ADVERTISEMENT

ಅನುಸಂಧಾನ

ಡಿ.ಎಸ್.ರಾಮಸ್ವಾಮಿ
Published 22 ಅಕ್ಟೋಬರ್ 2016, 19:30 IST
Last Updated 22 ಅಕ್ಟೋಬರ್ 2016, 19:30 IST
ಅನುಸಂಧಾನ
ಅನುಸಂಧಾನ   


ಬಹಳ ದಿನಗಳ ಮೇಲೆ
ಮೊನ್ನೆ ಹುಟ್ಟಿದೂರಿಗೆ ಹೋಗಿ ಬಂದೆ:

ಅಗ್ರಹಾರದ ಕಿತ್ತು ಹೋದ ಡಾಂಬರು ರಸ್ತೆ
ಸೊಂಟ ಮುರಿದ ನಾಡ ಹಂಚಿನ ಮನೆಗಳ ಸಾಲು
ಅರಳಿಕಟ್ಟೆಯಲ್ಲಿ ಕೆಮ್ಮುತ್ತಿರುವ ಉಬ್ಬಸದ ಮುದುಕರು
ನಾಮಫಲಕದಲ್ಲಷ್ಟೇ ಉಳಿದಿರುವ ವೇದ ಸಂಸ್ಕೃತ ಪಾಠಶಾಲೆ
ತಿರುಪು ಮುರಿದ ನೆಗಡಿ ಮೂಗಿನ ಬೀದಿ ನಲ್ಲಿ;

ಏನೇನೂ ಬದಲಾವಣೆಯಾಗದ ಆ ಅದೇ ಹಳೆಯ ಊರು.

ADVERTISEMENT

ಸಂಧ್ಯಾವಂದನೆಯ ಮಂತ್ರ ಮರೆತ ಭಟ್ಟರ ಮೊಮ್ಮಗ
ಮನೆಯ ಓಣಿಯಲ್ಲಿ ಹೊಗೆಯುಗುಳುತ್ತಿದ್ದಾನೆ
ಊರವರ ಪಹಣಿ ತಿದ್ದುತ್ತಿದ್ದ ಶಾನುಭೋಗರ ಕುಲ ಪೌತ್ರ
ಬೇನಾಮಿ ಅರ್ಜಿ ಬರೆಯುತ್ತಿದ್ದಾನೆ ಸರ್ಕಾರಕ್ಕೆ
ಅಮೃತವಾಹಿನಿಯೇ ಹರಿಯುತ್ತಿದೆ ವಂಶಾವಳಿಗಳಿಗೆ?

ಪಾತ್ರಧಾರಿಗಳಷ್ಟೇ ಬದಲಾದ ನಿತ್ಯ ನಾಟಕ ಸೂತ್ರ.

ಸಂಗೀತ ಮೇಷ್ಟ್ರುಮನೆ ಮಾರಾಟಕ್ಕಿಟ್ಟಿದ್ದಾರೆ
ಹೋರಾರತ್ನ ಜ್ಯೋತಿಷಿಯೀಗ ವೃದ್ಧಾಶ್ರಮದಲ್ಲಿ
ಬಹುತೇಕ ಮನೆಗಳ ಯುವಕರೀಗ ಅಮೆರಿಕ, ಯುಕೆಗಳಲ್ಲಿ
ಅಳಿದುಳಿದವರ ನಡುವೆ ಭಿನ್ನಮತದ ಪರಾಕಾಷ್ಠೆ
ಅಂತರ್ಜಲ ಕುಸಿದಿದೆ ಎಲ್ಲರೆದೆಯಲ್ಲಿ

ಸಂಬಂಧಗಳ ಮರುಪೂರಣಕ್ಕೆ ಯಾರಿಗೂ ವ್ಯವಧಾನವಿಲ್ಲ.

ದೇವಸ್ಥಾನದೆದುರಿನಂಗಡಿಯಲ್ಲಿ ಭಗವಾಧ್ವಜ
ಪ್ಲಾಸ್ಟಿಕ್ ಹಾರ, ಗುಟ್ಕಾ, ಲೇಸ್, ಶಾಂಪೂ ಸರ
ಫ್ರಿಜ್ಜಿನಲ್ಲಿ ಭದ್ರವಾಗಿರುವ ಹೂವು ಹಣ್ಣುಗಳು
ಯಾರಾದರೂ ಕೇಳಿದರಷ್ಟೇ ಹೊರಬಂದಾವು
ಖಂಡಿತ ಸಿಕ್ಕುತ್ತದೆ ಸಿಗರೇಟು, ರೀಛಾರ್ಜು ಕೂಪನ್ನು

ಆಧುನಿಕತೆ ಕಟ್ಟಿಕೊಟ್ಟ ಘಮಗುಡದ ಮಲ್ಲಿಗೆ ಹೂವು.

ವಾಪಸ್ಸು ಬಂದವನ ತಲೆಯಲ್ಲೀಗ ಕುಣಿಯುತ್ತಿವೆ
ಬಾಲ್ಯದ ನನ್ನೂರು ಮತ್ತು ಬದಲಾ(ಗ)ದ ವಾಸನೆಗಳು.
ನನ್ನೊಳಗೂ ಕೂತು ಕಡೆಯುತ್ತಿರುವ ಸಂಧಾನಗಳು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.