ADVERTISEMENT

ಅಪಥ್ಯ ಸತ್ಯಗಳ ಚಿತ್ರಕಾರ

ಚಿತ್ರಪಟ

ಪ್ರೇಮಕುಮಾರ್ ಹರಿಯಬ್ಬೆ
Published 8 ಜೂನ್ 2013, 19:59 IST
Last Updated 8 ಜೂನ್ 2013, 19:59 IST
`ಚಿತ್ರಾಂಗದಾ' ಚಿತ್ರದಲ್ಲಿ ಚಿತ್ರಾಂಗದೆಯ ಪಾತ್ರಕ್ಕೆ ಜೀವತುಂಬಿದ ರಿತುಪರ್ಣೊ
`ಚಿತ್ರಾಂಗದಾ' ಚಿತ್ರದಲ್ಲಿ ಚಿತ್ರಾಂಗದೆಯ ಪಾತ್ರಕ್ಕೆ ಜೀವತುಂಬಿದ ರಿತುಪರ್ಣೊ   

ರಿತುಪರ್ಣೊ ಘೋಷ್ ಹೆಣ್ಣೊ, ಗಂಡೊ? ಮೊದಲ ಸಲ ಈ ಹೆಸರು ಕೇಳಿದವರಿಗೆ ಇಂಥದೊಂದು ಅನುಮಾನ ಬಂದರೆ ಅದು ಸಹಜ. ಅವರ ಹೆಸರೇ ಹಾಗಿದೆ. ಅವರ ಬದುಕೂ ಹಾಗೆ. ಇನ್ನು ಅವರ ಸಿನಿಮಾಗಳು ಸನಾತನಿಗಳನ್ನು ತಲ್ಲಣಗೊಳಿಸಿದರೆ, ಆಧುನಿಕತೆಗೆ (ಸಾಂಸ್ಕೃತಿಕ ಉದಾರೀಕರಣ) ತೆರೆದುಕೊಂಡೂ ಮಾನಸಿಕವಾಗಿ ಸಂಪ್ರದಾಯಬದ್ಧರಾಗಿಯೇ ಉಳಿಯಲು ಬಯಸುವವರಿಗೆ ಮುಜುಗರ ಉಂಟುಮಾಡುತ್ತವೆ. ಇಂಥ ವಿಚಿತ್ರ ಮನಃಸ್ಥಿತಿಯನ್ನು ಸಿನಿಮಾ ಮೂಲಕ ಸೂಕ್ಷ್ಮವಾಗಿ ಹೇಳಲು ಪ್ರಯತ್ನಿಸಿದ ನಿರ್ದೇಶಕರು ಭಾರತೀಯ ಸಿನಿಮಾರಂಗದಲ್ಲಿ ವಿರಳ.
ಹೆಣ್ಣಿನೊಳಗಿರುವ ಗಂಡು, ಗಂಡಿನೊಳಗಿರುವ ಹೆಣ್ಣಿನ ಮನಃಸ್ಥಿತಿ, ಸಂಪ್ರದಾಯಸ್ಥರಿಗೆ ಅಪಥ್ಯವಾಗುವ ಸಂಗತಿಗಳನ್ನು ತೆರೆಯ ಮೇಲೆ ಸೂಕ್ಷ್ಮವಾಗಿ ಕಟ್ಟಿಕೊಡುವ ವಿಷಯದಲ್ಲಿ ರಿತುಪರ್ಣೊ ಸಿದ್ಧಹಸ್ತರು! ಈ ಕಾರಣಕ್ಕಾಗಿಯೇ ಅವರ ಸಿನಿಮಾಗಳು ಭಿನ್ನವಾಗುತ್ತವೆ. ಅತ್ಯಾಧುನಿಕರಿಗಂತೂ ಅವರ ಸಿನಿಮಾಗಳು ಅಚ್ಚುಮೆಚ್ಚು.

ಮುಕ್ತಕಾಮ, ಸಲಿಂಗ ರತಿ, ಲಿವಿಂಗ್ ಟುಗೆದರ್‌ನಂತಹ `ಸಂಬಂಧ'ಗಳನ್ನು ಭಾರತೀಯ ಸಮಾಜ ಒಪ್ಪುವುದಿಲ್ಲ. ಆದರೆ ಅಂತಹ ಅನಿವಾರ್ಯ ಸಂದರ್ಭಗಳನ್ನು ಎದುರಿಸಬೇಕಾದ ಕುಟುಂಬಗಳ ಸದಸ್ಯರ ಮನಃಸ್ಥಿತಿಯನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ಕಟ್ಟಿಕೊಟ್ಟ ರಿತುಪರ್ಣೊ ಭಾರತೀಯ ಸಿನಿಮಾರಂಗ ಕಂಡ ವಿಶಿಷ್ಟ ಸಂವೇದನೆಯ ನಿರ್ದೇಶಕ. ಈ ಸಂವೇದನಾಶೀಲತೆ ಅವರನ್ನು ಸಮಕಾಲೀನ ಭಾರತೀಯ ಸಿನಿಮಾ ನಿರ್ದೇಶಕರಿಗಿಂತ ಭಿನ್ನ ಸ್ತರಕ್ಕೆ ಕೊಂಡೊಯ್ದು ನಿಲ್ಲಿಸಿತು. ಹೆಣ್ಣಿನ ಆಂತರಿಕ ತಳಮಳಗಳು ಮತ್ತು ಅವಳ ಭಾವ ಜಗತ್ತನ್ನು ಕಟ್ಟಿಕೊಡುವ ಭಾರತೀಯ ಭಾಷೆಗಳ ನೂರಾರು ಸಿನಿಮಾಗಳಿಗಿಂತ ಅವರ ಕೆಲವು ಸಿನಿಮಾಗಳು ನಿಜಕ್ಕೂ ವಿಶಿಷ್ಟ.

ರಿತುಪರ್ಣೊ ಗಂಡಲ್ಲ, ಹೆಣ್ಣು ಎನ್ನುವ ಅಭಿಪ್ರಾಯ ಸಾರ್ವಜನಿಕವಾಗಿ ಕೇಳಿ ಬಂದದ್ದೂ ಉಂಟು. ಅವರು ಸಲಿಂಗಕಾಮಿ ಎಂಬುದೂ ಜನಜನಿತ. ಅದಕ್ಕೆ ಉತ್ತರ ಎನ್ನುವಂತೆ “ನಾನು ಹೆಣ್ಣಲ್ಲ. ಹೆಣ್ಣಾಗಲು ಬಯಸುವುದಿಲ್ಲ. ಆದರೆ ನನ್ನೊಳಗಿನ ಹೆಣ್ತನವನ್ನು (ಅವಳನ್ನು) ಉಪೇಕ್ಷಿಸುವುದಿಲ್ಲ” ಎಂದೇ ಅವರು ಹೇಳುತ್ತಿದ್ದರು! ಈ ಮಾತಿಗೆ ಅವರ ಹಲವು ಸಿನಿಮಾಗಳಲ್ಲಿ ಸಮರ್ಥನೆ ಇದೆ. ರಿತುಪರ್ಣೊ ನಿಜ ಜೀವನದಲ್ಲಿ ಹೆಣ್ಣಿನಂತೆ ಉಡುಪುಗಳನ್ನು ತೊಟ್ಟು ಆಭರಣಗಳನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದರು! ಈ ನಡವಳಿಕೆ ನನ್ನ ಹಕ್ಕು ಎಂಬ ಸಮರ್ಥನೆಗೂ ಅವರು ಮುಂದಾಗುತ್ತಿದ್ದರು! ಅತ್ಯಾಧುನಿಕರಿಗೆ ಅವರ ಬದುಕು ಮತ್ತು ಸಿನಿಮಾಗಳು ಎರಡೂ ಆದರ್ಶ. ಅವರಂತೆ ಬಟ್ಟೆ, ಆಭರಣಗಳನ್ನು ಧರಿಸಿ ನಿಸ್ಸಂಕೋಚವಾಗಿ ಓಡಾಡುವ ಅಭಿಮಾನಿಗಳು ಅವರಿಗಿದ್ದರು!

ಹೆಣ್ಣಾಗುವ ಕಷ್ಟ
ರಿತುಪರ್ಣೊ ನಿರ್ದೇಶನದ `ಚಿತ್ರಾಂಗದಾ' (ಬೆಂಗಾಳಿ, 2012) ಮಹಾಕವಿ ರವೀಂದ್ರನಾಥ ಟ್ಯಾಗೋರರ ಅದೇ ಹೆಸರಿನ ನೃತ್ಯನಾಟಕವನ್ನು ಆಧರಿಸಿದ್ದು. ಮಹಾಭಾರತದಲ್ಲಿ ಉಲ್ಲೇಖವಿರುವ ಮಣಿಪುರದ ರಾಜಕುಮಾರಿ ಚಿತ್ರಾಂಗದೆ (ಬಬ್ರುವಾಹನನ ತಾಯಿ) ಸಿನಿಮಾಕ್ಕೆ ಒಂದು ರೂಪಕ ಅಷ್ಟೇ. ಚಿತ್ರಾಂಗದಾ ನೃತ್ಯ ನಾಟಕದ ನಿರ್ದೇಶಕ ಮತ್ತು ಕೊರಿಯೊಗ್ರಾಫರ್ ರುದ್ರೊ(ದ್ರ) ಚಟರ್ಜಿ (ರಿತುಪರ್ಣೊ) ಸಿನಿಮಾದ ನಾಯಕ. ಮಗ ಎಂಜಿನಿಯರ್ ಆಗಬೇಕು ಎಂಬುದು ಅವನ ತಂದೆಯ ಆಸೆ. ಸಂಪ್ರದಾಯವಿರೋಧಿ ಮನೋಧರ್ಮದ ರುದ್ರ ನೃತ್ಯನಾಟಕವನ್ನು ತಾಲೀಮು ಮಾಡಿಸುತ್ತಲೇ ಚಿತ್ರಾಂಗದೆಯ ಪಾತ್ರದೊಂದಿಗೆ ತನ್ನನ್ನು ಸಮೀಕರಿಸಿಕೊಳ್ಳಲು ಆರಂಭಿಸುತ್ತಾನೆ ಅಥವಾ ಅಂತಹ ಭ್ರಮೆಗೆ ಜಾರುತ್ತಾನೆ. ನಾಯಕಿ ಕಸ್ತೂರಿ ತನ್ನ ಗೆಳೆಯ ಸುಂದರ ಪುರುಷ ಪಾರ್ಥೊನನ್ನು ರುದ್ರನಿಗೆ ಪರಿಚಯಿಸುತ್ತಾಳೆ. ನೃತ್ಯನಾಟಕಕ್ಕೆ ನೆರವಾಗಲು ಬಂದ ಪಾರ್ಥೊ ಮಾದಕವಸ್ತುಗಳ ವ್ಯಸನಿ, ಸಲಿಂಗಕಾಮಿ. ಅವನೊಂದಿಗೆ ರುದ್ರ ಭಾವನಾತ್ಮಕ ಮತ್ತು ದೈಹಿಕ `ನಂಟು' ಬೆಳೆಸಿಕೊಳ್ಳುತ್ತಾನೆ. ಈ ಸಂಬಂಧಕ್ಕೆ ಕುಟುಂಬದ ಸ್ವರೂಪ ಕೊಡುವ ಪ್ರಯತ್ನಕ್ಕೆ ಮುಂದಾಗುತ್ತಾನೆ. ಮಗುವೊಂದನ್ನು ದತ್ತು ಪಡೆದು ಬೆಳೆಸುವ ಕನಸು ಕಾಣುತ್ತಾನೆ. ಅದಕ್ಕೆ ಪಾರ್ಥೊ ಒಪ್ಪುವುದಿಲ್ಲ. ಆನಂತರ ರುದ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹೆಣ್ಣಾಗುವ ನಿರ್ಧಾರಕ್ಕೆ ಬರುತ್ತಾನೆ. ಮೂರ್ನಾಲ್ಕು ಹಂತಗಳ ಶಸ್ತ್ರಚಿಕಿತ್ಸೆ ನಂತರ ರುದ್ರ ಸಂಪೂರ್ಣ ಹೆಣ್ಣಾಗುವ ಸ್ಥಿತಿ ತಲುಪುತ್ತಾನೆ. ಈ ಹಂತದಲ್ಲಿ ಪಾರ್ಥೊ ಕಸ್ತೂರಿಯ ಪ್ರಿಯಕರ ಮತ್ತು ಅವರಿಗೊಂದು ಮಗು ಹುಟ್ಟಿದೆ ಎಂಬುದನ್ನು ತಿಳಿದು ಹತಾಶನಾಗುವುದು ಸಿನಿಮಾದ ಕಥೆ.

ಈ ಸಿನಿಮಾ ಮೂಲಕ ರಿತುಪರ್ಣೊ ಏನನ್ನು ಹೇಳಲು ಹೊರಟಿದ್ದಾರೆ ಎಂದು ಯೋಚಿಸಿದರೆ ತಾರ್ಕಿಕ ಸಮರ್ಥನೆ ಸಿಗುವುದಿಲ್ಲ. ಗಂಡಸೊಬ್ಬ ಹೆಣ್ಣಾಗಲು ಬಯಸುವುದು, ಆ ಕಷ್ಟಗಳು, ಹೆಣ್ಣಿನ ಮನಃಸ್ಥಿತಿ, ನಡವಳಿಕೆಗಳನ್ನು ಕಷ್ಟಪಟ್ಟು ಅನುಕರಿಸುವುದು ಇವೆಲ್ಲ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ವಿರಳ. ಇಂತಹ ಸಿನಿಮಾ ಮಾಡುವ ಮೂಲಕ ರಿತುಪರ್ಣೊ ದೇಶದ ಮತ್ತು ಹೊರ ಜಗತ್ತಿನ ಗಮನ ಸೆಳೆದರು. ಹೆಣ್ಣಾಗುವ ಕಷ್ಟಗಳು, ರುದ್ರನ ತಂದೆ ತಾಯಿ ಅನುಭವಿಸುವ ಅಸಹಾಯಕತೆ ಮತ್ತು ಸಂಕಟಗಳು ಸಿನಿಮಾದಲ್ಲಿ ಹೆಪ್ಪುಗಟ್ಟಿವೆ. ಮಹಾಭಾರತದ ಚಿತ್ರಾಂಗದೆಯ ಮೂಲಕ “ಆಧುನಿಕ ಚಿತ್ರಾಂಗದೆ“ಯನ್ನು ತೆರೆಯ ಮೇಲೆ ಕಟ್ಟಿಕೊಡುವುದು ನಿರ್ದೇಶಕನಿಗೆ ಒಂದು ಸವಾಲು. ಮಣಿಪುರದ ರಾಜಕುಮಾರಿ ಪುರುಷನಂತೆ ಬದುಕಿದವಳು. ಗಂಡಿನಂತೆ ವೇಷ ಧರಿಸುತ್ತಿದ್ದ ಅವಳು ತನ್ನ ಸುತ್ತ ಪುರುಷ ವೇಷಧಾರಿ ಸಖಿಯರನ್ನು ಇಟ್ಟುಕೊಂಡವಳು. ಆದರೆ ರವೀಂದ್ರರ ಆಶಯದ ವ್ಯಂಗ್ಯ ಸಿನಿಮಾದಲ್ಲಿದೆ.

ನಿರ್ದೇಶಕನ ದುರಂತ
ಅವರ ಇನ್ನೊಂದು ಸಿನಿಮಾ 2009ರಲ್ಲಿ ತೆರೆಕಂಡ `ಅಬೋಹಮಾನ್' ಪ್ರತಿಭಾವಂತ ನಿರ್ದೇಶಕನೊಬ್ಬನ ಬದುಕಿನ ದುರಂತವನ್ನು ಕುರಿತದ್ದು. ಮಗನ ವಯಸ್ಸಿನ ತನ್ನ ಸಿನಿಮಾದ ನಾಯಕಿಯಲ್ಲಿ ಅನುರಕ್ತನಾಗುವ ಮಧ್ಯ ವಯಸ್ಸು ದಾಟಿದ ನಿರ್ದೇಶಕ ಅನಿಕೇತ್ ಕೊನೆಗೆ ಪತ್ನಿ ಮತ್ತು ಮಗನ ಉಪೇಕ್ಷೆಗೆ ಒಳಗಾಗಿ ಒಂಟಿಯಾಗಿ ಬದುಕುವ ದುರಂತವನ್ನು ಚಿತ್ರ ಹೇಳುತ್ತದೆ. ಗಂಡನ ನಡವಳಿಕೆಯಿಂದ ಬೇಸತ್ತ ಅನಿಕೇತ್‌ನ ಹೆಂಡತಿ (ನೃತ್ಯನಿರ್ದೇಶಕಿ) ಮಗನನ್ನು ನಿರ್ದೇಶಕನನ್ನಾಗಿ ರೂಪಿಸುವ ಪ್ರಯತ್ನ ಮಾಡುತ್ತ ಗಂಡನ ವಿರುದ್ಧ ಮೌನವಾಗಿ ಸೇಡು ತೀರಿಸಿಕೊಳ್ಳುತ್ತಾಳೆ.

`ಅಬೋಹಮಾನ್' ಚಿತ್ರ `ಸಿನಿಮಾ ಕುಟುಂಬ'ದ ಸದಸ್ಯರ ಮಾನಸಿಕ ಸಂಘರ್ಷಗಳು, ವೃತ್ತಿಯಲ್ಲಿ ಉತ್ತುಂಗ ಸ್ಥಿತಿ ತಲುಪಲು ವೈಯಕ್ತಿಕ ಬದುಕನ್ನು  ಪಣಕ್ಕಿಟ್ಟು ಜೀವನದ ಕೊನೆಯಲ್ಲಿ ವಿಷಾದ ಹಾಗೂ ವಿಷಣ್ಣ ಮನಃಸ್ಥಿತಿಗೆ ತಲುಪುವ ನಾಯಕಿಯ ಅಸಹಾಯಕತೆಯನ್ನೂ ಕಟ್ಟಿಕೊಡುತ್ತದೆ. ಈ ಚಿತ್ರದ ಕಥೆ ಬೆಂಗಾಳಿಯ ಸುಪ್ರಸಿದ್ಧ ನಿರ್ದೇಶಕರೊಬ್ಬರ ಬದುಕಿನಲ್ಲಿ ನಡೆದ ಘಟನೆಯನ್ನು ಆಧರಿಸಿದ್ದು ಎಂಬ ವದಂತಿ ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿ ಕೇಳಿಬಂದಿತ್ತು. ರಿತುಪರ್ಣೊ ಈ ಕುರಿತು ಏನನ್ನೂ ಹೇಳಿರಲಿಲ್ಲ. ಇಂತಹ ಸಂಬಂಧಗಳು ಬೆಂಗಾಳಿ ಮಾತ್ರವಲ್ಲ, ಭಾರತೀಯ ಭಾಷೆಗಳ ಸಿನಿಮಾ ವಲಯದಲ್ಲಿ ಹೊಸದಲ್ಲ.

`ಅಬೋಹಮಾನ್' ನಾಯಕಿ ಹಾಡಿನ ಚಿತ್ರೀಕರಣ ಸಮಯದಲ್ಲಿ ನರ್ತಿಸುತ್ತಲೇ ಅನಿಕೇತ್‌ನನ್ನು ನೋಡುತ್ತ ಕಣ್ಣು ಮಿಟುಕಿಸಿ ಪ್ರೀತಿಯ ಸೂಚನೆ ಕೊಡುತ್ತಾಳೆ. ಅದು ಅವನ ಗಮನಕ್ಕೆ ಬರುವುದಿಲ್ಲ. ಎಡಿಟಿಂಗ್ ಸಮಯದಲ್ಲಿ ಸಹಾಯಕನೊಬ್ಬ ಅದನ್ನು ಅನಿಕೇತ್ ಗಮನಕ್ಕೆ ತರುತ್ತಾನೆ. ಮುಂದಿನ ದೃಶ್ಯದಲ್ಲಿ ಅನಿಕೇತ್ ಕಾರು ನಾಯಕಿಯ ಮನೆಯ ಮುಂದಿರುತ್ತದೆ! ಇಂತಹ ಹಲವು ಸೂಕ್ಷ್ಮ ಸನ್ನಿವೇಶಗಳು ಚಿತ್ರದಲ್ಲಿವೆ.

ರಿತುಪರ್ಣೊ ನಿರ್ದೇಶನದ `ಅರೇಕ್ತಿ ಪ್ರಿಮೇರ್ ಗಾಲ್ಪೊ', `ಚೋಖೇರ್ ಬಾಲಿ', `ಶೋಭೊ ಚೆರಿತ್ರೊ ಕಾಲ್ಪೊನಿಕ್', `ನೌಕಾದುಬಿ', `ಅಸುಖ್' ಇತ್ಯಾದಿ ಸಿನಿಮಾಗಳಲ್ಲಿ ಬದಲಾವಣೆಗೆ ತೆರೆದುಕೊಂಡ ಸಮಾಜದಲ್ಲಿ ಸಮುದಾಯ ಮತ್ತು ವ್ಯಕ್ತಿ ನೆಲೆಗಳಲ್ಲಿ ಆಗುವ ಸೂಕ್ಷ್ಮಪಲ್ಲಟಗಳು ಪ್ರೇಕ್ಷಕನನ್ನು ಸೆಳೆಯುತ್ತವೆ. ಮನಸ್ಸಿನಲ್ಲಿ ಉಳಿದು ಬಿಡುತ್ತವೆ. ಬಿಟ್ಟೂಬಿಡದೆ ಕಾಡುತ್ತವೆ. ಅದೇನೇ ಇರಲಿ, ರಿತುಪರ್ಣೊರ ಕಾಳಜಿ ಸುಶಿಕ್ಷಿತ, ನಗರವಾಸಿ ಮೇಲ್ವರ್ಗದ ಜನರ ಬದುಕಿನತ್ತ ಕೇಂದ್ರಿಕೃತವಾಗಿತ್ತು. ವಾಸ್ತವ ಭಾರತ ಅವರ ಸಿನಿಮಾಗಳಲ್ಲಿ ಕಾಣಲಿಲ್ಲ. ಅದು ಅವರ ಮಿತಿ. 
 
ರಿತುಪರ್ಣೊರ ಸಿನಿಮಾಗಳನ್ನು ಪರ್ಯಾಯ (ಹೊಸ ಅಲೆ) ಸಿನಿಮಾಗಳೆಂದು ಗುರುತಿಸುವವರಿದ್ದಾರೆ. ನಮ್ಮ ಬಹುತೇಕ ಪರ್ಯಾಯ ಸಿನಿಮಾಗಳಲ್ಲಿ ಸಹಜತೆ ಮತ್ತು ನಿರ್ದೇಶಕನ ಬೌದ್ಧಿಕ ಆಯಾಮಗಳು ಹೆಚ್ಚು ಕೆಲಸ ಮಾಡಿರುತ್ತವೆ. ರಿತುಪರ್ಣೊ ಸಿನಿಮಾಗಳಲ್ಲಿ ಬೌದ್ಧಿಕತೆ ಹಾಗೂ ಸೂಕ್ಷ್ಮ ಸಂವೇದನೆಗಳಿಗೆ ಹೆಚ್ಚಿನ ಒತ್ತು ಸಿಕ್ಕಿದೆ. ಅವರ ಇತ್ತೀಚಿನ ಸಿನಿಮಾಗಳನ್ನು ಹೊಸ ಅಲೆಯ ಸಿನಿಮಾಗಳೆಂದು ಹೇಳಬಹುದೇ? ಅವೆಲ್ಲ ಕಮರ್ಷಿಯಲ್ ಸಿನಿಮಾಗಳಂತೆ ದೃಶ್ಯ ಶ್ರೀಮಂತಿಕೆಯಿಂದ ವಿಜೃಂಭಿಸಿದ ಹೊಸ ಬಗೆಯ ಸಿನಿಮಾಗಳು. ಅವರ `ಚೊಖೇರ್ ಬಾಲಿ' ಐದಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ ಸಿನಿಮಾ. `ಚಿತ್ರಾಂಗದಾ', `ಅಬೋಹಮಾನ್', `ಲಾಸ್ಟ್ ಲಿಯರ್' ಸಿನಿಮಾಗಳೂ ಬಹು ಕೋಟಿ ವೆಚ್ಚದ ಸಿನಿಮಾಗಳೇ. ಸತ್ಯಜಿತ್ ರೇ, ಋತ್ವಿಕ್ ಘಟಕ್, ಮೃಣಾಲ್ ಸೇನ್‌ರಿಂದ ಪ್ರಭಾವಿತರಾದ ರಿತುಪರ್ಣೊ ಕಮರ್ಷಿಯಲ್ ಸಿನಿಮಾಗಳ ಧಾಟಿಯಲ್ಲಿ ಭಿನ್ನವಾದ ಚಿತ್ರಗಳನ್ನು ನೀಡುವ ಮೂಲಕ ಬೆಂಗಾಳಿ ಚಿತ್ರರಂಗಕ್ಕೆ ಹೊಸದೊಂದು ಆಯಾಮ ನೀಡಿದರು.

ಮನರಂಜನೆಗಾಗಿಯೇ ಸಿನಿಮಾಗಳನ್ನು ನೋಡುವ ಸಾಮಾನ್ಯ ಪ್ರೇಕ್ಷಕರಿಗೂ ರಿತುಪರ್ಣೊ ಸಿನಿಮಾಗಳು ಇಷ್ಟವಾಗುತ್ತವೆ ಎಂದು ಹೇಳುವುದು ಕಷ್ಟ. ದಕ್ಷಿಣ ಭಾರತೀಯ ಸಿನಿಮಾಸಕ್ತರಿಗಂತೂ ರಿತುಪರ್ಣೊ ಅಪರಿಚಿತರು. ಭಾರತೀಯ ಭಾಷೆಗಳ ಸಿನಿಮಾಗಳನ್ನು ದೇಶದ ಜನರೆಲ್ಲ ನೋಡುವ ವ್ಯವಸ್ಥೆ ಆಗುವವರೆಗೆ ರಿತುಪರ್ಣೊರಂತಹ ನಿರ್ದೇಶಕರು ಅಪರಿಚಿತರಾಗಿ ಉಳಿದುಬಿಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT