ಹಠಾತ್ತನೆ ಬತ್ತಲಾಗಿ ನಿಂತುಬಿಟ್ಟಿದೆ ಮನೆ
ಬಿಸಿಲೇರುವುದರೊಳಗೆ...
ಮರು ಛಾವಣಿಗೆಂದು ಹುಲ್ಲಿನ ಮಾಡು ತೆಗೆದಿದ್ದಾರೆ.
ಮನೆ ತುಂಬ ಸಂದಿಗೊಂದಿಗಳಲ್ಲಿ ನುಗ್ಗುತಿದೆ
ಎಂದಿಲ್ಲದ ಪ್ರಕಾಶ
ಗೋಡೆಯ ಫೋಟೋ ಪಟಗಳ ಕಣ್ಣು ಕುಕ್ಕುವಂತೆ
ಆಲಯವೆ ಬಯಲಾದಂತೆ...
ಆಕಾಶಕ್ಕೆ ಆಕಾಶವೇ ತನ್ನ ಮುಖವನ್ನು
ಈಗಷ್ಟೆ ಈ ಒಲೆಯ ಮೇಲಿಡಲಾದ ಗಂಜಿ ಮಡಕೆಯಲ್ಲಿ
ನೋಡಿಕೊಳ್ಳಲಿ...
ಒಲೆಯ ಹಿಂದಿನ ಮಸಿಗೋಡೆ ಕೋರಾ ಬಿಸಿಲಲ್ಲಿ
ಮಿಂದುಕೊಳ್ಳಲಿ...
ಈಳಿಗೆ ಮಣೆ, ಒಗ್ಗರಣೆ ಸವುಟು,
ಅಗುಳಿನ ಅಡ್ಡ ಪಲ್ಲಕ್ಕಿ ಎಳೆವ ಇರುವೆ ಸಾಲು,
ಗಿಳಿಗೂಟಕ್ಕೆ ತೂಗಿರುವ ಪೈರಾಣದ ಜೇಬಲ್ಲಿರುವ
ಮಡಿಸಿದಲ್ಲೆ ಜೀರ್ಣವಾದ ಬೆವರು ಕಾಗದ ಪತ್ರ,
ಬಚ್ಚಲ ಕಟ್ಟೆಯ ಮೇಲಂಟಿರುವ ಸಬಕಾರದ ಬಿಲ್ಲೆ,
ನೆಲದ ಮೇಲೇ ಬಿಟ್ಟ ಅಂಕಲಿಪಿ, ದೇವರಿಗೆಂದು
ಚಬ್ಬೆಯಲ್ಲೆ ನಿರುಪಾಯವಾಗಿ ಅರಳುತ್ತಿರುವ
ದಾಸಾಳದ ಮೊಗ್ಗು...
ಎಲ್ಲವಕೂ ಅಲ್ಲಲ್ಲೆ ಒಂದು ನಗ್ನ ಬಿಡುಗಡೆ...
ಅಡಗಿ ಕೂತವನ ಮುಖಕೆ
ಬ್ಯಾಟರಿ ಬಿಟ್ಟಂತೆ
ಪರಿಚಿತ ಮುಖಗಳೇ ಈಗ ಅಪರಿಚಿತವೇಕೆ
ಬೆಳಕು ಬದಲಾದಾಗ ಕಥೆಯೆ ಬದಲಾದೀತೆ...
ಎಲ್ಲ ಅಲ್ಲಲ್ಲೆ ಅವಾಕ್ಕಾಗಿ ನಿಂತು ಮುಂದಿನ ಇಶಾರೆಗೆ
ಕಾಯುತಿವೆ...
ಚಲಿಸುವ ಕವಿತೆಗೆ ಕಾದ ನಿಶ್ಚಲ ಪದಗಳಂತೆ...
ನಸುಕಿಗೇ ಎದ್ದು ಎಲ್ಲರ ಬಟ್ಟೆ ಒಗೆಯಲು
ಅಘನಾಶಿನಿ ತಡಿಗೆ ಹೋಗಿದ್ದ ದೊಡ್ಡಮ್ಮ
ಬುಟ್ಟಿ ತುಂಬ ಹಿಂಡಿದ ಬಟ್ಟೆಗಳನ್ನು
ಸೊಂಟದ ಮೇಲಿಟ್ಟುಕೊಂಡು ಮರಳುತಿದ್ದವಳು
ದೂರದಿಂದಲೇ ಹೌಹಾರುತ್ತಾಳೆ–
ರುಂಡವಿಲ್ಲದ ಮನೆಯನ್ನು ನೋಡಿ.
ಪವಿತ್ರವಾದ ಹರುಕುಗಳೆಲ್ಲ ಹರಾಜಿಗೆ ಬಿದ್ದಂತೆ ಹೆದರಿ
ಅಲ್ಲಿಂದಲೇ ಕೂಗುತ್ತಾಳೆ– ಬೇಗ್ ಬೇಗ್ ಮುಗಸ್ರೋ
ಮಳೆ ಬರುದೋ... ಮಳೆ ಬರುದೋ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.