ADVERTISEMENT

ರೇಡಿಯೊ ಸಂಗ್ರಹದಲ್ಲಿ ಗಿನ್ನೆಸ್‌ ದಾಖಲೆ

ಸಿ.ಎಸ್.ನಿರ್ವಾಣ ಸಿದ್ದಯ್ಯ
Published 12 ಫೆಬ್ರುವರಿ 2019, 20:00 IST
Last Updated 12 ಫೆಬ್ರುವರಿ 2019, 20:00 IST
ತಾವು ಸಂಗ್ರಹಿಸಿದ ರೇಡಿಯೋಗಳ ಜೊತೆ ಪ್ರಕಾಶ್
ತಾವು ಸಂಗ್ರಹಿಸಿದ ರೇಡಿಯೋಗಳ ಜೊತೆ ಪ್ರಕಾಶ್   

80 ರ ದಶಕದಲ್ಲಿ ರೇಡಿಯೊ ಮನರಂಜನೆ, ಮಾಹಿತಿ ಮತ್ತು ತಿಳಿವಳಿಕೆಯ ಸಾಧನವಾಗಿತ್ತು.

ಅಂದು ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹುಣಸೂರು ಕೃಷ್ಣಮೂರ್ತಿ, ಘಂಟಸಾಲ, ಚಿ.ಉದಯಶಂಕರ್, ಸಿ.ವಿ. ಶಿವಶಂಕರ್ ವಿರಚಿತ ಹಾಡುಗಳ ಮಾಧುರ್ಯಕ್ಕೆ ಮನಸ್ಸು ಸಂಭ್ರಮಸುತ್ತಿತ್ತು. ಅರ್ಥವಂತಿಕೆಯ ಬದುಕಿನ ಬಿಂಬಗಳನ್ನು ಅನಾವರಣ ಮಾಡುವ ಹಾಡುಗಳನ್ನು ಕೇಳುವುದರಲ್ಲಿ ಒಂದು ಸೌಖ್ಯ ಇರುತ್ತಿತ್ತು.

ನನ್ನ ವಿದ್ಯಾಭ್ಯಾಸದ ಕಾಲಘಟ್ಟದಲ್ಲಿ ನಮಗೆ ಇದ್ದ ಬಹುದೊಡ್ಡ ಆಕರ್ಷಣೆ ಎಂದರೆ ಕ್ರಿಕೆಟ್. ಕ್ರಿಕೆಟ್ ಕಾಮೆಂಟ್ರಿ ಕೇಳಲು ಆಟದ ಮೈದಾನದಲ್ಲಿ ಒಂದೊಂದು ತಂಡವಾಗಿ ಸೇರುತ್ತಿದ್ದೆವು. ಒಂದೊಂದುತಂಡದಲ್ಲೂ ಒಂದೊಂದು ಚಿಕ್ಕ ರೇಡಿಯೊ ಇರುತ್ತಿತ್ತು. ಭಾರತದವರು ಒಂದು ರನ್ ಹೊಡೆದ್ರು ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದೆವು. ಕಪಿಲ್ ದೇವ್ ಬೌಲಿಂಗ್ ಮಾಡುವ ಶೈಲಿಯನ್ನು ನಿರೂಪಕ ನಿರೂಪಿಸುತ್ತಿದ್ದ ರೀತಿಗೆ ನಾವು ಅವರ ಅಭಿಮಾನಿಗಳಾಗಿದ್ದೆವು. ಭಾರತ ತಂಡದವರು ಗೆದ್ದರೆ ಸಾಕು ಬೆಳಿಗ್ಗೆ ಪತ್ರಿಕೆಯಲ್ಲಿ ಅವರ ಫೋಟೊ ನೋಡುವ ತನಕ ನಮಗೆ ಸಮಾಧಾನ ಇರುತ್ತಿರಲಿಲ್ಲ.

ADVERTISEMENT

ಕ್ರಿಕೆಟ್ ಕಾಮೆಂಟ್ರಿ ಕೇಳಲು ನನ್ನ ವಾರಿಗೆಯ ಗೆಳೆಯರು ವಿಶಿಷ್ಟ ರೂಪದ ರೇಡಿಯೊಗಳನ್ನು ತರುತ್ತಿದ್ದರು. ಅದನ್ನು ನೋಡಿ ಆ ರೇಡಿಯೋ ನನ್ನಲ್ಲಿ ಇಲ್ಲವಲ್ಲ ಅಂತ ಮನಸ್ಸಿಗೆ ಒಂದು ತರ ಅಸಮಾಧಾನವಾಗುತ್ತಿತ್ತು. ತರಹೇವಾರಿ ರೇಡಿಯೋಗಳನ್ನು ನೋಡುವ, ಅದನ್ನು ಸಂಗ್ರಹಿಸುವ ಖಯಾಲಿ ಅಂದಿನಿಂದ ನನ್ನ ಬದುಕಿಗೆ ಮೂಡಿತ್ತು.

ಮಾರ್ಕೆಟ್‍ನಲ್ಲಿ ಮನೆಯವರೆಲ್ಲ ಬಟ್ಟೆ, ಮತ್ತಿತರೆ ವಸ್ತುಗಳನ್ನು ಕೊಳ್ಳುತ್ತಿದ್ದರೆ ನನ್ನ ಕಣ್ಣು ಹೊಸ ಬಗೆಯ ರೇಡಿಯೋಗಳತ್ತ ನೆಟ್ಟಿರುತ್ತಿತ್ತು. ಪೆನ್ನು, ಬೈಕ್, ಕಾರು, ಹಣ್ಣುಗಳು, ತರಕಾರಿ, ಪುಸ್ತಕ, ಕ್ಯಾಸೆಟ್ ಹೀಗೆ ನೂರೆಂಟು ಶೈಲಿಯ ಮಾದರಿಯಲ್ಲಿ ಬಂದ ರೇಡಿಯೋಗಳನ್ನು ಮನೆಗೆ ತಂದು ಇಡುತ್ತಿದ್ದೆ. ಸಂಭ್ರಮಿಸುತ್ತಿದ್ದೆ.

ಹಾಂಕಾಂಗ್‍ಗೆ ಹೋದಾಗ ವಿಡಿಯೋ ಕ್ಯಾಮರಾದ ಮಾದರಿಯಲ್ಲಿದ್ದ ರೇಡಿಯೋ ನೋಡಿ ಬೆಕ್ಕಸ ಬೆರಗಾದೆ. ಅಲ್ಲಿಯೇ ಇಂತಹ ನೂರಾರು ಬಗೆಯ ರೇಡಿಯೋಗಳನ್ನು ಕೊಂಡು ತಂದೆ. 1980ರಲ್ಲಿ ನೂರು ರೇಡಿಯೋ ಇದ್ದಿದ್ದು 2005ರ ಹೊತ್ತಿಗೆ ಸಾವಿರದ ಗಡಿಯನ್ನು ಮುಟ್ಟಿತ್ತು.

ಒಮ್ಮೆ ಬುಕ್ ಸ್ಟೋರಿಯಲ್ಲಿ ಪುಸ್ತಕಗಳನ್ನು ಕೊಂಡು ಕೊಳ್ಳಲು ಹೋದಾಗ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಯ ಪುಸ್ತಕವು ನನ್ನ ಕಣ್ಣಿಗೆ ಬಿತ್ತು. ಅದನ್ನು ಓದಿ ರೇಡಿಯೋ ಸಂಗ್ರಹದಲ್ಲಿ ಯಾಕೆ ಲಿಮ್ಕಾ ದಾಖಲೆಗೆ ಅರ್ಜಿಯನ್ನು ಹಾಕಬಾರದು ಎಂಬ ಅಲೋಚನೆ ಬಂತು. ನನ್ನ ಬಳಿ ಇರುವ ಎಲ್ಲ ರೇಡಿಯೋಗಳ ಚಿತ್ರ ಸಮೇತ ಅರ್ಜಿಯನ್ನು ಹಾಕಿದೆ. ಅಚ್ಚರಿಯೆಂದರೆ ಅರ್ಜಿ ಹಾಕಿದ ಕೂಡಲೇ ಪರಿಶೀಲನೆ ಮಾಡಿ ಮೂರೇ ತಿಂಗಳಿಗೆ ಲಿಮ್ಕಾ ದಾಖಲೆಗೆ ನನ್ನ ಹೆಸರನ್ನು ಸೇರಿಸಿದರು. ಅದಾದ ಮೂರು ತಿಂಗಳಲ್ಲಿ ಗಿನ್ನೆಸ್‌ ದಾಖಲೆಯೂ ಅಯಿತು.

2005ರಿಂದ ಇಲ್ಲಿಯ ತನಕ ಈ ದಾಖಲೆಯನ್ನು ಯಾರೂ ಮುರಿದಿಲ್ಲ. ಇಷ್ಟು ಸತ್ಯ ನಾವು ಅಯ್ದು ಕೊಳ್ಳುವ ಹವ್ಯಾಸ ನಮ್ಮ ಬದುಕಿನ ಪಥವನ್ನು ಬದಲಾಯಿಸುತ್ತದೆ. ಸೊಗಸಾದ ವ್ಯಕ್ತಿತ್ವವನ್ನು ಧಾರಣೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.