ಮಣಿಪುರದ ಜನಪದರಲ್ಲಿ ಇದ್ದ ಒಂದು ನಂಬಿಕೆ ಹೀಗಿದೆ: ಮರಣದಂಡನೆಗೆ ಒಳಗಾದ ವ್ಯಕ್ತಿ ಬೆಟ್ಟದಡಿಯ ನದಿಯನ್ನು ಈಜಿ, ದಡದಲ್ಲಿ ಇರುವ ಕುಲ್ಲಾಪನ (ಸಮುದಾಯದ ಮುಖ್ಯಸ್ಥನ) ಮಡದಿ ಕುಲ್ಲಾಪಿಯನ್ನು ಜೀವಭಿಕ್ಷೆಗಾಗಿ ಯಾಚಿಸಬಹುದಿತ್ತು. ಆಗ ಕುಲ್ಲಾಪಿಯು ಆತನನ್ನು ಕ್ಷಮಿಸಿ, ತಾನು ತೊಟ್ಟ ಫನೇಕ್ (ಪಂಚೆಯಂತೆ ಸುತ್ತಿಕೊಳ್ಳುವ ಬಟ್ಟೆ) ಅನ್ನು ತೆಗೆದು ಆರೋಪಿಯ ಮೇಲೆ ಹೊದಿಸಿದರೆ ಆತನಿಗೆ ಜೀವದಾನ ಸಿಗುತ್ತಿತ್ತು. ಜೀವದಾನ ಮಾಡುವ ಹಕ್ಕು ಇದ್ದುದು ಕುಲ್ಲಾಪಿಗೆ ಮಾತ್ರ.
ಮಣಿಪುರದ ಮತ್ತೊಂದು ಸ್ತ್ರೀ ರೂಪಕ ಮಹಾಭಾರತದಲ್ಲಿ ಬರುವ ಚಿತ್ರಾಂಗದೆಯದು. ಆಕೆ ಮಣಿಪುರದ ರಾಜಕುಮಾರಿ. ಧೈರ್ಯ, ಸಾಹಸಗಳಿಗೆ ಹೆಸರಾದ ಹೆಣ್ಣು. ಈಕೆಯ ಪಾತ್ರವನ್ನು ಕೇಂದ್ರವಾಗಿ ಇರಿಸಿಕೊಂಡು ರವೀಂದ್ರನಾಥ ಟ್ಯಾಗೋರ್ ‘ಚಿತ್ರಾಂಗದಾ’ ನಾಟಕ ರಚಿಸಿದ್ದಾರೆ.
ಕುಲ್ಲಾಪಿ ಹಾಗೂ ಚಿತ್ರಾಂಗದೆ ಮಣಿಪುರದ ಮಹಿಳೆಯರ ಪ್ರಾತಿನಿಧಿಕ ಚಿತ್ರಗಳು. ಈ ಇಬ್ಬರು ಪ್ರತಿಪಾದಿಸುವ ಕ್ಷಮೆ, ಧೈರ್ಯ, ಸಾಹಸಗಳ ಪರಂಪರೆಯನ್ನು ಮಣಿಪುರದ ಹೆಂಗಸರು ಮುಂದುವರೆಸಿಕೊಂಡು ಬರುತ್ತಿದ್ದಾರೆ ಎನ್ನುವುದಕ್ಕೆ, ಆ ನೆಲದಲ್ಲಿ ರೂಪುಗೊಂಡಿರುವ ಪ್ರತಿರೋಧದ ಕೆಲವು ಮಾದರಿಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ರಾಜಕೀಯ–ಸಾಮಾಜಿಕ ಸಂಘರ್ಷ, ಬಿಕ್ಕಟ್ಟುಗಳಲ್ಲಿ ಹೊತ್ತಿ ಉರಿಯುತ್ತಿರುವ ಮಣಿಪುರದಲ್ಲಿ ಹಿಂಸೆಯದೇ ರಾಜ್ಯಭಾರ.
ಹಿಂಸೆಯನ್ನು ಮಣಿಸಲು ಅಹಿಂಸಾತ್ಮಕ ಹೋರಾಟದಲ್ಲಿ ನಿರತರಾಗಿರುವ ಅಲ್ಲಿನ ಕೆಲವು ಮಹಿಳೆಯರು ಕಗ್ಗತ್ತಲಲ್ಲಿ ದಾರಿ ತೋರುವ ಬೆಳಕಿನ ಪಂಜುಗಳಿಂತಿದ್ದಾರೆ. ಅಂಥ ‘ಸ್ತ್ರೀಶಕ್ತಿ’ಯ ಮೂರು ಕವಲುಗಳಂತೆ ಕಾಣಿಸುವವರು– ಇಮಾ ಲೌರೆಮ್ ಬಂ ನನ್ಬಿ, ರೇಣು ತಕೆಲಂಬಂ ಹಾಗೂ ಚಿತ್ರಾ ಅಹೆಂತಮ್. ಈ ಮೂವರ ಕಥನ ಎಲ್ಲ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗುವಂತಿದೆ.
ಇಮಾ ಎನ್ನುವ ಅಮ್ಮ
‘ಇಮಾ’ ಎಂದರೆ ಮಣಿಪುರದ ಭಾಷೆಯಲ್ಲಿ ಅಮ್ಮ ಎಂದರ್ಥ. ಇಮಾ ಲೌರೆಮ್ ಬಂ ನನ್ಬಿ ಎನ್ನುವ ಈ ಹೆಣ್ಣುಮಗಳ ವ್ಯಕ್ತಿತ್ವವೇ ತಾಯ್ತನದಿಂದ ರೂಪುಗೊಂಡಂತಿದೆ. ೨೦೦೪ನೇ ಇಸವಿ ಜುಲೈ ೧೫ರಂದು, ಇಂಫಾಲದ ಕಾಂಗ್ಲ ಫೋರ್ಟನಲ್ಲಿರುವ ‘ಅಸ್ಸಾಂ ರೈಫಲ್’ ಎಂಬ ಅರೆ ಸೇನಾ ಪಡೆಯ ವಿರುದ್ಧ ಮಹಿಳೆಯರ ಪ್ರತಿಭಟನೆಯೊಂದು ನಡೆಯಿತು.
ಮಿರಾಪೆಯ್ಬಿಸ್ (ಮಣಿಪುರದ ಬೆಳಕಿನ ಕಾವಲುಗಾರರು) ಸಂಘಟಿಸಿದ್ದ ಈ ಪ್ರತಿಭಟನೆಯಲ್ಲಿ– ‘ಭಾರತೀಯ ಸೇನೆ ನಮ್ಮ ಮೇಲೆ ಅತ್ಯಾಚಾರ ನಡೆಸು ಬಾ’ ಎಂದು ಮಹಿಳೆಯರು ನಗ್ನರಾಗಿ ತಮ್ಮ ಒಡಲಾಳದ ಸಂಕಟವನ್ನು ವ್ಯಕ್ತಪಡಿಸಿದ್ದರು. ಈ ವಿಶಿಷ್ಟ ಪ್ರತಿಭಟನೆಯ ಭಾಗವಾಗಿದ್ದವರು ಇಮಾ.
ನಗ್ನತೆಯನ್ನು ಪ್ರತಿರೋಧದ ಸಂಕೇತವಾಗಿ ಬಳಸಿದ್ದು ಒಟ್ಟು ಭಾರತೀಯ ಮಹಿಳಾ ಚಳವಳಿಯ ಹೋರಾಟದ ಚೈತನ್ಯವನ್ನೇ ಹುರಿದುಂಬಿಸಿತೆಂದರೆ ತಪ್ಪಾಗಲಾರದು. ಈ ರೀತಿಯ ಪ್ರತಿಭಟನೆಗೆ ಕಾರಣವಾದದ್ದು ತಂಗ್ಜಮ್ ಮನೋರಮಾ ಎಂಬ ಯುವತಿಯ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಆಕೆಯ ಹತ್ಯೆ.
ಎಪ್ಪತ್ತರ ದಶಕದಿಂದಲೂ ಮಣಿಪುರದ ತಳಮಟ್ಟದ ಮಹಿಳಾ ಸಂಘಟನೆಗಳೊಂದಿಗೆ, ಹಲವಾರು ನಾಗರಿಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇಮಾ ಲೌರೆಮ್ ಅವರ ಬದುಕೇ ಒಂದು ಹೋರಾಟದಗಾಥೆ. ಅದನ್ನು ಅವರ ಮಾತುಗಳಲ್ಲೇ ಕೇಳಬೇಕು:
‘ಕುಟುಂಬದ ಆರು ಜನ ಮಕ್ಕಳಲ್ಲಿ ನಾನು ಕೊನೆಯವಳು. ತುಂಬಾ ತುಂಟಿಯಾಗಿದ್ದೆ, ಗಂಡುಬೀರಿ ಎಂದು ಕರೆಸಿಕೊಂಡಿದ್ದೆ. ಸೋದರರಿಗೆ ನನ್ನ ವರ್ತನೆ ಇಷ್ಟವಾಗುತ್ತಿರಲಿಲ್ಲ. ಅಮ್ಮ ಮಾತ್ರ ನನ್ನನ್ನು ಬೆಂಬಲಿಸುತ್ತಿದ್ದರು. ಅಪ್ಪನಿಗೂ ನಾನು ಮುದ್ದಿನ ಮಗಳಾಗಿದ್ದೆ. ಅಪ್ಪ ನನ್ನನ್ನು ಹೆಗಲ ಮೇಲೆ ಹೊತ್ತು ನದಿ ದಾಟುತ್ತಿದ್ದ. ಆ ನೆನಪನ್ನು ಮರೆಯಲು ಸಾಧ್ಯವಿಲ್ಲ. ನನ್ನ ಗಂಡನೂ ಸಹ ಒಳ್ಳೆಯ ವ್ಯಕ್ತಿ. ನಮಗೆ ನಾಲ್ಕನೇ ಮಗುವಾದ ಸಮಯದಲ್ಲಿ ನನ್ನ ಗಂಡ ಪೆಟ್ರೋಲ್ ಪಂಪ್ ಗಾಗಿ ಇದ್ದ ಬದ್ದ ಉಳಿತಾಯವನ್ನೆಲ್ಲ ಹಾಕಿದರು. ಒಮ್ಮೆ ಶತ್ರುಗಳು ಅವರ ಮೇಲೆ ದಾಳಿ ಮಾಡಿದ್ದರಿಂದಾಗಿ ಜೀವಂತ ಶವದಂತಾಗಿಬಿಟ್ಟರು. ನಂತರ ತೀರಿಹೋದರು. ಸಂಸಾರ ನಡೆಸಲು ಬಲು ಪಾಡುಪಟ್ಟೆ. ಸಂಪಾದನೆಗಾಗಿ ಸಾರಾಯಿ ತಯಾರಿಸು ಎನ್ನುವ ಸಲಹೆ ಬಂದಾಗ ಅದನ್ನು ನಿರಾಕರಿಸಿದೆ. ಮಕ್ಕಳು ಮತ್ತು ಯುವಕರು ಸಾರಾಯಿ, ಮಾದಕ ವಸ್ತುಗಳ ಚಟಕ್ಕೆ ಬೀಳುವುದರ ಸಂಕಟ ನನಗೆ ಗೊತ್ತು. ಅವರ ಚಟ ಬಿಡಿಸುವ ತಾಯಂದಿರ ಸಂಘಟನೆಯಲ್ಲಿ ನಾನಿದ್ದೆ. ಅದೇ ಸಂಘಟನೆಯೇ ಮುಂದೆ ಮಿರಾಪೆಯ್ಬಿಸ್ ಆಗಿ ಮುಂದುವರೆಯಿತು. ಹೊಟ್ಟೆಪಾಡಿಗಾಗಿ ಕೂಲಿ ಮಾಡಿದೆ. ನನ್ನಪ್ಪ ದಾಟಿಸುತ್ತಿದ್ದ ನದಿಯ ದಂಡೆಯ ಮರಳು ಸೋಸುವ ಕೆಲಸವನ್ನೂ ಮಾಡಿದೆ. ಸಂಘಟನೆ ಕಾರಣದಿಂದಾಗಿ ನಾನು ಜೈಲಿಗೆ ಹೋದಾಗಲೆಲ್ಲ ನನ್ನ ತಾಯಿ ಮನೆಯವರು ನನ್ನ ಮಕ್ಕಳನ್ನು ಜೋಪಾನ ಮಾಡಿದ್ದಾರೆ’.
‘ಮನೋರಮ ಯಾರೆಂದು ನನಗೆ ಗೊತ್ತಿರಲಿಲ್ಲ, ಆದರೆ ಆಕೆಯ ಪ್ರಕರಣ ನನಗುಂಟು ಮಾಡಿದ ಆಘಾತದಿಂದ ತತ್ತರಿಸಿಹೋದೆ. ೨೦೦೪ರ ಜುಲೈ ೧೧ರಂದು ೩೨ ವಯಸ್ಸಿನ ಮನೋರಮಾಳ ಮನೆಗೆ ಅರ್ಧರಾತ್ರಿಯಲ್ಲಿ ನುಗ್ಗಿದ ಸೇನಾಪಡೆಯ ಪುರುಷರ ಗುಂಪು ಆಕೆಯನ್ನು ಅಲ್ಲಿಂದ ಹೊತ್ತೊಯ್ದು ಕೊಟ್ಟ ಹಿಂಸೆ ನೆನೆದರೆ ಮೈ ನಡುಗುತ್ತದೆ. ಆಕೆಯ ಯೋನಿಯೊಳಗೆ ಟವೆಲ್ಲು ತುರುಕಿ ಗುಂಡುಗಳನ್ನು ಹಾರಿಸಲಾಗಿತ್ತು. ಗುಪ್ತಾಂಗಗಳನ್ನು ಗುಂಡುಹಾರಿಸಿ ಛಿದ್ರಗೊಳಿಸಲಾಗಿತ್ತು. ಈ ಘಟನೆಯಿಂದ ನಮ್ಮ ಹೃದಯಗಳು ಛಿದ್ರವಾದವು. ಇಂತಹ ಬರ್ಬರ ಹಿಂಸೆಯನ್ನು ಅನುಭವಿಸುವಾಗ ಆಕೆಯ ಮನಸ್ಸೆಷ್ಟು ಛಿದ್ರಗೊಂಡಿರಬೇಕು? ಇಂತಹ ಅಮಾನವೀಯ ಕೃತ್ಯವೆಸಗಲು ಅನುವು ಮಾಡಿಕೊಟ್ಟ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆಯ ಭಾರವನ್ನು ನಾವು ಕಿತ್ತೊಗೆಯಲೇಬೇಕು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನು ನಾಲ್ಕು ಬಾರಿ ಜೈಲಿಗೆ ಹೋಗಿದ್ದೇನೆ. ಅಸ್ಸಾಂ ರೈಫಲ್ಸ್ ವಿರುದ್ದ ಪ್ರತಿಭಟಿಸಲು ಹೋದ ದಿನ, ಆ ಪುರುಷಪುಂಗವರನ್ನು ಹೊರಗೆ ಕರೆಯಬೇಕಿತ್ತು. ನನ್ನ ಭಾಷೆಯಲ್ಲೇ ಕರೆದಿದ್ದರೆ ಯಾರಿಗೂ ತಿಳಿಯುತ್ತಿರಲಿಲ್ಲ, ಹಾಗಾಗಿ ನನಗೆ ಗೊತ್ತಿರುವಷ್ಟು ಇಂಗ್ಲೀಷಿನಲ್ಲಿ ಅವರ ಬಗ್ಗೆ ಅನಿಸಿದ್ದನ್ನು ಹೇಳಿದೆ’.
ಇಮಾ ಅವರ ಮಾತುಗಳಲ್ಲಿ ಸಮಸ್ತ ಸ್ತ್ರೀಕುಲದ ಸಂಕಟವೇ ಮಡುಗಟ್ಟಿದಂತೆ ಕಾಣಿಸುತ್ತದೆ. ಆ ವೇದನೆಯನ್ನು ಕೊಂಚವಾದರೂ ಪರಿಹರಿಸುವ ದಾರಿಯಲ್ಲಿ ಇಮಾ ಎನ್ನುವ ‘ಅಮ್ಮ’ ಹೆಜ್ಜೆ ಹಾಕುತ್ತಿದ್ದಾರೆ.
ರೇಣು: ನತದೃಷ್ಟೆಯರ ಕೊರಳು
ರೇಣು ಅವರದು ಕೂಡ ನತದೃಷ್ಟೆಯರ ಕಣ್ಣೀರು ಒರೆಸುವ ಕೈಂಕರ್ಯವೇ. ಇವರು, ಕಾನೂನು ಬಾಹಿರವಾಗಿ ಹತ್ಯೆಗೊಳಗಾದವರ ಕುಟುಂಬಗಳ ಸಂಘಟನೆಯ (ಇ.ವಿ.ಎಫ್.ಎ.ಎಂ – ಎಕ್ಸ್ ಟ್ರಾ ಜುಡಿಶಿಯಲ್ ಎಕ್ಸಿಕ್ಯೂಶನ್ ವಿಕ್ಟಿಮ್ಸ್ ಅಸೋಸಿಯೇಶನ್) ಅಧ್ಯಕ್ಷೆ. ರೇಣು ಅವರ ಗಂಡ ಮುಂಗ್ ಹ್ಯಾಂಗ್ ಜೊ ಅವರನ್ನು ಪೊಲೀಸ್ ಕಮಾಂಡೋ ಪಡೆ ಕಾನೂನುಬಾಹಿರವಾಗಿ ಗುಂಡು ಹಾರಿಸಿ ಕೊಂದಿದೆ.
ರೇಣು ಅವರು ಸಕ್ರಿಯವಾಗಿರುವ ಸಂಘಟನೆ ೧೫೨೮ ನಕಲಿ ಎನ್ ಕೌಂಟರ್ ಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೂಡಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಕಲಿ ಎನ್ ಕೌಂಟರ್ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ರಚಿಸಿದ ಸಮಿತಿ ದಾಖಲಿಸಿರುವ ಒಂದು ಘಟನೆ ಹೀಗಿದೆ:
‘ಶ್ರೀ ಧಾಮುಂಗ್, ಶ್ರೀ ಬೊಬಾ, ಶ್ರೀ ಪಕಸನ – ೨೦೦೭ರ ಏಪ್ರಿಲ್ ೬ರಂದು ಕಪ್ಪು ಬಣ್ಣದ ಹೊಂಡಾ ಆಕ್ಟೀವಾದಲ್ಲಿ (ಎಂ.ಎನ್-೧೨/೩೧೩೨) ಹೋಗುತ್ತಿದ್ದರು. ಧಾಮುಂಗ್ ಗಾಡಿ ಓಡಿಸುತ್ತಿದ್ದರು. ಬೊಬಾ ನಡುವೆ ಕುಳಿತಿದ್ದರು ಹಾಗೂ ಪಕಸನ ಕೊನೆಯಲ್ಲಿ ಕುಳಿತಿದ್ದರು. ಕ್ವಾಕೇತೆಲ್ ಮಾರ್ಕೆಟ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ ಸ್ಪೆಕ್ಟರ್ ಕೃಷ್ಣ ತೊಂಬಿ ನೇತೃತ್ವದ ಪಡೆಯು ಅವರನ್ನು ತಡೆಯಲು ಹೋದಾಗ ಅವರು ಸ್ಕೂಟರ್ ನಿಲ್ಲಿಸದೆ ಮುಂದೆ ಹೋದರು. ಅವರನ್ನು ಬೆನ್ನತ್ತಿದ ಪೊಲೀಸರ ಹಿಂಭಾಗದಲ್ಲಿ ಕುಳಿತಿದ್ದ ಪಕಸನ ಅವರನ್ನು ಗುಂಡಿಕ್ಕಿ ಕೊಂದರು. ಸ್ಕೂಟರ್ ಆಯ ತಪ್ಪಿ ಬಿದ್ದಾಗ, ಉಳಿದಿಬ್ಬರನ್ನು ಹಿಡಿದುಕೊಂಡರು. ಅವರ ಬಟ್ಟೆ ಬಿಚ್ಚಿ ತಪಾಸಣೆ ನಡೆಸಲಾಯಿತು. ನಂತರ ಬಟ್ಟೆ ತೊಟ್ಟುಕೊಳ್ಳಲು ಹೇಳಿ, ಟಾರು ರಸ್ತೆಯ ಮೇಲೆ ಮಲಗಿಸಿ ಇಬ್ಬರನ್ನೂ ಗುಂಡಿಕ್ಕಿ ಕೊಲ್ಲಲಾಯಿತು. ಒದ್ದಾಡುತ್ತಿದ್ದ ಯುವಕರ ಜೀವ ಉಳಿಸಲು ಬಂದ ಮಿರಾಪೆಯ್ಬಿಸ್ ಮಹಿಳಾ ಸಂಘಟನೆಯವರನ್ನು ಗುಂಡು ಹಾರಿಸಿ ಚದುರಿಸಲಾಯಿತು. ಹತ್ತಿರ ಬಂದರೆ ಕೊಲ್ಲುವುದಾಗಿ ಅವರಿಗೆ ಬೆದರಿಕೆ ಒಡ್ಡಲಾಯಿತು. ಆ ಪ್ರಕರಣವನ್ನು ದಾಖಲಿಸಲು ಮಾರುತಿ ಜಿಪ್ಸಿಯಲ್ಲಿ ಬಂದ ಪತ್ರಕರ್ತರೂ ಬೆದರಿಕೆಗೆ ಒಳಗಾದರು. ನಂತರ ಪೊಲೀಸರು– ಮೂರು ಜನ ಯುವಕರು ಅವರತ್ತ ಧಾವಿಸುತ್ತಿದ್ದ ಪೊಲೀಸರತ್ತ ಹ್ಯಾಂಡ್ ಗ್ರೆನೇಡುಗಳನ್ನು ತೂರಿದ್ದರಿಂದ ಸ್ವರಕ್ಷಣೆಗಾಗಿ ಗುಂಡು ಹಾರಿಸಿದೆವೆಂದು ಹೇಳಿಕೆ ನೀಡಿದರು’.
ರೇಣು ಹೇಳುವಂತೆ, ‘ನನ್ನ ಗಂಡನ ಹತ್ಯೆಯಾದ ಮೇಲೆ ಮನೆಯಿಂದ ಹೊರಬರುವುದೇ ಕಷ್ಟವಾಯಿತು. ಗಂಡನ ಹತ್ಯೆಯನ್ನು ಅರಗಿಸಿಕೊಳ್ಳಲು ನನಗೆ ೨ ವರ್ಷ ಹಿಡಿಯಿತು. ಪ್ರತಿಭಟಿಸುತ್ತಿದ್ದ ಸಂಘಟನೆಗಳೊಂದಿಗೆ ಸೇರಲು ನನ್ನ ಹಾಗೂ ನನ್ನ ಗಂಡನ ಕುಟುಂಬಗಳಿಗೆ ಸಾಕಷ್ಟು ಸಮಯ ಹಿಡಿಯಿತು. ಜಂಟಿ ಕಾರ್ಯಾಚರಣೆ ಸಮಿತಿ ರಚಿಸಿಕೊಂಡು ಸರ್ಕಾರದೊಡನೆ ಹಲವಾರು ಸಲ ಮಾತನಾಡಲಾಯಿತು. ಐದು ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಹೇಳಿದರೂ ಕೈಗೆ ಬಂದದ್ದು ಐವತ್ತು ಸಾವಿರ ಮಾತ್ರ. ಆ ಹಣವೆಲ್ಲ ಸುಪ್ರೀಂಕೋರ್ಟಿನ ಕೇಸಿಗಾಗಿಯೇ ಖರ್ಚಾಯಿತು. ಪೊಲೀಸ್ ಕಸ್ಟಡಿಯಲ್ಲಿದ್ದ ನನ್ನ ಗಂಡನ ಸ್ಕೂಟರನ್ನು ಹಿಂದೆ ಪಡೆಯಲು ೩–೪ ತಿಂಗಳಾಯಿತು. ಹೋರಾಟದ ಕಾರ್ಯದಲ್ಲಿ ಹಲವಾರು ಜನ ಕೈಜೋಡಿಸಿದ್ದಾರೆ. ನ್ಯಾಯ ಸಿಗಬಹುದೆಂಬ ಭರವಸೆ ಇದೆ.
ಯಾವುದೇ ಹತ್ಯೆ ನಡೆಯಲಿ– ಜಂಟಿ ಕಾರ್ಯಾಚರಣೆ ಸಮಿತಿ ರಚಿಸುವುದು, ಬಂದ್ ಅಥವಾ ಮುಷ್ಕರ ನಡೆಸುವುದು, ಹಿರಿಯರ ಸಲಹೆ ಪಡೆದುಕೊಂಡು ವರ್ಷಾನುಗಟ್ಟಲೇ ನ್ಯಾಯಕ್ಕಾಗಿ ಹೋರಾಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಇದರ ಪರಿಣಾಮವಾಗಿ ನಕಲಿ ಎನ್ ಕೌಂಟರ್ ಕಡಿಮೆಯಾಗುತ್ತಿವೆ’.
ತನಗಾದ ಅನ್ಯಾಯದ ವಿರುದ್ಧ ದನಿ ಎತ್ತಿದ ರೇಣು, ಈ ಹೋರಾಟದ ದಾರಿಯಲ್ಲಿ ಇತರ ಹಲವರಿಗೂ ಸ್ಫೂರ್ತಿಯಾಗಿದ್ದಾರೆ. ಅವರ ಹೋರಾಟ ಈಗ ಸಾರ್ವತ್ರಿಕ ಸ್ವರೂಪದ ಪಡೆದಿದ್ದು, ಮಾನವ ಹಕ್ಕುಗಳ ಕುರಿತಂತೆ ಮಣಿಪುರದ ಪರಿಸರದಲ್ಲಿ ಜಾಗೃತಿ ಮೂಡಿಸುತ್ತಿರುವುದು ಗಮನಾರ್ಹ.
ಚಿತ್ರಾ: ಎದೆಗೆ ಬಿದ್ದ ಅಕ್ಷರ
ಮಣಿಪುರದ ಪತ್ರಿಕೋದ್ಯಮದಲ್ಲಿ ಚಿತ್ರಾ ಅಹೆಂತಮ್ ಅವರದು ಗಮನಾರ್ಹ ಹೆಸರು. ಇಮಾ ಮತ್ತು ರೇಣು ಅವರ ಹೋರಾಟದ ಇನ್ನೊಂದು ಮುಖದಂತೆ ಕಾಣಿಸುವ ಚಿತ್ರಾ– ಇಂಫಾಲದ ‘ಫ್ರೀ ಪ್ರೆಸ್’ ದಿನಪತ್ರಿಕೆಯಲ್ಲಿ ಸಹ ಸಂಪಾದಕಿ. ಅವರು, ಮಣಿಪುರದ ಮಹಿಳೆಯರು, ಸಶಸ್ತ್ರ ಸಂಘರ್ಷ, ಮಿಲಿಟರೀಕರಣ, ಎಚ್ಐವಿ / ಏಯ್ಡ್ಸ್ – ಇತ್ಯಾದಿ ವಿಷಯಗಳ ಕುರಿತು ನಿರಂತರವಾಗಿ ಬರೆಯುತ್ತಿದ್ದಾರೆ.
ಮಣಿಪುರದ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ಮಾಲೋಮ್ ಹತ್ಯಾಕಾಂಡದ (ಅಸ್ಸಾಂ ರೈಫಲ್ ಸೇನಾಪಡೆಯು ೧೪ ಜನರನ್ನು ಕೊಂದ ಪ್ರಕರಣ) ನಂತರ, ಸಶಸ್ತ್ರ ಪಡೆಗಳ ಸ್ವೇಚ್ಛಾಚಾರವನ್ನು ವಿರೋಧಿಸಿ ಒಂದು ದಶಕಕ್ಕಿಂತಲೂ ಹೆಚ್ಚಿನ ಕಾಲದಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಇರೋಮ್ ಶರ್ಮಿಳಾ ಅವರೊಂದಿಗೆ ಚಿತ್ರಾ ನಿಕಟವರ್ತಿ.
***
ಇಮಾ ನಾನ್ಬಿ ಅವರು ನಾಲ್ಕನೇ ಬಾರಿ ಜೈಲಿಗೆ ಹೋದಾಗ ಅಲ್ಲಿನ ಪೊಲೀಸರೊಬ್ಬರು, ‘ಅಮ್ಮಾ, ಹೆದರಬೇಡಿ. ಭರವಸೆ ಕಳೆದುಕೊಳ್ಳಬೇಡಿ. ನಿಮಗಾಗಿ ನಾವಿದ್ದೇವೆ’ ಎಂದು ಹೇಳಿದರಂತೆ. ಇದು ಇಮಾ ಮತ್ತು ಅವರ ಸಹವರ್ತಿಗಳ ಹೋರಾಟಕ್ಕೆ ವ್ಯಕ್ತವಾಗುತ್ತಿರುವ ಸಾರ್ವಜನಿಕ ಸ್ಪಂದನದ ಒಂದು ಮಾದರಿ. ಮಣಿಪುರದಲ್ಲೀಗ ಪರಿವರ್ತನೆಯ ಗಾಳಿ ಬೀಸುತ್ತಿದ್ದಂತಿದೆ.
ಪೊಲೀಸ್ ಮತ್ತು ಸೇನಾಪಡೆಗಳು ಬಂದೂಕುಗಳ ಬದಿಗಿರಿಸಿ ಹಿಂಸೆಯ ನದಿಯ ದಾಟಿ ಜೀವದಾನ ಕೇಳುವ ಒಂದು ಮಾನವೀಯ ಸಾಧ್ಯತೆಯಂತೂ ಯಾವ ಕಾಲಕ್ಕಾದರೂ ಇದ್ದೇ ಇದೆ. ಅಂಥ ಸಂದರ್ಭದಲ್ಲಿ ಇಮಾ, ರೇಣು, ಶರ್ಮಿಳಾ, ಚಿತ್ರಾ ಮುಂತಾದ ಅನೇಕ ಕುಲ್ಲಾಪಿಗಳು ಹಿಂಸೆಯ ವರ್ತುಲದಿಂದ ಹೊರಬರಲು ಬಯಸಿದವರನ್ನು ಕ್ಷಮಿಸಬಲ್ಲರು ಹಾಗೂ ತಮ್ಮ ಫನೇಕುಗಳ ಹೊದಿಸಿ ಜೀವದಾನ ನೀಡಬಲ್ಲರು.
ಬೆಂಗಳೂರಿನಲ್ಲಿಂದು ಸಂವಾದ
ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದವರು ಮೈಸೂರಿನಲ್ಲಿ ಹಮ್ಮಿಕೊಂಡ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಮಣಿಪುರದ ಮೂವರು ಹೋರಾಟಗಾರ್ತಿಯರಾದ ಇಮಾ, ರೇಣು ಹಾಗೂ ಚಿತ್ರಾ ಅವರುಗಳೇ ವಿಶೇಷ ಅತಿಥಿಗಳು.
ಈ ಮೂವರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಇಂದು ಬೆಂಗಳೂರಿನಲ್ಲಿ ನಡೆಯುತ್ತಿದೆ (ಸ್ಥಳ: ಕನ್ನಡ ಭವನ ಕಟ್ಟಡದಲ್ಲಿರುವ ನಾಟಕ ಅಕಾಡೆಮಿಯ ಚಾವಡಿ, ಬೆಳಗ್ಗೆ 10.30ರಿಂದ). ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಕರ್ನಾಟಕ ಲೇಖಕಿಯರ ಸಂಘ ಹಾಗೂ ಪರ್ಯಾಯ ಕಾನೂನು ವೇದಿಕೆ ಸಹಯೋಗದಲ್ಲಿ ಈ ಸಂವಾದ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.