ADVERTISEMENT

ಹಚ್ಚೆಗಾಗಿ ಹಚ್ಚೆ...

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 20:00 IST
Last Updated 7 ಜನವರಿ 2019, 20:00 IST
ಟೋಕಿಯೊದ ಉದ್ಯಾನದಲ್ಲಿ ಹಚ್ಚೆ ಪ್ರದರ್ಶನ ಮಾಡುತ್ತಿರುವ ರೂಪದರ್ಶಿ ಯೂಕಿ
ಟೋಕಿಯೊದ ಉದ್ಯಾನದಲ್ಲಿ ಹಚ್ಚೆ ಪ್ರದರ್ಶನ ಮಾಡುತ್ತಿರುವ ರೂಪದರ್ಶಿ ಯೂಕಿ   

ಜಪಾನ್‌ನ ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರ ವಿಚಿತ್ರವಾಗಿ ಹಚ್ಚೆ ಹಾಕಿಸಿಕೊಂಡವರು ದಿನವಿಡೀ ಸುಮ್ಮನೆ ಕಾಣಸಿಗುತ್ತಾರೆ. ಮಾತಿಲ್ಲ ಕತೆಯಿಲ್ಲ. ಪ್ರದರ್ಶನವೋ, ಪ್ರತಿಭಟನೆಯೋ ಎಂದು ಹೊಸಬರಿಗೆ ಅರಿಯದ ಗೊಂದಲ. ಅವರನ್ನು ಮಾತಿಗೆಳೆದವರಿಗೆ ದೇಶದಲ್ಲಿ ನಡೆಯುತ್ತಿರುವ ಮೌನ ಕ್ರಾಂತಿಯೊಂದು ತೆರೆದುಕೊಳ್ಳುತ್ತದೆ!

ಹೌದು, ಜಪಾನ್‌ನ ನೂರಾರು ಸ್ಥಳಗಳಲ್ಲಿ ಇಂತಹ ‘ಹಚ್ಚೆ ಮೂರ್ತಿ’ಗಳು ಎದುರಾಗುತ್ತಾರೆ.ವ್ಯಾಯಾಮ ಶಾಲೆ, ಉದ್ಯಾನ, ಹೋಟೆಲ್‌, ಸಾರ್ವಜನಿಕ ಈಜುವ ಕೊಳ ಮತ್ತು ಸ್ನಾನದ ಕೊಠಡಿಯಂತಹ ಸಾರ್ವಜನಿಕ ಸೌಕರ್ಯಗಳ ಕೇಂದ್ರಗಳಲ್ಲಿ ಅವರು ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.ಇದೇಕೆ ಅಂತೀರಾ?

ಹಚ್ಚೆಯಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾದೀತು, ಅಪರಾಧ ಜಗತ್ತು ಹಚ್ಚೆಯನ್ನು ಸಂಕೇತವಾಗಿ ಬಳಸೀತು ಮತ್ತು ಈ ಮೂಲಕ 2020ರ ಒಲಿಂಪಿಕ್ಸ್‌ ಕ್ರೀಡಾಕೂಟದ ಭದ್ರತೆಗೆ ಆಪತ್ತು ಉಂಟಾದೀತು ಎಂಬ ಕಾರಣದಿಂದ ಸಾರ್ವಜನಿಕ ಸ್ಥಳಗಳಲ್ಲಿ ಹಚ್ಚೆ ಪ್ರದರ್ಶನವಾಗದಂತೆ ,ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಸಾರ್ವಜನಿಕ ಸೌಕರ್ಯಗಳಿರುವ ಕೇಂದ್ರಗಳಲ್ಲಿ ಹಚ್ಚೆಪ್ರಿಯರಿಗೆ ಪ್ರವೇಶ ನಿರಾಕರಿಸುತ್ತಿರುವುದೂ ಇದೇ ಉದ್ದೇಶದಿಂದ.

ADVERTISEMENT

ಆದರೆ ಹಚ್ಚೆಪ್ರಿಯರು ಮತ್ತು ಹಚ್ಚೆ ಉದ್ಯಮ ಇದನ್ನು ಸುತರಾಂ ಒಪ್ಪಿಕೊಳ್ಳುತ್ತಿಲ್ಲ.ಮೈ ತುಂಬಾ ಹಚ್ಚೆ ಹಚ್ಚಿಸಿಕೊಂಡವರು ಮತ್ತು ಹೊಸದಾಗಿ ಹಚ್ಚೆ ಹಾಕಿಸಿಕೊಂಡವರುಹಚ್ಚೆಯ ಉಳಿವಿಗಾಗಿ ಬೀದಿಗಿಳಿಯುತ್ತಿದ್ದಾರೆ. ದೇಶದ ಹೆಸರಾಂತ ರೂಪದರ್ಶಿಯರು, ಹಚ್ಚೆ ಕಲಾವಿದರು, ನಟರು, ಹಚ್ಚೆ ಕಲಾವಿದರು ಹಚ್ಚೆ ತುಂಬಿದ ನಗ್ನ ದೇಹವನ್ನು ಉದ್ಯಾನಗಳಲ್ಲಿ ಪ್ರದರ್ಶಿಸತೊಡಗಿದ್ದಾರೆ.ಟೂ ಪೀಸ್ ಉಡುಗೆಯಲ್ಲಿ ದಿನವಿಡೀ ನಿಲ್ಲಲೂ ಹಿಂದೇಟು ಹಾಕುತ್ತಿಲ್ಲ ಅವರು.

ದೇಶದ ಸಂಸ್ಕೃತಿ, ಆಚಾರ ವಿಚಾರಗಳೊಂದಿಗೆ ಅವಿನಾಭಾವ ನಂಟು ಹೊಂದಿರುವ ಹಚ್ಚೆಯನ್ನು ನಿಷೇಧಿಸುವುದು ಕಾನೂನುಬಾಹಿರ ಎಂಬುದು,‘ಸೇವ್‌ ಟಾಟೂಯಿಂಗ್‌ ಇನ್‌ ಜಪಾನ್‌’ ಎಂಬ ಎನ್‌ಜಿಒ ಸದಸ್ಯ ನೊರಿಯುಕಿ ಕಸ್ಟುಟ ವಾದ. ಅವರು ತಮ್ಮ ದೇಹಪೂರ್ತಿ ಹಚ್ಚೆ ವಿನ್ಯಾಸ ಮಾಡಿಸಿಕೊಂಡು ಮಾಧ್ಯಮಗಳಿಗೆ ಈ ಫೋಟೊ ಹಂಚಿಕೊಂಡಿದ್ದರು.

‘ಜಪಾನ್‌ನ ಹಚ್ಚೆ ಪ್ರೀತಿಗೆ ಇತಿಹಾಸವೇ ಇದೆ. 1800ರ ಹೊತ್ತಿಗೆ, ಬಾಹ್ಯ ಪ್ರಪಂಚದೊಂದಿಗೆ ಜಪಾನ್‌ ಬೆರೆಯಲಾರಂಭಿಸಿದ ಮೇಲಷ್ಟೇ ಹಚ್ಚೆಯನ್ನು ನಿಷೇಧಿಸಲಾಯಿತು. ವಿಶೇಷವಾಗಿ, ಹಾವು ಮತ್ತು ಸರೀಸೃಪಗಳ ಚಿತ್ತಾರವಿರುವ ದೊಡ್ಡ ದೊಡ್ಡ ಹಚ್ಚೆಗಳನ್ನು ಹಾಕಿಕೊಳ್ಳುವುದು ಅಪರಾಧ ಎಂದು ಹೇಳಲಾಯಿತು. ಅಪರಾಧ ಜಗತ್ತಿಗೂ ಹಚ್ಚೆಗೂ ನಂಟು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಯುರೋಪಿಯನ್ನರ ಪ್ರಭಾವದಿಂದ ಕ್ರಮೇಣ ರಹಸ್ಯವಾಗಿ ಹಚ್ಚೆ ಕಲೆಗೆ ಪ್ರೇರಣೆ ಸಿಗತೊಡಗಿತು. 1948ರಲ್ಲಿ ಅಮೆರಿಕನ್ನರು ಹಚ್ಚೆ ಮೇಲಿನ ನಿಷೇಧವನ್ನು ಸಂಪೂರ್ಣವಾಗಿ ತೆರವುಗೊಳಿಸಿದರು. ಆದರೂ ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಸೌಕರ್ಯಗಳ ಬಳಕೆ ನಿರಾಕರಿಸುವ ಮತ್ತು ಅವಹೇಳನ ಮಾಡುವ ಮೂಲಕಹಚ್ಚೆಪ್ರಿಯರಿಗೆ ತೊಂದರೆ ಕೊಡಲಾಗುತ್ತಿದೆ. ಇದು ಸರಿಯಲ್ಲ’ ಎಂದು ಕಸ್ಟುಟ, ನೀಲಿ ಚಿತ್ರಗಳ ನಟಿಯರಾದ ಮಾನಾ ಇಜುಮಿ ಮತ್ತು ಯೂಕಿ ಅಭಿಪ್ರಾಯ.

ಹಚ್ಚೆ ಉಳಿವಿನ ಹೆಸರಿನಲ್ಲಿ ಜಪಾನ್‌ನ ಯುವಜನರು ಹಚ್ಚೆಗೆ ಮೈವೊಡ್ಡುತ್ತಲೇ ಇದ್ದಾರೆ. ಚರ್ಮದ ಆಳಕ್ಕೆ ಸೂಜಿಯ ಮೂಲಕ ರಾಸಾಯನಿಕ ಶಾಯಿಯಿಂದ ಬಿಡಿಸುವ ಮಷಿನ್‌ಗನ್‌ ಟ್ಯಾಟೂ ಕಲೆಯತ್ತ ಆಕರ್ಷಿತರಾಗುತ್ತಲೇ ಇದ್ದಾರೆ. ಈ ಅಭಿಯಾನದ ಜೊತೆಗೇ, ದೇಹವಿಡಿ ಹಚ್ಚೆ ಹಾಕುವ ‘ಇರುಜೆಮಿ’ ವಿನ್ಯಾಸದ ಟ್ರೆಂಡ್‌ ಅನಿಯಂತ್ರಿತವಾಗಿ ಸಾಗುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.