ADVERTISEMENT

ಅಲೆಮಾರಿಗಳಿಗೆ ಅನ್ನವಾದವರು

ಸತ್ಯಮಂಗಲ ಮಹದೇವ
Published 11 ಏಪ್ರಿಲ್ 2015, 19:30 IST
Last Updated 11 ಏಪ್ರಿಲ್ 2015, 19:30 IST

ಶಾಲೆಯಲ್ಲಿ ಹೊಸ ಪುಸ್ತಕ ಉಚಿತವಾಗಿ ಕೊಟ್ಟಾಗ, ಅದರ ಮೇಲೆ ಬೆರಳಾಡಿಸಿದಾಗ, ಬೆಚ್ಚನೆಯ ಖುಷಿ. ಸಮವಸ್ತ್ರ ಎನ್ನುವುದಕ್ಕಿಂತ ಅದು ನನ್ನ ಪಾಲಿಗೆ ಹೊಸ ಬಟ್ಟೆಯ ಸಂಭ್ರಮ. ಶಾಲೆಯ ಫೀಸ್ ಕಟ್ಟಲು ಹಣವಿಲ್ಲದಿದ್ದರೂ ಶಾಲೆಗೆ ಎಲ್ಲರಂತೆ ಎಲ್ಲರ ಜೊತೆ ಹೋದ ಜಿಗಿತ– ಎಲ್ಲವೂ ನನಗೆ ಅಂಬೇಡ್ಕರ್ ಎನ್ನುವ ತಾಯಿಕೊಟ್ಟ ಭರವಸೆ, ಪ್ರೀತಿ.

ಎಲ್ಲರನ್ನೂ ಹೊಸ ಮನುಷ್ಯರಾಗಿಸುವತ್ತ ಅಂಬೇಡ್ಕರ್ ತೋರಿದ ಮಾನವ ಪ್ರೇಮ, ಹೊಸ ಸ್ಪರ್ಶ, ಹೊಸ ಬಟ್ಟೆ, ಎಲ್ಲರ ಜೊತೆ ನಗುವ ಅವಕಾಶಗಳು ದೊರೆಯುವಂತೆ ಮಾಡಿದವು. ಒಂದುಕಡೆ ನೆಲೆನಿಲ್ಲಲು ಸಾಧ್ಯವಾಗದ ನನ್ನಂತಹ ಅಲೆಮಾರಿಗಳಿಗೆ ಒಂದು ಕಡೆ ನಿಲ್ಲುವಂತೆ ಮಾಡಿದ್ದು ಅಂಬೇಡ್ಕರರೇ. ಅಮುಖ್ಯರಾಗಿದ್ದ, ಪರಿಗಣನೆಗೆ ಬಾರದೆ ಕಳೆದುಹೋಗಿದ್ದ ಅನೇಕ ತಳಸಮುದಾಯಗಳಿಗೆ ಆತ್ಮಸ್ಥೈರ್ಯ ಆಗಿದ್ದು, ನಮ್ಮದೇ ನೆಲದಲ್ಲಿ ಅಪರಿಚಿತರಾಗಿದ್ದ ನಮಗೆ ಅನ್ನವಾಗಿದ್ದು ಈ ದೇಶದ ಯಾವ ದೇವರು, ಧರ್ಮ, ಬೇರೆ ಯಾವುದೂ ಅಲ್ಲ... ಅದು ಸಂವಿಧಾನ ಮತ್ತು ಅದರ ಶಿಲ್ಪಿ. ದೇಶದ ಅಖಂಡತ್ವಕ್ಕೆ ಚಾಲನೆ ಕೊಟ್ಟಿದ್ದು ಭಾರತ ರತ್ನ ಅಂಬೇಡ್ಕರ್.

ದೇವನೂರ ಮಹಾದೇವ ಅವರು ‘ಎದೆಗೆ ಬಿದ್ದ ಅಕ್ಷರ’ ಕೃತಿಯಲ್ಲಿ ‘ತಾರತಮ್ಯಕ್ಕೆ ಒಳಗಾಗಿ ಊರ ಹೊರಗಿರುವ ಮಗ ಅಂಬೇಡ್ಕರ್’

ಎಂದು ಹೇಳಿದ್ದಾರೆ. ಅಂತೆಯೇ ಕಾಲಾನುಕಾಲದಿಂದ  ಎಲ್ಲೆಂದರಲ್ಲಿ ಅಲೆಯುತ್ತಾ, ಗುಡ್ಡ ಬೆಟ್ಟಗಳಲ್ಲಿ ಓಡಾಡುತ್ತಿದ್ದವರಿಗೆ, ತಾನು ಹೊರಗಿದ್ದು ನಮ್ಮನ್ನು ಊರ ಒಳಗೆ ಸೇರಿಸಿದ ಜಗದ ಜಲಗಾರ ಅಂಬೇಡ್ಕರ್. ಈ ದೇಶ ಪ್ರಕಾಶಿಸುವುದು, ಅಭಿವೃದ್ಧಿ ಹೊಂದುವುದು, ಬಲಿಷ್ಟಗೊಳ್ಳುವುದು ಆಗಬೇಕಾದರೆ, ಶಾಂತಿ ನೆಲೆಸಬೇಕಾದರೆ, ಅದು ನಮ್ಮೆಲ್ಲರಿಗೆ ಅಂಬೇಡ್ಕರ್ ಅರ್ಥವಾದ ದಿನ ಮಾತ್ರ.

ವೈಚಾರಿಕ ದೃಷ್ಟಿ, ಸ್ವಾಭಿಮಾನ, ಹೋರಾಟ ಎಂಬ ಪದಗಳ ಅರ್ಥವೇ ವಿವಸ್ತ್ರವಾಗುತ್ತಿರುವ ಈ ದಿನಮಾನಗಳಲ್ಲಿ– ಮತ್ತೆ ಬಾಬಾಸಾಹೇಬರ ನೆನಪು, ಓದು, ಆದಾಗ ಮಾತ್ರವೇ ತೋರು ಬೆರಳ ಸಂಕೇತದ ಮುನ್ನಡೆಯುವ ಶಕ್ತಿ ನಮ್ಮೆಲ್ಲರ ಬೆನ್ನುಹುರಿಯಲ್ಲಿ ಜಾಗೃತಗೊಳ್ಳುತ್ತದೆ.

ವಿಶ್ವ ಭ್ರಾತೃತ್ವ, ಅಖಂಡತ್ವ ಮತ್ತೆ ಮತ್ತೆ ಚರ್ಚಿತವಾಗುತ್ತಿರುವ ಆತಂಕ ಹುಟ್ಟಿಸುವ ವಿಚಾರಗಳು. ಇಂತಹ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಅಂಬೇಡ್ಕರ್ ಎಂಬ ವಿಶ್ವ ವೈದ್ಯ ನೀಡಿ ಹೋಗಿರುವ ಔಷಧಗಳು ಇಂದು ಬಳಕೆಯಾಗಬೇಕಿದೆ. ಚಿಕಿತ್ಸೆ ಕೊಡುವ ಅಂಬೇಡ್ಕರ್ ಮನಸ್ಸು ಕೂಡ ನಮ್ಮದಾಗಬೇಕಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT