ADVERTISEMENT

ಮತ್ತೆ ಬರಲಿದೆ ಕಲಾವಿದರ ಹಬ್ಬ

ಮಾನಸ ಬಿ.ಆರ್‌
Published 3 ಜನವರಿ 2019, 20:15 IST
Last Updated 3 ಜನವರಿ 2019, 20:15 IST
ಶಿವು ಹಾದಿಮನಿ ಚಿತ್ರ
ಶಿವು ಹಾದಿಮನಿ ಚಿತ್ರ   

ಕಲಾವಿದರ ಪಾಲಿಗೆ ಹಬ್ಬ ಎಂದೇ ಕರೆಸಿಕೊಳ್ಳುವ ‘ಚಿತ್ರ ಸಂತೆ’ ಈ ವರ್ಷವೂ ಕಲಾಸಕ್ತರ ಹುರುಪನ್ನು ಹೆಚ್ಚಿಸಲು ಸಜ್ಜಾಗಿದೆ.

ಚಿತ್ರಕಲಾ ಪರಿಷತ್ತಿನಲ್ಲಿ ಭಾನುವಾರ ಚಿತ್ರಸಂತೆಯನ್ನು ಆಯೋಜಿಸಲಾಗಿದೆ. ಇಲ್ಲಿ 2,500ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಲಿದ್ದಾರೆ. ಪ್ರತಿ ವರ್ಷ ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಂದ ಕಲಾವಿದರೊಂದಿಗೆ, ಬೇರೆ ರಾಜ್ಯದವರೂ ಪಾಲ್ಗೊಳ್ಳುವುದು ರೂಢಿ.ಸ್ಟಾಲ್‌ಗಳನ್ನು ಹಾಕಿಕೊಂಡು ಕಲಾಸಕ್ತರನ್ನು ಗಮನಸೆಳೆಯಲು ಈ ಬಾರಿಯೂ ಸಜ್ಜುಗೊಂಡಿದ್ದಾರೆ.

ಚಿತ್ರಸಂತೆಯಲ್ಲಿ ಕೆಲವರು₹30 ಸಾವಿರ ದುಡಿದರೆ, ಇನ್ನು ಕೆಲವು ದೊಡ್ಡ ಕಲಾವಿದರು ₹3ರಿಂದ ₹4 ಲಕ್ಷದವರೆಗೂ ಹಣ ಮಾಡುತ್ತಾರೆ. ಜೊತೆಗೆ ವರ್ಷವಿಡೀ ತಮ್ಮ ವರ್ಣಚಿತ್ರಗಳನ್ನು ಕೊಂಡುಕೊಳ್ಳುವ ಗ್ರಾಹಕರನ್ನು ಇಲ್ಲಿಯೇ ಸೆಳೆದುಕೊಳ್ಳುತ್ತಾರೆ.ಹೊಸದಾಗಿ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವವರ ಪಾಲಿಗಂತೂ ಇದು ಸ್ವರ್ಗವೇ ಸರಿ. ಚಿತ್ರಗಳು ಚೆನ್ನಾಗಿದ್ದರೆ ವರ್ಷದ ಕೂಳಿಗೇನು ತೊಂದರೆ ಇಲ್ಲ.

ADVERTISEMENT
ಸುನಿಲ್‌ ಮಠದ್‌ ಚಿತ್ರ

ಒಂದೇ ದಿನದಲ್ಲಿ ಇಲ್ಲಿಸಾಕಷ್ಟು ದೊಡ್ಡ ಮಟ್ಟದ ಅವಕಾಶಗಳು ಸಿಕ್ಕು ಯಶಸ್ಸು ಸಾಧಿಸಿದವರೂ ಇದ್ದಾರೆ. ಈ ಬಾರಿಯ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುವ ಕಲಾವಿದರು ಹಾಗೂ ಪಾಲ್ಗೊಳ್ಳಲಾಗದವರು ತಮ್ಮ ಅನಿಸಿಕೆಗಳನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.

**

ಅಸ್ಮಿತೆ ಹುಡುಕಿಕೊಂಡೆ

‘ಐದು ವರ್ಷಗಳಿಂದ ಚಿತ್ರಸಂತೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಹಣ ಕೂಡ ಮಾಡಿದ್ದೇನೆ. ನಮ್ಮನ್ನು ಸಾಕಷ್ಟು ಜನ ಇಲ್ಲಿ ಗುರುತಿಸುತ್ತಾರೆ. ಐದು ವರ್ಷಗಳಲ್ಲಿ ₹3 ಲಕ್ಷ ಹಣ ಮಾಡಿರಬಹುದು. ಆದರೆ ಅದಕ್ಕಿಂತ ಹೆಚ್ಚು ಗೌರವ ಸಂಪಾದನೆ ಮಾಡಿದ್ದೇನೆ. ಹೊರಗಡೆಯೂ ನನ್ನನ್ನು ಗುರುತಿಸಿ ಚಿತ್ರಗಳನ್ನು ಕೊಂಡುಕೊಳ್ಳುತ್ತಾರೆ. ಇಲ್ಲಿ ಸ್ಟಾಲ್ ಹಾಕಿದರೆ ಸಿಗುವ ಖುಷಿಯೇ ಬೇರೆ. ಇಲ್ಲಿ ಬರುವ ಎಂಜಿನಿಯರ್ಸ್‌, ಬಿಲ್ಡರ್ಸ್‌, ಹೋಟೆಲ್‌ ಉದ್ಯಮದವರು ಆ ನಂತರವೂ ಹುಡುಕಿಕೊಂಡು ಬಂದು ಚಿತ್ರಗಳನ್ನು ಕೊಂಡುಕೊಳ್ಳುತ್ತಾರೆ. ಇದರಿಂದ ವರ್ಷಪೂರ್ತಿ ನನ್ನ ಚಿತ್ರಗಳಿಗೆ ಬೇಡಿಕೆ ಸೃಷ್ಟಿಯಾಗಿದೆ‘

-ಶಿವು ಹಾದಿಮನಿ

**

ಮಹಿಳೆಯರ ಚಿತ್ರ

ಇಲ್ಲಿ ಮಧ್ಯಮವರ್ಗದ ವರೇ ಹೆಚ್ಚು ಬರುತ್ತಾರೆ. ಅದಕ್ಕಾಗಿ ನಾನು ಈ ವರ್ಷ ‘ಭಾರತದ ಮಹಿಳೆಯರು‘ ವಿಷಯವನ್ನು ಇಟ್ಟುಕೊಂಡು ಚಿತ್ರಗಳನ್ನು ಬರೆದಿದ್ದೇನೆ. ಸಾಮಾನ್ಯ ವರ್ಗದ ಮಹಿಳೆಯರ ಚಿತ್ರಣವನ್ನು ನನ್ನ ಕಲಾಕೃತಿಗಳಲ್ಲಿ ಕಾಣಬಹುದು. 10 ವರ್ಷಗಳಿಂದ ಇಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಪ್ರತಿ ವರ್ಷ ₹30 ರಿಂದ ₹40 ಸಾವಿರ ಹಣ ಮಾಡುತ್ತೇನೆ.

-ಅಶೋಕ್‌

**

2017ರಲ್ಲಿ ಚಿತ್ರಸಂತೆಯಲ್ಲಿ ಪಾಲ್ಗೊಂಡಿದ್ದೆ. ಈ ವರ್ಷ ಅವಕಾಶ ಸಿಗುವುದು ಅನುಮಾನ ಇದೆ. ಇಲ್ಲಿ ವೃತ್ತಿಪರ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಇದರಿಂದ ವೃತ್ತಿಪರರಾಗಿರುವ ನಮಗೆ ಅವಕಾಶ ಕಡಿಮೆಯಾಗುತ್ತಿದೆ. ಲಾಟರಿ ಮೂಲಕ ಆಯ್ಕೆ ಮಾಡುವ ಕ್ರಮ ಕೂಡ ಕೆಲವೊಮ್ಮೆ ನಮ್ಮ ಅವಕಾಶ ಕಿತ್ತುಕೊಂಡಿರಬಹುದು. ಸಾಯಂಕಾಲದ ಹೊತ್ತು ಹೆಚ್ಚು ಚಿತ್ರಗಳು ಮಾರಾಟವಾಗುತ್ತವೆ. ₹15 ಸಾವಿರ ಇರುವ ಚಿತ್ರವನ್ನು ಕೆಲವೊಮ್ಮೆ ₹5 ಸಾವಿರಕ್ಕೂ ಮಾರಿದ ಉದಾಹರಣೆ ಇದೆ.

-ಶ್ರೀಶೈಲ ಆನದಿನ್ನಿ, ಬಾಗಲಕೋಟೆ

**

ವರ್ಷವಿಡೀ ತಯಾರಿ

15 ವರ್ಷದಿಂದ ಪಾಲ್ಗೊಳ್ಳುತ್ತಿದ್ದೇನೆ. 30ರಿಂದ 40 ಸಾವಿರ ಚಿತ್ರಕಲೆಗಳನ್ನು ಮಾರಾಟ ಮಾಡಬಹುದು. ಸಂತೆಯನ್ನು ನಾವು ವರ್ಷದ ವ್ಯಾಪಾರದ ದಿನ ಎಂದೇ ಕರೆಯಬಹುದು. ಇದಕ್ಕಾಗಿ ವರ್ಷವಿಡೀ ಚಿತ್ರಗಳನ್ನು ಬರೆದು ತಯಾರಿ ಮಾಡುತ್ತೇವೆ. ನವೆಂಬರ್‌, ಡಿಸೆಂಬರ್ ವೇಳೆಗೆ ಹೆಚ್ಚು ಚಿತ್ರಗಳನ್ನು ಬರೆದು ಸಿದ್ಧತೆ ಮಾಡಿಕೊಳ್ಳುತ್ತೇನೆ.

-ಕುಮಾರ ಕಾಟೇನಹಳ್ಳಿ

**

ಹಳ್ಳಿಗಳ ಸಂಸ್ಕೃತಿ ವಿಷಯ

ಯುವ ಕಲಾವಿದರಿಗೆ ಇದು ಒಳ್ಳೆಯ ಅವಕಾಶ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ನಮಗೆ ಹೆಚ್ಚು ಅವಕಾಶ ಇದೆ. ₹ 2 ಲಕ್ಷದವರೆಗೂ ದುಡಿಯಬಹುದು. ಹಳ್ಳಿಗಳ ಸಂಸ್ಕೃತಿ ವಿಷಯವನ್ನು ಇಟ್ಟುಕೊಂಡು ಚಿತ್ರಗಳನ್ನು ರಚಿಸಿದ್ದೇನೆ. ದೇವಸ್ಥಾನ, ಹೊಲ, ರೈತರನ್ನು ಹೆಚ್ಚು ಆಸಕ್ತಿಯಿಂದ ಬಿಡಿಸಿದ್ದೇನೆ.

-ಸುನಿಲ್‌ ಮಠದ್‌, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.