ADVERTISEMENT

ಕಲಾಕೃತಿಗಳಲ್ಲಿ ಕಲಾವಿದನ ಭಾವಲೋಕ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 21 ಡಿಸೆಂಬರ್ 2018, 19:41 IST
Last Updated 21 ಡಿಸೆಂಬರ್ 2018, 19:41 IST
ಹನುಮಂತು ರಚಿಸಿರುವ ಕಲಾಕೃತಿ
ಹನುಮಂತು ರಚಿಸಿರುವ ಕಲಾಕೃತಿ   

ಹಸಿರಿನಿಂದ ಕಂಗೊಳ್ಳಿಸುತ್ತಿರುವ ಪ್ರದೇಶ, ಹಳ್ಳಿಯ ಪಕ್ಕದಲ್ಲಿ ಕೆರೆ, ಬೆಟ್ಟದ ಮೇಲೆ ಅರಮನೆ... ಹೀಗೆ ಹಲವು ದೃಶ್ಯಗಳು ವರ್ಣ ಆರ್ಟ್‌ ಗ್ಯಾಲರಿಯಲ್ಲಿ ಕಂಡು ಬರುತ್ತಿವೆ.

ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಜೆ.ಸಿ.ರಸ್ತೆಯಲ್ಲಿರುವ ವರ್ಣ ಆರ್ಟ್‌ ಗ್ಯಾಲರಿಯಲ್ಲಿ ‘ತಿಂಗಳ ಚಿತ್ರ’ ಕಾರ್ಯಕ್ರಮದ ಮೂಲಕ ಯುವ ಕಲಾವಿದರ ಕಲಾಕೃತಿಗಳ ಪ್ರದರ್ಶನ ಆಯೋಜಿಸಿದೆ.

ಕಲಾವಿದರಾದ ಅರ್ಮಾ ಖಾನ್‌, ಗಂಗು ಗೌಡ, ಲಕ್ಷ್ಮಣ ಕಬಾಡಿ ಮತ್ತು ಹನುಮಂತು ತಮ್ಮ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ಶೈಲಿಯಲ್ಲಿ ತಮ್ಮ ಭಾವನೆಗಳನ್ನು ಕಲಾಕೃತಿಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಈ ಕಲಾವಿದರು ಆಕ್ರೆಲಿಕ್‌, ತೈಲವರ್ಣಗಳಲ್ಲಿ ಚಿತ್ರಗಳನ್ನು ರಚಿಸಿದ್ದಾರೆ.

ADVERTISEMENT

ತನ್ನ ಕೋಮಲತೆಗೆ ಮನಸೋತಿರುವ ಮಹಿಳೆಯನ್ನು ಪರಿಸರಕ್ಕೆ ಹೋಲಿಸಿ ಕಲಾಕೃತಿಗೆ ಮರದ ಆಕಾರ ನೀಡಿದ್ದಾರೆ ಅರ್ಮಾಖಾನ್‌. ಅದೇ ರೀತಿ ಅರ್ಧ ಹೆಣ್ಣು ಮತ್ತು ಅರ್ಧ ಗಂಡಿನ ದೇಹ ಅದರ ಸುತ್ತಾ ಕಾಗೆಗಳು ಇರುವ ಕಲಾಕೃತಿಯನ್ನು ರಚಿಸಿದ್ದಾರೆ. ಇದು ಟ್ರಾನ್ಸ್‌ಜೆಂಡರ್‌ಗಳ ಅಭಿವ್ಯಕ್ತಿ ನೆಲೆಯಲ್ಲಿ ಚಿತ್ರಿಸಿರುವ ಕಲಾಕೃತಿ. ಅವರ ಬಗ್ಗೆ ಸಮಾಜದ ದೃಷ್ಟಿಕೋನ, ತಿರಸ್ಕಾರ ಭಾವವನ್ನು ವ್ಯಕ್ತಪಡಿಸಲು ‘ಕಾಗೆ’ಯನ್ನು ರೂಪಕವಾಗಿ ಬಳಸಿಕೊಂಡಿದ್ದಾರೆ.

ಇವರಿಗೆ ಕಲೆಯ ನಂಟು ಬೆಳೆದದ್ದು ಶಾಲಾ ಸಮಯದಲ್ಲಿ. ಇದರಲ್ಲಿ ಆಸಕ್ತಿ ಬೆಳೆದು ಬಿವಿಎ ಪದವಿಯನ್ನು ಧಾರವಾಡದಲ್ಲಿ ಮುಗಿಸಿದ್ದಾರೆ. ಎಂಟು ವರ್ಷಗಳಿಂದ ಚಿತ್ರಕಲೆಯಲ್ಲಿ ವೃತ್ತಿಪರ ಕಲಾವಿದರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೆಣ್ಣಿನ ಭಾವನೆ, ಮೃದುತ್ವ, ಚಂಚಲತೆ, ಮೌನ, ಸೂಕ್ಷ್ಮತೆಯನ್ನು ನಿಸರ್ಗದೊಂದಿಗೆ ಹೋಲಿಸಿ ಕಪ್ಪು ಬಿಳುಪಿನ ಮಿಶ್ರಣದಲ್ಲಿ ಕಲಾಕೃತಿಗಳನ್ನು ಅವರು ರಚಿಸಿದ್ದಾರೆ.

ಹುಬ್ಬಳ್ಳಿಯವರಾದ ಗಂಗುಗೌಡ, ಧಾರವಾಡದಲ್ಲಿ ಬಿಎಫ್‌ಎ ಪದವಿಯನ್ನು ಮುಗಿಸಿ 15 ವರ್ಷಗಳಿಂದ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಕಂಪನಿಯೊಂದರಲ್ಲಿ ವೆಬ್‌ ಡಿಸೈನರ್‌ ಆಗಿದ್ದಾರೆ. ಗ್ರಾಮೀಣ ಭಾಗದಲ್ಲಿನ ಬೆಟ್ಟ, ಗುಡ್ಡ, ಪ್ರಕೃತಿಯ ಸೊಬಗು, ಕಟ್ಟಡ ಆಕೃತಿಗಳೇ ಇವರ ಕಲಾಕೃತಿಗಳ ವಸ್ತು ವಿಷಯ.

ಮನುಷ್ಯ ತನ್ನ ಸ್ವಾರ್ಥ ಬದುಕಿಗಾಗಿ ಪರಿಸರವನ್ನು ನಾಶಮಾಡುತ್ತಾ, ನಗರೀಕರಣದತ್ತ ಸಾಗುತ್ತಿರುವುದನ್ನು ಆನೆ ಮೇಲೆ ಕಟ್ಟಡಗಳನ್ನು ಕಟ್ಟುತ್ತಿರುವ ಕಲಾಕೃತಿ ಮೂಲಕ ಬಿಂಬಿಸಿದ್ದಾರೆ.

ಮನಷ್ಯನಿಗಿರುವ ಅತಿ ಆಸೆಯನ್ನು ಆನೆ ಪ್ರತಿಮಾ ರೂಪದ ಮೂಲಕ ತೋರಿಸಿದ್ದಾರೆಬಳ್ಳಾರಿಯ ಕಲಾವಿದ ಹನುಮಂತು. ಅದೇ ರೀತಿ ಪರಿಸರದಲ್ಲಿರುವ ಪ್ರಾಣಿ, ಪಕ್ಷಿ, ಮರ ಗಿಡಗಳಿಗೂ ಬದುಕುವ ಹಕ್ಕು ಇದೆ ಎನ್ನುವ ಸಂದೇಶ ನೀಡಿದ್ದಾರೆ.ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಎಂವಿಎ ಪದವಿ ಪಡೆದಿರುವಲಕ್ಷ್ಮಣ ಕಬಾಡಿ ಅವರು 15 ವರ್ಷಗಳಿಂದ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಇವರ ಕಲಾಕೃತಿಗಳು ಅಮೂರ್ತವಾಗಿವೆ. ಯಾವುದೇ ಒಂದು ಕೆಲಸವನ್ನು ಕೈಗೊಂಡಾಗ ಅದಕ್ಕೆ ಎದುರಾಗುವ ಸಮಸ್ಯೆಗಳನ್ನುಗೆರೆಗಳು ಮತ್ತು ಬಣ್ಣದ ಮೂಲಕ ವ್ಯಕ್ತಪಡಿಸಿದ್ದಾರೆ. ಇಂದು ಪ್ರದರ್ಶನ ಕೊನೆಗೊಳ್ಳಲಿದೆ.

**

ತಿಂಗಳ ಚಿತ್ರ ಪ್ರದರ್ಶನ
ಸ್ಥಳ– ವರ್ಣ ಆರ್ಟ್‌ ಗ್ಯಾಲರಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ
ಕೊನೆ ದಿನಾಂಕ: ಡಿಸೆಂಬರ್‌ 22
ಸಮಯ – ಬೆಳಿಗ್ಗೆ 11 ರಿಂದ ಸಂಜೆ 6

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.