ಮಂಥರೆಯಾಗಿ ಉಮಾಶ್ರೀ.
ಚಿತ್ರ: ರಾಮಕೃಷ್ಣ ಹೆಗಡೆ ಹೊನ್ನಾವರ
ಸಿನಿಮಾ ಅಥವಾ ನಾಟಕ ರಂಗಭೂಮಿ ಹಾಗೂ ಯಕ್ಷಗಾನ ನಡುವಿನ ಕಲಾವಿದರ ಕೊಡು-ಕೊಳ್ಳುವಿಕೆ ಹೊಸದೇನಲ್ಲ. ವಾಣಿಜ್ಯದ ವಿಚಾರ ಬಿಟ್ಟು ಕಲಾವಿದರು ಚೆನ್ನಾಗಿ ಕಲಿತು ಪಾತ್ರ ನಿರ್ವಹಿಸಿದರೆ ಕಲೆಯ ವಿಸ್ತಾರ ಸಾಧ್ಯ
ಯಕ್ಷಗಾನ ರಂಗಸ್ಥಳವೇ ಹಾಗೆ. ಇಲ್ಲಿ ಪೂರ್ವನಿಗದಿತ ಸ್ಕ್ರಿಪ್ಟ್ ಇರುವುದಿಲ್ಲ, ರೀಟೇಕ್ ಇರುವುದಿಲ್ಲ. ವೃತ್ತಿ ಕಲಾವಿದರಿಗಂತೂ ರಿಹರ್ಸಲ್ ಇಲ್ಲವೇ ಇಲ್ಲ. ಈ ಸ್ಥಿತಿಯಲ್ಲಿ, ರಂಗಭೂಮಿ ಮತ್ತು ಸಿನಿಮಾ ರಂಗಗಳಿಂದ ಬಂದಿರುವ ಹಿರಿಯ ನಟಿ ಉಮಾಶ್ರೀ, ಯಕ್ಷಗಾನದಲ್ಲಿ ಮಂಥರೆಯ ಪಾತ್ರ ನಿರ್ವಹಿಸಿದ್ದಾರೆ ಎಂಬುದು ಬಹುಚರ್ಚಿತ ಸಂಗತಿ - ಈಗಂತೂ ಸಾಮಾಜಿಕ ಮಾಧ್ಯಮಗಳಿವೆ, ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ; ಹೀಗಾಗಿ ತುಸು ಹೆಚ್ಚೇ ಎನ್ನಿಸುವಷ್ಟು!
ನಾಟಕ ಅಥವಾ ಸಿನಿಮಾದಂತೆ ಪೂರ್ವನಿಗದಿತ ಸ್ಕ್ರಿಪ್ಟ್ ಅಥವಾ 'ಡೈಲಾಗ್ ಡೆಲಿವರಿ' ಇಲ್ಲಿಲ್ಲ; ಕುಣಿತ, ಬಿಡ್ತಿಗೆ-ಮುಕ್ತಾಯದ ಅಂಗೋಪಾಂಗಗಳು, ವೇಷಭೂಷಣ, ರಂಗ ನಡೆಗಳು, ಪ್ರತ್ಯುತ್ಪನ್ನಮತಿ - ಇವೆಲ್ಲವನ್ನೂ ಯಕ್ಷಗಾನವು ಬೇಡುತ್ತದೆ. ಪದ್ಯ-ಸಾಹಿತ್ಯದಲ್ಲೇ ಇರುವ ಕಥೆಯನ್ನು ಕಲಾವಿದರು ತಮ್ಮ ವಾಕ್ಚಾತುರ್ಯ, ಜ್ಞಾನ-ಅನುಭವಗಳನ್ನೆಲ್ಲ ಪೋಣಿಸಿ ಸುಂದರವಾಗಿ ವಿಸ್ತರಿಸುತ್ತಾರೆ. ಇದೆಲ್ಲ ಒಂದೆರಡು ದಿನದಲ್ಲಿ ಕರಗತವಾಗುವ ವಸ್ತುವಲ್ಲ. ಯಕ್ಷಗಾನವೊಂದರಲ್ಲಿ ಪಾತ್ರ ಮಾಡಬೇಕಿದ್ದರೆ ಸತತ ಅಭ್ಯಾಸ-ಪರಿಶ್ರಮ ಬೇಕು. ಇದು ಅನ್ಯಕಲೆಗಳಂತಲ್ಲ, ಕನ್ನಡೇತರ ಶಬ್ದ ಬಳಕೆಯಾದರೆ, ಅದೊಂದು ಪ್ರಮಾದ. ಸಿನಿಮಾ-ನಾಟಕಗಳಲ್ಲಿ ಹೀಗಿಲ್ಲ. ಅಂತೆಯೇ, ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದ ಮಂಥರೆಯ ಪಾತ್ರ ನಿರ್ವಹಿಸುವುದು ಸುಲಭವೇನಲ್ಲ. ಹತ್ತಾರು ವರ್ಷ ರಂಗಸ್ಥಳದಲ್ಲಿ ಪಳಗಿದ ಹಾಸ್ಯಗಾರರು ಈ ಪಾತ್ರವನ್ನು ನಿರ್ವಹಿಸುವುದು ವಾಡಿಕೆ. ಇಲ್ಲಿ ಹಾಸ್ಯರಸವೇ ಪ್ರಧಾನವಲ್ಲ. ಇವೆಲ್ಲವನ್ನರಿತೇ ರಂಗಭೂಮಿಯಿಂದ ಬಂದಿರುವ ಉಮಾಶ್ರೀ ವಿನೀತರಾಗಿಯೇ, 'ನನಗಿದು ಹೊಸತು, ಮತ್ತಷ್ಟು ಅಭ್ಯಾಸ ಮಾಡಿಕೊಳ್ಳಬೇಕಿತ್ತು' ಎಂದು ಆಡಿರುವುದು, ಅನ್ಯ ಕಲೆಯೊಂದರ ಬಗೆಗೆ ಅವರಿಗಿರುವ ಗೌರವಕ್ಕೆ ಸಾಕ್ಷಿ.
ಅನ್ಯ ಕಲೆಗಳು, ವಿಶೇಷತಃ ಸಿನಿಮಾದ ಕಥೆ, ಸನ್ನಿವೇಶ, ಹಾಡು, ನೃತ್ಯ... ಇವೆಲ್ಲ ಯಕ್ಷಗಾನದ ರಂಗಸ್ಥಳಕ್ಕೆ ಬಂದಾಗ, ಅಪಚಾರ, ಅಪಸವ್ಯಗಳ ಬಗ್ಗೆ ಧ್ವನಿ ಕೇಳಿಸುತ್ತಲೇ ಇತ್ತು, ಈಗಲೂ ಇದೆ. ಆ ಕಾಲದಲ್ಲಿ ಯಕ್ಷಗಾನ ಮಂಡಳಿಗಳ ಹೆಸರೇ 'ಯಕ್ಷಗಾನ ನಾಟಕ ಮಂಡಳಿ' ಅಥವಾ 'ಯಕ್ಷಗಾನ ನಾಟಕ ಸಭಾ' ಅಂತೆಲ್ಲ ಇದ್ದ ಸಂದರ್ಭದಲ್ಲಿ, ವಾಣಿಜ್ಯ ಉದ್ದೇಶದಿಂದಾಗಿ, ಪೂರ್ವರಂಗದ ಪ್ರಸ್ತುತಿಯ ಬದಲು ಸಿನಿಮಾ ನಟಿಯರನ್ನೋ, ನರ್ತಕರನ್ನೋ ಕರೆಸಿ 'ಡ್ಯಾನ್ಸ್' ಶೋ ಮಾಡಿಸಲಾಗುತ್ತಿತ್ತು ಎಂಬುದನ್ನು ಹಿಂದಿನ ಕೂಡ್ಲು, ಇರಾ ಮೇಳಗಳಲ್ಲಿ ದುಡಿದಿದ್ದ ಕಲಾವಿದರು ನೆನಪಿಸಿಕೊಳ್ಳುತ್ತಾರೆ.
ಹೆಜ್ಜೆಗಾರಿಕೆಯನ್ನು ಕಲಿತು ಯಕ್ಷಗಾನದ ರಂಗಸ್ಥಳವೇರಿದಾಗ ಎಂದಿಗೂ ಆಕ್ಷೇಪ ವ್ಯಕ್ತವಾದದ್ದಿಲ್ಲ. ಆದರೆ ಸರಿಯಾಗಿ ಅರಿಯದವರು ನಿಗದಿತ ಮೇಳವೊಂದಕ್ಕೆ ಅತಿಥಿ ಕಲಾವಿದರಾಗಿ ಬರುವುದರಿಂದ ವ್ಯವಸಾಯಿ ಮೇಳದ ವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬುದು ದಿಟ. ಅದು ಯಕ್ಷಗಾನದ್ದೇ ಕಲಾವಿದರಾಗಿರಲಿ, ಅನ್ಯ ಕಲಾವಿದರೇ ಆಗಿರಲಿ; ಅವರಿಗೆ ನೀಡುವ ಪ್ರಾಧಾನ್ಯತೆ ಬಗೆಗೆ, ಹತ್ತಾರು ವರ್ಷಗಳಿಂದ ಸಿದ್ಧಿ-ಪ್ರಸಿದ್ಧಿ ಪಡೆದಿರುವ ಮೇಳದ ಕಲಾವಿದರಲ್ಲಿ ಒಂದಿಷ್ಟು ಅಸಮಾಧಾನ ಸಹಜವಾಗಿ ಇರುತ್ತದೆ.
ಮಂಥರೆಯಾಗಿ ಉಮಾಶ್ರೀ. ಕೈಕೇಯಿ ಪಾತ್ರದಲ್ಲಿ ಸುಬ್ರಹ್ಮಣ್ಯ ಯಲಗುಪ್ಪ.
ರಂಗಸ್ಥಳದಿಂದ ರಂಗುರಂಗಿನ ಸ್ಥಳಕ್ಕೆ...
ಈ ಚಲನಚಿತ್ರ - ರಂಗಭೂಮಿ - ಯಕ್ಷಗಾನ ರಂಗಗಳ ನಡುವೆ ಕಲಾವಿದರ ಬಂದು-ಹೋಗುವಿಕೆ ಹೊಸದೇನಲ್ಲ. ಹಿಂದಿನ ತಲೆಮಾರಿನಲ್ಲೇ 'ಕೋಟಿ ಚೆನ್ನಯ' ತುಳು ಚಲನಚಿತ್ರದಲ್ಲಿ ಚೆಂಡಾಟದ ದೃಶ್ಯದಲ್ಲಿ ಎಂ.ಟಿ.ಎಸ್. ಕುಲಾಲ್ ಮತ್ತು ಇತರ ಯಕ್ಷಗಾನ ಕಲಾವಿದರು ಕಾಣಿಸಿಕೊಂಡಿದ್ದರು. 'ರಾತ್ರೆ ಪಗೆಲ್' ತುಳು ಚಲನಚಿತ್ರದಲ್ಲಿ ಯಕ್ಷಗಾನದ ದೃಶ್ಯವನ್ನೇ ಆಳವಡಿಸಲಾಗಿತ್ತು. ಅದರಲ್ಲಿನ ದ್ರೌಪದೀ ಪ್ರತಾಪ ಸನ್ನಿವೇಶದಲ್ಲಿ ಅರುವ ಕೊರಗಪ್ಪ ಶೆಟ್ಟಿ, ಸಂಜಯ್ ಕುಮಾರ್ ಗೋಣಿಬೀಡು ಇದ್ದರು. ಇನ್ನು 'ಮಿಂಚಿನ ಓಟ' ಚಿತ್ರದಲ್ಲಿ ಭಾಗವತರಾದ ಲೀಲಾವತಿ ಬೈಪಾಡಿತ್ತಾಯ, ಅಂತೆಯೇ, ಪರಮಾತ್ಮ, ರಂಗಿತರಂಗ, ಬಣ್ಣಬಣ್ಣದ ಬದುಕು, ಪಿಲಿಬೈಲ್ ಯಮುನಕ್ಕೆ, ಧರ್ಮ ದೈವ ಮೊದಲಾದ ಚಲನಚಿತ್ರಗಳಲ್ಲಿ ಪಟ್ಲ ಸತೀಶ್ ಶೆಟ್ಟರು ಹಾಡಿ ತಮ್ಮ ಕಂಠ ಸಿರಿಯನ್ನು ವಿಸ್ತರಿಸಿದ್ದರು.
ಯಕ್ಷಗಾನ ಕಲಾವಿದರನ್ನೇ ಉಲ್ಲೇಖಿಸುವುದಾದರೆ, ದಿ.ಕೆರೆಮನೆ ಶಂಭು ಹೆಗಡೆ 'ಪರ್ವ' ಚಿತ್ರದಲ್ಲಿ ವಿಷ್ಣುವರ್ಧನ್ ಜೊತೆ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ದಿ.ಡಿ.ಜಿ.ಹೆಗಡೆ ಅವರು 'ಗುಡ್ಡೆದ ಭೂತ' ಮತ್ತಿತರ ಧಾರಾವಾಹಿಗಳಲ್ಲಿ, ದಿ.ಬಂಟ್ವಾಳ ಜಯರಾಮ ಆಚಾರ್ಯರು 'ಮದಿಮೆ' ತುಳು ಚಲನಚಿತ್ರದಲ್ಲಿ ನಟಿಸಿದ್ದರು. ಉಳಿದಂತೆ, ಚೆಂಡೆವಾದಕ ಕೋಟ ಶಿವಾನಂದರು ಮುಗುಳು ನಗೆ, ಕಾಂತಾರ, ವೈಶಂಪಾಯನ ತೀರ, ಶುಭವಿವಾಹ ಮುಂತಾಗಿ ಬೆಳ್ಳಿ ತೆರೆ, ಕಿರುತೆರೆಯ ಹಲವಾರು ಚಿತ್ರ, ಧಾರಾವಾಹಿಗಳಲ್ಲಿ; ಮಹಾಬಲೇಶ್ವರ ಭಟ್ ಕ್ಯಾದಗಿ 'ವಠಾರ' ಧಾರಾವಾಹಿಯಲ್ಲಿ, ಕಾರ್ತಿಕ್ ಕೊರ್ಡೇಲ್ 'ರಂಗಿ ತರಂಗ', ರವೀಶ್ ಹೆಗಡೆ 'ವೈಶಂಪಾಯನ ತೀರ', ರಾಧಾಕೃಷ್ಣ ಉರಾಳ 'ಅಮ್ಮಚ್ಚಿ ನೆನಪು' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂತೆಯೇ, ಸೀತಾರಾಮ್ ಕುಮಾರ್ ಕಟೀಲು, ನಾಗಶ್ರೀ ಜಿ.ಎಸ್., ಪಲ್ಲವಿ ಮತ್ತಿಗಟ್ಟ, ಪ್ರಸಾದ್ ಚೇರ್ಕಾಡಿ, ದಿವ್ಯಶ್ರೀ ನಾಯಕ್, ವಿಶ್ವನಾಥ ಉರಾಳ್, ಶ್ರಾವ್ಯಾ ಆಚಾರ್ಯ... ಇನ್ನೂ ಹಲವು ಯಕ್ಷಗಾನ ಕಲಾವಿದರು ಕಿರುತೆರೆ-ಬೆಳ್ಳಿತೆರೆಗಳಲ್ಲಿ ನಟಿಸಿದ್ದಾರೆ, ನಟಿಸುತ್ತಿದ್ದಾರೆ. ರವಿ ಬಸ್ರೂರು ನಿರ್ದೇಶನದ 'ವೀರ ಚಂದ್ರಹಾಸ' ಎಂಬ ಯಕ್ಷಗಾನವೇ ಜೀವಾಳವಾಗಿರುವ ಚಲನಚಿತ್ರದಲ್ಲಿ, ಹಲವಾರು ಯಕ್ಷಗಾನ ಕಲಾವಿದರಿದ್ದಾರೆ. ಹಿರಿಯ ನಟ ಶಿವರಾಜ್ ಕುಮಾರ್ ಅವರೂ ಯಕ್ಷಗಾನದ ವೇಷದಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ.
ಮಂಥರೆಯಾಗಿ ಉಮಾಶ್ರೀ. ಕೈಕೇಯಿ ಪಾತ್ರದಲ್ಲಿ ಸುಬ್ರಹ್ಮಣ್ಯ ಯಲಗುಪ್ಪ
ರಂಗಭೂಮಿಯಿಂದ ಯಕ್ಷಗಾನಕ್ಕೆ
ಈ ವಲಸೆಗೆ ಹೋಲಿಸಿದರೆ, ನಾಟಕ ಇಲ್ಲವೇ ಸಿನಿಮಾ ರಂಗಭೂಮಿಯಿಂದ ಯಕ್ಷಗಾನದ ಕಡೆಗೆ ಬಂದ ಕಲಾವಿದರ ಸಂಖ್ಯೆ ಬೆರಳೆಣಿಕೆಯಷ್ಟು ಎನ್ನಬಹುದು. ನೀರ್ನಳ್ಳಿ ರಾಮಕೃಷ್ಣ ಅವರು ಎರಡೂ ಕಡೆ ವ್ಯವಸಾಯ ಮಾಡಿದ್ದರೆ, ಹಾಸ್ಯನಟ ಟೆನಿಸ್ ಕೃಷ್ಣ ಪೆರ್ಡೂರು ಮೇಳದ ರಂಗಸ್ಥಳದಲ್ಲಿ ಹಾಸ್ಯಪಾತ್ರವನ್ನೇ ನಿಭಾಯಿಸಿ ಹೋಗಿದ್ದಾರೆ. ದಶಕಗಳ ಹಿಂದೆ ನಯನಕುಮಾರ್ ಅವರು ಗುಬ್ಬಿ ವೀರಣ್ಣ ನಾಟಕ ಕಂಪನಿ ಬಿಟ್ಟು, ಪೂರ್ಣಪ್ರಮಾಣದ ಹಾಸ್ಯಗಾರರಾಗಿ ಯಕ್ಷಗಾನ ರಂಗದಲ್ಲಿ ಮೆರೆದಿದ್ದಾರೆ. ಸುಬ್ರಹ್ಮಣ್ಯ ಧಾರೇಶ್ವರರು ನಾಟಕ ರಂಗದಲ್ಲೂ ಕೃಷಿ ಮಾಡಿ, ಯಕ್ಷಗಾನ ರಂಗದಲ್ಲಿ ಮೆರೆದವರು. 1981-82ರ ಅವಧಿಯಲ್ಲಿ ನಾಟಕ ರಂಗದಲ್ಲಿದ್ದ ಭೀಮರಾಯ ಹೆಗಡೆ ಎಂಬವರು ಯಕ್ಷಗಾನದತ್ತ ಆಕರ್ಷಿತರಾಗಿ ಅಮೃತೇಶ್ವರಿ ಮೇಳದಲ್ಲಿ ದುಡಿದಿದ್ದರು.
ಸ್ತ್ರೀಪಾತ್ರಧಾರಿ ಸುಬ್ರಹ್ಮಣ್ಯ ಯಲಗುಪ್ಪ ಅವರೊಂದಿಗೆ ಉಮಾಶ್ರೀ
ರಾಜಕಾರಣಿಗಳೂ ವೇಷ ಕಟ್ಟಿ ಕುಣಿಯುವ ಪ್ರಯತ್ನ ಮಾಡಿದ್ದಿದೆ. ಸಚಿವೆಯಾಗಿದ್ದ ಉಮಾಶ್ರೀ ಅವರು ಈ ಸಾಲಿಗೆ ಈಗಷ್ಟೇ ಸೇರಿಕೊಂಡಿದ್ದಾರೆ. 2003ರಲ್ಲಿ ಕೇಂದ್ರದ ಮಾಜಿ ಸಚಿವರಾದ ಎಂ.ವೀರಪ್ಪ ಮೊಯಿಲಿ ಹಾಗೂ ಆಸ್ಕರ್ ಫರ್ನಾಂಡಿಸ್ ಅಭ್ಯಾಸ ಮಾಡಿಕೊಂಡು, ದೆಹಲಿಯಲ್ಲಿ ಯಕ್ಷಗಾನದ ವೇಷ ಹಚ್ಚಿ ಕುಣಿದಿದ್ದರು. ಮತ್ತೊಂದೆಡೆ, ಯಕ್ಷಗಾನದ ಜನಪ್ರಿಯತೆಯಿಂದಾಗಿಯೇ ಕುಂಬಳೆ ಸುಂದರ ರಾಯರು ಶಾಸಕರಾಗಿ ಆಯ್ಕೆಯಾಗಿದ್ದರು.
ತುಳು ರಂಗಭೂಮಿಗೂ ಯಕ್ಷಗಾನಕ್ಕೂ ಸಹಜವಾದ ನಂಟು. ನಾಟಕ ಕ್ಷೇತ್ರದಲ್ಲಿ ಹೆಸರು ಮಾಡಿರುವ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್, ಅರವಿಂದ ಬೋಳಾರ, ನವೀನ್ ಪಡೀಲ್, ಭೋಜರಾಜ ವಾಮಂಜೂರು ಮುಂತಾದವರು ಯಕ್ಷಗಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇವೆಲ್ಲವನ್ನೂ ಗಮನಿಸಿದರೆ, ಯಕ್ಷಗಾನಕ್ಕೆ ಬಂದವರಲ್ಲಿ ಬಹುತೇಕರು ಹಾಸ್ಯ ಪಾತ್ರಗಳಿಗೇ ಸೀಮಿತರಾಗಿದ್ದುದನ್ನು ಗಮನಿಸಬಹುದು. ಬೇರೆ ಪಾತ್ರಗಳಿಗೆ ಯಕ್ಷಗಾನೀಯ ಕುಣಿತ ಬೇಕೇಬೇಕಾಗುತ್ತದೆ.
ಜನಪದೀಯವಾಗಿ ಹುಟ್ಟಿಕೊಂಡು, ಶಾಸ್ತ್ರೀಯತೆಯನ್ನು ಮೈಗೂಡಿಸಿಕೊಂಡು, ಪರಂಪರೆಯ ಅಲಿಖಿತ ಚೌಕಟ್ಟನ್ನು ಹೊದೆಸಿಕೊಂಡ ಯಕ್ಷಗಾನ ರಂಗವು ವಾಣಿಜ್ಯೀಕರಣಗೊಳ್ಳುವ ಹಂತದಲ್ಲಿ ಹಲವಾರು ಪ್ರಯೋಗಗಳಿಗೆ ಈಗಾಗಲೇ ಒಡ್ಡಿಕೊಂಡಿದೆ. ಆದರೂ ಯಕ್ಷಗಾನವಿಂದು ಯಾರ-ಯಾವ ಹೊಡೆತಕ್ಕೂ ಸಿಲುಕದಂತೆ ತಲೆಯೆತ್ತಿ ನಿಂತಿದೆ; ಪುರಾತನವಾದರೂ ಅತಿ ಶ್ರೀಮಂತ ಕಲೆಯಾಗಿ ಬೆಳೆದು ನಿಂತಿದೆ. ಇದಕ್ಕೆ ಕಾರಣ ಯಕ್ಷಗಾನೀಯ ಚೌಕಟ್ಟಿನೊಳಗೆ ಆಗುತ್ತಿರುವ ಬೆಳವಣಿಗೆಗೆ ಒಡ್ಡಿಕೊಳ್ಳುತ್ತಿರುವ ನಿಷ್ಠಾವಂತ ಕಲಾವಿದರ ಶ್ರದ್ಧೆ ಮತ್ತು ಒಳಿತನ್ನು ಸ್ವೀಕರಿಸುವ, ಕೆಟ್ಟದ್ದನ್ನು ಅಲ್ಲಲ್ಲಿಂದಲೇ ನಿವಾರಿಸಿಕೊಳ್ಳುವ ಯಕ್ಷಗಾನ ಕಲೆಯ ಶಕ್ತಿ.
ಮಂಥರೆಯಾಗಿ ಉಮಾಶ್ರೀ. ಕೈಕೇಯಿ ಪಾತ್ರದಲ್ಲಿ ಸುಬ್ರಹ್ಮಣ್ಯ ಯಲಗುಪ್ಪ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.