ADVERTISEMENT

ಭಗ್ನ ಅರಮನೆಗಳ ಮೇಲೆಹೊಸ ಚರಿತ್ರೆಯ ಚಿಗುರು

ರಹಮತ್ ತರೀಕೆರೆ
Published 16 ಮಾರ್ಚ್ 2019, 19:30 IST
Last Updated 16 ಮಾರ್ಚ್ 2019, 19:30 IST
   

ಯಾಕೊ ಏನೊ, ನನಗೆ ಪಾಳು ಬಿದ್ದಿರುವ ಅರಮನೆ, ವಾಡೆ, ಹವೇಲಿ, ಬಂಗಲೆಗಳು ಕಾಡುತ್ತವೆ. ಬ್ರಿಟಿಷರು, ಸಂಸ್ಥಾನಿಕರು, ದೇಸಾಯಿಗಳು ಆಳಿದ ಕಡೆ ಉಳಿದುಕೊಂಡಿರುವ ಇವು ಗತಕಾಲದ ಕಥೆಯನ್ನು ಹೇಳಲು ಕಾದುಕುಳಿತ ಮುದುಕರಂತೆ ಕಾಣುತ್ತವೆ. ಜನಸಾಮಾನ್ಯರ ಮನೆಗಳು ವಾಸವಿರುವ ತನಕ ಜೀವಂತವಾಗಿ ಕಳಕಳಿಸುತ್ತಿರುತ್ತವೆ. ಅವರಿಲ್ಲವಾದ ಬಳಿಕ ನೆಲಕಚ್ಚಿ ಕಣ್ಮರೆಯಾಗುತ್ತವೆ. ಅರಮನೆ- ವಾಡೆಗಳು ಹಾಗಲ್ಲ. ಕಲ್ಲುಗಳಿಂದಲೂ ದಪ್ಪನೆಯ ಮರಮುಟ್ಟುಗಳಿಂದಲೂ ಗಾರೆಗಚ್ಚಿನಿಂದಲೂ ಕಟ್ಟಲಾದ ಇವು ಪಾಳಾದರೂ ಉಳಿದಿರುತ್ತವೆ. ಚಾವಣಿಯ ಮೇಲೆ ಹುಲ್ಲು ಪೈರಿನಂತೆ ಬೆಳೆದಿರುತ್ತದೆ; ಹಕ್ಕಿಗಳು ಉಚ್ಚಿದ ಪಿಚಿಕೆಯಲ್ಲಿದ್ದ ಬೀಜಗಳು ಬಿರುಕಿನೊಳಗೆ ಬಿದ್ದು ನಳನಳಿಸುವ ಗಿಡವಾಗಿ ಬೆಳೆದಿರುತ್ತವೆ- ಚರಿತ್ರೆಯ ಮೇಲೆ ವರ್ತಮಾನ ಸಾಧಿಸಿದ ವಿಜಯದಂತೆ. ಈ ಗಿಡಗಳ ಬಿಳಲು ಕಟ್ಟಡವನ್ನು ಮತ್ತಷ್ಟು ಶಿಥಿಲಗೊಳಿಸಿರುತ್ತದೆ. ಅದೇ ಹೊತ್ತಲ್ಲಿ ತನ್ನ ತೋಳಲ್ಲಿ ಸಡಿಲ ಕಟ್ಟಡವನ್ನು ಪೂರ್ಣ ಕುಸಿಯದಂತೆ ಹಿಡಿದಿರುತ್ತದೆ.

ಸಾಮಾನ್ಯವಾಗಿ ಈ ಪುರಾತನ ಇಮಾರತುಗಳು, ತಕ್ಕ ವಾರಸುದಾರರಿಲ್ಲದೆ ಹಲ್ಲಿ, ಗೂಗೆ, ಬಾವಲಿಗಳ ನೆಲೆಮನೆಯೊ, ಇಸ್ಪೀಟುಗಾರರ ಅಡ್ಡೆಯೋ ಆಗಿ ರೂಪಾಂತಗೊಂಡಿರುತ್ತವೆ. ಅವುಗಳ ಹಾಳುಗೋಡೆಯ ಕ್ಯಾನವಾಸಿನ ಮೇಲೆ ಪ್ರೇಮಿಗಳು ಶಾಸನ ರಚಿಸಿರುತ್ತಾರೆ; ಅಂತಃಪುರ ವಾಸವು ಹೊರಜಗತ್ತನ್ನು ನೋಡಲು ನಿರ್ಮಿಸಿದ್ದ ಕಟ್ಟಿಗೆಯ ಉಪ್ಪರಿಗೆ, ಮಳೆಬಿಸಿಲಿಗೆ ಸಿಕ್ಕು ಲಡ್ಡಾಗಿರುತ್ತದೆ. ಮಾಳಿಗೆಯ ಗಾರೆ ಉದುರಿ ಯಾವುದೊ ದೇಶದ ಭೂಪಟವಾಗಿರುತ್ತದೆ. ಕಟ್ಟಡದ ಲಲಾಟದಲ್ಲಿ ಎರಡು ಸಿಂಹಗಳು ಮುಖಾಮುಖಿಯಾಗಿ ಬಾವುಟ ಹಿಡಿದಿರುವ ಗಾರೆಶಿಲ್ಪದ ರಾಜಚಿಹ್ನೆಯ ಮೇಲೆ, ಅಂಜಿಕೆಯಿಲ್ಲದೆ ಇಂಚುದ್ದ ದೂಳು ಅಡರಿರುತ್ತದೆ; ಗೇಟಿನಲ್ಲಿ ಕೂತ ಸಿಂಹಗಳ ಬಾಯಲ್ಲಿ ಹಕ್ಕಿ ಗೂಡು ಕಟ್ಟಿರುತ್ತವೆ; ಮೇನೆಯೊ ಮುರಿದ ತೊಟ್ಟಿಲಿನಂತೆ, ಸಾರೋಟು ಮಕ್ಕಳು ಬೇಸರದಿಂದ ಎಸೆದ ಆಟಿಕೆಯಂತೆ ಬಿದ್ದಿರುತ್ತವೆ. ನಾಯಕ- ನಾಯಕಿಯರ ಮಲಗು ಕೋಣೆಯಲ್ಲಿರುವ ರಾಸಲೀಲೆಯ ಚಿತ್ರ ಮಾತ್ರ ನಗುತ್ತಿರುತ್ತದೆ- ಒಡಲಾಳದ ಪುಟಗೌರಿಯ ನವಿಲಿನಂತೆ.

ವಾಡೆ ಭದ್ರವಾಗಿರುವ ಭಾಗದಲ್ಲಿ ಉತ್ತರಾಧಿಕಾರಿಗಳು ವಾಸವಾಗಿರುವುದುಂಟು. ಅವರು ತಮ್ಮ ಪೂರ್ವಜರ ಚಿತ್ರಗಳನ್ನು ಜತನದಿಂದ ಕಾಪಿಟ್ಟುಕೊಂಡಿರುವರು. ಕತ್ತಿಯ ಮೊನೆಯನ್ನು ನೆಲಕ್ಕೂರಿ, ಮುತ್ತಿನ ಹಾರ ತೊಟ್ಟು ರಾಜಪೋಷಾಕು ಉಟ್ಟು ಠೀವಿಯಿಂದ ನಿಂತಿರುವ ಚಿತ್ರಗಳವು. ಸೂಕ್ಷ್ಮವಾಗಿ ನೋಡಿದರೆ, ಅವರ ಠೇಂಕಾರ ಮತ್ತು ತೃಪ್ತಿಯ ಭಾವದಲ್ಲಿ ಭವಿಷ್ಯದಲ್ಲಿ ಅಪ್ರಸ್ತುತರಾಗುವ ಆತಂಕವೂ ಕಾಣುವುದು. ಬ್ರಿಟಿಷರು ದಯಪಾಲಿಸಿದ ಚಿನ್ನದ ಮೆಡಲು ಕಳೆದುಹೋಗಿದೆ. ಆದರೂ ಈ ಸಂಬಂಧವಾದ ಸರ್ಟಿಫಿಕೇಟು ಮಣ್ಣಬಣ್ಣಕ್ಕೆ ತಿರುಗಿ, ಗಾಜಿನ ಚೌಕಟ್ಟಿನಲ್ಲಿ ಅಡಗಿರುವುದು. ಮುಗ್ಗು ವಾಸನೆಯ ಖೋಲಿಯಲ್ಲಿ ಏಕಾಂಗಿಯಾಗಿರುವ ಬೀಟೆಮರದ ಕಪ್ಪುಮಂಚವೂ, ದೂಳುಹಿಡಿದ ಹುಲಿಚರ್ಮವೂ, ಹುಳತಿಂದ ಚಿಗರೆಕೋಡುಗಳೂ ನಿಲುಗನ್ನಡಿಯೂ ಸ್ಥಿತವಾಗಿರುವವು. ಗಡಿಯಾರ ಕೆಟ್ಟು ನಿಂತು ಎಷ್ಟು ಕಾಲವಾಯಿತೊ? ಕಾಲ ಮಹಾ ನಿರ್ದಯಿ!

ADVERTISEMENT

ಚರಿತ್ರೆಯ ಭಾರ!

ರಾಜಪ್ರಭುತ್ವ ಮತ್ತು ಪಾಳೇಗಾರಿಕೆ ಕೊನೆಗೊಂಡು ಡೆಮಾಕ್ರಸಿ ಬಂದ ಬಳಿಕ, ಕೆಲವು ಅರಮನೆಗಳು ಕಾಲೇಜುಗಳಾಗಿ ಹೋಟೆಲುಗಳಾಗಿ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳಾಗಿ ಹೊಸಬಾಳು ಶುರುಮಾಡಿದವು. ಉಳಿದಂತೆ ಅವು ಉತ್ತರಾಧಿಕಾರಿಗಳ ಮೇಲೆ ಹೆಣಭಾರವಾಗಿವೆ. ಪೂರ್ವಜರಂತೆ ಬದುಕಲಾಗದು. ಬದುಕದಿದ್ದರೆ ಜನ ಕನಿಕರಿಸುವರು. ಚರಿತ್ರೆ ಮತ್ತು ವಾಸ್ತವದ ನಡುವೆ ಬಾಯಿತೆಗೆದು ನಿಂತಿರುವ ಅಂತರ, ಅವರ ಬದುಕಿನ ಬಲಿ ಬೇಡುತ್ತಿದೆ. ಕೆಲವೊಮ್ಮೆ ಬಿದ್ದುಹೋದ ಕಟ್ಟಡದ ದುರಸ್ತಿಗೂ ಕಾಸಿರುವುದಿಲ್ಲ. ಒಂದು ವಾಡೆಯಲ್ಲಿ ದಾಯಾದಿಗಳು ಕೋರ್ಟು ಕಚೇರಿಗೆ ಹೋಗಿ, ಐದಾರು ಕಡೆ ಒಲೆ ಹೂಡಿಕೊಂಡು ಅನ್ನ ಬೇಯಿಸುತ್ತ, ಗುಳೇ ಬಂದವರು ಧರ್ಮಛತ್ರದಲ್ಲಿ ಬೀಡುಬಿಟ್ಟವರ ತರಹ ಇದ್ದರು. ಅರೆಹುಚ್ಚರಂತಿದ್ದ ಅವರು ವಾಡೆ ನೋಡಬಂದವರಿಂದ ಹಣ ಕೇಳಿದರು. ಇನ್ನೊಂದು ವಾಡೆಗೆ ಹೋಗಿದ್ದೆ. ಇಡೀ ಜಮೀನು, ಊರು ಕಾಣುವಂತೆ ದಿಬ್ಬದ ಮೇಲೆ ಕಟ್ಟಿದ್ದು. ಆದರೆ ಮುಳುಗಡೆಯಲ್ಲಿ ಊರೆಲ್ಲ ದೂರಹೋಗಿ ಹೊಸಬದುಕು ಕಟ್ಟಿಕೊಂಡಿದೆ. ಇವರು ಸರ್ಕಾರ ಕೊಟ್ಟಿರುವ ಪರಿಹಾರ ಸಾಲದೆಂದು ಹಠದಿಂದ ಮನೆಬಿಟ್ಟಿಲ್ಲ. ಪಾಳುಬಿದ್ದ ಊರಲ್ಲಿ ಅವರದು ಮಸಣದ ಬದುಕು. ಹಿರಿಯ ಜೀವಗಳಿಗೆ ವಾಡೆಯ ಜತೆ ಭಾವನಾತ್ಮಕ ಸಂಬಂಧ ಉಳಿದಿದೆ. ಆದರೆ ಹೊಸ ತಲೆಮಾರು ಪಾರಾಗಲು ಆಲೋಚಿಸುತ್ತಿದೆ.

ಗಟ್ಟಿಮುಟ್ಟಾಗಿ ವಾಡೆ ಉಳಿಸಿಕೊಂಡವರ ಕಷ್ಟ ಇನ್ನೊಂದು ಪರಿಯಾಗಿದೆ. ಅಜ್ಞಾತವಾಗಿದ್ದ ಒಂದು ವಾಡೆ ಸಿನಿಮಾದವರ ಕಣ್ಣಿಗೆ ಬಿದ್ದು ಇದಕ್ಕಿದ್ದಂತೆ ಜನಪ್ರಿಯವಾಯಿತು. ಶೂಟಿಂಗ್ ತಂಡದವರು ಹತ್ತಿ ತುಳಿದು ಮಾಳಿಗೆಯನ್ನು ಜಖಂ ಮಾಡಿದ್ದರು. ಸಮಸ್ಯೆಯೆಂದರೆ, ಸಿನಿಮಾ ನೋಡಿದಮಂದಿಯೆಲ್ಲ ವಾಡೆ ನೋಡಲು ಬರಲಾರಂಭಿಸಿದರು. ವಾಡೆಯವರಾದರೂ ಮೊದಮೊದಲು ಹೆಮ್ಮೆಯಿಂದ ಕರೆದೊಯ್ದು ತೋರಿಸಿದರು. ಆದರೆ ತಮ್ಮ ಖಾಸಗಿತನವನ್ನೇ ವಾಡೆ ಕಳೆಯುತ್ತಿರುವುದು ಶೀಘ್ರವೇ ಮನವರಿಕೆಯಾಯಿತು. ಈಗ ಯಾರಾದರೂ ವಾಡೆಗೆ ಬಂದರೆ ಅವರ ಮೊಗದಲ್ಲಿ ಸಿಡುಕು. ಗತ- ವರ್ತಮಾನಗಳ ಈ ಜಗ್ಗಾಟವೇ ಕಲೆಗೆ ವಸ್ತು. ಇದರ ಜತೆಗೆ ಸ್ಥಳೀಯರೂ ವಾಡೆ ಪಾಳಾಗುವುದಕ್ಕೆ ರೋಚಕ ಕತೆಗಳನ್ನು ಹೆಣೆದಿರುವರು. ಮುಖ್ಯ ಕಾರಣಗಳೆಂದರೆ- ದೇಸಾಯಿಗಳು ಬ್ರಿಟಿಷರಿಗೆ ಯುದ್ಧದಲ್ಲಿ ಸಹಾಯ ಮಾಡಹೋಗಿ ಲಾಸಾಗಿದ್ದು, ಜಮೀನೆಲ್ಲ ಟೆನೆನ್ಸಿ ಆಕ್ಟ್‌ನಿಂದ ಕೈಬಿಟ್ಟಿದ್ದು, ರಾಜಕುಮಾರ ಕುಡಿತ ಕಲಿತು, ವೇಶ್ಯೆಯರಿಗೆ ಬಿದ್ದು ಸೊತ್ತನೆಲ್ಲ ಕಳೆದಿದ್ದು, ವಿದೇಶಕ್ಕೆ ಓದಲು ಹೋದ ಮಕ್ಕಳು ಅಲ್ಲೇ ಲಗ್ನವಾಗಿ ವಾಡೆಯತ್ತ ಬರಲು ನಿರಾಕರಿಸುತ್ತಿರುವುದು, ರಾಜಕುಮಾರಿಯು ವಾಡೆಯ ಕುಸ್ತಿಪಟುವಿನ ಜತೆ ಓಡಿಹೋಗಿದ್ದು, ಆಕೆ ಪ್ರೇಮಿಸಿದ ತರುಣನನ್ನು ಅಪ್ಪನಾದವನು ಕೊಲ್ಲಿಸಿದ್ದು, ನೊಂದಾಕೆ ವಿಷಸೇವಿಸಿದ್ದು (ವಿಷಪ್ರಾಶನ?). ಅದರಲ್ಲೂ ಕೊಲೆಗೊಂಡ ಜೀತಗಾರನ ಹೆಂಡತಿ ಅಥವಾ ಯುದ್ಧದಲ್ಲಿ ಮಗನನ್ನು ಕಳೆದುಕೊಂಡ ತಾಯಿ, ಹಾಕಿದ ಶಾಪದ ಕತೆಗಳು ವ್ಯಾಪಕವಾಗಿವೆ. ಇವುಗಳಲ್ಲಿ ಪ್ರಭುತ್ವಕ್ಕೆ ಸವಾಲು ಹಾಕಿದ ಸಾಮಾನ್ಯರ ಛಲ- ವೇದನೆಯ ಅಂಶವಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಕೊಲ್ಲಿಸಿದ ಭಯದಿಂದ ವಾಡೆ ಬಿಟ್ಟು ಹೋದವರುಂಟು. ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರಿಗೆ ಹಿಡಿಸಿಕೊಟ್ಟ ಸಂಸ್ಥಾನಿಕರಿಗೆ, ತಾಟಿನಲ್ಲಿರುವ ಅನ್ನ ಹುಳುವಾಗುತ್ತಿತ್ತಂತೆ. ಕತೆಗಳು ಆಳುವ ವರ್ಗದ ಕ್ರೌರ್ಯ, ಅಸಹಾಯಕತೆ, ದುರವಸ್ಥೆ, ಪರಿತಾಪದ ರೂಪಕಗಳಾಗಿವೆ.

ವೈಭವದಿಂದ ಬಾಳಿದ ಅರಮನೆಗಳು ತಮ್ಮ ಆಳಿಕೆಯ ದಿನಗಳಲ್ಲಿ ನೂರಾರು ಕುಟುಂಬಗಳಿಗೆ ಬದುಕನ್ನು ಕೊಟ್ಟಿವೆ. ಸ್ವಾಮಿನಿಷ್ಠರು ಈಗಲೂ ಉಳಿದುಕೊಂಡಿದ್ದಾರೆ. ಅವರು ವಾಡೆಯ ಬಳಿ ಸುಳಿದವರನ್ನು ಕೂರಿಸಿಕೊಂಡು ಶ್ರದ್ಧೆಯಿಂದ ಗತವೈಭವದ ಕತೆ ನಿರೂಪಿ
ಸುವರು. ಅದರಲ್ಲಿ ವಾಡೆಗಳು ಹಿಂಡಿ ಹಿಪ್ಪೆಗೊಳಿಸಿದ ಬದುಕಿನವೂ ಸೇರಿವೆ. ಸಾಮಾನ್ಯವಾಗಿ ಸ್ವತಂತ್ರ ಪ್ರವೃತ್ತಿ ತೋರುವ ಮಕ್ಕಳು, ಹೆಂಡತಿಯರು, ಸೊಸೆಯಂದಿರು ಇದರ ಬಲಿಪಶುಗಳು. ‘ದೇವದಾಸ್’ ಕಾದಂಬರಿ ಪಾರು ಅಥವಾ ‘ಸಾಹೆಬ್ ಬೀವಿ ಔರ್ ಗುಲಾಮ್’ ಚಿತ್ರದ ದೊಡ್ಡಸೊಸೆ, ಇದಕ್ಕೆ ಸಾಕ್ಷಿ. ‘ಸಾಹೇಬ್ ಬೀವಿ...’ ಚಿತ್ರದಲ್ಲಿ ಸೊಸೆ ಗಂಡನ ಸ್ವೇಚ್ಛಾಚಾರ ತಡೆಯಲು ಸೋತು, ಕುಡಿತ ಆರಂಭಿಸುತ್ತಾಳೆ. ಸೇವಕರು ಚಂದವಾಗಿ ಬದುಕುವುದನ್ನು ಕಾಣುವ ಆಕೆಗೆ, ತಾನು ಸೇರಿರುವ ಹವೇಲಿಯೇ ಬಂದೀಖಾನೆ ಆಗಿರುವುದು ತಿಳಿಯುತ್ತದೆ. ಆಕೆಯ ಸೇವಕ, ಎಷ್ಟೊ ವರ್ಷಗಳ ಬಳಿಕ ಪ್ರಾಕ್ತನ ಇಲಾಖೆಯ ಅಧಿಕಾರಿಯಾಗಿ ಬಂದು, ಒಡತಿಯಿದ್ದ ಪಾಳು ಬಂಗಲೆಯ ಉತ್ಖನನಮಾಡಿಸುತ್ತಾನೆ. ಆಗ ಆಕೆಯ ಅಸ್ಥಿಪಂಜರ ಒಡವೆಗಳ ಸಮೇತ ಸಿಗುತ್ತದೆ. ಕುಟುಂಬದವರು ಮನೆನತನದ ಮರ್ಯಾದೆ ಮೀರಿದಳೆಂದು ಕೊಂದು ಮನೆಯಲ್ಲೆ ಹೂತಿರುತ್ತಾರೆ.

ವೈಭವಕ್ಕೆ ವಿದಾಯ

ಸಮಸ್ಯೆ ಕಾಲನ ಹೊಡೆತಕ್ಕೆ ಸಿಕ್ಕಿ ವಾಡೆ ಶಿಥಿಲಗೊಳ್ಳುವುದಲ್ಲ. ಅದು ಉಧ್ವಸ್ಥಗೊಳಿಸುವ ಬದುಕುಗಳದ್ದು, ಮನುಷ್ಯ ಸಂಬಂಧಗಳದ್ದು. ಉದಾಹರಣೆಗೆ- ಕಾಠ್ಮಂಡುವಿನ ಅರಮನೆ. ಅದು ಗಟ್ಟಿಮುಟ್ಟಾಗಿ ನಿಂತಿದೆ. ಆದರೆ ಅರಸೊತ್ತಿಗೆ ಅಳಿದು ಪ್ರಜಾಪ್ರಭುತ್ವ ಬಂದ ಬಳಿಕ ಮ್ಯೂಸಿಯಮ್ಮಾಗಿ ಬದಲಾಗಿದೆ. ಅದರೊಂದು ಭಾಗದಲ್ಲಿ ಆಭರಣ ತೊಟ್ಟು ಪರಿವಾರ ಸಮೇತ ನಿಂತಿರುವ ರಾಜ- ರಾಣಿಯರ ಚಿತ್ರಗಳಿವೆ; ಇನ್ನೊಂದು ಭಾಗದಲ್ಲಿ ರಾಜಕುಮಾರ ಗುಂಡು ಹಾರಿಸಿದ, ರಾಜ-ರಾಣಿಯರ ಶವಗಳು ಬಿದ್ದ, ನೆತ್ತರು ಹರಿದ ಜಾಗಗಳನ್ನು ಪ್ರದರ್ಶಿಸಲಾಗಿದೆ. ಹಿರೀಕರು ಎಳೆಯರ ಮೇಲೆ ತಮ್ಮ ಪ್ರತಿಷ್ಠೆ ಮೌಲ್ಯ ಚರಿತ್ರೆ ಹೇರಿ ಅವರ ಬದುಕಿನ ಬಲಿ ಪಡೆಯಲು ಯತ್ನಿಸುವರು; ಎಳೆಯರು ಕಿಚ್ಚಿನಿಂದ ಅರಮನೆ ತ್ಯಜಿಸಿಯೊ ಹಿರೀಕರನ್ನು ಕೊಂದೊ, ಈ ವೈಭವದ ಭಾರಕ್ಕೆ ವಿದಾಯ ಹೇಳುವರು.

ಅರಮನೆ ಪಾಳು ಕತೆಗಾರರನ್ನು ಸೆಳೆಯುತ್ತದೆ. ಅದರಲ್ಲೂ ಅದರ ದುರಂತಗಳಿಗೆ ಕಲ್ಪನೆಯನ್ನು ಕೆರಳಿಸುತ್ತದೆ. ಈ ಕತೆಗಳು ಪ್ರಜಾಪ್ರಭುತ್ವದಲ್ಲಿದ್ದರೂ ರಾಜರ ಬಗ್ಗೆ ಜನರಲ್ಲಿರುವ ಭಾವನಾತ್ಮಕ ಸೆಳೆತವನ್ನೂ ಸೂಚಿಸುತ್ತವೆ. ಆಧುನಿಕ ರಾಜಕಾರಣಿಗಳು ಅರಮನೆಯಂಥ ಮನೆ ಕಟ್ಟುವುದನ್ನು, ಚಿನ್ನದಕುರ್ಚಿ ಹಾಕಿಕೊಂಡು ಮೆರೆಯುವುದನ್ನು, ಅವರು ಹೇವರಿಸುವ ಬದಲು, ವಿಸ್ಮಯದಿಂದ ಕತೆ ಕಟ್ಟಿ ಹೇಳುತ್ತಿರುವುದನ್ನು ಗಮನಿಸಬೇಕು. ಬಹುಶಃ ಜನಕ್ಕೆ ದೈನಿಕವಾದ ಕಟುವಾಸ್ತವವನ್ನು ಮೀರುವ ಕಾಲ್ಪನಿಕವೂ ಸತ್ಯದ ಅಪೇಕ್ಷೆಯಿರಬೇಕು; ತಮಗಿಂತ ಭಿನ್ನವಾದ ಜೀವನಕ್ರಮದ ಬಗ್ಗೆ ಅವರಿಗೆ ಕುತೂಹಲವಿರಬೇಕು. ಸಾಮಾನ್ಯ ದಾರಿಹೋಕ ಪಣವನ್ನು ಗೆದ್ದು ರಾಜಕುಮಾರಿ ಮದುವೆಯಾಗುವ, ನಿರ್ಗತಿಕರು ಸಾಹಸದಿಂದಲೊ ದೈವಕೃಪೆಯಿಂದಲೊ ಸಿರಿವಂತರಾಗುವ ರಮ್ಯಕತೆ ಕಟ್ಟಿದವರೂ ಜನರೇ; ವೈಭವದಿಂದ ಬಾಳಿದವರು ದುರ್ಗತಿಗೆ ಬಿದ್ದ ಬಗ್ಗೆ ಮರುಕದ ಕತೆಯನ್ನೂ ಹುಟ್ಟಿಸಿರುವರು.

ಅವನತಿಗೊಂಡ ದೊರೆತನ ಕುರಿತು ಹುಟ್ಟಿರುವ ಎಷ್ಟೊಂದು ಕತೆ ನಾಟಕ ಸಿನಿಮಾಗಳಿವೆ- ಕಂಬಾರರ ‘ಸಿಂಗಾರೆವ್ವ ಮತ್ತು ಅರಮನೆ’, ರಾಘವೇಂದ್ರ ಪಾಟೀಲರ ‘ದೇಸಗತಿ’, ಸತ್ಯಜಿತ್‌ರೇಯವರ ‘ಜಲಸಾ ಘರ್’, ನುಗಡೋಣಿಯವರ ‘ಸವಾರಿ’ ಇತ್ಯಾದಿ. ಇವು ವಾಡೆಯ ಬಿರುಕಿನೊಳಗೆ ಬೇರುತಳೆದು ಕಳಕಳಿಸುವ ಗಿಡಗಳು. ಅರ್ಥಪೂರ್ಣ ಕಲೆ ಯಾವತ್ತೂ ಗತವೈಭವವನ್ನು ಕೃತಕವಾಗಿ ಕಟ್ಟಿ ವರ್ತಮಾನದ ಹೆಗಲ ಮೇಲೆ ಹೇರುವುದಿಲ್ಲ– ನಮ್ಮ ಜನಪ್ರಿಯ ಚಾರಿತ್ರಿಕ ಸಿನಿಮಾಗಳಂತೆ. ಬದಲಿಗೆ ಗಾಢವಿಷಾದ ಮತ್ತು ವ್ಯಂಗ್ಯದಲ್ಲಿ, ಯಾರ ಮರ್ಜಿಗೂ ಕಾಯದಂತೆ ಹರಿವ ಬಾಳಿನ ಕಠೋರ ಚಲನಶೀಲತೆಯನ್ನು ಕಾಣಿಸುತ್ತದೆ. ಈ ಚಲನೆಯಲ್ಲಿ ಭಗ್ನಗೊಂಡ ಅರಮನೆಯೊಳಗಿನ ಹತಾಶ ಜೀವಗಳು ಮರಳಿ ಜೀವ ಪಡೆಯುತ್ತವೆ; ಪಡೆದು ಹೊಸ ಚರಿತ್ರೆ ಬರೆಯಲು ಹವಣಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.