ADVERTISEMENT

ಬದುಕು ಬಣ್ಣವಾಗುವುದು ಹೇಗೆ?

ಮಕ್ಕಳ ದಿನಾಚರಣೆ ವಿಶೇಷ

ಮಲ್ಲಮ್ಮ ಜೊಂಡಿ
Published 10 ನವೆಂಬರ್ 2018, 20:00 IST
Last Updated 10 ನವೆಂಬರ್ 2018, 20:00 IST
ಚಿತ್ರ: ಭಾವು ಪತ್ತಾರ
ಚಿತ್ರ: ಭಾವು ಪತ್ತಾರ   

ಮದುವೆಯಾಗಿ ಬಹಳ ದಿನಗಳ ನಂತರ ಆಕಾಶ ಹಾಗೂ ಭೂಮಿಗೆ ಹುಟ್ಟಿದ ಮಗು ಸೂರ್ಯ. ಮಗು ಕಪ್ಪಿಗಿಂತ ತುಸು ಜಾಸ್ತಿ ಕಪ್ಪು ಎಂಬಂತಿತ್ತು. ಮಗುವನ್ನು ನೋಡಲು ಬಂದವರು, ‘ಏನೇ ಭೂಮಿ ಮಗುವಿನ ಕಣ್ಣೆರಡಷ್ಟೆ ಕಾಣ್ತಿವೆಯಲ್ಲೆ!’ ಎಂಬ ಮಾತಿನ ಲಹರಿಗೇನು ಕೊನೆಯಿರಲಿಲ್ಲ. ‘ಹೆತ್ತವರಿಗೆ ಹೆಗ್ಗಣ ಮುದ್ದು’ ಎನ್ನುವಂತೆ ಭೂಮಿ ಸೂರ್ಯನನ್ನು ಅತಿಯಾದ ಪ್ರೀತಿಯ ಧಾರೆ ಎರೆದು ಬೆಳೆಸಿದಳು. ಅಮ್ಮನ ತೋಳಲ್ಲಿ ನಗುತ್ತಾ ಬೆಳೆದ ಸೂರ್ಯ ಶಾಲೆ ಸೇರುವ ಸಮಯ ಬಂದೇಬಿಟ್ಟಿತು. ಮೊದಲೆಲ್ಲ ಅಮ್ಮನ ತೊರೆದು ಹೋಗಲು ಹಟ ಮಾಡಿದರೂ ಬರಬರುತ್ತ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡನು. ಆದರೆ ಹುಡುಗರು ‘ಕರಿ ಇಡ್ಲಿ, ಬ್ಲ್ಯಾಕ್ ಬೆರ್‍ರಿ’ ಎಂದು ಹಂಗಿಸುವಾಗ ಅಳುತ್ತ ಮನೆ ಸೇರುತ್ತಿದ್ದನು ಸೂರ್ಯ. ‘ನಂಗೆ ಮಾತ್ರ ಯಾಕಮ್ಮ ಈ ಬಣ್ಣ? ನಾನು ಬೆಳ್ಳಗಾಗಲ್ವೇನಮ್ಮ? ಎಲ್ಲರೂ ನಗುತ್ತಾರಮ್ಮ, ನಾನು ಶಾಲೆಗೆ ಹೋಗಲ್ಲ’ ಎಂಬ ಸೂರ್ಯನ ಪ್ರಶ್ನೆಗಳಿಗೆಲ್ಲ ಉತ್ತರಿಸುತ್ತ, ಸಮಾಧಾನಿಸುತ್ತ ದಿನದೂಡುತ್ತಿದ್ದಳು ಅಮ್ಮ.

ಒಂದು ದಿನ ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದರು ಗುರುಗಳು. ಎಲ್ಲ ಮಕ್ಕಳು ಉತ್ಸಾಹದಿಂದ ನಾಟಕ, ಹಾಡು, ಭಾಷಣ, ನೃತ್ಯ ಹೀಗೆ ಯಾವುದರಲ್ಲಿ ಪಾಲ್ಗೊಳ್ಳಬೇಕೆಂದು ಚರ್ಚಿಸುತ್ತಿದ್ದರು. ಸೂರ್ಯನೂ ಅವರ ಜೊತೆಯಾಗಿ, ‘ನಾನೂ ಸೇರ್ಕೊತೀನಿ’ ಎಂದಾಗ ಮಕ್ಕಳೆಲ್ಲ ಗೊಳ್ಳೆಂದು ನಗುತ್ತಾ, ‘ನೀನು ವೇದಿಕೆ ಏರಿದರೆ ಬಂದವರೆಲ್ಲ ಓಡಿ ಹೋಗುತ್ತಾರಷ್ಟೆ’ ಎಂದು ಮೂದಲಿಸಿದರು. ಸೂರ್ಯ ಅಳುತ್ತಾ ಊರಿಗೆ ಹತ್ತಿರದ ಗುಡ್ಡದಲ್ಲಿದ್ದ ಒಂದು ಬಂಡೆಯ ಮೇಲೆ ಹೋಗಿ ಕುಳಿತ. ಆಗ ದೇವತೆಯಂತೆ‌ ವೇಷ ಧರಿಸಿದ ಪ್ರಕಾಶಮಾನ ವ್ಯಕ್ತಿಯೊಬ್ಬ ಬಂದು ಸೂರ್ಯನೆದುರು ನಿಂತರು.

‘ಯಾಕೆ ಕಂದ ಅಳುತ್ತಿರುವೆ?’

ADVERTISEMENT

ಕಣ್ಣೀರು ಒರೆಸಿಕೊಳ್ಳುತ್ತಾ, ‘ನೀವು ಯಾರು’ ಎಂದ ಸೂರ್ಯ.

‘ನಾನು ಕೂಡ ನಿನ್ನಂತಹ ಸೂರ್ಯನೆ, ಸೂರ್ಯದೇವ ಎನ್ನುವುದು ಈ ಜಗ.’

‘ಓಹೋ! ಬೆಳಕು ನೀಡುವ ಸೂರ್ಯನೆ ನೀನು. ನೋಡಲೆಷ್ಟು ಚಂದವಿರುವೆ ನೀನು! ನಾನು ಮಾತ್ರ ನನ್ನ ಈ ಬಣ್ಣದಿಂದ ನಗೆಪಾಟಲಿಗೀಡಾಗಿದ್ದೇನೆ’ ತಲೆಕೆಳಗೆ ಹಾಕಿದ ಸೂರ್ಯ.

ಸೂರ್ಯನ ಪಕ್ಕ ಬಂದು ಕುಳಿತ ಸೂರ್ಯದೇವ,‌ ‘ ನಾನು ಕೂಡ ನಿನ್ನ ಬಣ್ಣವೇ ಮಗು, ಆ ದೂರದ ಬೆಟ್ಟ ಇಲ್ಲಿಂದ ಅದೆಷ್ಟು ಸುಂದರವಾಗಿ ಕಾಣುವುದಲ್ಲವೆ! ಅಲ್ಲಿ ಹೋಗಿ ನೋಡಿದರೆ ಕಲ್ಲುಮುಳ್ಳುಗಳೆ ತುಂಬಿರುವವು. ಹಾಗೆಯೇ ಜಗತ್ತು ಕೂಡ, ಹೊಳೆವ ಬೆಳ್ಳನೆ ಮುಖ ಹೊಂದಿದವರೆಲ್ಲ ಒಳ್ಳೆಯ ಮನಸು ಹೊಂದಿರಬೇಕೆಂದೇನೂ ಇಲ್ಲ. ದೇವರು ಪ್ರತಿಯೊಬ್ಬರಿಗೂ ನೀಡಿದ ದೇಹ, ಬಣ್ಣ, ಮನ ಎಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಒಳ್ಳೆಯ ಗುಣಗಳು ಮಾತ್ರ ನಾವು ಗಳಿಸಿಕೊಳ್ಳಬೇಕಾದ ಆಸ್ತಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡು, ಒಳ್ಳೆಯ ಮಾತನಾಡು, ನಗುತ್ತ ಎಲ್ಲರನ್ನೂ ನಗಿಸು, ನಿನ್ನ ಬಣ್ಣವು ಬದುಕನ್ನು ರೂಪಿಸದಿದ್ದರೂ ಸಹ ನಿನ್ನ ಬದುಕು ಬಣ್ಣವಾಗುವುದು’ ಎಂದು ಹೊರಟುಹೋದನು.

ಅಂದು ಸೂರ್ಯ ಮನೆಗೆ ಬಂದೊಡನೆ ನಗುತ್ತ ಕೈ ಕಾಲು ಮುಖ ತೊಳೆದು ದೇವರಿಗೆ ನಮಸ್ಕರಿಸಿ, ಪಾಠ ಓದಿ ಅಮ್ಮನೊಂದಿಗೆ ಹರಟುತ್ತ ಸಂತೋಷವಾಗಿ ಮಲಗಿದನು. ಅಂದಿನಿಂದ ಸೂರ್ಯನ ಜಗವೆ ಬದಲಾಯಿತು. ಅನ್ನುವವರಿಗೆ ನಗುತ್ತಲೆ ಪ್ರತಿಕ್ರಿಯಿಸುತ್ತ ಎಲ್ಲರಿಗೂ ಸಹಾಯ ಮಾಡುತ್ತಾ, ಆತ್ಮವಿಶ್ವಾಸದಿಂದ ಇಡೀ ಶಾಲೆಯ ಮೆಚ್ಚಿನ ವಿದ್ಯಾರ್ಥಿಯಾದ ಸೂರ್ಯ. ಅಂದು ದೂರ ಸರಿಸುತ್ತಿದ್ದವರೆಲ್ಲ ಅವನ ಗೆಳೆತನಕ್ಕೆ ಹಂಬಲಿಸುವಂತಾಯಿತು. ತರಗತಿಗೆ ಮೊದಲಿಗನಾಗಿ ಉತ್ತೀರ್ಣನಾಗಿ ಸಾಧನೆಯ ದಾರಿಹಿಡಿದ. ಬಣ್ಣವಿಲ್ಲದ ಸೂರ್ಯನ ಬದುಕು ಬಣ್ಣವಾಗಿದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.