

ನೋಡಲು ನೂರಾರು ಮನಸುಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ಕಾಣಲು ನೂರಾರು ಕನಸುಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ಒಂದೇ ಒಂದು ಪರಿಚಿತ ದನಿಗಾಗಿ ಕಾದು ಕುಳಿತಿರುವೆ
ಕೇಳಲು ನೂರಾರು ಕೋಗಿಲೆಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ಆಸೆ ನಿರಾಶೆಯ ಲಕ್ಷಾಂತರ ಮುಖಗಳ ಮೆರವಣಿಗೆ ಶಹರಿನಲಿ
ಹೇಳಲು ನೂರಾರು ನಕ್ಷತ್ರಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ಮುತ್ತುಕೊಟ್ಟು ಅಳುತ್ತಾಳವಳು ಯಾಕೆಂದು ಮತ್ತೆ ಕೇಳಬೇಡಿ
ಪಾಲಿಸಲು ನೂರಾರು ಪ್ರಮಾಣಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ಮುಖದ ಮೇಲೆ ಮೂಡಿ ಚಕಿತಗೊಳಿಸುವವು ಅನೇಕ ಸಲ
ಬಚ್ಚಿಡಲು ನೂರಾರು ಗುಟ್ಟುಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ಎಲ್ಲಾ ಸಂಬಂಧಗಳು ಮುಗಿದು ಹೋದ ಮೇಲೆ ನೀನು ಬಂದೆ
ಇಡಲು ನೂರಾರು ಹೆಸರುಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ತೇವಗೊಂಡ ರೆಪ್ಪೆ ಇನ್ನೂ ಯಾರ ದಾರಿ ಕಾಯುತಿದೆ ರಾಜಾ
ಎಣಿಸಲು ನೂರಾರು ಹೆಜ್ಜೆಗಳಿವೆ ಇಲ್ಲಿ ಆದರೆ ಒಂದೂ ನನ್ನದಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.