ADVERTISEMENT

ಕಿನ್ನಾಳ ಬೊಂಬೆಗಳು ಕಿಲ..ಕಿಲ...

ಪ್ರಮೋದ
Published 16 ಮಾರ್ಚ್ 2024, 23:38 IST
Last Updated 16 ಮಾರ್ಚ್ 2024, 23:38 IST
<div class="paragraphs"><p>ಟೀಪಾಯಿ ಮೇಲೆ ಕಿನ್ನಾಳ ಚಿತ್ರಕಲೆಗೆ ಅಂತಿಮ ಸ್ಪರ್ಶ... &nbsp;</p></div>

ಟೀಪಾಯಿ ಮೇಲೆ ಕಿನ್ನಾಳ ಚಿತ್ರಕಲೆಗೆ ಅಂತಿಮ ಸ್ಪರ್ಶ...  

   

ಚಿತ್ರಗಳು: ಭರತ್‌ ಕಂದಕೂರ

ಮನೆಯ ಮುಂಭಾಗದ ವಿಶಾಲವಾದ ಅಂಗಳದಲ್ಲಿ ಬೊಂಬೆಗಳಿಗೆ ಅಂತಿಮ ರೂಪ ಕೊಡುತ್ತಿದ್ದ ಸೀತಮ್ಮ ಚಿತ್ರಗಾರ ಅವರಿಗೆ 79 ವರ್ಷ. ಅವರು ಮದುವೆಯಾಗಿ ಕೊಪ್ಪಳ ಸಮೀಪದ ಕಿನ್ನಾಳ ಗ್ರಾಮಕ್ಕೆ ಬಂದು ಐದೂವರೆ ದಶಕಗಳಾಗಿವೆ. ಗಂಡನ ಊರಿನ ಪ್ರಸಿದ್ಧ ಕಲೆಯನ್ನು ತಾವೂ ಕಲಿತು ಈಗ ಸೊಸೆ ಮಂಜುಳಾಗೂ ಕಲಿಸಿದ್ದಾರೆ. ಬದುಕಿನ ಇಳಿವಯಸ್ಸಿನಲ್ಲಿದ್ದರೂ ಅವರು ತಯಾರಿಸಿದ ಕಲಾಕೃತಿಗಳ ಸೌಂದರ್ಯಕ್ಕೆ ಮಾತ್ರ ವಯಸ್ಸಾಗಿಲ್ಲ.

ADVERTISEMENT

ತಾಯಿ ಸೀತಮ್ಮಳೊಂದಿಗೆ ಕಿನ್ನಾಳ ಕಲಾಕೃತಿಗಳ ತಯಾರಿಕೆ ಕಲಿತಿರುವ ಮಗ ಮೈಲಾರಪ್ಪ ಚಿತ್ರಗಾರ ಅವರಿಗೆ ತಮ್ಮ ಕುಟುಂಬದ ಎಲ್ಲ ಸದಸ್ಯರು ತಮ್ಮೂರಿನ ಕಲೆಯನ್ನು ರೂಢಿಸಿಕೊಂಡಿದ್ದಾರೆ ಎನ್ನುವುದೇ ಹೆಮ್ಮೆ. ಅದೇ ಬಡಾವಣೆಯಲ್ಲಿರುವ 76 ವರ್ಷದ ಭಾಗ್ಯಮ್ಮ ಹಾಗೂ 63 ವರ್ಷದ ಲಕ್ಷ್ಮಮ್ಮ ಚಿತ್ರಗಾರ ಅವರದ್ದು ಕಿನ್ನಾಳ ಕಲಾಕೃತಿಗಳ ರಚನೆಯಲ್ಲಿ
ಪಳಗಿದ ಕೈ.

ಏಳು ದಶಕಗಳ ಹಿಂದೆ ಊರೂರು ಅಲೆದಾಡಿ ದೇವಿಯರ ಮೂರ್ತಿಗಳ ಕೆತ್ತನೆ, ಕಲಾಕೃತಿ ರಚಿಸುತ್ತಿದ್ದ 86 ವರ್ಷದ ಸಣ್ಣರಂಗಪ್ಪ ಚಿತ್ರಗಾರ ಯುವ ಸಮುದಾಯಕ್ಕೆ ಮಾದರಿಯಂತಿದ್ದಾರೆ. ಸಣ್ಣರಂಗಪ್ಪ ರಾಜ್ಯದಾದ್ಯಂತ ಗ್ರಾಮದೇವತೆಗಳು, ಛತ್ರಿ, ಚಾಮರ, ದಶಮಿದಿಂಡು, ಬಾರಕೋಲಗುಣಿ ಮತ್ತು ಮಕ್ಕಳ ಆಟಿಕೆ ಬೊಂಬೆ ತಯಾರಿಸಿಕೊಟ್ಟಿದ್ದಾರೆ.

ಯಂತ್ರಗಳು ಮತ್ತು ತಂತ್ರಜ್ಞಾನದ ವೇಗದ ಭರಾಟೆಯಲ್ಲಿ ಸಾಂಪ್ರದಾಯಿಕ ಕಲಾಕೃತಿಗಳ ರಚನೆಯ ಮೂಲವೇ ಮರೆಯಾಗುತ್ತಿದೆ. ಮೊದಲು ತಿಂಗಳಾನುಗಟ್ಟಲೇ ಕೆಲಸ ಮಾಡುತ್ತಿದ್ದ ಕಲಾವಿದರ ಶ್ರಮವನ್ನು ಈಗ ಯಂತ್ರಗಳು ಕ್ಷಣಾರ್ಧದಲ್ಲಿ ಮಾಡಿ ಮುಗಿಸುತ್ತಿವೆ. ಇದಕ್ಕೆ ಕಿನ್ನಾಳ ಕಲೆ ಅಪವಾದದಂತಿದೆ.

ಕಿನ್ನಾಳ ಕಲಾಕೃತಿಗಳು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹೆಸರಾಗಿದ್ದು ಹಂಪಿಯ ಪಂಪಾ ವಿರೂಪಾಕ್ಷೇಶ್ವರ, ವಿಜಯ ವಿಠ್ಠಲ ದೇವಾಲಯ, ಕನಕಗಿರಿಯ ಕನಕಾಚಲಪತಿ ದೇವಸ್ಥಾನ–ಹೀಗೆ ಅನೇಕ ಐತಿಹಾಸಿಕ ಸ್ಥಳಗಳಲ್ಲಿವೆ. ವಿಜಯನಗರ ಅರಸರು ತಾವು ಕುಳಿತುಕೊಳ್ಳುವ ಸಿಂಹಾಸನಕ್ಕೆ ಕಿನ್ನಾಳ ಕಲೆಯ ಕಲಾಕೃತಿ ಬಳಸಿಕೊಂಡಿದ್ದರು.

ಈ ಕಲಾಕೃತಿಗಳಿಗೆ ಎಲ್ಲರನ್ನೂ ಮೆಚ್ಚಿಸುವ ಸೌಂದರ್ಯ, ಅಂದದ ಅಲಂಕಾರ, ಮೈಮೇಲೆ ಆಭರಣ, ಆಕರ್ಷಕ ಬಣ್ಣ, ಕೊರಳ ತುಂಬಾ ಸರಗಳು, ನವಿರಾದ ಹುಬ್ಬು ಪ್ರಮುಖ ಆಕರ್ಷಣೆ. ‘ಕಿಸ್ಕಾಲು’ ಬೊಂಬೆ ಕಿನ್ನಾಳ ಕಲೆಯ ಸಂಕೇತ.

ದುರ್ಗಾದೇವಿ, ಕೀಲುಗೌರಿ, ಕೀಲುಗೊಂಬೆ, ಅಲಂಕಾರಿಕ ಸಾಮಗ್ರಿಗಳು, ಆಕಳು, ಆನೆ, ಲಕ್ಷ್ಮಿ, ಸರಸ್ವತಿ, ಗಣೇಶ, ಮತ್ಸ್ಯ, ದ್ವಾರಪಾಲಕರು, ಆಂಜನೇಯ, ಪಲ್ಲಕ್ಕಿ, ಜಾತ್ರೆಯ ಸಾಮಗ್ರಿ, ಚೌಕಿ, ಟೀಪಾಯಿ, ಗರುಡ, ಆಂಜನೇಯ, ರತಿ–ಮನ್ಮಥ, ಕೂರ್ಮಾವತಾರ, ವರಾಹ, ನರಸಿಂಹ, ವಾಮನ, ಕೊಂತಿ ಪಟ್ಟಿ–ಹೀಗೆ ಅನೇಕ ಕಲಾಕೃತಿಗಳನ್ನು ಕಿನ್ನಾಳ ಶೈಲಿಯಲ್ಲಿ ತಯಾರಿಸಲಾಗುತ್ತಿದೆ.

ಈ ಕಲಾಕೃತಿಗಳನ್ನು ತಯಾರಿಸಲು ಬೇಕಾಗುವ ಹಗುರವಾದ ಕಟ್ಟಿಗೆಯ ತೀವ್ರ ಅಭಾವದ ನಡುವೆಯೂ ಕಲಾವಿದರು ಗ್ರಾಹಕರ ಬೇಡಿಕೆಗಳನ್ನು ಪೂರೈಸುತ್ತಿದ್ದಾರೆ. ಸೆಣಬು ನೆನೆಸಿ ತುಂಡುಗಳಾಗಿ ಕತ್ತರಿಸಿ, ಒಣಗಿಸಿ ಪುಡಿ ಮಾಡಿ ಕಟ್ಟಿಗೆಯ ಪುಡಿ ಮತ್ತು ಹುಣಸೆ ಬೀಜದ ಪೇಸ್ಟಿನೊಂದಿಗೆ ಬೆರೆಸಿ ತಯಾರಿಸುವ ಕಿಟ್ಟಾವೇ ಕಿನ್ನಾಳ ಕಲೆಯ ಅಂದ ಹೆಚ್ಚಿಸುತ್ತದೆ.

ಸಾಕಷ್ಟು ಸಮಯ, ದೈಹಿಕ ಶ್ರಮ, ತಾಳ್ಮೆಯಿಂದ ತಯಾರಿಸಿದ ಕಲಾಕೃತಿಗಳಿಗೆ ಮಾರುಕಟ್ಟೆ ಕಂಡುಕೊಳ್ಳುವುದು ಹೇಗೆ ಎನ್ನುವುದು ಕಲಾವಿದರಿಗೆ ತಿಳಿದಿರಲಿಲ್ಲ. ಊರಿನ ಸುತ್ತಲಿನ ಜಾತ್ರೆಗಳು, ಧಾರ್ಮಿಕ ಕಾರ್ಯಕ್ರಮ ಸ್ಥಳಗಳಿಗೆ ಹೋಗಿ ತಾವೇ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದರು. ಆಗ ಬರುತ್ತಿದ್ದ ಆದಾಯವೂ ಅಷ್ಟಕ್ಕಷ್ಟೇ.

ಮೂಡಿತು ಸಂತೋಷ

ಹಲವು ದಶಕಗಳ ಹಿಂದೆ ಕಿನ್ನಾಳದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಚಿತ್ರಗಾರ ಕುಟುಂಬಗಳು ಈಗ 67ಕ್ಕೆ ಇಳಿದಿವೆ. ಇದರಲ್ಲಿ 30 ಕುಟುಂಬಗಳು ಮಾತ್ರ ಕಲಾಕೃತಿಗಳನ್ನು ತಯಾರಿಸುತ್ತಿವೆ. ಹತ್ತು ವರ್ಷಗಳ ಹಿಂದೆ ಈ ಕಲೆಯ ಆಯಸ್ಸು ಮುಗಿದೇ ಹೋಯಿತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದ್ದಾಗ ಯುವ ಕಲಾವಿದ ಸಂತೋಷ್‌ಕುಮಾರ್‌ ಚಿತ್ರಗಾರ ಮಾಡಿದ ಹೊಸ ಪ್ರಯೋಗಗಳು ಆಟದ ಬೊಂಬೆಗಳ ಮೇಲೂ ನಗುವಿನ ಚೆಂಬೆಳಕು ಮೂಡಿಸಿವೆ.

ಲಲಿತ ಕಲೆಯಲ್ಲಿ ಪದವಿ ಮತ್ತು ದೃಶ್ಯಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಂತೋಷ್‌ ಬೆಂಗಳೂರಿನ ಕಂಪನಿಯೊಂದರಲ್ಲಿ ಡಿಸೈನರ್ ಆಗಿದ್ದರು. ತಮ್ಮೂರಿನ ಕಲೆ ವಿನಾಶದ ಅಂಚಿಗೆ ಹೋಗುತ್ತಿದ್ದ ವಿಷಯ ತಿಳಿದು ಸಂಕಟ ಪಟ್ಟು ಆರು ವರ್ಷಗಳ ಹಿಂದೆ ನೌಕರಿಗೆ ರಾಜೀನಾಮೆ ನೀಡಿ ಕಿನ್ನಾಳ ಕಲಾಕೃತಿಗಳ ಮಾರಾಟಕ್ಕೆ ಆನ್‌ಲೈನ್‌ ಮಾರುಕಟ್ಟೆ ಹುಡುಕಿಕೊಂಡರು. 

ಹಿಂದೆ ಕಲಾವಿದರು ದೇವರ ವಿಗ್ರಹ, ಪಲ್ಲಕ್ಕಿ ತಯಾರಿಸಲು ಸೀಮಿತರಾಗಿದ್ದರು. ಸಂತೋಷ್‌ ಮಾಡಿದ ಮಾರುಕಟ್ಟೆಯ ಹೊಸ ಪ್ರಯೋಗಗಳಿಂದಾಗಿ ಕಲಾವಿದರು ಗೃಹಲಂಕಾರ ವಸ್ತುಗಳು ಮತ್ತು ಮಕ್ಕಳ ಆಟಿಕೆ ತಯಾರಿಕೆಗೆ ಒತ್ತು ನೀಡಿ ಜನರ ಗಮನ ಸೆಳೆದರು.

ಕಿನ್ನಾಳ ಕಲೆಯಲ್ಲಿ ಅರಳಿದ ಕಲಾಕೃತಿಗಳು

ಕಲಾಕೃತಿಗಳನ್ನು ತಯಾರಿಸುವ ವಿಧಾನ, ನೂರು ವರ್ಷ ಬಾಳಿಕೆ ಬರುತ್ತವೆ ಎನ್ನುವ ವಿಷಯಗಳನ್ನು ಅವರು ಸಾಮಾಜಿಕ ತಾಣಗಳ ಮೂಲಕ ಹಂಚಿಕೊಂಡರು. ಕಲಾವಿದರು ಕಿನ್ನಾಳ ಕಲೆಯ ಮೂಲ ಸ್ವರೂಪ ಉಳಿಸಿಕೊಂಡು ಬೇರೆ ಬೇರೆ ಕಲಾಕೃತಿಗಳನ್ನು ಮಾಡಲು ಆರಂಭಿಸಿದ್ದರಿಂದ ಬೇಡಿಕೆ ವ್ಯಾಪಕವಾಗುತ್ತಲೇ ಹೋಯಿತು. ಜರ್ಮನಿ, ಲಂಡನ್‌, ಮಲೇಷ್ಯಾ, ಸಿಂಗಪುರ, ದುಬೈ, ಸ್ವಿಟ್ಜರ್‌ಲೆಂಡ್‌ ಹೀಗೆ ಅನೇಕ ರಾಷ್ಟ್ರಗಳಿಗೆ ಕಿನ್ನಾಳ ಕಲಾಕೃತಿಗಳು ರಫ್ತಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರಿಂದ ಕಲಾವಿದರಿಗೆ ಈಗ ಬಿಡುವಿಲ್ಲದಷ್ಟು ಕೆಲಸ.

ಸಾಮಾಜಿಕ ತಾಣಗಳಲ್ಲಿ ಪ್ರಚಾರ ಮಾಡುವ ಜೊತೆಗೆ ಸಂತೋಷ್‌ ಕಿನ್ನಾಳ ಕರಕುಶಲತೆ ಉತ್ತೇಜಿಸಲು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಲಾ ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಅಳಿವಿನ ಅಂಚಿನಲ್ಲಿದ್ದ ಕಿನ್ನಾಳ ಕಲೆ ಇದರಿಂದಾಗಿ ಮತ್ತೆ ಮುನ್ನೆಲೆಗೆ ಬಂತು. ವಿದ್ಯಾರ್ಥಿಗಳಿಗೆ ಕಾರ್ಯಾಗಾರ ನಡೆಸಿದರು. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯ ವಿದ್ಯಾರ್ಥಿಗಳಿಗೆ ಕಲಾಕೃತಿ ತಯಾರಿಕೆ ಬಗ್ಗೆ ಮಾಹಿತಿ ಒದಗಿಸಿದರು. ಸಂತೋಷ್‌ ಅವರ ಕಾರ್ಯದಿಂದ ಪ್ರೇರಣೆ ಪಡೆದ ಪಿಯುಸಿ ವಿದ್ಯಾರ್ಥಿ ಸಮರ್ಥ್‌, ಐಟಿಐ ಪೂರ್ಣಗೊಳಿಸಿರುವ ಪ್ರದೀಪ್ ಮಾನಪ್ಪ, ಸಂತೋಷ್‌ ಜೊತೆ ಕೈ ಜೋಡಿಸಿದ್ದಾರೆ.

ಸಂತೋಷ್‌ ಮೊದಲು ತಮ್ಮ ಸಮುದಾಯದ ಯುವಜನತೆಗೆ ಮಾತ್ರ ಕಿನ್ನಾಳ ಕಲೆ ತಯಾರಿಕೆಯ ತರಬೇತಿ ನೀಡುತ್ತಿದ್ದರು. ಎರಡು ತಿಂಗಳ ಹಿಂದೆ ಎಲ್ಲ ಸಮುದಾಯದವರಿಗೆ ತರಬೇತಿ ವಿಸ್ತರಿಸಿದ್ದಾರೆ. 25 ವಿದ್ಯಾರ್ಥಿಗಳನ್ನು ಒಳಗೊಂಡ ಮೂರು ತಂಡ ಈಗಾಗಲೇ ತರಬೇತಿ ಪೂರ್ಣಗೊಳಿಸಿದೆ. ತರಬೇತಿ ಪಡೆದವರು ಕಲಾಕೃತಿ ತಯಾರಿಸಲು ನಮ್ಮಲ್ಲಿ ಟೂಲ್‌ ಕಿಟ್‌ ಇಲ್ಲ ಎನ್ನುವ ನೆಪ ಹೇಳುತ್ತಿದ್ದರು. ಈಗ ಸರ್ಕಾರವೇ ಅವರಿಗೆ ಕಿಟ್‌ ನೀಡಿ ಹೊಸ ತಲೆಮಾರಿನ ಯುವಜನತೆಯನ್ನು ಕಲಾವಿದರನ್ನಾಗಿ ಮಾಡುತ್ತಿದೆ.

ಅಂದದ ಕಲಾಕೃತಿ ತಯಾರಿಸಲು ಶಕ್ತಿಯಿದ್ದರೂ ಮಾರುಕಟ್ಟೆಯ ಕೊರತೆಯಿಂದಾಗಿ ಕಲಾವಿದರು ಆಸಕ್ತಿ ಕಳೆದುಕೊಂಡಿದ್ದರು. ಈಗ ಡಿಜಿಟಲ್‌ ವೇದಿಕೆ ಕಲಾವಿದರಿಗೆ ಕೆಲಸ, ಹೊಸಬರಿಗೆ ತರಬೇತಿ, ಕಲೆ ಮುನ್ನಡೆಸುವ ನಾಯಕರನ್ನು ಹುಟ್ಟುಹಾಕಿದೆ. ದಶಕದ ಹಿಂದೆ ಸೌಂದರ್ಯವಿದ್ದರೂ ಮೊಗ ಬಾಡಿಸಿಕೊಂಡಿದ್ದ ಕಿನ್ನಾಳದ ಬೊಂಬೆಗಳಲ್ಲಿ ಈಗ ನಗು ನಲಿದಾಡುತ್ತಿದೆ. ಇದು ಯುವಜನತೆಗೆ ಸ್ಥಳೀಯವಾಗಿ ಉದ್ಯೋಗ ಹಾಗೂ ಜೀವನ ಭದ್ರತೆ ತಂದುಕೊಟ್ಟಿದೆ. ‘ಕರಕುಶಲ ಕಲೆಗಳ ತವರು’ ಎಂದೇ ಹೆಸರಾದ ಕಿನ್ನಾಳದಲ್ಲಿ ಬೊಂಬೆಗಳ ನಲಿದಾಟ ಜೋರಾಗಿದೆ. 

ಸಂತೋಷ್‌ಕುಮಾರ್‌ ಚಿತ್ರಗಾರ

ವಿಮಾನ ನಿಲ್ದಾಣದಲ್ಲೂ ಕಿನ್ನಾಳ ಕಲೆ

ರಾಜ್ಯದ ವಿವಿಧೆಡೆ ಸುಂದರ ಕಲಾಕೃತಿ ತಯಾರಿಸಿರುವ ಸಂತೋಷ್‌ಕುಮಾರ್‌ ಚಿತ್ರಗಾರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದ ಟರ್ಮಿನಲ್‌–2 ರಲ್ಲಿಯೂ ತಮ್ಮ ಕೈ ಚಳಕ ತೋರಿದ್ದಾರೆ.

ಅಲ್ಲಿ ಅವರು ತಯಾರಿಸಿದ ‘ಸಿಂಫನಿ ಆಫ್ ಎಮೋಷನ್ಸ್’ ಮತ್ತು ‘ಟಾಯ್ಸ್’ ಶೀರ್ಷಿಕೆಯ ಕಲಾಕೃತಿಗಳನ್ನು ಅಳವಡಿಸಲಾಗಿದೆ.

ಬೆಂಗಳೂರಿನ ಕೆಂಪೇಗೌಡ ವಿಮಾನನಿಲ್ದಾಣದಲ್ಲಿ ‘ಸಿಂಫನಿ ಆಫ್ ಎಮೋಷನ್ಸ್’ ಶೀರ್ಷಿಕೆಯಲ್ಲಿ ಸಂತೋಷ್‌ ತಯಾರಿಸಿರುವ ಕಿನ್ನಾಳ ಕಲಾಕೃತಿ  

‘ಕಿನ್ನಾಳ ಕಲೆ ಶ್ರೀಮಂತವಾಗಿದ್ದರೂ ಜನರಿಗೆ ಹೇಗೆ ತಲುಪಿಸಬೇಕು ಎನ್ನುವುದು ನಮ್ಮ ಸಮಾಜದ ಜನರಿಗೆ ಗೊತ್ತಿರಲಿಲ್ಲ. ಮನೆ ಬಾಗಿಲ ಬಳಿ ಬಂದ ಗ್ರಾಹಕರಿಂದ ಮಾತ್ರ ವ್ಯಾಪಾರವೆಂದುಕೊಂಡಿದ್ದ ಅವರಿಗೆಲ್ಲ ಸ್ಪರ್ಧಾತ್ಮಕ ಜಗತ್ತಿನ ಆಗುಹೋಗುಗಳು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮ ಮತ್ತು ಮಾರುಕಟ್ಟೆ ಬಳಸಿಕೊಂಡು ಊರಿನಿಂದಲೇ ಬೇಡಿಕೆ ಸೃಷ್ಟಿಸಿದ್ದೇನೆ. ಈಗ ಬೇಡಿಕೆಯಷ್ಟು ಕಲಾಕೃತಿ ನೀಡಲು ಹಗಲಿರುಳು ಕೆಲಸ ಮಾಡಬೇಕಾಗಿದೆ’ ಎಂದು ಸಂತೋಷ್‌ ಖುಷಿಯಿಂದಲೇ ಹೇಳಿದರು.

ವಿಮಾನ ನಿಲ್ದಾಣದಲ್ಲೂ ಕಿನ್ನಾಳ ಕಲೆ

ರಾಜ್ಯದ ವಿವಿಧೆಡೆ ಸುಂದರ ಕಲಾಕೃತಿ ತಯಾರಿಸಿರುವ ಸಂತೋಷ್‌ಕುಮಾರ್‌ ಚಿತ್ರಗಾರ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನದ ಟರ್ಮಿನಲ್‌–2 ರಲ್ಲಿಯೂ ತಮ್ಮ ಕೈ ಚಳಕ ತೋರಿದ್ದಾರೆ. ಅಲ್ಲಿ ಅವರು ತಯಾರಿಸಿದ ‘ಸಿಂಫನಿ ಆಫ್ ಎಮೋಷನ್ಸ್’ ಮತ್ತು ‘ಟಾಯ್ಸ್’ ಶೀರ್ಷಿಕೆಯ ಕಲಾಕೃತಿಗಳನ್ನು ಅಳವಡಿಸಲಾಗಿದೆ.

‘ಕಿನ್ನಾಳ ಕಲೆ ಶ್ರೀಮಂತವಾಗಿದ್ದರೂ ಜನರಿಗೆ ಹೇಗೆ ತಲುಪಿಸಬೇಕು ಎನ್ನುವುದು ನಮ್ಮ ಸಮಾಜದ ಜನರಿಗೆ ಗೊತ್ತಿರಲಿಲ್ಲ. ಮನೆ ಬಾಗಿಲ ಬಳಿ ಬಂದ ಗ್ರಾಹಕರಿಂದ ಮಾತ್ರ ವ್ಯಾಪಾರವೆಂದುಕೊಂಡಿದ್ದ ಅವರಿಗೆಲ್ಲ ಸ್ಪರ್ಧಾತ್ಮಕ ಜಗತ್ತಿನ ಆಗುಹೋಗುಗಳು ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಸಾಮಾಜಿಕ ಮಾಧ್ಯಮ ಮತ್ತು ಮಾರುಕಟ್ಟೆ ಬಳಸಿಕೊಂಡು ಊರಿನಿಂದಲೇ ಬೇಡಿಕೆ ಸೃಷ್ಟಿಸಿದ್ದೇನೆ. ಈಗ ಬೇಡಿಕೆಯಷ್ಟು ಕಲಾಕೃತಿ ನೀಡಲು ಹಗಲಿರುಳು ಕೆಲಸ ಮಾಡಬೇಕಾಗಿದೆ’ ಎಂದು ಸಂತೋಷ್‌ ಖುಷಿಯಿಂದಲೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.