ADVERTISEMENT

ಭೀಮ ನಮನ; ಸ್ಮರಣಾಂಜಲಿ

ಉಮಾ ಅನಂತ್
Published 22 ಜನವರಿ 2019, 19:46 IST
Last Updated 22 ಜನವರಿ 2019, 19:46 IST
ಪಂ. ಭೀಮಸೇನ ಜೋಶಿ
ಪಂ. ಭೀಮಸೇನ ಜೋಶಿ   

ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಲೋಕದ ಪಂ. ಭೀಮಸೇನ ಜೋಶಿ ಅವರದು ‘ಕಿರಾಣಾ ಘರಾಣ’ ಶೈಲಿಯಾದರೂ ಎಲ್ಲ ಘರಾಣೆಗಳ ರಸಹೀರಿ ತಾವೇ ಸೃಷ್ಟಿಸಿದ್ದ ‘ಭೀಮಸೇನ ಶೈಲಿ’ಯಲ್ಲಿ ಹಾಡುತ್ತಿದ್ದ ಅಪ್ರತಿಮ ಗಾಯಕರಾಗಿದ್ದರು.

ಶಾಸ್ತ್ರೀಯ ಸಂಗೀತದಷ್ಟೇ ಲಘು ಸಂಗೀತ, ಭಜನ್‌, ಮರಾಠಿ ಅಭಂಗ್‌ಗಳಿಂದಲೂ ಪಂಡಿತ್‌ಜಿ ಹೆಸರಾಗಿದ್ದರು. ‘ಭಾಗ್ಯದ ಲಕ್ಷ್ಮಿ ಬಾರಮ್ಮಾ, ಕೈಲಾಸವಾಸ ಗೌರೀಶ ಈಶ ಮುಂತಾದ ಕೃತಿಗಳೊಂದಿಗೆ ಭೀಮಸೇನ ಜೋಶಿ ಅವರ ಕಂಠ ಮನೆಮಾತಾಗಿತ್ತು. ಹಾಗೆ ಪೂರಿಯ ಕಲ್ಯಾಣ್‌ ರಾಗದ ‘ನಂಬಿದೆ ನಿನ್ನ ನಾದ ದೇವತೆಯೇ’ ಕೂಡ ಕೇಳುಗರ ಇಷ್ಟದ ಹಾಡಾಗಿತ್ತು. ಇಂಥ ಅದ್ಭುತ ಕಂಠಸಿರಿಯನ್ನು ಯಾರಾದರೂ ಮರೆಯಲು ಸಾಧ್ಯವೇ?

ಪಂಡಿತ್‌ ಜಿ ಅವರ ಸ್ಮರಣಾರ್ಥ ಬನ್ನೇರುಘಟ್ಟ ಸಮೀಪದ ನಿಸರ್ಗ ಬಡಾವಣೆಯಲ್ಲಿರುವ ವಿಎಲ್‌ಎನ್‌ ನಿರ್ಮಾಣ್‌ ಸಂಸ್ಥೆ ಹಾಗೂ ವಿಎಲ್‌ಎನ್‌ ಪುರಂದರ ಪ್ರತಿಷ್ಠಾನ ಪ್ರತೀ ವರ್ಷ ‘ಭೀಮ ನಮನ; ಸ್ಮರಣಾಂಜಲಿ’ ಕಾರ್ಯಕ್ರಮವನ್ನು ಕಳೆದ ಎಂಟು ವರ್ಷಗಳಿಂದ ಆಚರಿಸುತ್ತಾ ಬಂದಿದೆ.

ADVERTISEMENT

‘ಹಿಂದೂಸ್ತಾನಿ ಸಂಗೀತವನ್ನು ವಿಶ್ವವ್ಯಾಪಿಯಾಗಿಸಿ ತಮ್ಮ ಅದ್ಭುತ ಕಂಠದಿಂದ ಮನೆಮಾತಾಗಿದ್ದ ಪಂ.ಭೀಮಸೇನ ಜೋಶಿ ಅವರನ್ನು ಸ್ಮರಿಸುವುದು ಸಂಗೀತಪ್ರಿಯರ ಕರ್ತವ್ಯ. ಹೀಗಾಗಿ ಪ್ರತೀವರ್ಷವೂ ನಿಸರ್ಗ ಬಡಾವಣೆಯಲ್ಲಿರುವ ನಮ್ಮ ಪ್ರತಿಷ್ಠಾನದ ವತಿಯಿಂದ ‘ಭೀಮ ನಮನ’ ಆಚರಿಸಿ ಹಿರಿಯ ಸಂಗೀತ ಚೇತನಕ್ಕೆ ಸ್ವರ ನಮನ ಸಲ್ಲಿಸುತ್ತಾ ಬಂದಿದ್ದೇವೆ’ ಎಂದು ಹೇಳುತ್ತಾರೆ ವಿಎಲ್‌ಎನ್‌ ಪುರಂದರ ಪ್ರತಿಷ್ಠಾನದ ರೂವಾರಿ ವಿ.ಲಕ್ಷ್ಮೀನಾರಾಯಣ.

‘ಈ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕರನ್ನು ಕರೆಸಿ ದಾಸವಾಣಿ, ಸಂತವಾಣಿ ಗಾಯನ ಏರ್ಪಡಿಸುತ್ತಿದ್ದೇವೆ’ ಎಂದರು.

ಜನವರಿ 24ರಂದು (ಗುರುವಾರ) ಸಂಜೆ 6 ಗಂಟೆಗೆ ಹಿಂದೂಸ್ತಾನಿ ಗಾಯಕಿ ಸಂಗೀತಾ ಕಟ್ಟಿ ಅವರ ದಾಸವಾಣಿ ಹಾಗೂ ಸಂತವಾಣಿ ಕಾರ್ಯಕ್ರಮವನ್ನು ಇಲ್ಲಿನ ಪುರಂದರ ಮಂಟಪದಲ್ಲಿ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.