ADVERTISEMENT

ದಶಾವತಾರಿಯ ತಿರುಗಾಟಗಳು: ಸೂರಿಕುಮೇರು ಕೆ. ಗೋವಿಂದ ಭಟ್ಟರು

ಸೂರಿಕುಮೇರು ಕೆ. ಗೋವಿಂದ ಭಟ್ಟರ ‘ಎಪ್ಪತ್ತು ತಿರುಗಾಟಗಳು’ ಕೃತಿ ನವೆಂಬರ್ 25 ರಂದು ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 21:45 IST
Last Updated 20 ನವೆಂಬರ್ 2021, 21:45 IST
ಸೂರಿಕುಮೇರು ಕೆ. ಗೋವಿಂದ ಭಟ್ಟರು
ಸೂರಿಕುಮೇರು ಕೆ. ಗೋವಿಂದ ಭಟ್ಟರು   

ಸೂರಿಕುಮೇರು ಕೆ. ಗೋವಿಂದ ಭಟ್ಟರ ‘ಎಪ್ಪತ್ತು ತಿರುಗಾಟಗಳು’ ಕೃತಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಕಾಶನದ ಮೂಲಕ ಇದೇ 25ರಂದು ಲೋಕಾರ್ಪಣೆಗೊಳ್ಳಲಿದೆ. 1951ರಿಂದ 2020ರವರೆಗಿನ ಯಕ್ಷಗಾನ ಚರಿತ್ರೆ, ಆ ಕಾಲದ ಕಲಾವಿದರ ಬದುಕು ಜೊತೆಗೆ ಕರಾವಳಿ ಜಿಲ್ಲೆಯ ಸಾಂಸ್ಕೃತಿಕ ಲೋಕವೇ ಇಲ್ಲಿ ತೆರೆದುಕೊಂಡಿದೆ.

***

ತೆಂಕುತಿಟ್ಟು ಯಕ್ಷಗಾನದ ‘ದಶಾವತಾರಿ’ ಎಂದೇ ಪ್ರಸಿದ್ಧವಾಗಿರುವ ಸೂರಿಕುಮೇರು ಕೆ. ಗೋವಿಂದ ಭಟ್ಟರು ತೆಂಕುತಿಟ್ಟು ಯಕ್ಷಗಾನಕ್ಕೆ ಎರಡನೇ ರಾಷ್ಟ್ರಪ್ರಶಸ್ತಿ ತಂದು ಕೊಟ್ಟವರು. ಅವರು ಯಕ್ಷರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿ ದಾಖಲೆಯ ಎಪ್ಪತ್ತು ವರ್ಷಗಳ ಕಾಲ ತಿರುಗಾಟದಲ್ಲಿ ಬದುಕನ್ನು ಸವೆಸಿದವರು. ಧರ್ಮಸ್ಥಳ ಒಂದೇ ಮೇಳದಲ್ಲಿ 54 ವರ್ಷಗಳ ಕಾಲ ದುಡಿದವರು.

ADVERTISEMENT

ತಮ್ಮ ಯಕ್ಷತಿರುಗಾಟದ ಅನುಭವ ಕಥನವನ್ನು ‘ಎಪ್ಪತ್ತು ತಿರುಗಾಟಗಳು’ ಎಂಬ ಕೃತಿಯಲ್ಲಿ ಅವರು ನಿರೂಪಿಸಿದ್ದಾರೆ. ಮಂಜಾದ ಕಣ್ಣು, ನಡುಗುತ್ತಿರುವ ಕೈಬೆರಳುಗಳು, ವಯೋಸಹಜ ಮರೆವು, ಹೆಚ್ಚು ಹೊತ್ತು ಕುಳಿತುಕೊಳ್ಳಲು ಶಕ್ತರಾಗದಿದ್ದರೂ ಎಲ್ಲವನ್ನೂ ಮೀರಿ ಎಂಬತ್ತರ ಇಳಿಹರೆಯದಲ್ಲೂ ಈ ಪುಸ್ತಕವನ್ನು ಅವರು ಬರೆದು ಮುಗಿಸಿದ್ದಾರೆ. ಅವರ ಯಕ್ಷಪ್ರವೇಶದ ಅನುಭವ ಅವರದೇ ಮಾತಿನಲ್ಲಿ...

ಅನ್ನವನ್ನರಸುತ್ತಾ....

ಹಿಂದಿನಿಂದಲೂ ಕೇಳಿಕೊಂಡು ಬಂದ ಮಾತಿದು - ‘ಹಡಗು ತುಂಬಿಸಲು ಹೋದವನು ಮರಳಿ ಬಂದಿದ್ದಾನೆ. ಆದರೆ ಹೊಟ್ಟೆ ಹೊರೆಯಲು ಹೋದವನು ಇನ್ನೂ ಬಂದಿಲ್ಲ’. ಹೌದಲ್ಲವೆ? ಮನುಷ್ಯನಿಗೆ ಹೊಟ್ಟೆ ಒಂದು ಇರದೇ ಇರುತ್ತಿದ್ದರೆ ಆತ ಏನೂ ಮಾಡುತ್ತಿರಲಿಲ್ಲ್ವೇನೋ...? ಹೊಟ್ಟೆ-ಬಟ್ಟೆಗಾಗಿ ಮನುಷ್ಯ ನಿರಂತರ ಹುಡುಕಾಟದಲ್ಲಿ, ಹೋರಾಟದಲ್ಲಿ ಇರುತ್ತಾನೆ. ಅದಕ್ಕಾಗಿ ಅಲ್ಲವೇ ಕವಿ ಗೋಪಾಲಕೃಷ್ಣ ಅಡಿಗರು ಅಂದದ್ದು ‘ಇಂದು ಬಾಳಿದು ಕೂಳ ಕಾಳಗವು; ಹೊಟ್ಟೆಯೇ ಕೇಂದ್ರವಾಗಿದೆ ನರನ ಜೀವಿತಕ್ಕೆ; ಅನ್ನದನ್ಯಾಯದಾವಾಗ್ನಿಯಲಿ ಕರಗುತಿದೆ ನರತೆ, ಸಂಸ್ಕೃತಿ, ಪ್ರೀತಿ, ದಿವದ ಬಯಕೆ’.

ಮನುಷ್ಯನಿಗೆ ಎಲ್ಲಕ್ಕಿಂತ ಮೊದಲು ಬೇಕಾದದ್ದು ಅನ್ನ. ಹೊಟ್ಟೆ ತುಂಬುವಲ್ಲಿಯವರೆಗೆ ಮನುಷ್ಯ ಪಶು, ಶುದ್ಧ ಪಶುವಾಗಿರುತ್ತಾನೆ. ಹೊಟ್ಟೆ ತುಂಬಿದ ಮೇಲೆ ಅವನಿಗೆ ಎಲ್ಲದರ ಅರಿವಾಗುವುದು. ಅಲ್ಲಿಂದ ಅವನು ಧಾರ್ಮಿಕನಾಗಲು, ನಾಗರಿಕನಾಗಲು, ಧರ್ಮಿಷ್ಠನಾಗಲು, ಒಟ್ಟಿನಲ್ಲಿ ‘ಸುಭಗ’ನಾಗಲು ತೊಡಗುತ್ತಾನೆ. ಇಂದು ನನ್ನನ್ನು ಜನ ‘ಯಕ್ಷ ಕಲಾವಿದ’ನೆಂದು ಗುರುತಿಸುತ್ತಿದ್ದಾರೆ. ಆದರೆ ಕಲೆಯ ಬಗ್ಗೆ ನನಗೆ ಅರಿವು ಮೂಡಿದ್ದೇ ಬಹಳ ತಡವಾಗಿ.

ಊಟಕ್ಕಿಲ್ಲದೇ ಅಲ್ಲಲ್ಲಿ ಅಲೆದಾಡುತ್ತಿದ್ದೆ. ಯಾರ ಕೈ ಒಳ್ಳೆಯದು, ಬಾಯಿ ಒಳ್ಳೆಯದು ಎಂದು ಕುತೂಹಲದಿಂದ ನೋಡುತ್ತಿದ್ದೆ. ಕೊನೆಗೊಮ್ಮೆ ಏನೂ ತೋಚದೆ ಹೊಟ್ಟೆ ಹೊರೆಯುವುದಕ್ಕಾಗಿ ನಾನು ಹೊಟೇಲ್‍ನಲ್ಲಿ ಪ್ಲೇಟ್ ತೊಳೆಯುವ ಕೆಲಸಕ್ಕೆ ಸೇರಿದ್ದೆ. ಆಗ ಯಾವುದೋ ಒಂದು ಕಾರ್ಯಕ್ರಮದಲ್ಲಿ ಸಿಕ್ಕ ಹೊಸಹಿತ್ಲು ಮಹಾಲಿಂಗ ಭಟ್ಟರು, ‘ಯಕ್ಷಗಾನ ಮೇಳದಲ್ಲಿ ನನಗೆ ಒಂದು ತಿರುಗಾಟಕ್ಕೆ 500 ರೂಪಾಯಿ ಕೊಡುತ್ತಾರೆ’ ಎಂದು ಹೇಳಿದ್ದನ್ನು ಕೇಳಿ ಯಕ್ಷಗಾನದ ಕಡೆಗೆ ಹೊರಳಿದವನು ನಾನು.

ದೈಗೋಳಿ ಎಂಬಲ್ಲಿ ಹೊಟೇಲ್ ಕೆಲಸದಲ್ಲಿದ್ದರೂ ಯಾವುದೇ ಸಂಬಳ ಇಲ್ಲದೇ ಇದ್ದ ಕಾರಣಕ್ಕಾಗಿ ನನ್ನ ಮನಸ್ಸು ಸಂಬಳ ಸಿಗುವ ಯಕ್ಷಗಾನದ ಕಡೆಗೆ ವಾಲಿತ್ತು. ಹಾಗಾಗಿ ಧರ್ಮಸ್ಥಳ ಮೇಳವನ್ನು ಸೇರಬೇಕೆಂಬ ಬಯಕೆಯಲ್ಲಿ ಹಿಂದೆ - ಮುಂದೆ ತಿಳಿಯದೆ ಒಂದು ದಿನ ಧರ್ಮಸ್ಥಳಕ್ಕೆ ಹೋಗಿದ್ದೆ. ಅಲ್ಲಿ ನನ್ನ ಸಂಪೂರ್ಣ ಪರಿಚಯವನ್ನು ಕೇಳಿಸಿಕೊಂಡ ಕುರಿಯ ವಿಠಲ ಶಾಸ್ತ್ರಿಗಳು ‘ಈ ವರ್ಷದ ತಿರುಗಾಟ ಹೆಚ್ಚು ಕಡಿಮೆ ಮುಗಿಯಿತು, ಮಳೆಗಾಲದಲ್ಲಿ ಮಿತ್ತನಡ್ಕದಲ್ಲಿ ನಾಟ್ಯ ಹೇಳಿ ಕೊಡುವ ವ್ಯವಸ್ಥೆ ಇದೆ. ನೀನು ಅಲ್ಲಿಗೆ ಬಾ’ ಎಂದು ಹೇಳಿದ್ದರು.

ಮಿತ್ತನಡ್ಕದಲ್ಲಿ ವಿಠಲ ಶಾಸ್ತ್ರಿಗಳು ಆರಂಭಿಸಿದ್ದ ಯಕ್ಷಗಾನ ಶಿಬಿರದಲ್ಲಿ ಪಾಲ್ಗೊಂಡೆ. ಧರ್ಮಸ್ಥಳ ಮೇಳದ ಕೆಲವೊಬ್ಬ ಆಸಕ್ತ ಕಲಾವಿದರೂ ಅಲ್ಲಿಗೆ ನಾಟ್ಯವನ್ನು ಕಲಿಯಲು ಬಂದಿದ್ದರು. ಮಿತ್ತನಡ್ಕದಲ್ಲಿ ನನಗೆ ಯಕ್ಷನಾಟ್ಯದ ಜೊತೆಗೆ ಭರತನಾಟ್ಯ ಶಿಕ್ಷಣವನ್ನು ಪಡೆಯುವ ಅವಕಾಶ ದೊರೆಯಿತು. ತಮಿಳುನಾಡಿನ ಪರಮಶಿವನ್ ಎಂಬವರು ಅಲ್ಲಿಗೆ ಬಂದು ಭರತನಾಟ್ಯವನ್ನು ಕಲಿಸುತ್ತಿದ್ದರು.

ಮೇಳ ಹೊರಡಲು ಒಂದು ತಿಂಗಳ ಮೊದಲೇ ಮಿತ್ತನಡ್ಕದ ಕಲಿಕಾ ಕೇಂದ್ರ ಮುಕ್ತಾಯವಾಯಿತು. ಧರ್ಮಸ್ಥಳ ಮೇಳಕ್ಕೆ ಬರುವವರನ್ನು ಕ್ಷೇತ್ರದ ಲಕ್ಷದೀಪಕ್ಕೆ ಬನ್ನಿರೆಂದು ಹೇಳಿ ಕುರಿಯ ವಿಠಲ ಶಾಸ್ತ್ರಿಗಳು ಕಳುಹಿಸಿದ್ದರು. ಒಂದು ತಿಂಗಳು ಕಾಯಲೇಬೇಕಿತ್ತು. ಇರುವುದೆಲ್ಲಿ? ಊಟಕ್ಕೇನು? ಯೋಚಿಸುತ್ತಾ ಆಢ್ಯರಾದ ಮುಗುಳಿ ರಾಮಭಟ್ಟರಲ್ಲಿಗೆ ಹೋದೆ. ಮಧ್ಯಾಹ್ನದ ಹೊತ್ತಿಗೆ ಹೋದುದರಿಂದ ಊಟವಿತ್ತರು.

ಯಕ್ಷಗಾನ ಕಲಿಕಾ ಶಿಬಿರದಲ್ಲಿ ನನ್ನನ್ನು ಕಂಡವರಾದ್ದರಿಂದ ಉಂಡಾದ ಮೇಲೆ ನೀನೆತ್ತ ಹೋಗುವವನೆಂದು ಕೇಳಿದರು. ಎಲ್ಲಿಗೆ ಹೋಗುವುದೆಂದೇ ನಿರ್ಣಯವಿಲ್ಲದ ನಾನು ಏನೆನ್ನಲಿ? ಮೇಳ ಆರಂಭವಾಗುವವರೆಗೆ ನಿಲ್ಲಲು ಆಸರೆ ದೊರೆತೀತೇನೋ ಎಂದು ಇಲ್ಲಿಗೆ ಬಂದಿದ್ದೇನೆ ಎಂದಾಗ ನನ್ನ ಮುಖ ನೋಡಿದವರು ‘ಇಂದಿಲ್ಲೇ ಇರು, ನೋಡೋಣ’ ಎಂದರು. ಸಾಯಂಕಾಲದ ಹೊತ್ತಿಗೆ ನಾಲ್ಕಾರು ಮಂದಿಗಳು ರಾಮ ಭಟ್ರರಲ್ಲಿಗೆ ಬಂದಿದ್ದರು. ರಾತ್ರಿಯ ಊಟವಾದ ಮೇಲೆ ನನಗೊಂದು ಚಾಪೆ ಕೊಟ್ಟು ಮಲಗಲು ಹೇಳಿದರು. ನಾನು ಯಾವ ಯೋಚನೆಯೂ ಇಲ್ಲದೆ ಬೆಳಗ್ಗಿನ ತನಕ ನಿದ್ರಿಸಿದೆ.

ಬೆಳಗ್ಗೆ ಎದ್ದಾಗ ಸಾಯಂಕಾಲ ಬಂದವರೆಲ್ಲ ಕಾಫಿ ತಿಂಡಿ ಆಗಿ ಹೊರಡುತ್ತಿದ್ದರು. ಕೊನೆಗೆ ಉಳಿದವರು ಮುಗುಳಿ ಪಟೇಲ ರಾಮಭಟ್ಟರು. ಅವರಿಗೆ ನನ್ನನ್ನು ತೋರಿಸಿದ ಮುಗುಳಿ ರಾಮಭಟ್ಟರು ನನ್ನ ವಿಚಾರ ತಿಳಿಸಿ ‘ಇವನು ಯಾರ ಮನೆಯಲ್ಲಾದರೂ ಚಾಕರಿಗೆ ನಿಲ್ಲುತ್ತಾನೆ. ನೀವು ಅತ್ತಿತ್ತ ಹೋಗುವಾಗ ನಿಮ್ಮಲ್ಲಿ ಯಾರೂ ಇಲ್ಲವಲ್ಲ, ಇವನು ನಿಮ್ಮಲ್ಲಿರಲಿ’ ಎಂದರು. ಒಪ್ಪಿದ ಪಟೇಲರು ನನ್ನನ್ನು ಕರೆದುಕೊಂಡು ಅವರ ಮನೆಗೆ ಸೇರಿಸಿದರು.

ಪಟೇಲ ರಾಮಭಟ್ಟರು ಮುಗುಳಿಯ ಅವರ ಸ್ಥಳವನ್ನು ಮಾರಿ ಬಾಳೆಕೋಡಿ ಬಳಿ ಸ್ವಲ್ಪ ಸ್ಥಳ ತೆಗೆದುಕೊಂಡು ಅಲ್ಲೊಂದು ಮುಳಿಹುಲ್ಲಿನ ಮನೆ ಮಾಡಿಕೊಂಡಿದ್ದರು. ಒತ್ತಿಗಿದ್ದ ನಾಲ್ಕೈದು ಎಕ್ರೆ ಭೂಮಿಯನ್ನು ದರ್ಕಾಸು ಮಾಡಿಕೊಂಡು ಅದರಲ್ಲಿ ಹೊಸದಾಗಿ ತೋಟ ಮಾಡಿದ್ದರು. ಗಂಡ ಹೆಂಡಿರಿಬ್ಬರೆ. ಮಕ್ಕಳಿರಲಿಲ್ಲ. ತೋಟಕ್ಕೆ ಬರುವ ದನಗಳನ್ನು ಓಡಿಸಲು ಜನ ಬೇಕಿತ್ತು. ನನಗೆ ಆ ಕೆಲಸ. ಬೆಳಗ್ಗಿನಿಂದ ಸಂಜೆಯ ತನಕ ಅವರ ತೋಟಕ್ಕೆ ಜಾನುವಾರು ನುಗ್ಗದಂತೆ ನೋಡಿಕೊಳ್ಳುತ್ತಿದ್ದೆ.

ಆಗಾಗ ತೋಟದಲ್ಲಿಯೇ ಕುಣಿಯುತ್ತ, ಪದ್ಯ ಹೇಳುತ್ತ ಓಡಾಡುತ್ತಿದ್ದ ನನ್ನನ್ನು ನೋಡಿದವರು ‘ಮಾಣಿಗೆ ಮರುಳು’ ಎನ್ನುತ್ತಿದ್ದರು. ಊಟ ತಿಂಡಿಗೆ ಏನೂ ಕೊರತೆಯಾಗಲಿಲ್ಲ. ನಾನು ಅಲ್ಲಿದ್ದುದು ಇಪ್ಪತ್ತೆಂಟು ದಿನಗಳು. ಈ ಅವಧಿಯಲ್ಲಿ ಮನೆಯ ಯಜಮಾನ ರಾಮಭಟ್ಟರು ಮನೆಯಲ್ಲಿದ್ದುದು ನಾಲ್ಕೈದು ದಿನಗಳು ಮಾತ್ರ. ಎಲ್ಲಿ ಹೋಗುತ್ತಾರೆ, ಏನು ಮಾಡುತ್ತಾರೆಂದು ಅವರ ಹೆಂಡತಿಗೂ ಗೊತ್ತಿರಲಿಲ್ಲವೇನೋ. ಅವರ ಮನೆಯ ಬಳಿಯಿದ್ದ ಭೂತ ಕಟ್ಟುವವನ ಪರಿಚಯವಾಯಿತು. ನನ್ನಷ್ಟಕ್ಕೆ ಬಾಯಿತಾಳ ಹೇಳುತ್ತಾ ತೋಟಕ್ಕೆ ಬರುವ ದನಗಳನ್ನು ಓಡಿಸುತ್ತಿದ್ದ ನನ್ನನ್ನು ಮಾತನಾಡಿಸಿ, ನಾನು ಯಕ್ಷಗಾನ ಕಲಿತವನೆಂದು ತಿಳಿದ ಮೇಲೆ ನಾನು ಅಭ್ಯಾಸ ಮಾಡಿದ ಕುಣಿತವನ್ನು ನೋಡಿ ತಾನೂ ಕುಣಿದು ಇದರಲ್ಲಿ ಹೆಚ್ಚಿನದ್ದನ್ನು ತಾನು ಕುಣಿಯುತ್ತೇನೆಂದು ತೋರಿಸಿದ. ಹೀಗೆ ದಿನಗಳು ಉರುಳುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.