ಮಲೆನಾಡಿನ ನನ್ನ ಹುಟ್ಟೂರಲ್ಲಿ ನನ್ನ ಪ್ರೀತಿಯ ಅಜ್ಜಿ ಇದ್ದಾರೆ. ನಾನು ಪ್ರತಿ ಸಲ ಬೇಸಿಗೆ ರಜೆಗೆ ಅಲ್ಲಿಗೆ ತಪ್ಪದೆ ಹೋಗುತ್ತೇನೆ. ಅಲ್ಲಿ ನಾನು ಬಹಳ ಉಲ್ಲಾಸದಿಂದಿರುತ್ತೇನೆ. ಸೂರ್ಯ ಮುಳುಗುವವರೆಗೂ ಅಣ್ಣ ತಂಗಿಯರ ಜತೆ ಆಟ, ಸೂರ್ಯಸ್ತವಾದ ಮೇಲೆ ಅಜ್ಜಿಯ ರುಚಿಯಾದ ಕೈತುತ್ತು, ಆನಂತರ ಅಜ್ಜಿ ಹೇಳುವ ಕಥೆಗಳು... ಎಲ್ಲವೂ ಎಷ್ಟೊಂದು ಗಮ್ಮತ್ತು!
ಒಂದು ದಿನ ಪಕ್ಕದ ಮನೆಯವರು ಕೆಲವು ಹಣ್ಣಿನ ಬೀಜಗಳನ್ನು ಅಜ್ಜಿಗೆ ಕೊಟ್ಟು ಬೀಜಗಳನ್ನು ಬಿತ್ತಲು ಹೇಳಿದರು. ನಮ್ಮದು ಒಂದು ಚಿಕ್ಕ ತೋಟ. ನಮ್ಮ ದೊಡ್ಡ ಅಣ್ಣ ಯಾವುದೋ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿದ್ದ, ನಮ್ಮ ಅಜ್ಜಿಯ ಮನೆಯವರಿಗೆ ಒಂದು ಒಳ್ಳೆಯ ಅಭ್ಯಾಸ, ಅಂದಿನ ಕೆಲಸ ಆ ದಿನವೇ ಮಾಡಿ ಮುಗಿಸುವುದು.
ನಮ್ಮ ಊರಲ್ಲಿ ಒಬ್ಬ ಬಡವ ಇದ್ದ. ಅವನ ಹೆಸರು ರಾಮ. ಅವನು ಹೊಟ್ಟೆಪಾಡಿಗೆ ಜನರು ಹೇಳುತ್ತಿದ್ದ ಕೆಲಸಗಳನ್ನು ಮಾಡುತ್ತಿದ್ದ. ನಮ್ಮ ಅಜ್ಜಿ ಸಾಯಂಕಾಲದ ವೇಳೆಗೆ ಅವನನ್ನು ಕರೆದು ತೋಟದಲ್ಲಿ ಬೀಜಗಳನ್ನು ಬಿತ್ತನೆ ಮಾಡಲು ಹೇಳಿದರು. ಅವನು ಬಿತ್ತನೆ ಮಾಡಲು ಭೂಮಿಯನ್ನು ಅಗಿದನು. ಮಧ್ಯದಲ್ಲೇ ಕೆಲಸವನ್ನು ಬಿಟ್ಟು ನಮ್ಮ ಅಜ್ಜಿಯ ಬಳಿ ಬಂದು, ನಾಳೆ ಕೆಲಸ ಮುಗಿಸುವುದಾಗಿ ಹೇಳಿದನು. `ನನಗೆ ಬೆನ್ನು ಹಾಗೂ ಕಾಲು ನೋವು~ ಎಂದು ಹೇಳಿ ಹೊರಟನು.
ಅದೇ ದಿನ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ನಮ್ಮ ದೊಡ್ಡಣ್ಣ ಬಂದನು. ಬೀಜದ ಬಿತ್ತನೆಯ ವಿಷಯ ತಿಳಿದು, `ರಾಮ ನಾಳೆ ಬರುವವರೆಗೂ ಏಕೆ ಕಾಯಬೇಕು, ನಾನೇ ಬಿತ್ತನೆ ಮಾಡಿ ಬರುತ್ತೇನೆ~ ಎಂದು ಹೇಳಿ ಹೋದನು. ಅವನ ಜತೆ ನಾನು ಹೋದೆ. ಬಿತ್ತನೆಯ ಕೆಲಸವನ್ನು ಪೂರ್ತಿ ಮಾಡಲು ಭೂಮಿಯನ್ನು ಅಗೆಯುತ್ತಿರುವಾಗ ಮಡಿಕೆಯ ಸದ್ದು ಕೇಳಿಸಿತು. ಕತ್ತಲಿದ್ದರಿಂದ ಅದು ಏನೆಂದು ತಿಳಿಯಲಿಲ್ಲ. ಆದರೆ ಅದರ ಒಳಗಡೆ ಏನೋ ಇದೆ ಎಂದು ಮಾತ್ರ ತಿಳಿಯಿತು. ಕೆಲಸ ಮುಗಿಸಿ ನಮ್ಮ ಜೊತೆ ಆ ಮಡಿಕೆಯನ್ನು ಮನೆಗೆ ತೆಗೆದುಕೊಂಡು ಹೋದೆವು. ತೆರೆದು ನೋಡಿದಾಗ ಅದರಲ್ಲಿ ಚಿನ್ನದ ಬೆಳ್ಳಿಯ ಉಂಗುರ, ಸರ, ಬಳೆಗಳು ಇದ್ದವು. ಸಂತೋಷದ ಜತೆಗೆ ನಮಗೆ ಬಹಳಷ್ಟು ಆಶ್ಚರ್ಯವಾಯಿತು.
`ನಮ್ಮ ಪೂರ್ವಜರು ನಮಗಾಗಿ ಅದನ್ನು ಅಲ್ಲಿ ಇಟ್ಟಿರಬಹುದು~ ಎಂದು ಅಜ್ಜಿ ಹೇಳಿದಳು. ನಮ್ಮ ಅಣ್ಣ ಆಲಸ್ಯದಿಂದ ಕೆಲಸವನ್ನು ನಾಳೆಗೆ ಮುಂದೂಡಿ ರಾಮನಿಗಾಗಿ ಕಾಯುತ್ತಿದ್ದರೆ ನಾವು ನಿಧಿಯನ್ನು ಬಹುಶಃ ಕಳೆದುಕೊಳ್ಳಬೇಕಾಗಿತ್ತು. ಇದರಿಂದ ನಾನು ನಾಳೆಯೆಂದರೆ ಹಾಳು ಎಂದು ಕಲಿತೆ. ನಮ್ಮ ಕೆಲಸವನ್ನು ನಾವೇ ಮಾಡಬೇಕು ಎಂದು ಕಲಿತೆ. ನಿಧಿ ಸಿಕ್ಕಿದ ಖುಷಿಯಲ್ಲಿ ನಮ್ಮ ಅಜ್ಜಿ ನನಗೆ ಹೊಸ ಬಟ್ಟೆ ಹಾಗೂ ಆಟಿಕೆಗಳನ್ನು ಕೊಡಿಸಿದರು.
ರಾಮನಿಗೆ ಬೆನ್ನು ನೋವು ಬಂದು ಕೆಲಸವನ್ನು ಅರ್ಧದಲ್ಲೇ ಬಿಟ್ಟು ಹೋದದ್ದು ಒಳ್ಳೆಯದೇ ಅಲ್ಲವೇ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.