ADVERTISEMENT

ಆತ್ಮಚರಿತ್ರೆಯ ಕೊನೆಯ ಅಧ್ಯಾಯದಲ್ಲಿ

ಕವಿತೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2016, 19:30 IST
Last Updated 9 ಏಪ್ರಿಲ್ 2016, 19:30 IST
ಚಿತ್ರ: ಎಸ್.ವಿ. ಹೂಗಾರ
ಚಿತ್ರ: ಎಸ್.ವಿ. ಹೂಗಾರ   

ಸುಬ್ಬು ಹೊಲೆಯಾರ್
ನೆಲದ ಮೇಲೆ ಇರುವೆಗಳು
ಚಲಿಸುವುದನ್ನ
ಮರಗಳಿಂದ ಎಲೆಗಳು ಉದುರುವುದನ್ನು
ನಿಷೇಧಿಸುತ್ತೇವೆಂದು ಯಾರೂ ಹೇಳಲಾರರು

ನನ್ನ ಕೇರಿಯ ಮೇಲೆ ಸುರಿದ ಮಳೆಯ
ನೀರು ಅಣೆಕಟ್ಟೆಗೆ ಸೇರಿ ಅದು ಪವಿತ್ರರ
ಮನೆಯ ನಲ್ಲಿಯಿಂದ ತೀರ್ಥ, ಪಾಯಸವಾಗಿರುವುದು
ಇದುವರೆಗೆ ಯಾರಿಗೂ ಹೇಳಿಲ್ಲ
ಎನ್ನುವುದು ನನ್ನ ಆತಂಕ ಹೆಚ್ಚಿಸಿದೆ.

ಇವರಿಗೆ ನನ್ನ ಕೇರಿಯನ್ನ ಭೂಮಿಯಿಂದ
ಕತ್ತರಿಸಲ್ಪಟ್ಟ ಹಾಗೆ ಕಾಣಿಸಬೇಕೆಂದು
ನಾಲಿಗೆ ಪಸೆಯಲ್ಲಿ ಜೀವಂತ ಇರುವಾಗ
ನನ್ನ ತುಟಿಗಳು ಬಿಡಿಸದಂತೆ, ತಾವಾಗೇ ಅಂಟಿಕೊಂಡಿವೆ.

ADVERTISEMENT

ಚಿವುಟುತ್ತಲೇಯಿರಬೇಕು ನನ್ನ
ಅಂತ ಅವರ ಮನಸ್ಸು ಹೇಳುತ್ತಲೇ ಇರುತ್ತದೆ
ನನ್ನ ಹೃದಯ ಇವರನ್ನು ಕ್ಷಮಿಸಿ ಅಂತ
ಪ್ರಾರ್ಥಿಸುತ್ತಲೇ ಇರುತ್ತದೆ ಮಂಡಿಯೂರಿ.

ನನ್ನ ವಿವರಗಳಲ್ಲಿ ಗಾಯದ
ಗುರುತನ್ನ ದಾಖಲಿಸುವುದಿಲ್ಲ
ಕೇರಿಯ ಕಣ್ಣೀರಿನ ಜಾರುವಿಗೆ
ಶಾಯಿ ಮುಗಿದಿದೆ ಎಂದು ಪುಲಿಸ್ಟಾಪ್‌ನಲ್ಲಿ ಸುಳ್ಳುಹೇಳಲಾಗುವುದಿಲ್ಲ

ತಣ್ಣಗೆ ಸುಟ್ಟಾಗಲೆಲ್ಲಾ
ನನ್ನೆದೆ ನಿಮ್ಮ ತೂಗುವ ತೊಟ್ಟಿಲಾಗುತ್ತದೆ
ಹಿಮ್ಮಡಿ ತುಳಿಯುವ ನಿಮ್ಮ ಕ್ರೌರ್ಯ
ನನ್ನ ಮನೆಯ ನಾಯಿಯ ಬಾಲದ ಹಾಗೆ
ಹೇಳಿದರೆ ಹೇಗೆ? ನಿಮ್ಮ ಮನೆಯ
ನಾಯಿಯ ಬಾಲದ ಹಾಗೆ ಎಂದು ಹೇಳಲಾದೀತೆ!

ರಿಂಗ್‌ಟೋನಿನಲ್ಲಿ ಅಂಬೇಡ್ಕರ್ ಹೆಸರು ಕೇಳಿಸಿಕೊಳ್ಳದ
ನನ್ನ ಕೊಂದವರ ಹೆಸರಿನಲ್ಲಿ
ಮುಕ್ಕೋಟಿ ದೇವರ ಹೆಸರಿರಬಹುದೆ ಗೆಳೆಯ!
ಆತ್ಮಚರಿತ್ರೆಯ ಕೊನೆಯ ಅಧ್ಯಾಯದಲ್ಲಿ
ಇವರನ್ನ ಪಂಚಾಮೃತದಲ್ಲಿ ಮೀಯಿಸುತ್ತೇನೆ!
ಆಗಲಾದರೂ ಇವರ ಮೈ ಸಿಹಿಯಾಗಲೆಂದು.

ಲೋಕ ಎಷ್ಟು ಹಗುರಾಗಿದೆ.
ಗಿಡದ ಹೂ ತೇಲಾಡಿದ ಹಾಗೆ
ಚಿಟ್ಟೆ ಹಾರಾಡಿದ ಹಾಗೆ
ಇನ್ನೂ ಹಗುರಾಗಬೇಕು ಗಾಳಿಯಲ್ಲಿ.

ಮಹಾ ಭೀಮರಾವ್ ಹುಟ್ಟಿದ ದಿನ
ಮೌನದೊಳಗಿನ ಮೌನವಾಗಬೇಕೆಂದು
ಅವರನ್ನು ಕೇಳಿಸಿಕೊಳ್ಳಲು
ಕೆಲವರು ಉಸಿರಾಡುವುದನ್ನು ನೋಡಲು
ಇನ್ನಷ್ಟು ಸಹನೆಯಿಂದ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.