ADVERTISEMENT

ಭಾವಾಭಿವ್ಯಕ್ತಿಗೆ ಬಣ್ಣಗಳ ಭಾಷೆ

ಅಭಿಲಾಷ ಬಿ.ಸಿ.
Published 26 ಅಕ್ಟೋಬರ್ 2018, 20:00 IST
Last Updated 26 ಅಕ್ಟೋಬರ್ 2018, 20:00 IST
ಉಷಾ ಅವರ ಕಲಾಕೃತಿ
ಉಷಾ ಅವರ ಕಲಾಕೃತಿ   

‘ಸಾಧ್ಯತೆಯ ಹಾದಿ’, ‘ದಾರಿ ತಾನಾಗಿಯೇ ತೆರೆದುಕೊಂಡಾಗ’ ಹೀಗೆ ಭಿನ್ನ ಅಡಿಬರಹಗಳ ಮೂಲಕ ಆಕರ್ಷಿಸುವ ಕಲಾಕೃತಿಗಳು ಬಣ್ಣಗಳ ಮೂಲಕ ಭಾವನೆಗಳನ್ನೇ ಬಿಂಬಿಸಿದಂತಿವೆ.

ಉಷಾ ಬಲಾ

ನಮ್ಮ ಗ್ರಹಿಕೆಗೆ ನಿಲುಕದ್ದು ಮತ್ತು ನಮ್ಮ ಗ್ರಹಿಕೆಯ ಹೊರತಾದದ್ದು (ಅಬೋ ಅ್ಯಂಡ್‌ ಬಿಯಾಂಡ್) ಎಂಬ ವಿಷಯವನ್ನು ಆಧರಿಸಿ ರಚಿಸಿರುವಕಲಾವಿದೆ ಉಷಾ ಬಲಾ ಅವರ ಕಲಾಕೃತಿಗಳು ಜಗತ್ತನ್ನು ನೋಡುವ ದೃಷ್ಟಿಕೋನದ ಮೇಲೆ ಬೆಳಕುಚೆಲ್ಲಿವೆ.

ಸಣ್ಣ ಪುಟ್ಟ ಸಮಸ್ಯೆಗಳಲ್ಲಿಯೇ ಬಳಲುವ ಬದಲು ಅದನ್ನು ಹೊರತಾಗಿ ಜೀವನ ಮತ್ತು ಜಗತ್ತನ್ನು ನೋಡಬೇಕು. ಒಟ್ಟಾರೆ ಸಮಸ್ಯೆಯನ್ನು ಗ್ರಹಿಸಬೇಕು ಎನ್ನುವುದು ಕಲಾವಿದೆಯ ಆಶಯ. ‘ಜಾತಿ, ಧರ್ಮ, ಭಾಷೆ ಪ್ರಾದೇಶಿಕತೆಯನ್ನು ಮೀರಿ ಸಮಸ್ಯೆಗಳನ್ನು ನೋಡಿದಾಗ ಪರಿಹಾರ ತಾನಾಗಿಯೇ ಸಿಗುತ್ತದೆ’ ಎನ್ನುವುದು ಉಷಾ ಅವರ ಅಭಿಪ್ರಾಯ.

ADVERTISEMENT

‘ಸಮುದ್ರವನ್ನು ತೀರಾ ಹತ್ತಿರದಿಂದ ನೋಡಿದರೆ ಶಬ್ಧ, ತೆರೆಯ ಅಬ್ಬರವಷ್ಟೇ ಅರಿವಿಗೆ ನಿಲುಕುತ್ತದೆ. ಸಾಗರದ ನೀರವತೆಯನ್ನು ಅನುಭವಿಸಲು ದೂರದಿಂದಲೋ ಅಥವಾ ಎತ್ತರದಿಂದಲೋ ನೋಡಬೇಕು’ ಎನ್ನುವ ಉಷಾ ಅದೇ ವಿಷಯ ಆಧರಿಸಿ ಲ್ಯಾಂಡ್‌ಸ್ಕೇಪ್‌ ವರ್ಣಚಿತ್ರಗಳನ್ನು ರಚಸುತ್ತಿದ್ದಾರೆ.

ನಿಸರ್ಗವೇ ಇವರ ಕಲಾಕೃತಿಗಳ ಸ್ಫೂರ್ತಿ. ಪರಿಸರದ ವಿವಿಧ ನೋಟಗಳನ್ನು ಬಣ್ಣಗಳ ಮೂಲಕ ಕ್ಯಾನ್ವಸ್‌ನಲ್ಲಿ ಚಿತ್ರಿಸಿದ್ದಾರೆ.ಬಣ್ಣಗಳ ‌ಭಾಷೆಯ ಮುಖೇನ ಜೀವನದ ಅನೇಕ ಅಂಶಗಳನ್ನು ಸೂಕ್ಷ್ಮವಾಗಿ ಅವರು ಮೂಡಿಸಿದ್ದಾರೆ. ಬದುಕಿನ ಸೌಂದರ್ಯ, ಆಗಾಗ್ಗೆ ಎದುರಾಗುವ ಸಮಸ್ಯೆ, ಸವಾಲುಗಳು, ಕಾಡುವ ಅಭದ್ರತೆ, ಮತ್ತೆ ಧ್ಯಾನದ ಮೂಲಕ ಶಾಂತಿಯನ್ನು ಪಡೆಯುವ ಬಗೆಗೆ ಅವರು ಬಣ್ಣದ ಭಾಷೆ ನೀಡಿದ್ದಾರೆ.

ಕ್ಯಾಲಿಫೊರ್ನಿಯಾದ ಸಮುದ್ರವನ್ನು ಹಳದಿ ಮತ್ತು ಬಿಳಿ ಬಣ್ಣಗಳಲ್ಲಿ ಚಿತ್ರಿಸಿದ್ದು, ‘ಸಾಧ್ಯತೆಯ ಹಾದಿ’ ಎಂದು ಕ್ಯಾ‍ಪ್ಷನ್‌ ನೀಡಿದ್ದಾರೆ. ಜಗತ್ತನ್ನು ನೋಡುವ ದೃಷ್ಟಿಕೋನ ಬದಲಿಸಿಕೊಂಡರೆ ಸಮುದ್ರದ ನಡುವೆಯೂ ದಾರಿ ಸಿಗುತ್ತದೆ ಎಂಬುದನ್ನು ಈ ಚಿತ್ರ ಹೇಳುತ್ತದೆ. ತಿಳಿ ನೀಲಿ, ಗುಲಾಬಿ, ಕಪ್ಪು, ಬಿಳಿಯ ಬಣ್ಣದ ನೀರಿನ ನೀರವತೆಯನ್ನು ಕಲಕಿದಂತಿರುವ ಕಲಾಕೃತಿಗಳು ಮನದ ಗೊಂದಲದ ಕನ್ನಡಿಯಂತಿದ್ದರೆ, ಹಸಿರು ಹಾಗೂ ಕಪ್ಪು ಬಣ್ಣದ ವರ್ಣಚಿತ್ರ ಶಾಂತತೆಯ ಪ್ರತಿಬಿಂಬದಂತಿದೆ.

ಆಂಧ್ರಪ್ರದೇಶದವರಾದ ಉಷಾ ವೃತ್ತಿಯಲ್ಲಿ ಫ್ಯಾಷನ್‌ ಡಿಸೈನರ್‌. ಅವರಿಗೆ ಬಣ್ಣಗಳ ಮೂಲಕ ಭಾವನೆ ಅಭಿವ್ಯಕ್ತಿಸುವ ಕಲೆ ಚಿಕ್ಕಂದಿನಲ್ಲಿಯೇ ಕರಗತ. ಚಿತ್ರಕಲೆಯಲ್ಲಿ ವಿಶೇಷ ತರಬೇತಿ ಪಡೆಯದ ಉಷಾ ಸ್ವಂತ ಕಲಿಕೆಯಿಂದಲೇ ಕೆಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಬಣ್ಣಗಳ ಬಗೆಗಿನ ಪ್ರೀತಿ, ತಂದೆಯ ಸ್ಫೂರ್ತಿಯಿಂದಾಗಿ ಚಿತ್ರಕಲೆಯನ್ನು ಪ್ರವೃತ್ತಿಯಾಗಿ ರೂಢಿಸಿಕೊಂಡಿದ್ದಾರೆ.

‘ಫ್ಯಾಷನ್‌ ಡಿಸೈನಿಂಗ್‌ ಹಾಗೂ ಚಿತ್ರಕಲೆ ಎರಡೂ ಸೃಜನಶೀಲ ಕ್ಷೇತ್ರಗಳು. ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳನ್ನು ಡಿಸೈನ್‌ ಮಾಡಿದ್ದೇನೆ. ವಿಶ್ವದ ವಿವಿಧೆಡೆಗಳಲ್ಲಿ ನಡೆಯುವ ಫ್ಯಾಷನ್‌ ಶೊಗಳಲ್ಲಿ ನಾನು ವಿನ್ಯಾಸ ಮಾಡಿರುವ ಬಟ್ಟೆಗಳು ಪ್ರದರ್ಶನಗೊಂಡಿವೆ. ಫ್ಯಾಷನ್‌ನ್ನು ವೃತ್ತಿಯಾಗಿ ಸ್ವೀಕರಿಸಿದ್ದು, ಚಿತ್ರಕಲೆಯನ್ನು ಹವ್ಯಾಸವಾಗಿ ರೂಢಿಸಿಕೊಂಡಿದ್ದೇನೆ’ ಎನ್ನುತ್ತಾರೆ ಉಷಾ.

ಫ್ಯಾಷನ್‌ ಕ್ಷೇತ್ರದ ಜೊತೆಗೆ ಕಲೆಯನ್ನು ಸರಿದೂಗಿಸಿಕೊಂಡು ಹೋಗುತ್ತಿರುವ ಉಷಾ ವರ್ಷಕ್ಕೆ ಎರಡು ಕಲಾ ಪ್ರದರ್ಶನಗಳನ್ನು ಏರ್ಪಡಿಸುತ್ತಾರೆ. ಚಿತ್ರಕಲಾ ಪರಿಷತ್ತು, ದೆಹಲಿಯ ಲಲಿತ ಕಲಾ ಅಕಾಡೆಮಿ, ಇನ್‌ಸ್ಪೈರ್ ಆರ್ಟ್‌ ಗ್ಯಾಲರಿ ಹೈದರಾಬಾದ್‌ ಮೊದಲಾದೆಡೆ ಇವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.