ADVERTISEMENT

ಚುಲೂನನ ಕುದುರೆ

ಬಿ.ಎಂ.ಹನೀಫ್
Published 4 ಏಪ್ರಿಲ್ 2020, 19:30 IST
Last Updated 4 ಏಪ್ರಿಲ್ 2020, 19:30 IST
‘ದಿ ಸ್ಟೀಡ್’ ಸಿನಿಮಾದ ದೃಶ್ಯ
‘ದಿ ಸ್ಟೀಡ್’ ಸಿನಿಮಾದ ದೃಶ್ಯ   

ಕುದುರೆ ಮತ್ತು ಮನುಷ್ಯನ ಸಂಬಂಧ ಕುರಿತು ನೂರೆಂಟು ಕಥೆಗಳಿವೆ. ಕುದುರೆಗಳ ಕುರಿತ ಮನುಷ್ಯನ ಮೋಹವನ್ನು ಬಣ್ಣಿಸುವುದು ಕಷ್ಟ. ಜಗತ್ತಿನ ಹಲವು ದೇಶಗಳಲ್ಲಿ ಕುದುರೆಯ ಕುರಿತ ವಿಭಿನ್ನ ಜಾನಪದಗಳೂ ಇವೆ. ಮಂಗೋಲಿಯನ್ನರಿಗಂತೂ ಕುದುರೆಗಳ ಮೋಹ ವಿಪರೀತ. ‘ಕುದುರೆ ಇಲ್ಲದ ಮಂಗೋಲಿಯನ್ ರೆಕ್ಕೆಯಿಲ್ಲದ ಹಕ್ಕಿಯಂತೆ’ ಎನ್ನುವ ನಾಣ್ನುಡಿಯೇ ಅಲ್ಲಿದೆ. ಕುದುರೆಯ ಬಾಲ ಮುಟ್ಟದ ಮಂಗೋಲಿಯನ್ ಅರ್ಧ ಮಾತ್ರ ಮಂಗೋಲಿಯನ್ ಎನ್ನುವುದೂ ಜನಜನಿತ ಮಾತು. ಮಂಗೋಲಿಯ ದೇಶದಲ್ಲಿ ಅಂದಾಜು 30 ಲಕ್ಷ ಕುದುರೆಗಳಿದ್ದು, ಅದು ಅಲ್ಲಿಯ ಜನಸಂಖ್ಯೆಗಿಂತಲೂ ಹೆಚ್ಚು ಎನ್ನಲಾಗುತ್ತಿದೆ. ಅವರಲ್ಲಿ ಕುದುರೆಯ ಹಾಲು ಜನಪ್ರಿಯ. ಕುದುರೆ ಮಾಂಸವನ್ನು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಮಾಂಸ ಎನ್ನಲಾಗುತ್ತಿದೆ.

ನಮ್ಮಲ್ಲೂ ‘ರಾಜಬೀದಿಯ ಬಳಸಿ, ಹೋದ ಕುದುರೆಗಳೆಷ್ಟೋ...’ ಲೆಕ್ಕವಿಲ್ಲ. ನಮ್ಮ ಅನೇಕ ಮಹಾಪುರುಷರು, ರಾಣಿಯರು ಸರ್ಕಲ್‍ಗಳಲ್ಲಿ ಕುದುರೆಗಳ ಮೇಲೆಯೇ ವಿರಾಜಮಾನರಾಗಿರುವುದು ಎದ್ದು ಕಾಣುವ ಅಂಶ. ಅಶ್ವಮೇಧಯಾಗದಲ್ಲಿ ಕುದುರೆಯ ಬಲಿ ಮಹತ್ವ ಪಡೆದುಕೊಂಡಿದೆ. ಆದರೆ, ಮಂಗೋಲಿಯದಲ್ಲಿ ಕುದುರೆಯದ್ದು ಮನೆ ಮನೆ ಕಥೆ. ಅಲ್ಲಿ ಅತ್ಯಧಿಕ ಕುದುರೆಗಳನ್ನು ಹೊಂದಿದವನೇ ಅತಿದೊಡ್ಡ ಶ್ರೀಮಂತ. ಅಲ್ಲಿನ ಮನೆಗಳಲ್ಲಿ ಗಂಡು, ಹೆಣ್ಣು ಎನ್ನದೆ ಪ್ರತಿಯೊಬ್ಬರೂ ತಮ್ಮದೇ ಪ್ರತ್ಯೇಕ ಕುದುರೆಗಳನ್ನು ಹೊಂದಿದ್ದಾರೆ(ನಮ್ಮಲ್ಲಿ ಸ್ಕೂಟಿಗಳಿದ್ದಂತೆ!). ಅವರ ಕಾಲುಗಳು ನೆಲದಲ್ಲಿ ಇರುವುದಕ್ಕಿಂತ ಕುದುರೆಗಳ ಹೊಟ್ಟೆಯ ಪಕ್ಕದಲ್ಲಿ ಇರುವುದೇ ಹೆಚ್ಚು.

ಇತ್ತೀಚೆಗೆ ನೋಡಿದ ‘ದಿ ಸ್ಟೀಡ್’ ಎನ್ನುವ ಮಂಗೋಲಿಯನ್ ಸಿನಿಮಾವೊಂದು ನನ್ನಲ್ಲೂ ಕುದುರೆಮೋಹವನ್ನು ಹೆಚ್ಚಿಸಿದ್ದು ಸುಳ್ಳಲ್ಲ. 30 ವರ್ಷಗಳ ಹಿಂದೆ ಹೀಗೆಯೇ ಕುದುರೆಯ ಕುರಿತು ಮೋಹ ಹುಟ್ಟಿಸಿದ ಇನ್ನೊಂದು ಸಿನಿಮಾ ‘ಓಮರ್ ಮುಖ್ತಾರ್: ದಿ ಲಯನ್ ಆಫ್ ಡೆಸರ್ಟ್’. ಅದರಲ್ಲಿ ನೂರಾರು ಕುದುರೆಗಳ ಓಟದ ದೃಶ್ಯಗಳು ಈಗಲೂ ಮನದ ಭಿತ್ತಿಯಲ್ಲಿ ಅಚ್ಚೊತ್ತಿ ಕುಳಿತಿದೆ. ಆದರೆ, ಮಂಗೋಲಿಯದ ಸಿನಿಮಾ ‘ದಿ ಸ್ಟೀಡ್’ ಕುದುರೆ ಕುರಿತು ಭಿನ್ನಭಾವಗಳನ್ನು ಕೆದಕಿತು.

ADVERTISEMENT

ಎರ್ಡನ್‍ಬಿಲೆಗ್ ಗ್ಯಾನ್‍ಬೋಲ್ಡ್ ಈ ಚಿತ್ರದ ನಿರ್ದೇಶಕ. 92ನೇ ಅಕಾಡೆಮಿ (ಆಸ್ಕರ್) ಪ್ರಶಸ್ತಿಗೆ ‘ಅಂತರರಾಷ್ಟ್ರೀಯ ಫೀಚರ್ ಫಿಲಂ’ ವಿಭಾಗದಲ್ಲಿ ಈ ಚಿತ್ರ ಎಂಟ್ರಿ ಪಡೆದಿತ್ತು. 2019ರ ಸ್ಯಾಂಡಿಯಾಗೊ ಫಿಲ್ಮ್ ಫೆಸ್ಟಿವಲ್‍ನಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಗೆದ್ದಿತ್ತು. ಇತ್ತೀಚಿನ ಬೆಂಗಳೂರು ಫಿಲ್ಮೋತ್ಸವದಲ್ಲೂ ಪ್ರದರ್ಶನ ಕಂಡಿತು.

ಚುಲೂನ್ ಎಂಬ ಅಲೆಮಾರಿ, ಅನಾಥ ಹುಡುಗ ಮತ್ತು ಆತನ ರಸ್ಟೀ ಎನ್ನುವ ಕುದುರೆಯ ಎಣೆಯಿಲ್ಲದ ಬಾಂಧವ್ಯದ ಕಥೆಯಿದು. 1962ರಲ್ಲಿ ಖಾಮ್‍ಸುರೆನ್ ಎನ್ನುವ ಕವಿಯೊಬ್ಬ ಬರೆದ ಪದ್ಯವೊಂದನ್ನು ಆಧರಿಸಿದ ಚಿತ್ರಕಥೆ. ಈ ಪದ್ಯದ ಮೂಲ ಮಂಗೋಲಿಯದಲ್ಲಿ ಚೆಂಗೇಸ್‍ಖಾನ್ ಕಾಲದಿಂದಲೂ ಜಾನಪದವಾಗಿ ಜನಪ್ರಿಯಗೊಂಡ ಕಥೆ. ವಂಚಕ ಮಂತ್ರವಾದಿಯೊಬ್ಬನ ಕುಟಿಲತೆಯಿಂದ ಬಾಲಕನ ಕೈ ತಪ್ಪಿದ ಕುದುರೆಯು, ಕುಡುಕ ರೈತರು, ಜಮೀನ್ದಾರರು, ದರೋಡೆಕೋರರು ಮತ್ತು ಬಂದೂಕುಧಾರಿ ರಷ್ಯನ್ ಸೈನಿಕರ ಕೈ ಸೇರಿ ದೇಶಾಂತರ ಹೊರಡುತ್ತದೆ. ಆದರೆ, ಗುಂಡೇಟು ತಿನ್ನುವುದರ ಸಹಿತ ಎಲ್ಲ ಕಂಟಕಗಳನ್ನೂ ದಾಟಿದ ರಸ್ಟೀ ಮತ್ತೆ ಚುಲೂನ್ ಬಳಿಗೆ ವಾಪಾಸಾಗುವುದು ಚಿತ್ರದ ಕಥೆ. ಕುದುರೆಗಳಿಗೆ ತಾನು ಹುಟ್ಟಿದ ನೆಲದ ವಾಸನೆ ಗೊತ್ತಾಗುತ್ತದಂತೆ. ಅದು ಭೂಲೋಕದಲ್ಲಿ ಎಷ್ಟೇ ದೂರ ಸಂಚರಿಸಿದರೂ ಮರಳಿ ಅದೇ ಜನ್ಮಭೂಮಿಗೆ ಬಂದು ತಲುಪುತ್ತದಂತೆ. ಹಾಗೆಂದು ಪ್ರತಿಯೊಬ್ಬ ಮಂಗೋಲಿಯನ್ ನಂಬುತ್ತಾನೆ.

ಕುದುರೆಯ ಕರಪುಟಕ್ಕೆ ಹುಚ್ಚೇಳುವ ಲಕ್ಷಾಂತರ ಜನ ಭಾರತದ ರೇಸ್‍ಕೋರ್ಸ್‌ಗಳಲ್ಲಿ ಕಾಣಸಿಗುತ್ತಾರೆ. ಸಾವು-ಬದುಕಿನ ಪಂದ್ಯವೆಂಬಂತೆ ರೇಸ್‍ಗಳಲ್ಲಿ ಹಣ ಕಟ್ಟುವವರಿದ್ದಾರೆ. ಆದರೆ, ನಮ್ಮ ಜನಜೀವನದಲ್ಲಿ ಕುದುರೆ ಅಷ್ಟು ಹಾಸುಹೊಕ್ಕಾದಂತೆ ಕಾಣುವುದಿಲ್ಲ. ಕುದುರೆಯನ್ನೇ ಮುಖ್ಯಪಾತ್ರವಾಗಿಸಿದ ಸಿನಿಮಾಗಳೂ ಇಲ್ಲ. ಎರಡು ವರ್ಷಗಳ ಹಿಂದೆ ನೋಡಿದ ‘ಇಂಡಿಯನ್ ಹಾರ್ಸ್’ ಎನ್ನುವ ಹೆಸರಿನ ಕೆನಡಾದ ಸಿನಿಮಾ ಬಾಲ್ಯದಲ್ಲೇ ಹಾಸ್ಟೆಲ್ ಸೇರಿ ಹಿಂಸೆ ಅನುಭವಿಸುವ ವಿದ್ಯಾರ್ಥಿಯೊಬ್ಬನದ್ದು. ಅದಕ್ಕೂ ಕುದುರೆಗೂ ಸಂಬಂಧವಿಲ್ಲ. ನಮ್ಮ ರಾಷ್ಟ್ರಪ್ರಶಸ್ತಿ ವಿಜೇತ ‘ಕಾಡುಕುದುರೆ’ಯ ಹಾಗೆ! ಎಂಬತ್ತರ ದಶಕದಲ್ಲಿ ಸೂಪರ್‌ಸ್ಟಾರ್ ರಾಜೇಶ್ ಖನ್ನಾ ಮತ್ತು ಆನೆಯೊಂದು ನಟಿಸಿದ ‘ಹಾಥಿ ಮೇರೆ ಸಾಥಿ’ ಅತ್ಯಂತ ಜನಪ್ರಿಯಗೊಂಡಿತ್ತು. ಅದು ಬಿಟ್ಟರೆ ‘ಶೋಲೆ’ಯಲ್ಲಿನ ಚಲ್ ಬಸಂತೀ ಎನ್ನುವ ಕುದುರೆಗಾಡಿಯ ದೃಶ್ಯವೇ ನೆನಪಿನಲ್ಲಿ ಉಳಿದಿರುವುದು. ಜೊತೆಗೆ, ಗಬ್ಬರ್ ಸಿಂಗ್‍ನ ಕುದುರೆಯ ಮೇಲಿನ ಓಟ. ‘ಶೋಲೆ’ ಚಿತ್ರದಲ್ಲಿ ಕುದುರೆಯ ಖರಪುಟದ ಧ್ವನಿಗ್ರಹಣಕ್ಕೆಂದು ಮಂಗೇಶ್ ದೇಸಾಯಿ ಕುದುರೆಯನ್ನೇ ರೆಕಾರ್ಡಿಂಗ್ ಸ್ಟುಡಿಯೊಗೆ ಕರೆಸಿದ್ದರಂತೆ!

ನಮ್ಮಲ್ಲಿ ಪ್ರಾಣಿಗಳಿಂದ ಪರೋಪಕಾರಿ ಕೆಲಸಗಳನ್ನು ಮಾಡಿಸುವ ನಾಟಕೀಯ ದೃಶ್ಯಗಳು ಹಲವು ಸಿನಿಮಾಗಳಲ್ಲಿವೆ. ‘ದಿ ಸ್ಟೀಡ್’ ಚಿತ್ರದಲ್ಲೂ ಅಂತಹದ್ದೊಂದು ದುರ್ಬಲ ದೃಶ್ಯವಿದೆ. ಆದರೆ, ಅದರ ಹೊರತಾಗಿಯೂ ಚುಲೂನ್ ಮತ್ತು ರಸ್ಟೀ ನಡುವಣ ಬಾಂಧವ್ಯದ ಅಪರೂಪದ ಚಿತ್ರಣ ಮನಸ್ಸನ್ನು ಆದ್ರವಾಗಿಸುತ್ತದೆ. ಮನುಷ್ಯ ಮತ್ತು ಪ್ರಾಣಿಯ ನಡುವಣ ಬಾಂಧವ್ಯವನ್ನು ಪರಿಣಾಮಕಾರಿಯಾಗಿ ಪ್ರತಿಬಿಂಬಿಸುವ ಸಿನಿಮಾಗಳು ಕಡಿಮೆಯೇ. ಕುದುರೆ ಬಿಡಿ; ನಾವು ತುಂಬ ಕಕ್ಕುಲಾತಿಯಿಂದ ಸಾಕುವ ಹಸುವಿನ ಜೊತೆಗಿನ ಬಾಂಧವ್ಯದ ಬಗ್ಗೆಯೂ ಸಿನಿಮಾಗಳು ಬಂದಿಲ್ಲ. ‘ದಿ ಸ್ಟೀಡ್’ ನೋಡಿದಾಗ, ಗೋವು ಮತ್ತು ಮನುಷ್ಯನ ಬಾಂಧವ್ಯದ ಕುರಿತು (ಮೆಲೊಡ್ರಾಮಾಗಳಿಲ್ಲದ) ಒಂದು ಸಿನಿಮಾ ಬಂದರೆ ಎಷ್ಟು ಚೆನ್ನಾಗಿತ್ತು ಎಂದನ್ನಿಸಿದ್ದು ಸುಳ್ಳಲ್ಲ. ಕನ್ನಡದ ರಾಷ್ಟ್ರ ಪ್ರಶಸ್ತಿ ವಿಜೇತ ‘ಒಂದಲ್ಲಾ ಎರಡಲ್ಲಾ’ ಸಿನಿಮಾವನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.