ADVERTISEMENT

ಬಾಪೂ ನಮನ–ದರ್ಶನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 19:30 IST
Last Updated 1 ಅಕ್ಟೋಬರ್ 2022, 19:30 IST
ಕಲೆ: ಎಂ.ಎಸ್‌.ಮೂರ್ತಿ
ಕಲೆ: ಎಂ.ಎಸ್‌.ಮೂರ್ತಿ   

ಗಾಂಧಿ, ಪತ್ರಿಕೆ ಓದುತ್ತಿದ್ದಾರೆ. ಆ ಪತ್ರಿಕೆಯಲ್ಲಿ ಜನರ ಚಲನೆ ಕಾಣುತ್ತಿದೆ. ಪತ್ರಿಕೆಯ ಜನಮುಖಿ ಗುಣ ಹಾಗೂ ಪತ್ರಿಕಾಮಾಧ್ಯಮವನ್ನು ಜನರೊಂದಿಗಿನ ವೈಚಾರಿಕ ಸಂವಾದಕ್ಕೆ ಮಹಾತ್ಮ ಬಳಸಿಕೊಂಡಿದ್ದನ್ನು ಈ ಚಿತ್ರ ಸೂಚಿಸುವಂತಿದೆ.

ಇಲ್ಲಿನ ಚಿತ್ರಗಳ ಗೆರೆಗಳನ್ನು ಗಮನಿಸಿ. ಆ ಗೆರೆಗಳು ಗಾಂಧಿತತ್ತ್ವಗಳನ್ನು ಉಸುರುವಂತಿವೆ. ಗಾಂಧಿಯ ವ್ಯಕ್ತಿತ್ವದ ಸರಳತೆ ಹಾಗೂ ಉಜ್ವಲ–ಕಾಲಾತೀತ ಸೌಂದರ್ಯ, ಬಿಡುಬೀಸು ರೇಖೆಗಳಿಗೆ ದಕ್ಕಿದಷ್ಟು ಅರ್ಥಪೂರ್ಣವಾಗಿ, ಮರುಳುಗೊಳಿಸುವ ಬಣ್ಣಗಳಿಗೆ ಒಲಿಯುವುದಿಲ್ಲ ಎನ್ನುವುದಕ್ಕೆ ಈ ಗೆರೆಗಳು ನಿದರ್ಶನವಾಗಿಯೂ ಕಾಣಿಸುತ್ತವೆ.

ಎಂ.ಎಸ್. ಮೂರ್ತಿ ಕಲಾಕಾರರಷ್ಟೇ ಅಲ್ಲ, ಕವಿಯೂ ಹೌದು. ಕಲಾವಿದ ಕವಿಯೂ ಆದಾಗ ರೇಖೆಗಳ ಜೀವಶಕ್ತಿ ಮತ್ತಷ್ಟು ಸೂಕ್ಷ್ಮಗೊಳ್ಳುತ್ತದೆ. ಗಾಂಧಿಯೊಂದಿಗಿನ ಅನುಸಂಧಾನದ ಅವರ ಕೃತಿಗಳು ಈ ಜಗತ್ತು ಕಂಡ ಅಸಾಧಾರಣ ವ್ಯಕ್ತಿತ್ವದ ಚಹರೆಗಳನ್ನಷ್ಟೇ‌ ಕಾಣಿಸುತ್ತಿಲ್ಲ. ಮಹಾತ್ಮನ ನೆಪದಲ್ಲಿ ಈ ಕಾಲಕ್ಕೆ ಅಗತ್ಯವಾದ ಮೌಲ್ಯಗಳ ಶೋಧದಂತೆ ಕಾಣಿಸುತ್ತದೆ. ನಮ್ಮೊಳಗೆ ಬೆಳೆಯುವ ಅವಕಾಶ ಉಳಿಸಿಕೊಂಡಿರುವುದು ಈ ಕೃತಿಗಳ ಶಕ್ತಿ.

ADVERTISEMENT

ಹಗೆಯ ಎದೆಯನ್ನೂ ಕರಗಿಸಬಲ್ಲ ಶಕ್ತಿಯ ನಗು, ಹೊಳಪು ಕಂಗಳು ಸೂಸುವ ಕಾಂತಿ ಹಾಗೂ ಆಳ ವಿಷಾದ, ನಡಿಗೆಗಿರುವ ಕಟ್ಟುವ ಸೃಜನಶೀಲ ಶಕ್ತಿ – ಇವೆಲ್ಲವನ್ನೂ ಅನುಭವವಾಗಿ ಸಹೃದಯರಿಗೆ ದಾಟಿಸುವ ಕಲಾಕೃತಿಗಳು, ನಮ್ಮೊಳಗೆ ಗಾಂಧಿಬೀಜವನ್ನು ಬಿತ್ತಲು ಹವಣಿಸುವಂತಿವೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಅನಾವರಣಗೊಂಡಿರುವುದು ಗಾಂಧಿಕೃತಿಗಳ ಎಪ್ಪತ್ತೈದರ ಸಂಖ್ಯೆಗೆ ಹೊಸ ಹೊಳಪು ತಂದುಕೊಟ್ಟಿದೆ.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಗ್ಯಾಲರಿಯಲ್ಲಿ ಅ. 3ರಿಂದ ಹತ್ತು ದಿನಗಳ ಕಾಲ ‘ಮಹಾತ್ಮನಿಗೆ ನಮನ’ ಪ್ರದರ್ಶನ ನಡೆಯಲಿದೆ. ನಾಡಿನ ಬಹುಮುಖ್ಯ ಕಲಾವಿದರೊಬ್ಬರು ತಾವು ಪಡೆದ ‘ಗಾಂಧಿ ದರ್ಶನ’ವನ್ನು ನಮನದ ರೂಪದಲ್ಲಿ ಸಹೃದಯರಿಗೆ ತಲುಪಿಸುತ್ತಿರುವ ಈ ‍ಪ್ರದರ್ಶನ ಗಾಂಧಿಪ್ರಿಯರಿಗೆ ಹಬ್ಬವಿದ್ದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.