ADVERTISEMENT

‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 20:00 IST
Last Updated 21 ಫೆಬ್ರುವರಿ 2019, 20:00 IST
‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕದ ದೃಶ್ಯ
‘ಊರು ಸುಟ್ಟರೂ ಹನುಮಪ್ಪ ಹೊರಗ’ ನಾಟಕದ ದೃಶ್ಯ   

ವಿಶ್ವಪಥ ಕಲಾ ಸಂಗಮ ಹವ್ಯಾಸಿ ರಂಗತಂಡದ ಪ್ರಯೋಗ ‘ಊರು ಸುಟ್ಟರೂ ಹನುಮಪ್ಪ ಹೊರಗ’ (ರಚನೆ: ಹನುಮಂತ ಹಾಲಿಗೇರಿ) ನಾಟಕ ಪ್ರದರ್ಶನ ನಗರದಲ್ಲಿ ಶನಿವಾರ ಆಯೋಜನೆಗೊಂಡಿದೆ.

ಸಂಜೆ 7ಕ್ಕೆ ಮಲ್ಲೇಶ್ವರದ 14ನೇ ಅಡ್ಡರಸ್ತೆಯಲ್ಲಿರುವ ಸೇವಾಸದನದಲ್ಲಿ ನಾಟಕ ಪ್ರದರ್ಶನ ಇದೆ.

ಎಚ್‌. ಡುಂಡಿರಾಜ ಅವರ ‘ಪುಕ್ಕಟೆ ಸಲಹೆ’, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ‘ಎಂಗ್ಟನ ಪುಂಗಿ‘, ಪಿ.ಲಂಕೇಶ್ ಅವರ ‘ಸ್ಟೆಲ್ಲಾ ಎಂಬ ಹುಡುಗಿ’ ಯಶಸ್ವಿ ನಾಟಕಗಳ ನಂತರ ವಿಶ್ವಪಥ ಕಲಾ ಸಂಗಮದ ನಾಲ್ಕನೇ ಪ್ರಯೋಗ ಇದಾಗಿದೆ.

ADVERTISEMENT

ಸಿನಿಮಾ ಹಾಗೂ ಕಿರುತೆರೆಯಲ್ಲಿ ಹೆಸರು ಮಾಡಿರುವ ನೀನಾಸಂ ರಂಗಶಿಕ್ಷಣ ಪಡೆದಿರುವ ಭಾಸ್ಕರ ನಾಗಮಂಗಲ ಈ ನಾಟಕವನ್ನು ನಿರ್ದೇಶಿಸಿದ್ದಾರೆ.

ಇದೊಂದು ಹಾಸ್ಯ ನಾಟಕ. ಹಳ್ಳಿ ಜನರ ಆಚಾರ, ವಿಚಾರ, ಸಂಸ್ಕೃತಿ, ಮೂಢನಂಬಿಕೆಗಳು, ಮುಗ್ಧ ಮನಸ್ಥಿತಿ, ಧಾರ್ಮಿಕ ಭಾವನೆಗಳನ್ನು ತಮ್ಮ ಮತವನ್ನಾಗಿ ಪರಿವರ್ತನೆ ಮಾಡಿಕೊಳ್ಳುವ ರಾಜಕಾರಣಿಗಳ ಬೂಟಾಟಿಕೆಯಂತಹ ಗಂಭೀರ ವಿಷಯಗಳನ್ನು ನವಿರಾದ ಹಾಸ್ಯದ ಮೂಲಕ ಕಟ್ಟಿಕೊಡಲಾಗಿದೆ.

ಧರೆಗಟ್ಟಿ ಮತ್ತು ವಜ್ರಮಟ್ಟಿ ಎಂಬ ಎರಡು ಗ್ರಾಮಗಳ ಮಧ್ಯೆ ಇರುವ ಹನುಮಂತ ದೇವಸ್ಥಾನದ ವಿಚಾರದಲ್ಲಿ ಜನರು ಜಗಳಕ್ಕೆ ನಿಲ್ಲುತ್ತಾರೆ. ದೇವಸ್ಥಾನ ತಮ್ಮ ಊರಿಗೇ ಸೇರಬೇಕು ಎಂದು ಉಭಯ ಗ್ರಾಮಗಳು ದೊಡ್ಡ ಕದನಕ್ಕಿಳಿದು ಕೊನೆಗೆ ಕೋರ್ಟ್ ಮೆಟ್ಟಿಲೇರುತ್ತವೆ.

ಎರಡು ಊರಿನವರ ಜಗಳಕ್ಕೆ ಕಾರಣನಾದ ಹನುಮಂತನ ವಿಗ್ರಹವನ್ನು ಪೊಲೀಸರು ಠಾಣೆಗೆ ತೆಗೆದುಕೊಂಡು ಹೋಗಿ ಇಟ್ಟುಕೊಳ್ಳುತ್ತಾರೆ. ಹಳ್ಳಿಜನರು ಮತ್ತು ಪೂಜಾರಿ ಮಾಡುವ ಅವಾಂತರಗಳಿಂದ ಕೊನೆಗೆ ಠಾಣೆಯೇ ದೇವಸ್ಥಾನವಾಗಿ ಮಾರ್ಪಾಡಾಗುತ್ತದೆ. ತಮ್ಮ ತಮ್ಮ ಪ್ರತಿಷ್ಠೆಗಾಗಿ ಹೋರಾಡುವ ಹಳ್ಳಿಗರ ಮಧ್ಯೆ ಸಿಕ್ಕಿಹಾಕಿಕೊಂಡ ಹನುಮಂತ ಕೊನೆಗೆ ಏನಾಗುತ್ತಾನೆ ಎಂಬುದನ್ನು ನಾಟಕದಲ್ಲಿ ರಂಜನೀಯವಾಗಿ ತೋರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.