ADVERTISEMENT

ಆಯೀ ಹೋಳಿ ವಾಜಿ ಠೋಳಿ

ಕೃಷ್ಣ ನಾಯಕ್, ಚಿತ್ರಗಳು: ಗುರುನಾಥ ಚವಾಣ್‌
Published 15 ಮಾರ್ಚ್ 2014, 19:30 IST
Last Updated 15 ಮಾರ್ಚ್ 2014, 19:30 IST

ಕರ್ನಾಟಕದ ಮಣಿಪುರಿಗಳೆಂದೇ ಖ್ಯಾತರಾಗಿರುವ ಲಂಬಾಣಿಗರು ವಿಶಿಷ್ಟ ಸಾಂಸ್ಕೃತಿಕ ಪರಂಪರೆಯುಳ್ಳವರು. ವರ್ಣರಂಜಿತ ವೇಷ-ಭೂಷಣ, ಆಚಾರ-ವಿಚಾರಗಳ ಲಂಬಾಣಿಗಳು ಸಮಾಜದ ಮುಖ್ಯ ವಾಹಿನಿಯಿಂದ ಪ್ರತ್ಯೇಕತೆಯನ್ನು ಕಾಯ್ದುಕೊಂಡು, ಊರಿಗೆ ತುಸು ದೂರದಲ್ಲಿ ಗುಡಿಸಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದಾರೆ.

ತಮ್ಮನ್ನು ‘ಗೋರ್’ ಎಂದು ಕರೆದುಕೊಳ್ಳುವ ಲಂಬಾಣಿಗರು, ತಾವು ಮಾತಾಡುವುದನ್ನು ‘ಗೋರ್ ಬೋಲಿ’ ಎಂದು ಹೇಳುತ್ತಾರೆ. ರಾಜಸ್ತಾನದ ಹಿನ್ನೆಲೆಯುಳ್ಳ ಈ ಜನರು ರಾಜಾ ರಾಣಾ ಪ್ರತಾಪಸಿಂಗನ ಅವಸಾನದ ನಂತರ ಮೂಲವನ್ನು ತೊರೆದು ಭಾರತದ ಎಲ್ಲೆಡೆ ಹರಡಿಕೊಂಡರು. ದನಗಳನ್ನು ಸಾಕುವುದೇ ಮುಖ್ಯ ವೃತ್ತಿಯನ್ನಾಗಿ ಮಾಡಿಕೊಂಡ ಇವರು, ತಾವು ಸಾಕಿದ ದನಗಳ ಮೇಲೆ ಲವಣದ (ಉಪ್ಪಿನ) ಹೇರುಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತ ಅಲೆಮಾರಿಗಳಾಗಿಯೇ ಇದ್ದರು.

ಬ್ರಿಟಿಷರು ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿ, ತಮ್ಮ ವ್ಯಾಪಾರ, ವಹಿವಾಟಿಗೆಂದು ರೈಲುಗಾಡಿ ಆರಂಭಿಸಿದಾಗ ಇವರ ವ್ಯವಹಾರಕ್ಕೆ ಸಂಚಕಾರ ಬಂದಿತು. ಹೀಗಾಗಿ ವ್ಯವಸಾಯದಲ್ಲಿ ತೊಡಗಿಕೊಂಡು ಅಲ್ಲಲ್ಲಿ ತಂಡೋಪತಂಡವಾಗಿ ನೆಲೆ ನಿಂತು ಬದುಕನ್ನು ಕಟ್ಟಿಕೊಳ್ಳತೊಡಗಿದರು.

ಲಂಬಾಣಿಗರಲ್ಲಿ ಗೋರ್ ಪಂಚಾಯತಿ ವ್ಯವಸ್ಥೆ ಜಾರಿಯಲ್ಲಿದೆ. ಸಾಮಾಜಿಕ ಸಂಘಟನೆಯಲ್ಲಿ ತಾಂಡೆಯ ನಾಯಕನದೇ ಪ್ರಮುಖ ಪಾತ್ರ. ಅವನಿಗೆ ಸಹಾಯಕನಾಗಿ ಕಾರಭಾರಿ ಇರುತ್ತಾನೆ.  ಹಬ್ಬ–ಹರಿದಿನ, ಮದುವೆ–ಮುಂಜಿ ಮುಂತಾದ ಆಚರಣೆಗಳಲ್ಲಿ ಪ್ರತಿಯೊಬ್ಬ ಲಂಬಾಣಿ ಪಾಲ್ಗೊಳ್ಳುತ್ತಾನೆ. ಗೋರ್ ಪಂಚಾಯತಿಯ ನಿಯಮ, ನಡಾವಳಿ, ಕಟ್ಟು ಕಟ್ಟಳೆಗಳನ್ನು ಉಲ್ಲಂಘಿಸಿದವರಿಗೆ ಜಾತಿಯಿಂದ ಹೊರಗಿಡುವ ಕಠೋರ ಶಿಕ್ಷೆ ಇಲ್ಲವೇ ದಂಡ ವಿಧಿಸಲಾಗುತ್ತದೆ.

ಹಿಂದೂ ಸಂಪ್ರದಾಯವನ್ನು ಅನುಸರಿಸುವ ಲಂಬಾಣಿಗರು ತಮ್ಮದೇ ಆದ ಪದ್ಧತಿಯಿಂದ ಹಬ್ಬಗಳನ್ನು ಆಚರಿಸುವುದು ವಿಶೇಷ. ಲಂಬಾಣಿಗರು ಭಾರತೀಯ ಎಲ್ಲ ಪ್ರಮುಖ ಹಬ್ಬಗಳಾದ ದಸರಾ, ದೀಪಾವಳಿ, ನಾಗಪಂಚಮಿ, ಗೌರಿ ಮುಂತಾದವುಗಳನ್ನು ಆಚರಿಸುತ್ತಾರೆ. ಆದರೆ ಈ ಎಲ್ಲ ಹಬ್ಬಗಳಿಗಿಂತಲೂ ಹೋಳಿ ಹಬ್ಬವನ್ನು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ. ಇದು ವಿಶೇಷವಾಗಿ ಪುರುಷ ಪ್ರಧಾನ ಹಬ್ಬವಾಗಿದ್ದರೂ, ಹೆಣ್ಣುಮಕ್ಕಳೂ ಇದರಲ್ಲಿ ಭಾಗವಹಿಸುತ್ತಾರೆ. ಅವಿವಾಹಿತ ಕನ್ಯೆಯರು ಹಾಡು, ನೃತ್ಯಾದಿಗಳಲ್ಲಿ ಮಾತ್ರ ಪಾಲ್ಗೊಳ್ಳುತ್ತಾರೆ.

‘ಕಾಮ’ ದಹನ ಹೋಳಿ ಹಬ್ಬದ ಆಚರಣೆಯ ಒಂದು ವಿಶೇಷ. ಇಲ್ಲಿ ಮನರಂಜನೆಗೆ ಮೊದಲ ಸ್ಥಾನ. ಹೋಳಿ ಹಬ್ಬ ಬರುತ್ತಿದ್ದಂತೆ ತಮ್ಮ ತೋಟ–ಪಟ್ಟಿ, ಹೊಲ–ಗದ್ದೆಗಳ ರಾಶಿ ರಬಟಿಯ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಿ, ವರುಷದ ಗಂಜಿಯನ್ನು ಜಮಾಯಿಸಿಕೊಳ್ಳುತ್ತಾರೆ. ದುಡಿದು ಬೇಸತ್ತ ಇವರಿಗೆ ಈ ಹಬ್ಬವು ವರವಾಗಿ ಲಭಿಸುತ್ತದೆ. ಎಲ್ಲರೂ ಹೊಸ ಬಟ್ಟೆಗಳನ್ನು ಹಾಕಿಕೊಂಡು ಹೆಣ್ಣು–ಗಂಡು ಎಂಬ ಭೇದಭಾವವಿಲ್ಲದೆ ಹಾಡಿ ಕುಣಿದು ಸಂತೋಷಪಡುತ್ತಾರೆ.

ಹೋಳಿ ಆಚರಣೆಗಾಗಿ ಹತ್ತು–ಹನ್ನೆರಡು ದಿನ ಮೊದಲೇ ತಾಂಡೆಯ ನಾಯಕನಿಂದ ಅನುಮತಿ ಪಡೆದು, ಪ್ರತಿದಿನ ಬೆಳದಿಂಗಳ ರಾತ್ರಿ ಪುರುಷರೆಲ್ಲರೂ ಸೇರಿ ಲೇಂಗೀ (ಪ್ರೇಮಗೀತೆ) ಹಾಡುತ್ತ, ಕುಣಿಯುತ್ತಾರೆ. ಹೆಣ್ಣುಮಕ್ಕಳು ಗುಂಪಾಗಿ ಹಾಡು ಹೇಳುತ್ತ ನೃತ್ಯ ಮಾಡುತ್ತಾರೆ.

ಕಾಮ ದಹನಕ್ಕಾಗಿ ತಾಂಡೆಯಲ್ಲಿ ಆ ವರ್ಷವೇ ಮದುವೆ ಆಗುವ ಇಬ್ಬರು ತರುಣರನ್ನು ಆಯ್ಕೆ ಮಾಡಲಾಗುತ್ತದೆ. ಇವರಿಗೆ ‘ಗೇರಿಯಾ’ ಎಂದು ಕರೆಯುತ್ತಾರೆ. ಇವರಲ್ಲಿ ಒಬ್ಬ ಭೂಕಿಯಾ ಗೋತ್ರದವನಾದರೆ, ಇನ್ನೊಬ್ಬ ಜಾತ ಗೋತ್ರದವನು. ಹೋಳಿ ಆಚರಣೆಯ ಸಂಪೂರ್ಣ ಜವಾಬ್ದಾರಿ ಇವರದೇ. ಎಲ್ಲರಿಗಿಂತ ಬೇರೆಯಾಗಿ ಎದ್ದು ಕಾಣುವಂತೆ ಇವರು ತಲೆಗೆ ಕೆಂಪು ಛಾಂಟಿಯಾದ ಬಟ್ಟೆ ಕಟ್ಟಿಕೊಂಡಿರುತ್ತಾರೆ. ಇವರು ತಾಂಡೆಯ ಹುಡುಗರೊಡಗೂಡಿ ಎತ್ತಿನ ಗಾಡಿ ಕಟ್ಟಿಕೊಂಡು ರಾತ್ರಿಯೆಲ್ಲ ಹೊಲಗದ್ದೆಗಳಿಂದ ಹುಲ್ಲನ್ನು ಸಂಗ್ರಹಿಸಿ ತಂದು ತಾಂಡೆಯ ಮುಂದೆ ಬಯಲು ಜಾಗದಲ್ಲಿ ರಾಶಿ ಒಟ್ಟುತ್ತಾರೆ.

ನಸುಕಿನ ಜಾವ ಬೆಳ್ಳಿ ಚುಕ್ಕಿ ಮೂಡುವ ಹೊತ್ತಿಗೆ ತಾಂಡೆಯ ಸಮಸ್ತರು ಸೇರಿ ಕಾಮನಿಗೆ ಬೆಂಕಿ ಹಚ್ಚುತ್ತಾರೆ. ತಕ್ಷಣವೇ ಗೇರಿಯಾಗಳಿಬ್ಬರು ಈ ಮೊದಲೇ ಹುಲ್ಲಿನ ರಾಶಿಗೆ ಆನಿಸಿ ಇಟ್ಟಿದ್ದ ಔಡಲ ಗಿಡದ ಟೊಂಗೆಗಳನ್ನು ಎತ್ತಿಕೊಂಡು ಬಾವಿಗೆ ದೌಡಾಯಿಸುತ್ತಾರೆ. ಅಲ್ಲಿ ಔಡಲ ಗಿಡದ ಟೊಂಗೆಗಳನ್ನು ಬಾವಿಗೆ ಎಸೆದು, ಬಾವಿಯ ನೀರಲ್ಲಿ ತಮ್ಮ ಅಂಗವಸ್ತ್ರವನ್ನು ಅದ್ದಿ ಗಂಗಾಜಲ ತರುತ್ತಾರೆ.

ಓಡಿ ಬರುವ ಅವರು ಉರಿಯುತ್ತಿರುವ ಕಾಮನ ಸುತ್ತಲೂ ಪ್ರದಕ್ಷಿಣೆ ಹಾಕುತ್ತ, ಅಂಗವಸ್ತ್ರದಲ್ಲಿ ತಂದಿದ್ದ ಗಂಗೆಯನ್ನು ಕಾಮನ ಅಗ್ನಿಗೆ ಸಿಂಪಡಿಸುತ್ತ, ಏಳು ಸುತ್ತು ಹಾಕುತ್ತಾರೆ. ನಂತರ ಅವರು ಬದಿಗೆ ಸರಿದು ನಿಂತು ಎಲ್ಲರಂತೆ ಬೊಬ್ಬೆ ಹಾಕುತ್ತಾರೆ. ಆಮೇಲೆ ಗೇರಿಯಾಗಳಿಬ್ಬರೂ ತಾಂಡೆಯ ನಾಯಕ ಹಿರಿಯರಾದಿಯಾಗಿ ಎಲ್ಲರಿಗೂ ಕಾಮನ ಬೂದಿ ಕೊಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯುತ್ತಾರೆ. ಆಮೇಲೆ ತಾಂಡೆಯ ಜನ ಕಾಮನ ಬೂದಿಯನ್ನು ಒಬ್ಬರಿಗೊಬ್ಬರು ಕೊಟ್ಟು ನಮಸ್ಕಾರ ಮಾಡುತ್ತಾರೆ.

ತದನಂತರ ಅಲ್ಲಿಯೇ ಕುಳಿತು ಹೋಳಿಯ ಬೆಂಕಿಯಲ್ಲಿ ಕಡ್ಲಿಕಾಳು ಸುಟ್ಟು ತಿನ್ನುತ್ತಾರೆ. ಹೀಗೆ ಕಾಮ ದಹನದ ಶಾಸ್ತ್ರ ಮುಗಿಯತ್ತದೆ.

ಹೋಳಿ ಹಬ್ಬದಲ್ಲಿ ಮಕ್ಕಳಿಗೆ ಧೂಂಡ (ಹುಟ್ಟು ಹಬ್ಬ) ಆಚರಿಸುವುದೊಂದು ಲಂಬಾಣಿಗರಲ್ಲಿ ವಿಶಿಷ್ಟವಾದ ಪದ್ಧತಿ. ಆ ವರ್ಷದೊಳಗೆ ಹುಟ್ಟಿದ್ದ ಗಂಡು ಮಕ್ಕಳಿಗೆ ಧೂಂಡ ಆಚರಣೆ ಮಾಡುತ್ತಾರೆ. ಧೂಂಡ ಇರುವ ಮನೆಯಲ್ಲಿ ಹೋಳಿ ಹಬ್ಬದ ವಿಶೇಷ ಕಳೆ ಇರುತ್ತದೆ. ಅಂತಹ ಮನೆಗಳ ಮುಂದೆ ಮುನ್ನಾ ದಿನದ ರಾತ್ರಿ ಕಂಬ ನೆಡಿಸಿ ಕಂಬಳಿ ಹೊಚ್ಚಿ ಚಪ್ಪರ (ಪಾಲ) ಕಟ್ಟುತ್ತಾರೆ. ರಾತ್ರಿ ಇಡೀ ಗೋಧಿ ಹಿಟ್ಟಿನ ಪುರಿ, ಹಂಡೆಗಳಲ್ಲಿ ಚಜ್ಜಕ ಮಾಡುವ ಕಾರ್ಯ ನಡೆದಿರುತ್ತದೆ. ನಸುಕಿನಲ್ಲಿ ಕಾಮದಹನ ಆದ ಮೇಲೆ ಇಡೀ ದಿನ ಹೆಣ್ಣು–ಗಂಡು ಸೇರಿದಂತೆ ಎಲ್ಲರೂ ತಾಂಡೆಯ ಪ್ರತಿ ಮನೆಗಳಿಗೆ ತೆರಳಿ ಆಡುತ್ತ, ಹಾಡುತ್ತ ತಿರುಗುತ್ತಾರೆ. ಮನೆಯ ಯಜಮಾನ ಖುಷಿಯಿಂದ ನೀಡುವ ಸೆರೆ ಗುಟುಕರಿಸುತ್ತಾರೆ.

ಅವರು ಕೊಟ್ಟ ರೊಕ್ಕ (ದುಡ್ಡು) ಪಡೆದು ಅವರಿಗೆ ಒಳ್ಳೆಯದಾಗಲಿ ಎಂದು ಹರಸುತ್ತಾರೆ. ಹೋಳಿಯ ಹರಕೆಯ ಹಾಡು ಶುರುವಾಗುವುದು ಹೀಗೆ:
ಬೇಟಾ ಲಾರ ಬೇಟಾ ತಾರ ಸಾತ ವಿಯರ ಭಾಯಿ, ಸಾತವಿಯ
ಹೇ – ಖಂಡಿ ಭರ ತಾರೋ ಖಾಡು ವಿಯರ ಭಾಯಿ ಖಾಡುವಿಯ
ಹೋಳಿ ಹಬ್ಬದ ಇಡೀ ದಿನವನ್ನು ಲಂಬಾಣಿಗರು ಕುಡಿದು, ಕುಣಿದು, ಕುಪ್ಪಳಿಸುತ್ತ ಕಳೆಯುತ್ತಾರೆ. ಇಳಿಹೊತ್ತಿಗೆ ‘ಧೂಂಡ ಕಾರಣ’ ಮಾಡುತ್ತಾರೆ. ಇಲ್ಲಿ ಒಂದು ಪಂಥ ನಡೆಯುತ್ತದೆ. ಚಜ್ಜಕದ ಹಂಡೆಯನ್ನು ಮನೆ ಅಂಗಳದಲ್ಲಿ ಗೂಟ ನೆಡಿಸಿ ಹಗ್ಗದಿಂದ ಬಿಗಿದು ಕಟ್ಟಲಾಗುತ್ತದೆ. ಅದನ್ನು ತಾಂಡೆಯ ಹೆಣ್ಣುಮಕ್ಕಳು ಕೈಯಲ್ಲಿ ಕೋಲು ಹಿಡಿದು ಕಾವಲು ಕಾಯುತ್ತಾರೆ. ತರುಣರು ಗೇರಿಯಾಗಳ ಸಹಾಯದಿಂದ ಆ ಚಜ್ಜಕದ ಹಂಡೆ ಎಳೆದೊಯ್ಯಲು ಪ್ರಯತ್ನಿಸುತ್ತಾರೆ. ಕಾವಲು ಬಿಗಿಯಾಗಿರುತ್ತದೆ.

ಸೆರೆಯ ಅಮಲಿನಲ್ಲಿ ಇರುವ ಅವರು ಸಾಕಷ್ಟು ಹೊಡೆತ ಬಡಿತಗಳ ನಡುವೆಯು ಚಜ್ಜಕದ ಹಂಡೆಯನ್ನು ಹುಡುಗಿಯರಿಂದ ಕಿತ್ತುಕೊಂಡು ಎಳೆದು ಒಯ್ಯುವಲ್ಲಿ ಯಶಸ್ವಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ಅವರು ಹೆಣ್ಣುಮಕ್ಕಳು ತಮ್ಮ ಕೈಮುಷ್ಠಿಯಲ್ಲಿ ಬಿಗಿಯಾಗಿ ಹಿಡಿದಿರುವ ಗೋಧಿ ಹಿಟ್ಟಿನ ‘ಗುಂಜಾ’ ಕಸಿದುಕೊಂಡು ಗೆಲುವಿನ ಹರ್ಷವನ್ನು ವ್ಯಕ್ತಪಡಿಸುತ್ತಾರೆ. ಹಾಗೆ ಮಾಡದಿದ್ದಲ್ಲಿ ತಮ್ಮ ಪೌರುಷಕ್ಕೆ ಕುಂದು ಎಂದು ಭಾವಿಸಿಕೊಳ್ಳುತ್ತಾರೆ. ಇದೊಂದು ಬಹಳ ರಸಮಯವಾದ ಸನ್ನಿವೇಶ. ಇದನ್ನು ತಾಂಡೆಯ ಹೆಣ್ಣು–ಗಂಡು ಮಕ್ಕಳಾದಿಯಾಗಿ ಎಲ್ಲರೂ ನೋಡಿ ಖುಷಿ ಪಡುತ್ತಾರೆ.

ಆಮೇಲೆ ಮಗುವಿಗೆ ಧೂಂಡ ಆಚರಣೆ ಮಾಡುವ ಕಾರ್ಯ. ಮಗುವಿಗೆ ಹೊಸ ಬಟ್ಟೆ ಹಾಕಿ, ತಲೆಗೆ ಕೆಂಪು ಛಾಂಟಿಯಾದ ಬಟ್ಟೆ ಕಟ್ಟಿ ಅಲಂಕರಿಸಿ ಚಪ್ಪರದ ಕೆಳಗೆ ಹಾಕಿದ್ದ ಗೋಣಿ ಚೀಲದ ಮೇಲೆ ಕೂಡಿಸುತ್ತಾರೆ. ಮಗುವಿನ ಸುತ್ತಲು ನಾಲ್ಕು ಮೂಲೆಗಳಲ್ಲಿ ಪುರಿ, ಚಜ್ಜಕದ ನೈವೇದ್ಯ ಇಡಲಾಗುತ್ತದೆ. ಎಲ್ಲರೂ ಸೇರಿ ಕೈಯಲ್ಲಿನ ಕೋಲಿನಿಂದ ಮೇಲುಗಡೆ ಅಡ್ಡವಾಗಿ ಹಿಡಿದಿರುವ ಕಟ್ಟಿಗೆಗೆ ತಾಳ ಬಾರಿಸುತ್ತ–

ಆಯೀ ಹೋಳಿ ವಾಜಿ ಠೋಳಿ
ಸರೀಕ ಸರಿ ಯಾ ಜಂಪಾ ಝೋಲ್
ಜುಂ ಜುಂ ಜಂಪಾ ಲೇರಾ ಲ
ಎಂದು ಹಾಡು ಹಾಡುತ್ತ ಮಗುವು ದಿನದಿನವು ಬೆಳೆಯಲೆಂದು ಹರಸುತ್ತಾರೆ.

ಅಂದು ರಾತ್ರಿ ತಾಂಡೆಯ ಎಲ್ಲ ಹೆಣ್ಣುಗಳು ಮತ್ತು ಆ ವರ್ಷದಲ್ಲಿ ಗಂಡು ಮಕ್ಕಳನ್ನು ಹೆತ್ತಿರುವ ತಾಯಂದಿರು ತಮ್ಮ ತಮ್ಮ ಕೂಸುಗಳನ್ನು ಎತ್ತಿಕೊಂಡು ‘ಹೋಳಿ ಧೊಕಾಯೆರೋ’ (ಕಾಮನಿಗೆ ನಮಿಸಲು) ತೆಂಗಿನಕಾಯಿ ಅಥವಾ ಕೊಬ್ಬರಿಯ ಗಿಟಕುಗಳೊಂದಿಗೆ ಹೋಗಿ ಕಾಮನ ಪೂಜಿಸಿ, ಕಾಮಸುಟ್ಟ ಬೂದಿಯನ್ನು ಮಕ್ಕಳ ಹಣೆಗೆ ಹಚ್ಚುತ್ತಾರೆ. ಆಮೇಲೆ ಎಲ್ಲ ಹೆಣ್ಣುಮಕ್ಕಳು ಕಾಮನಿಗೆ ಸುತ್ತು ಹಾಕಿ ಉಡಿಯಲ್ಲಿನ ಜೋಳದ ಕಾಳು ಬೆಂಕಿಗೆ ಹಾಕುತ್ತ, ಹಾಡುತ್ತ ತಮಗೆ ಸಂತಾನ ಭಾಗ್ಯ ಕೊಡುವಂತೆ ಬೇಡಿಕೊಳ್ಳುತ್ತಾರೆ.

ತಾಂಡೆಯ ನಾಯಕನು ಸೇರಿದಂತೆ ಸಕಲ ಗಂಡಸರು ತಮ್ಮ ಮನೆಯಲ್ಲಿರುವ ವಿವಿಧ ಆಯುಧ, ದೇವರ ಫೋಟೊಗಳ ಸಮೇತ ಕಾಮನಿಗೆ ಪೂಜಿಸಲು ಹೋಗಿ, ಜೋಳದ ಕಾಳನ್ನು ಬೆಂಕಿಗೆ ಅರ್ಪಿಸುತ್ತ ಒಂದು ಸುತ್ತು ಹಾಕಿ ತಮಗೊದಗಿದ ಕಂಟಕಗಳನ್ನು ಕಳೆದು ಸಕಲ ಸಮೃದ್ಧಿಯನ್ನು ದಯಪಾಲಿಸು ಎಂದು ಬೇಡಿಕೊಳ್ಳುತ್ತಾರೆ. ತಾಂಡೆಯ ನಾಯಕ ಅಲ್ಲಿಯೇ ಒಂದು ಸಭೆ ಮಾಡಿ ನೆರೆದಿರುವ ಎಲ್ಲರಿಗೂ ಇಲ್ಲಿಯವರೆಗೆ ನೀವು ಮಾಡಿದ ಕಾಮಚೇಷ್ಟೆ, ಹುಡುಗಾಟ, ಮಸ್ಕರಿಯಾದಿ ಮಾತುಗಳನ್ನು ಬಿಟ್ಟು, ಇನ್ನು ಮುಂದೆ ಅಕ್ಕ-ತಂಗಿ, ಅಣ್ಣ-ತಮ್ಮ, ಅವ್ವ-ಅಪ್ಪ ಎಂದು ಎಲ್ಲರೂ ರೀತಿ ರಿವಾಜಿನಂತೆ ನಡೆದುಕೊಳ್ಳಬೇಕೆಂದು ಹೇಳಿ ಸಭೆ ಮುಗಿಸುತ್ತಾನೆ. ಮರುದಿನ ‘ಗೇರ್’ ಸಂಭ್ರಮ. ಹೋತದ ಮರಿಗಳನ್ನು ಕೊಯ್ದು ಮನೆಗೊಂದರಂತೆ ಪಾಲು ಹಾಕುವ ಬಾಡೂಟದ ಸಡಗರ. ಧೂಂಡ ಇದ್ದ ಮನೆಗಳಿಗೆ ಮತ್ತು ಗೇರಿಯಾಗಳಿಗೂ ಮಾಂಸದಲ್ಲಿ ಪಾಲು ಕೊಡುತ್ತಾರೆ. ಅಲ್ಲಿಗೆ ಹೋಳಿ ಆಚರಣೆ ಮುಗಿಯುತ್ತದೆ.

ಒಟ್ಟಿನಲ್ಲಿ ಲಂಬಾಣಿಗರ ಪಾಲಿಗೆ ಹೋಳಿ ಅತ್ಯಂತ ದೊಡ್ಡ ಹಬ್ಬ ಹಾಗೂ ಜೀವನಪ್ರೀತಿಯ ಆಚರಣೆ. ಈ ಸಂದರ್ಭದಲ್ಲಿ ಅವರು ಹಾಡುವ ಹಾಡು, ಹಾಕುವ ಲೇಂಗೀ, ಕುಣಿತ, ನೃತ್ಯಗಳಲ್ಲಿ ಪ್ರೇಮ, ಪ್ರಣಯ, ವಿನೋದಗಳು ತುಂಬಿರುತ್ತವೆ. ಈ ಸಮುದಾಯದ ಕಲೋಪಾಸನೆ, ಸೌಂದರ್ಯಪ್ರಜ್ಞೆ, ರಸಿಕತೆಯನ್ನು ಹಬ್ಬದ ಆಚರಣೆಯಲ್ಲಿ ಕಾಣಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.