ADVERTISEMENT

ವರ್ತಮಾನದ ತಲ್ಲಣಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 19:30 IST
Last Updated 23 ನವೆಂಬರ್ 2019, 19:30 IST
‘ತೀನ್ ಕಂದೀಲ್’ ನಾಟಕದ ಒಂದು ದೃಶ್ಯ
‘ತೀನ್ ಕಂದೀಲ್’ ನಾಟಕದ ಒಂದು ದೃಶ್ಯ   

ಸಮಾಜ ತನ್ನ ಸಂವೇದನಾಶೀಲ ಹೊಣೆಗಾರಿಕೆಯಿಂದ ದೂರವಾದಾಗ ನಡೆಯುವ ದುರ್ಘಟನೆಗಳು ಮನುಷ್ಯ ಸಹಜ ಅಂತಃಕರಣವನ್ನು ಕಲಕುತ್ತವೆ. ಸಮುದಾಯ ರಾಯಚೂರು, ರಂಗಕನಸು ಮಂಡಲಗೇರಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಯಚೂರಿನ ಪಂ. ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಎರಡು ದಿನಗಳ ‘ಎಡದೊರೆ ನಾಟಕೋತ್ಸವ’ ಇಂತಹ ಹಲವು ಘಟನೆಗಳಿಗೆ ಸಾಕ್ಷಿಯಾಯಿತು.

ಮೊದಲ ನಾಟಕ ‘ರಸಗಂಗಾಧರ’ (ರಚನೆ: ಡಾ.ವಿಕ್ರಮ್ ವಿಸಾಜಿ, ನಿರ್ದೇಶನ: ಲಕ್ಷ್ಮಣ್ ಮಂಡಲಗೇರಾ) ಅರಸೊತ್ತಿಗೆಯಲ್ಲೂ ಮನುಷ್ಯ ಸಹಜ ಸಂಘರ್ಷ, ಮಾನಸಿಕ ತೊಳಲಾಟಗಳು ಸಾಮಾನ್ಯ ಮನುಷ್ಯನ ತೊಳಲಾಟಗಳಲ್ಲ ಎಂದು ಸಾಬೀತುಪಡಿಸಿತು. ಒಂದು ಕಡೆ ಸಾಮಾನ್ಯ ಮನುಷ್ಯನ ಯೋಚನೆಗೆ ಸಿಗದ ಮೊಘಲ್ ಸಾಮ್ರಾಜ್ಯದ ಘನತೆ, ಗೌರವ; ಇನ್ನೊಂದೆಡೆ ಮೊಘಲ್ ಅರಮನೆ ಆವರಣದಲ್ಲೇ ನಡೆಯುವ ಅಮಾನವೀಯ ಕ್ರೌರ್ಯ, ದೌರ್ಜನ್ಯ, ಸಂಚು, ಜೊತೆಗೆ ನವಿರಾದ ಪ್ರೀತಿ- ಪ್ರೇಮದ ಸೆಳೆತ, ಸಾಹಿತ್ಯ ವಿಮರ್ಶೆ, ಕಾವ್ಯಮೀಮಾಂಸೆಯ ಒಡನಾಟದ ಮೇಲೆ ಬೆಳಕು ಚೆಲ್ಲಿತು.

ಇತಿಹಾಸದಲ್ಲಿ ಸಾಹಿತ್ಯ ಮತ್ತು ಸಾಮ್ರಾಜ್ಯಕ್ಕೂ ಅನನ್ಯವಾದ ಸಂಬಂಧವಿದೆ. ಹಿಂದೆ ಅರಸರು ಪ್ರತಿಭಾವಂತ ಕವಿ, ಸಾಹಿತಿಗಳು ತಮ್ಮ ಸಾಮ್ರಾಜ್ಯದಲ್ಲಿರಬೇಕೆಂದು ಬಯಸುತ್ತಿದ್ದುದು ಅವರ ಪ್ರತಿಷ್ಠೆಯ ವಿಷಯವಾಗಿತ್ತು. ಮೊಘಲ್ ಸಾಮ್ರಾಜ್ಯದ ಆಸ್ಥಾನ ಕವಿ ಪಂಡಿತರಾಜ ಜಗನ್ನಾಥ (ನಟ: ಪ್ರವೀಣ್ ರೆಡ್ಡಿ) ಮತ್ತು ಮೊಘಲ್ ಚಕ್ರವರ್ತಿ ಶಹಜಾನನ ಸುತ್ತ ಸಾಗುವ ‘ರಸಗಂಗಾಧರ’ ಸಾಮ್ರಾಜ್ಯಶಾಹಿಯ ಕ್ರೌರ್ಯದ ಜೊತೆಗೆ ಪ್ರೇಮ ಸುಧೆಯನ್ನು ಉಣಬಡಿಸುವ ನಾಟಕ.

ADVERTISEMENT

ಪಂಡಿತರಾಜ ಜಗನ್ನಾಥ ಎಷ್ಟೇ ಪ್ರಸಿದ್ಧ ಮತ್ತು ಪ್ರಖ್ಯಾತ ಕವಿ ಎನಿಸಿದರೂ ದೊರೆ ಶಹಜಾನನ ಪುತ್ರಿ ಲಾವಂಗಿಯನ್ನು ಪ್ರೀತಿಸುವ ಕಾರಣಕ್ಕಾಗಿ ದೇಶದ್ರೋಹಿಯಾಗುತ್ತಾನೆ.

ಜಗನ್ನಾಥನ ಜೊತೆಗಿನ ಸ್ನೇಹ, ಒಡನಾಟದಿಂದ ಲಾವಂಗಿ ಮತ್ತು ಆಕೆಯ ಅಣ್ಣ ದಾರಾಶಿಕೊ ಅರಸೊತ್ತಿಗೆಯ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಸಾಮಾನ್ಯರಂತೆ ವರ್ತಿಸಲು ಶುರು ಮಾಡುತ್ತಾರೆ. ಇಬ್ಬರೂ ಕಾವ್ಯಮೋಹಿಗಳು. ಇದು ಶಹಜಾನನ ಕಿರಿಯ ಮಗ ಔರಂಗಜೇಬನಿಗೆ ಸಹಿಸಲಾಗದೆ ಆತ ಅಣ್ಣ ದಾರಾಶಿಕೊನನ್ನು ಹತ್ಯೆಗೈಯುತ್ತಾನೆ.

‘ಪ್ರಭುತ್ವ, ಕಾವ್ಯ, ಜೀವನ ಮುಗಿಯದ ಆಟ’ ಎಂದೆ ಸಾರುವ ಜಗನ್ನಾಥ ಪಂಡಿತ ಕೊನೆಗೆ ಗಂಗಾ ನದಿಗಿಳಿದು ಪ್ರಾಣತ್ಯಾಗ ಮಾಡುತ್ತಾನೆ. ಜಗನ್ನಾಥ ಪಂಡಿತನ ಸಾವಿನ ಸುದ್ದಿ ಕೇಳಿದ ಲಾವಂಗಿ ಪ್ರತಿಭಟನಾತ್ಮಕ ರೀತಿಯಲ್ಲಿ ಮೊಘಲ್ ಸಾಮ್ರಾಜ್ಯದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆ, ಕ್ರೌರ್ಯದ ವಿರುದ್ಧ ದನಿ ಎತ್ತುತ್ತಾಳೆ. ಅರಸೊತ್ತಿಗೆ ಬಿಟ್ಟು ಹೊರಗಿನ ಪ್ರಪಂಚ ನೋಡಿ, ಅಲ್ಲಿ ಹೊಸದೊಂದು ಪ್ರಪಂಚವಿದೆ...’ ಎಂದು ಹೇಳುವ ಲಾವಂಗಿ ಮಹಿಳಾ ಸ್ವಾತಂತ್ರ್ಯ, ಕಾನೂನುಗಳ ಬಗ್ಗೆ ಹೋರಾಟದ ಧ್ವನಿ ಮೊಳಗಿಸುತ್ತಾಳೆ.

ಇತಿಹಾಸಕಾರ ಹಮೀದ್ ಸೇರಿದಂತೆ ಎಲ್ಲ ಪಾತ್ರಗಳು ಗಮನಸೆಳೆಯುತ್ತವೆ. ಲಾವಂಗಿಯ ‘ನದಿಗೆ ಸಿಕ್ಕ ದಡ ಆಸರೆಯೋ, ಬಂಧನವೋ...’ ಎಂಬ ಕಾವ್ಯಾತ್ಮಕ ಪ್ರಶ್ನೆ ಮೊಘಲ್ ಅರಸೊತ್ತಿಗೆಗೆ ಪ್ರಶ್ನೆಯಾಗೆ ಉಳಿಯುತ್ತದೆ. ಕಾವ್ಯಕ್ಕೂ, ಖಡ್ಗಕ್ಕೂ ಮೊಘಲ್ ಸಾಮ್ರಾಜ್ಯದಲ್ಲಿ ಸಾಕಷ್ಟು ಅಂತರವಿತ್ತು ಎನ್ನುವುದನ್ನು ‘ರಸಗಂಗಾಧರ’ ಎತ್ತಿ ತೋರುತ್ತದೆ.

ಎರಡನೆ ನಾಟಕ ‘ತೀನ್ ಕಂದೀಲ್’ (ರಚನೆ: ರಮೇಶ್ ಅರೋಲಿ, ನಿರ್ದೇಶನ: ಪ್ರವೀಣ್ ರೆಡ್ಡಿ) ರಾಯಚೂರಿನ ಪ್ರಸಿದ್ಧ ಐತಿಹಾಸಿಕ ತಾಣಗಳಾದ ನವರಂಗ ದರವಾಜ, ಕಾಟೆ ದರವಾಜ, ಎಕ್‍ಮಿನಾರ್, ತೀನ್ ಕಂದೀಲ್ ಮತ್ತು ಕಲ್ಲಾನೆ ಸ್ಮಾರಕಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಅಲ್ಲಿ ನಡೆಯುವ ಘಟನೆಗಳ ಸುತ್ತಲೂ ಹೆಣೆದ ನಾಟಕ. ಆದರೆ, ಈ ಘಟನೆಗಳಿಗೆ ಸಾಕ್ಷಿಯಾಗಿ ನಿಲ್ಲುವ
ಕಾಕಿ ಯಲ್ಲಯ್ಯ ಒಬ್ಬ ಸಾಮಾಜಿಕ ಚಿಂತಕ. ಆತ ಲೋಕಜ್ಞಾನಿ, ಅವ್ಯವಸ್ಥೆಗಳ ವಿರೋಧಿ, ದಿಕ್ಕುತಪ್ಪಿಸುವ ಸರ್ಕಾರದ ಯೋಜನೆಗಳ ಟೀಕಾಕಾರ, ತತ್ವಜ್ಞಾನಿಯಂತೆಯೂ ಕಾಣುತ್ತಾನೆ. ಮೋಚಿಯೊಬ್ಬನ ಮಗ ಹುಸೇನಿ ಮತ್ತು ಹಣ್ಣು ಮಾರಿ ಬದುಕುವ ಮಹಿಳೆಯೊಬ್ಬಳ ಮಗಳು ಶಾಂತಿ ಮಧ್ಯೆ ಆರಂಭವಾದ ಪ್ರಣಯ ಪ್ರಸಂಗ ನಾಟಕದ
ತಿರುವು.

ಈ ಪ್ರಣಯ ಸಂಗತಿ ಎಷ್ಟು ಗಂಭೀರವಾಗುತ್ತದೆ ಎಂದರೆ ಧರ್ಮ ಮತ್ತು ಜಾತಿಗೆ ಅಂಟಿಕೊಂಡು ಪೋಷಕರು ಇಬ್ಬರೂ ಪ್ರೇಮಿಗಳನ್ನು ಹತ್ಯೆ ಮಾಡುವಷ್ಟು ಹೀನಕೃತ್ಯಕ್ಕೆ ಇಳಿಯುತ್ತಾರೆ. ಸಂವಿಧಾನ ನಮಗೆ ಎಲ್ಲವನ್ನೂ ಕೊಟ್ಟಿದೆ ಎಂದರೂ ದೇಶದಲ್ಲಿ ಇಂತಹ ಹಲವು ಘಟನೆಗಳು ಜನಮಾನಸಕ್ಕೆ ಗಾಯ ಮಾಡುತ್ತಿರುವುದು ನೋವಿನ ಸಂಗತಿಯಾಗಿಯೇ ನಿಲ್ಲುತ್ತದೆ.

ಮರ್ಯಾದಾ ಹತ್ಯೆಯಂತಹ ಘಟನೆಗಳು ನಮ್ಮ ವ್ಯವಸ್ಥೆಯಲ್ಲಿ ಉಡಾಫೆಯಾಗಿ ಕಾಣುತ್ತವೆ. ಕಾಕಿ ಯಲ್ಲಯ್ಯ (ನಟ: ಲಕ್ಷ್ಮಣ್ ಮಂಡಲಗೇರಾ) ಅವರ ಮನೋಜ್ಞ ಅಭಿನಯ ಗಮನ ಸೆಳೆಯಿತು.

ಸಮಾಜದ ಸಾಕ್ಷಿಪ್ರಜ್ಞೆಯಂತಹ ಯಲ್ಲಯ್ಯ ‘ಜಾತಿ ಅನ್ನೋ ಕಾರಣಕ್ಕೆ ಜಗತ್ತು ತನ್ನನ್ನ ಹೊರಗಿಟ್ಟಾಗ ಪುಸ್ತಕ ಅಂಬೇಡ್ಕರ್ ಅವರನ್ನ ತನ್ನ ಎದೆಗೆ ಅಪ್ಪಿಕೊಂಡಿತ್ತಂತೆ. ಅಂತಹ ಮಹಾನುಭಾವ ರೂಪಿಸಿದ ಸಂವಿಧಾನದ ಬಗ್ಗೆ ನಮ್ಮ ರಾಜಕಾರಣಿಗಳು ಮಾತನಾಡುವುದನ್ನು ‘ಸಂವಿಧಾನ ಕುರಿತು ತಿಕ್ಕಲುಗಳಂತೆ ಮಾತನಾಡುವ ನೀವು ಮನುಷ್ಯರಲ್ಲ...’ ಎಂದು ತಿವಿಯುವ ಮಾತು ಎದೆಗೆ ನಾಟುತ್ತದೆ. ರಾಯಚೂರು ಭಾಷೆಯ ಬಿಗಿತ ‘ತೀನ್‍ಕಂದೀಲ್’ ನಾಟಕಕ್ಕೆ ಹೊಸ ಬೆಳಕು ಚೆಲ್ಲಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.