ADVERTISEMENT

ಬಹುಮುಖಿ ಭಾರತದಲ್ಲಿ ‘ಬಹುಮುಖಿ ರಾಮಾಯಣ’

ಓಹಿಲ ಎಂ.ಪಿ.
Published 20 ಸೆಪ್ಟೆಂಬರ್ 2019, 19:38 IST
Last Updated 20 ಸೆಪ್ಟೆಂಬರ್ 2019, 19:38 IST
.
.   

ಮೈಸೂರಿನ ಹವ್ಯಾಸಿ ರಂಗತಂಡಗಳಲ್ಲಿ ಒಂದಾದ ‘ನಿರಂತರ’ ಪ್ರತಿವರ್ಷದಂತೆ ಈ ಬಾರಿಯೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಒಂದು ತಿಂಗಳ ಕಾಲ ‘ಸಹಜರಂಗ’ ರಂಗ ತರಬೇತಿ ಶಿಬಿರವನ್ನು ಆಯೋಜಿಸಿ ಅದರಲ್ಲಿ ನಟನೆ, ಪ್ರಸಾಧನ, ಸಮರ ಕಲೆ, ರಂಗ ಸಂಗೀತ, ದೇಹ ಚಲನೆ, ಪರಿಸರ, ರಂಗಭೂಮಿಯ ಇತಿಹಾಸ, ನಾಟ್ಯಶಾಸ್ತ್ರದ ಸಂಕ್ಷಿಪ್ತ ನೋಟ... ಹೀಗೆ ವಿವಿಧ ವಿಚಾರಗಳ ಕುರಿತು ಒಳಹು ನೀಡಿ ಶಿಬಿರಾರ್ಥಿಗಳಿಂದಲೇ ರಂಗ ಪ್ರಯೋಗ ಒಂದನ್ನು ತಯಾರಿಸಿದೆ.

ನಗರದ ಕಿರು ರಂಗಮಂದಿರದಲ್ಲಿ ಸೆಪ್ಟೆಂಬರ್ 24ರಂದು ಸಂಜೆ 6ಕ್ಕೆ ನಿರಂತರದ ಸಹಜರಂಗ ಶಿಬಿರಾರ್ಥಿಗಳಿಂದ ‘ಬಹುಮುಖಿ ರಾಮಾಯಣ’ ನಾಟಕ ಪ್ರದರ್ಶನಗೊಳ್ಳಲಿದೆ.

ಸುತ್ತಲಿನ ಪರಿಸರ, ನಮ್ಮ ಒಳಗು, ಮನುಷ್ಯ ಸಹಜ ಚಿಂತನೆ, ಸರಳ ಆಲೋಚನೆ, ಸಾಮಾನ್ಯ ಬದುಕು, ಇತ್ಯಾದಿಯನ್ನು ಮರೆತು ಅರಿಯದೂರಿನ ಕಡೆಗೆ ಕತ್ತಾನಿಸಿ ನಿಂತಿದ್ದೇವೆ. ಹೆಸರೇ ನಮೂದಿಸುವಂತೆ ‘ಸಹಜತೆ ಎಡೆಗಿನ ಪಯಣ..’ ಅದರಲ್ಲೂ ರಂಗ ಮಾಧ್ಯಮದ ಮೂಲಕ ಜಗತ್ತನ್ನು ಅರಿಯುವ, ಬದುಕುವ ಪಯಣ. ನಿರಂತರ ತಂಡವು ಕಳೆದ 30 ವರ್ಷಗಳಿಂದ ಈ ದಿಸೆಯಲ್ಲಿ ಹೆಜ್ಜೆ ಹಾಕುತ್ತಿದೆ. ಹೋರಾಟ, ನಾಟಕ, ಶಿಬಿರ, ಚರ್ಚೆ, ಕಾರ್ಯಾಗಾರ, ರಂಗ ಉತ್ಸವ, ಪ್ರಕಾಶನದೊಂದಿಗೆ. ಸಹಜರಂಗಕ್ಕೀಗ ಹದಿಹರೆಯ. ಹದಿಮೂರನೇ ವರ್ಷದ ಸಹಜರಂಗದ ಸಮಾರೋಪಕ್ಕೆ ಸಜ್ಜಾಗಿದ್ದಾರೆ ಶಿಬಿರಾರ್ಥಿಗಳು.

ADVERTISEMENT

ವರ್ತಮಾನದ ಆಗು- ಹೊಗುಗಳಿಗೆ ಸ್ಪಂದಿಸುವುದರೊಟ್ಟಿಗೆ ಶಿಬಿರದ ಆಶಯವನ್ನು, ಪ್ರಸ್ತುತತೆ ಸಾರುವ ವಿಚಾರವನ್ನು ಆಯ್ಕೆ ಮಾಡಿಕೊಂಡು ಆ ಕುರಿತು ಚರ್ಚೆ, ಸಂವಾದಗಳ ಮೂಲಕ ಹೊಸ ಕಥಾಹಂದರವನ್ನು ಸೃಷ್ಟಿಸಿ ಆ ಮೂಲಕ ತಾವು ಕಲಿತದ್ದನ್ನು ರಂಗ ಪ್ರಯೋಗದಲ್ಲಿ ಬಿತ್ತರಿಸುತ್ತಾರೆ ಶಿಬಿರಾರ್ಥಿಗಳು. ಸ್ವಾತಂತ್ರ್ಯ, ಸಮಾನತೆ, ಮಹಿಳಾ ಸಬಲೀಕರಣ, ಶಿಕ್ಷಣ ಇಂಥ ಸಮಾಜಮುಖಿ ಆಲೋಚನೆಗಳನ್ನು ಪ್ರತಿ ವರ್ಷ ರಂಗಕ್ಕೆ ತರಲಾಗುತ್ತಿತ್ತು.

ಈ ಬಾರಿಯ ಸಹಜರಂಗದಲ್ಲಿ ‘ಬಣ್ಣ’ದ ಆಶಯದಲ್ಲಿ ಶಿಬಿರ ಮೂಡಿಬಂದಿದೆ. ನಮ್ಮೊಳಗಿನ ಬಣ್ಣ, ಪ್ರಕೃತಿಯೊಳಗಿನ ನಾವು, ಪ್ರಕೃತಿಯ ಬಣ್ಣ.. ಈ ನಿಟ್ಟಿನಲ್ಲಿ ಬಹುತ್ವವನ್ನು ಬಣ್ಣದ ರೂಪಕದಲ್ಲಿ ಹೇಳಲು ಹೊರಟಿದ್ದಾರೆ. ಭಾರತದ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದ ವಿವಿಧ ರೂಪಗಳನ್ನು ಕಾಣಬಹುದು. ತೊರವೆ ರಾಮಾಯಣ, ವಾಲ್ಮೀಕಿ ರಾಮಾಯಣ, ಜನಪದ ರಾಮಾಯಣ ಹೀಗೆ. ಕಥನ ಒಂದೇ ಆದರೂ ಹೇಳುವ ಬಗೆ ಭಿನ್ನ. ವೈಧ್ಯತೆಯಲ್ಲಿ ಏಕತೆ ನಮ್ಮ ದೇಶದ ಜಾಯಮಾನಕ್ಕೆ ಬಂದಿರುವುದರಿಂದ ಬಣ್ಣದಿಂದ ಹಿಡಿದು ರಾಮಾಯಣದವರೆಗೂ ಏಕತೆಯಲ್ಲಿ ಅನೇಕತೆ ಬೆರೆತು ಹೋಗಿದೆ. ಪ್ರತಿಮಾ ರೂಪಕಗಳಂತೆ ರಾಮಾಯಣದ ಪಾತ್ರಗಳು ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೂಪದಲ್ಲಿ ಕಾಣಸಿಗುತ್ತದೆ. ಆಯಾ ಪ್ರಾದೇಶಿಕತೆ, ಭಾಷೆ, ಜನಜೀವನಕ್ಕೆ ದಕ್ಕಿದ ರಾಮ ಮೂಡಿ ಬರುತ್ತಾನೆ.

ನಾಟಕವನ್ನು ನಾಲ್ಕು ಭಿನ್ನ ರಾಮಾಯಣಗಳ ಮಿಳಿತವಾಗಿ ಕಟ್ಟಲಾಗಿದೆ. ಬುಡಕಟ್ಟು ರಾಮಾಯಣ, ಜನಪದ ರಾಮಾಯಣ, ಜೈನ ರಾಮಾಯಣ ಹಾಗೂ ರಾಮಾಕೀನ್ ರಾಮಾಯಣಗಳನ್ನು ಒಂದಾಗಿಸಿ ಪ್ರತಿಮಾರೂಪಕವಾಗಿ, ಇದು ರಾಮನನ್ನು ನಮ್ಮೊಳಗೆ ಕಂಡುಕೊಳ್ಳುವ ಹುಡುಕಾಟವೂ ಹೌದು! ರಾಮ ರಾಜಕೀಯಕ್ಕೆ ಸಿಕ್ಕು ‘ರಾಮಮಂದಿರ’ಗಳಲ್ಲಿ ಕೂತುಬಿಟ್ಟ ಈ ಹೊತ್ತಲ್ಲಿ ‘ಬಹುತ್ವದ ರಾಮ- ಬಹುಮುಖಿ ರಾಮಾಯಣದಲ್ಲಿ’ ಕಾಣಸಿಗುತ್ತಾನೆ.

ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ, ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಆರ್. ಶಿವಪ್ಪ ಹಾಗೂ ನಿರಂತರದ ಎಂ.ಎಂ. ಸುಗುಣ ಸಹಜರಂಗ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಾಟಕಕ್ಕೆ ಸಂಗೀತ ಶ್ರೀನಿವಾಸ್ ಭಟ್ (ಚೀನಿ), ನಿರ್ದೇಶನ ಡಾ.ಕೆ.ಟಿ. ಚೆಲುವರಾಜ ಸ್ವಾಮಿ ಮತ್ತು ಪ್ರತಾಪ್ ಹುಣಸೂರು ಅವರದ್ದು.

ನಾಟಕ:ಬಹುಮುಖಿರಾಮಾಯಣ
ನಿರ್ದೇಶನ: ಡಾ.ಕೆ.ಟಿ.ಚೆಲುವರಾಜ ಸ್ವಾಮಿ ಮತ್ತು ಪ್ರತಾಪ್ ಹುಣಸೂರು
ಸ್ಥಳ: ಕಿರು ರಂಗಮಂದಿರ
ಸೆಪ್ಟೆಂಬರ್ 24, ಸಂಜೆ 6ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.