವ ವಸ್ತುಗಳ ಸಂಗ್ರಹವೂ ಇದೆ. ಈ ವಸ್ತುಗಳಲ್ಲಿ ಅಂದಿನ ದಿನಗಳಲ್ಲಿ ವೈದ್ಯರು ಬಳಸುತ್ತಿದ್ದ ಸಲಕರಣೆಗಳಾದ ಲೋಹದ ಸಿರಿಂಜುಗಳು, ನಂಜು ನಿರೋಧಕ ಸೋಪು, ಬರೆಯಲು ಬಳಸುತ್ತಿದ್ದ ವಿವಿಧ ಬಣ್ಣದ ಇಂಕುಗಳು, ಲೇಖನಿ ನಿಬ್ಬುಗಳನ್ನು ಯಥಾವತ್ತಾಗಿ ಸಂಗ್ರಹಿಸಿರುವುದು ಅತ್ಯಂತ ವಿಶಿಷ್ಟವಾಗಿದೆ ಹಾಗೂ ಇವು ಕಿರಣ್ ಆಚಾರ್ಯ ಅವರ ತಾಳ್ಮೆ ಸೂಕ್ಷ್ಮ ಗ್ರಹಿಕೆಗೆ ಹಿಡಿದ ಕನ್ನಡಿಯಾಗಿದೆ. ಅತ್ಯುತ್ತಮ ಕ್ಯಾಲಿಯೋಗ್ರಾಫರ್ ಕೂಡ ಆಗಿರುವ ಕಿರಣ್ ಆಚಾರ್ಯ ಅವರ ಕೈ ಬರವಣಿಗೆ ಕೂಡ ಅತ್ಯದ್ಭುತ.

ADVERTISEMENT
ಅದಿತಿ ಆರ್ಟ್‌ ಗ್ಯಾಲರಿಯಲ್ಲಿ ಸಂಗ್ರಹಿಸಲಾಗಿರುವ ಮುಖವಾಡಗಳು

ಅತ್ಯುತ್ತಮ ಛಾಯಾಗ್ರಾಹಕರಾದ ಕಿರಣ್ ಆಚಾರ್ಯರು ಪ್ರಪಂಚದ ವಿವಿಧ ಭಾಗಗಳ ವನ್ಯಜೀವಿಗಳು ಹಾಗೂ ಪಕ್ಷಿಗಳ ಅತ್ಯಂತ ವಿಶಿಷ್ಟ ಚಿತ್ರಗಳನ್ನು ತಮ್ಮ ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿದಿದ್ದಾರೆ. ತಮ್ಮ ಪ್ರವಾಸದ ವೇಳೆ ತಾವು ನೋಡಿದ ಪ್ರತಿಯೊಂದು ಅಂಶವನ್ನು ಎಷ್ಟೇ ಹೊತ್ತಾದರೂ ತಮ್ಮ ಡೈರಿಯಲ್ಲಿ ನಮೂದಿಸಿ, ನಂತರ ಅದರ ಸ್ಕ್ರಾಪ್ ಬುಕ್ ಮಾಡಿಡುವ ಆಚಾರ್ಯರು ತಮ್ಮ ಪ್ರತಿ ವಿದೇಶ ಭೇಟಿಗೂ ಒಂದೊಂದು ಆಕರ್ಷಕ ವರ್ಣಮಯ ಹೊತ್ತಿಗೆಯನ್ನು ಸಹಾ ಸಿದ್ಧಪಡಿಸಿದ್ದಾರೆ. ಜೊತೆಗೆ ಬೇರೆ ಬೇರೆ ದೇಶಗಳಲ್ಲಿನ ಅಪೂರ್ವ ವಸ್ತುಗಳನ್ನು ಒಂದು ಮ್ಯಾಗ್ನೆಟ್ ಬೋರ್ಡ್‌ನಲ್ಲಿ ಜೋಡಿಸಿಟ್ಟು ಪ್ರತಿ ದೇಶದ ನೆನಪನ್ನು ಹಸಿರಾಗಿಸಿದ್ದಾರೆ. ಏಷ್ಯಾ, ಯುರೋಪ್, ಉತ್ತರ ಅಮೇರಿಕಾ ದಕ್ಷಿಣ ಅಮೆರಿಕ ಆಸ್ಟ್ರೇಲಿಯಾ ಹೀಗೆ ಎಲ್ಲ ಖಂಡಗಳ 195 ದೇಶಗಳಲ್ಲಿ ನೂರಕ್ಕೂ ಹೆಚ್ಚು ದೇಶ ಸುತ್ತಿ ಅಲ್ಲಿನ ವಿಶಿಷ್ಟತೆ ವಿಭಿನ್ನತೆಗಳನ್ನು ವಿವಿಧ ಸ್ವರೂಪಗಳಲ್ಲಿ ದಾಖಲಿಸಿ ತಮ್ಮ ವೃತ್ತಿಯ ಜೊತೆಗೆ ಮನಸ್ಸು ಅರಳಿಸುವ ಪ್ರವೃತ್ತಿಯನ್ನು ಎಂದಿಗೂ ಬಾಡದ ಹೂವಿನಂತೆ, ಒಂದು ಅತ್ಯಾಧುನಿಕ ಕಲಾ ಗ್ಯಾಲರಿಯಲ್ಲಿ ಸಂಗ್ರಹಿಸಿಟ್ಟು, ತಮ್ಮ ಖುಷಿಯನ್ನು ಕಲಾಸಕ್ತರೊಂದಿಗೆ ಹಂಚಿಕೊಳ್ಳುವ ಡಾಕ್ಟರ್ ಕಿರಣ್ ಆಚಾರ್ಯ ಅವರ ಸದಭಿರುಚಿ ಅತ್ಯಂತ ಉನ್ನತ ಮಟ್ಟದ್ದು. ಈ ಸಂಗ್ರಹದಲ್ಲಿರುವ ಪ್ರತಿಯೊಂದು ವಸ್ತುವನ್ನು ವಿವರಿಸುವಲ್ಲಿ ಅವರು ತೋರಿಸುವ ಆಸಕ್ತಿ ತನ್ಮಯತೆ ನಿಜಕ್ಕೂ ವಿಶಿಷ್ಟವಾದದ್ದು. ಇತ್ತೀಚಿಗೆ ಉಡುಪಿಯಲ್ಲಿಯೇ ವೈದ್ಯನಾಗಿ ಆಸ್ಪತ್ರೆ ನಡೆಸುತ್ತಿರುವ ನನ್ನ ತಮ್ಮ ಡಾ.ನರೇಂದ್ರ ಕುಮಾರ್ ವಿಶಿಷ್ಟವಾದ ಬೇಸಿಗೆ ಶಿಬಿರವೊಂದನ್ನು ಆಯೋಜಿಸಿದ್ದರು. ಈ ಶಿಬಿರದ ಮಕ್ಕಳನ್ನು ಅದಿತಿ ಆರ್ಟ್ ಗ್ಯಾಲರಿಗೆ ಇಲ್ಲಿರುವ ವಿಶಿಷ್ಟ ಕಲಾಕೃತಿಗಳ ಪರಿಚಯ ಮಾಡಿಸುವ ಸಲುವಾಗಿ ಕರೆದೊಯ್ಯಲಾಗಿತ್ತು. ಆಗ ಡಾ.ಕಿರಣ್ ಆಚಾರ್ಯ ಅವರು ಮಕ್ಕಳಲ್ಲಿ ಮಕ್ಕಳಾಗಿ ಬೆರೆತು ಇಲ್ಲಿರುವ ಪ್ರತಿಯೊಂದು ವಿಶಿಷ್ಟ ವಸ್ತುಗಳನ್ನು ಅತ್ಯಂತ ಪ್ರೀತಿ ತನ್ಮಯತೆಯಿಂದ ಮಕ್ಕಳಿಗೆ ವಿವರಿಸಿದ್ದು ಅತ್ಯಂತ ವಿಶಿಷ್ಟವಾಗಿತ್ತು. ಹಾಗೂ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಅವರ ಕೌತುಕ, ಮಕ್ಕಳ ಮನಸ್ಸಿನ ಮುಗ್ಧತೆ ಕುತೂಹಲ ಎದ್ದು ಕಾಣುತ್ತಿತ್ತು.

ಇಲ್ಲಿರುವ ಪ್ರತಿಯೊಂದು ಕಲಾಕೃತಿಗಳ ಬಗೆಗೂ ಪ್ರತ್ಯೇಕವಾದ ಲೇಖನಗಳನ್ನು ಬರೆಯುವಷ್ಟು ಆಳ ಈ ವಿಶಿಷ್ಟ ವೈದ್ಯರ ಸಂಗ್ರಹದಲ್ಲಿದೆ. ವೃತ್ತಿಯಲ್ಲಿ ಮುರಿದ ಮೂಳೆ ಕೀಲುಗಳನ್ನು ಸರಿ ಮಾಡುವ ಡಾಕ್ಟರ್ ಕಿರಣ್ ಆಚಾರ್ಯರ "ಅದಿತಿ ಆರ್ಟ್ ಗ್ಯಾಲರಿ"ಯನ್ನು ಒಮ್ಮೆ ಹೊಕ್ಕು ಹೊರ ಬಂದರೆ ಮುರಿದ ಮುದುಡಿದ ಮನಸ್ಸುಗಳೂ ರಿಪೇರಿಯಾಗುವುದು ಖಂಡಿತ. ಅಂದ ಹಾಗೆ ಇದು ಖಾಸಗಿ ಗ್ಯಾಲರಿ. ನಿಜವಾದ ಕಲಾಸಕ್ತರು ಪೂರ್ವಾನುಮತಿಯೊಂದಿಗೆ ಮಾತ್ರ ಇದನ್ನು ವೀಕ್ಷಿಸಲು ಸಾಧ್ಯ.
-ಎಚ್ಎಸ್ ನವೀನ್ ಕುಮಾರ್ ಹೊಸದುರ್ಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.