ADVERTISEMENT

ಉಡುಪಿಯ ಮೆಕ್ಕೆಕಟ್ಟೆ ಮರದ ಮೂರ್ತಿಗಳು

ಗೀತಾ ಕುಂದಾಪುರ
Published 22 ಫೆಬ್ರುವರಿ 2020, 19:30 IST
Last Updated 22 ಫೆಬ್ರುವರಿ 2020, 19:30 IST
ಮೆಕ್ಕೆಕಟ್ಟೆಯ ಮರದ ಮೂರ್ತಿಗಳು
ಮೆಕ್ಕೆಕಟ್ಟೆಯ ಮರದ ಮೂರ್ತಿಗಳು   

ಮೈತುಂಬಾ ಮೆತ್ತಿಕೊಂಡ ಕೆಂಪು ಬಣ್ಣ. ದೊಡ್ಡ ದೊಡ್ಡ ಕಣ್ಣುಗಳು. ದಪ್ಪ ಮೀಸೆ. ಕೈಯಲ್ಲಿ ಕತ್ತಿ. ಅಲ್ಲಿ ಮೂರು ತಲೆ ಇದ್ದವರೂ ಇದ್ದಾರೆ. ಕೆಲವರ ಕೈಯಲ್ಲಿ ರಕ್ತ ಜಿನುಗುತ್ತಿರುವ ರುಂಡ; ಈ ದೃಶ್ಯ ನೋಡಿ ಮಕ್ಕಳು ಹೆದರಿ ಅತ್ತರೆ, ಪಕ್ಕನೆ ನೋಡಿದ ದೊಡ್ಡವರ ಎದೆಯಲ್ಲೂ ನಡುಕ!

ಇವು ಮರದ ಉರು(ಮೂರ್ತಿ)ಗಳು. ಮೆಕ್ಕೆಕಟ್ಟೆಯ ಶ್ರೀನಂದಿಕೇಶ್ವರ ದೇವಸ್ಥಾನದಲ್ಲಿರುವ ಇವು ಜನರ ಕಣ್ಮನ ಸೆಳೆಯುತ್ತವೆ. ಅಂದಹಾಗೆ ಮೆಕ್ಕೆಕಟ್ಟು ಇರುವುದು ಉಡುಪಿ ತಾಲ್ಲೂಕಿನ ಶಿರಿಯಾರ ಗ್ರಾಮದಲ್ಲಿ. ಉಡುಪಿಯಿಂದ 27 ಕಿ.ಮೀ. ದೂರದಲ್ಲಿದ್ದರೆ, ಕುಂದಾಪುರದಿಂದ 20 ಕಿ.ಮೀ. ಪ್ರಯಾಣಿಸಬೇಕು.

ಎರಡು ಅಡಿಯಿಂದ ಹಿಡಿದು 20 ಅಡಿ ಎತ್ತರದ 250ಕ್ಕೂ ಹೆಚ್ಚು ಮೂರ್ತಿಗಳು ಇಲ್ಲಿವೆ. ಇವು ಯಾರ ಮೂರ್ತಿಗಳು? ಇಷ್ಟೊಂದು ಮೂರ್ತಿಗಳನ್ನು ಇಲ್ಲಿ ಇಟ್ಟಿರುವ ಉದ್ದೇಶವಾದರೂ ಏನು? ಎನ್ನುವುದರ ಬಗ್ಗೆ ಸರಿಯಾದ ಪುರಾವೆ ಇಲ್ಲ. ಈ ನಿಟ್ಟಿನಲ್ಲಿ ಸಂಶೋಧನೆಯೂ ನಡೆದಿಲ್ಲ.

ADVERTISEMENT

ಪ್ರಾಣಿಗಳ ಮೇಲೆ ಸವಾರಿ ಮಾಡುತ್ತಿರುವ ಮೂರ್ತಿಗಳಿದ್ದರೆ, ಕೆಲವರ ಕೈಯಲ್ಲಿ ಕೋವಿಯಂತಹ ವಸ್ತು, ಕತ್ತಿ, ಚೂರಿಯಂತಹ ಆಯುಧಗಳೂ ಇವೆ. ಸಿಖ್ ಉಡುಗೆ, ಮುಸ್ಲಿಮರ ಶೈಲಿಯಲ್ಲಿರುವ ಮೂರ್ತಿಗಳೂ ಇವೆ. ಗುಂಪಿನಲ್ಲಿ ಆನೆ, ಕುದುರೆ, ಸಿಂಹ, ಹೋರಿಯಂತಹ ಪ್ರಾಣಿಗಳ ಮೂರ್ತಿಗಳೂ ಇವೆ. ಹೆಂಗಸರ ಒಂದೋ, ಎರಡೋ ಮೂರ್ತಿಗಳಿವೆ. ಇವು ಸೈನ್ಯವನ್ನು ಚಿತ್ರಿಸುವ ಮೂರ್ತಿಗಳಾಗಿವೆ ಎಂಬುದು ಕೆಲವರ ವಿವರಣೆ.

ಹೆಚ್ಚಿನ ಮೂರ್ತಿಗಳಲ್ಲಿ ಕೋರೆಹಲ್ಲು, ಜನಿವಾರ, ಮೈಯಲ್ಲಿ ಅಡ್ಡನಾಮ ಇದೆ. ಕೆಲವು ಮೂರ್ತಿಗಳ ತಲೆಯಲ್ಲಿ ಕಿರೀಟ ಕಂಡುಬಂದರೆ ಇನ್ನು ಕೆಲವಲ್ಲಿ ಟೋಪಿ ಹಾಕಿಕೊಂಡಂತೆ ಕಂಡುಬರುತ್ತದೆ. ಮೂರ್ತಿಗಳು ಅಲ್ಪಸ್ವಲ್ಪ ಆಭರಣ ಮತ್ತು ಬಣ್ಣದ ಅಂಗವಸ್ತ್ರ ಉಟ್ಟಂತೆ ಕಂಡುಬರುತ್ತವೆ. ಎಲ್ಲದರಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಅಂಶ ದೊಡ್ಡದಾಗಿ ಬಿಟ್ಟ ಕಣ್ಣುಗಳು ಮತ್ತು ದೊಡ್ಡ ಮೀಸೆ. ಮುಖದಲ್ಲಿ ಕ್ರೂರತೆ ಎದ್ದು ಕಾಣುತ್ತದೆ.

ಇವು ಕೆಳದಿ ರಾಜರ ಯುದ್ಧಭೂಮಿಯ ಪ್ರತೀಕ ಎಂದು ಹೇಳಲಾಗುತ್ತದೆ. ಇವು ಯುದ್ಧದಲ್ಲಿ ಮಡಿದವರ ಪ್ರತಿರೂಪಗಳು ಎನ್ನುವವರೂ ಇದ್ದಾರೆ. ಇಲ್ಲಿ ಜಂಬೂಕೇಶ್ವರನೆಂಬ ಸನ್ಯಾಸಿ ಅನೇಕ ಯಜ್ಞಗಳನ್ನು ಮಾಡಿ ಗಣ ದೇವಾಲಯ ಸ್ಥಾಪಿಸದನೆಂಬ ನಂಬಿಕೆ ಇದೆ. ಇಲ್ಲಿರುವ ಮರದ ಮೂರ್ತಿಗಳು ‘ಶಿವನ ಗಣಗಳು’ ಎಂಬುದು ಕೆಲವರ ಹೇಳಿಕೆ.

ದೇವಸ್ಥಾನಕ್ಕೆ ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸವಿದೆ. ಮರದ ಮೂರ್ತಿಗಳು 17-18ನೆಯ ಶತಮಾನದಲ್ಲಿ ತಯಾರಾಗಿರಬಹುದು ಎಂಬ ಅಂದಾಜಿದೆ. ಹಲಸಿನ ಮರದಿಂದ ಮೂರ್ತಿಗಳನ್ನು ತಯಾರಿಸಲಾಗಿದೆ. ಇವುಗಳ ಬಾಳಿಕೆ ಸುಮಾರು 150ರಿಂದ 200 ವರ್ಷ. ಮೂರ್ತಿಗಳು ಹಾಳದಂತೆ ಹೊಸ ಮೂರ್ತಿಗಳನ್ನು ತಯಾರಿಸಲಾಗುತ್ತದೆ. ಆದರೆ, ಆಕಾರ ಮತ್ತು ರೂಪದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಈ ಮೂರ್ತಿಗಳಿಗೆ ವೀಳ್ಯದೆಲೆ, ಅಡಿಕೆ, ಹೂವು, ಹಣ್ಣಿಟ್ಟು ಪೂಜೆಯೂ ನಡೆಯುತ್ತದೆ. ದೂರದಲ್ಲಿ ದೀಪವನ್ನೂ ಹಚ್ಚುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.