ADVERTISEMENT

ರಾಮನವಮಿಯೂ ಅಮೆರಿಕದಲ್ಲಿ ಉಳಿದ ತಂಜಾವೂರು ರಾಮನೂ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2022, 7:37 IST
Last Updated 10 ಏಪ್ರಿಲ್ 2022, 7:37 IST
ಶೋಭಾ ಭಾರ್ಗವ್‌ ಅವರು ರಚಿಸಿದ ತಂಜಾವೂರು ಶೈಲಿಯ ಶ್ರೀರಾಮ ಪಟ್ಟಾಭಿಷೇಕ ವರ್ಣ ಚಿತ್ರ
ಶೋಭಾ ಭಾರ್ಗವ್‌ ಅವರು ರಚಿಸಿದ ತಂಜಾವೂರು ಶೈಲಿಯ ಶ್ರೀರಾಮ ಪಟ್ಟಾಭಿಷೇಕ ವರ್ಣ ಚಿತ್ರ   

ರಾಮನವಮಿಯ ಪೂಜೆಗೆ ಕರೆದ ರಾಮ ಅಮೆರಿಕದಲ್ಲೇ ಉಳಿದರೆ ಹೇಗಾದೀತು!?

ರಾಮನವಮಿ ಎಲ್ಲ ಕಡೆ ಭರ್ಜರಿಯಾಗಿ ಆಚರಿಸುವುದು ನಡೆದೇ ಇದೆ. ರಾಮನ ಮೂರ್ತ ರೂಪಕ್ಕೆ ಕಲೆಯ ಸ್ಪರ್ಶ ಕೊಟ್ಟವರು ಹಲವರು. ಹಾಡು, ರಂಗವಲ್ಲಿ, ಚಿತ್ರಕಲೆ ಇತ್ಯಾದಿ....

ಈ ಹೊತ್ತಿನಲ್ಲಿ ತಂಜಾವೂರಿನ ಶೈಲಿಯಲ್ಲಿ ಬರೆದ ಶ್ರೀರಾಮ ಪಟ್ಟಾಭಿಷೇಕದ ಚಿತ್ರಕ್ಕೆ ರಾಮ ನವಮಿ ಆಯೋಜಕರಿಂದ ದಿಢೀರ್‌ ಬೇಡಿಕೆ ಬಂದಿತು. ಆದರೆ, ಅಪರೂಪದ ಕಲಾಕೃತಿ ವಿದೇಶದಲ್ಲೇ ಉಳಿಯಿತು. ಕೊನೆಗೂ ಕಲಾವಿದೆ ಅದರ ಫೋಟೋ ಮುದ್ರಿಸಿ ಕೊಟ್ಟರು. ಆ ಕತೆ ಮುಂದೆ ನೋಡೋಣ.

ADVERTISEMENT
ಶೋಭಾ ಭಾರ್ಗವ್‌

ಇವರು ಶೋಭಾ ಭಾರ್ಗವ್‌. ಬೆಂಗಳೂರಿನ ತಲಘಟ್ಟಪುರದವರು. ಮೂಲತಃ ಪ್ರಾಥಮಿಕ ಶಾಲಾ ಶಿಕ್ಷಕಿ. ಬಾಲ್ಯದಲ್ಲಿ ಹವ್ಯಾಸಕ್ಕಾಗಿ ಬಿಡಿಸುತ್ತಿದ್ದ ಚಿತ್ರಗಳು ಈಗ ವೃತ್ತಿಯ ಸ್ವರೂಪ ಪಡೆದಿವೆ. ಇವರ ರಚನೆಯ ಹೆಚ್ಚಿನ ಚಿತ್ರಗಳು ಸ್ವಯಂ ಕಲಿಕೆಯಿಂದಲೇ ರಚನೆಯಾದಂತವುಗಳು.

ಮಂಡಲ ಕಲೆ, ಅಕ್ರಿಲಿಕ್‌, ತೈಲವರ್ಣ, ಜಲವರ್ಣ, ಗ್ಲಾಸ್‌ ಪೈಂಟಿಂಗ್‌, ಕಸೂತಿ... ಹೀಗೆ ಚಿತ್ರಕಲೆಯ ಎಲ್ಲ ಪ್ರಕಾರಗಳಲ್ಲಿ ಕೈಯಾಡಿಸಿದ್ದಾರೆ.

ಮೈಸೂರು ಕಲೆ, ತಂಜಾವೂರು ಚಿತ್ರಕಲಾ ಪ್ರಕಾರವನ್ನು ಅಧ್ಯಯನ ಮಾಡಿ ಈಗ ಪೂರ್ಣಕಾಲಿಕವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಕೃತಿ ಚಿತ್ರಗಳು, ಭಾವ ಭಂಗಿಯ ವರ್ಣ ಸಂಯೋಜನೆ, ಪ್ರದರ್ಶನ ಕಲೆಗಳ ಚಿತ್ರಗಳು ಶೋಭಾ ಅವರ ಕುಂಚದಿಂದ ಮೂಡಿಬಂದಿವೆ.

ಈಗ ರಾಮಪಟ್ಟಾಭಿಷೇಕಕ್ಕೆ ಬರೋಣ.

ರಾಮಪಟ್ಟಾಭಿಷೇಕದ ತಂಜಾವೂರು ಶೈಲಿಯ ಚಿತ್ರವನ್ನು ಶೋಭಾ ಅವರು ಲಂಡನ್‌ನಲ್ಲಿದ್ದಾಗ ಬರೆದಿದ್ದರು. ಅಲ್ಲಿನ ವರ್ಷಗಳ ಬಳಿಕ ಚಿತ್ರ ಬೆಂಗಳೂರಿನಲ್ಲಿ ರಾಮನವಮಿ ಕಾರ್ಯಕ್ರಮ ಆಯೋಜಕರ ಕಣ್ಣಿಗೆ ಬಿತ್ತು. ಇದೇ ಚಿತ್ರ ಬೇಕು ಎಂಬುದು ಇಲ್ಲಿನವರ ಒತ್ತಾಸೆ. ಆದರೆ, ಆ ಚಿತ್ರ ಅದಾಗಲೇ ಇವರ ಗೆಳೆಯರಿಗೆ ಉಡುಗೊರೆ ರೂಪದಲ್ಲಿ ಹೋಗಿ ಅಮೆರಿಕ ಪ್ರಯಾಣ ಬೆಳೆಸಿ ಅಲ್ಲಿನ ಮನೆಯಲ್ಲಿ ನೆಲೆಯಾಗಿತ್ತು. ಈಗ ತಂಜಾವೂರು ಕಲೆಯಲ್ಲಿ ಪಟ್ಟಾಭಿಷಿಕ್ತ ರಾಮನನ್ನು ಭಾರತಕ್ಕೆ ಕರೆತರುವುದೆಂದರೆ ಸಾಹಸವೇ ಸರಿ. ಕೊನೆಗೂ ಆನ್‌ಲೈನ್‌ನಲ್ಲಿ ಸಂಗ್ರಹಿಸಿದ್ದ ಚಿತ್ರದ ಪ್ರತಿಯನ್ನು ಮುದ್ರಿಸಿ ಕೊಟ್ಟರು. ಈಗ ಮತ್ತೆ ತಂಜಾವೂರು ಕಲೆಯಲ್ಲಿ ರಾಮ, ಕೃಷ್ಣರನ್ನು ಅರಳಿಸುವ ಪ್ರಯತ್ನದಲ್ಲಿದ್ದಾರೆ. ಸದ್ದಿಲ್ಲದೇ ಅದೆಷ್ಟೋ ಕೃತಿಗಳು ಶೋಭಾ ಕೈಯಲ್ಲಿ ಜೀವ ಪಡೆಯುತ್ತಿವೆ.

ಶೋಭಾ ಭಾರ್ಗವ್ ಕೈಯಲ್ಲಿ ಜಲವರ್ಣದಲ್ಲಿ ಅರಳಿದ ಮಿಂಚುಳ್ಳಿ
ಶೋಭಾ ಭಾರ್ಗವ್ ರಚಿಸಿದ ಕಡಲ ತಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.