ADVERTISEMENT

ಒಲವಿನನುಭೂತಿ `ಔದುಂಬರ ಗಾಥ'

ಸತ್ಯನಾರಾಯಣರಾವ್ ಅಣತಿ
Published 19 ಜನವರಿ 2013, 19:59 IST
Last Updated 19 ಜನವರಿ 2013, 19:59 IST

ಶಿವಮೊಗ್ಗದಲ್ಲಿ ಈಚೆಗೆ ಒಂದು ವಿಶೇಷ ನೃತ್ಯ ಪ್ರಾತ್ಯಕ್ಷಿಕೆ ನೋಡುವ ಅವಕಾಶ ಒದಗಿಬಂದಿತ್ತು. ಡಾ. ಪವಿತ್ರ ನಮ್ಮೂರಿನ ಮನೋವೈದ್ಯರು. ಹೆಸರಾಂತ ಭರತನಾಟ್ಯ ಕಲಾವಿದರು. ಈಗಾಗಲೇ ಅನೇಕ ನೂತನ ಪ್ರಯೋಗಗಳಿಂದ ಜನಪ್ರಿಯರು. ಕುವೆಂಪು ಕವಿನಮನ, ಋತುವೈಭವದಲ್ಲಿ ಋತುಮಾನದ ವಿಶೇಷತೆಗಳನ್ನು ಅಭಿನಯಿಸಿ ತೋರಿಸಿದ್ದಾರೆ.

ಪುತಿನ ಕವಿತೆಗಳ ನೃತ್ಯ ಪ್ರಾತ್ಯಕ್ಷಿಕೆಯೂ ಪ್ರಯೋಗವಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ ಬೇಂದ್ರೆಯವರ `ಔದುಂಬರ ಗಾಥ' ನೃತ್ಯರೂಪಕ ಪ್ರಾತ್ಯಕ್ಷಿಕೆ. ಇದು ಬೇಂದ್ರೆಯವರ ಅಧ್ಯಾತ್ಮ ಸಾಧನೆಯ `ರಸ ಮಕರಂದ' ಉಣಬಡಿಸುವ ಪ್ರಯತ್ನ. 

ಬೇಂದ್ರೆ ಕವಿತೆಗಳಲ್ಲಿನ ನಾದ ಮತ್ತು ಕಾವ್ಯ ರಸ ಸ್ಥಾನಗಳನ್ನು ನೃತ್ಯದ ಮೂಲಕ ಪ್ರದರ್ಶಿಸಿ ಸಮಾಜದ ಮಾನಸಿಕ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ನನ್ನ ಈ ಪ್ರಯತ್ನ ಎಂದು ಪವಿತ್ರ ನಮ್ರತೆಯಿಂದ ಹೇಳಿಕೊಂಡರು. ಅವರ ಪರಿಶ್ರಮ ಶ್ಲಾಘನೀಯ.

ಸಂಗೀತ, ಸಾಹಿತ್ಯ, ನಾಟಕ ಇತರ ಲಲಿತ ಕಲೆಗಳು ರಸಸ್ಥಿತಿಯಲ್ಲಿ ಮನಸ್ಸನ್ನು ಸಂಮೋಹಗೊಳಿಸುವ ಶಕ್ತಿಯಿಂದ `ಸದ್ಯಃಪರ ನಿವೃತ್ತಿ'ಯನ್ನು ಸಹೃದಯ  ಹೊಂದುತ್ತಾನೆಂಬುದು ಮೀಮಾಂಸಕರ ಅಭಿಮತ. (ಕಾವ್ಯ ಪ್ರಯೋಜನಗಳಲ್ಲಿ ಇದೂ ಒಂದು). ಆರ್ದ್ರಗೊಳಿಸುವ ಕಲೆಯ ಗುಣದಿಂದಾಗಿ, ಸಹೃದಯನಲ್ಲಿ ಸುಮನಸ್ಕ ಸ್ಥಿತಿಯನ್ನು ಉಂಟುಮಾಡಲು ಪವಿತ್ರ ಅವರ ಥೆರೋಪೆಟಿಕ್ ಪ್ರಯತ್ನ ಸಾಧುವಾದುದೇ.

ಬೇಂದ್ರೆಯವರ ಎಂಟು ಹತ್ತು ಕವಿತೆಗಳ ಮೂಲಕ ಅವರ ಕಾವ್ಯ ಸಾಧನೆಯ ಸಿದ್ಧಿಯನ್ನು ಪರಿಚಯಿಸುವುದು ಈ ನೃತ್ಯ ಪ್ರಾತ್ಯಕ್ಷಿಕೆ ಪ್ರಯೋಗವಾಗಿದೆ. ಔಂದುಂಬರಗಾಥ, ನೀ ಹಿಂಗ ನೋಡಬ್ಯಾಡ ನನ್ನ, ನಾನು ಬಡವಿ, ಭಾವಗೀತೆ, ಹುಬ್ಬಳ್ಳಿಯಾಂವಾ, ಪಾತರಗಿತ್ತಿ ಪಕ್ಕ, ಇಳಿದು ಬಾ ತಾಯೆ, ತುಮ್ ತುಮ್ ತುಮ್ ತುಂಬಿಬಂದಿತ್ತ, ಗಂಗಾವತರಣ, ಹಕ್ಕಿ ಹಾರುತಿದೆ ನೋಡಿದಿರಾ ಮತ್ತು ಕುಣಿಯೋಣು ಬಾರಾ ಕವಿತೆಗಳ ಮೂಲಕ ಕವಿನಮನ, ಕವಿ ದರ್ಶನವನ್ನು ಪ್ರದರ್ಶಿಸುವ ಪ್ರಯತ್ನವಾಗಿದೆ.

ಕವಿತೆಯ ಆಶಯಗಳನ್ನು ನರ್ತಕಿಯೇ ತಿಳಿಯಹೇಳುತ್ತಾರೆ. ಲಯ ತಾಳ ಗತಿ ವಿನ್ಯಾಸದ ಮೂಲಕ ಕವಿಯ ಸಾಧನೆ ಸಿದ್ಧಿಗಳನ್ನು ನರ್ತಿಸಿ ತೋರಿಸುತ್ತಾರೆ. ಆದರೆ ನರ್ತನದಲ್ಲಿ ಕವಿಯ ಸಿದ್ಧಾಂತ -ಸಾಧನೆ - ಸಿದ್ಧಿಯಾದ `ಒಲವಿನನುಭೂತಿ'ಯ `ಪ್ರೇಮತತ್ವದರ್ಶನ' ಸಹೃದಯನಿಗೆ ಎಷ್ಟು ದೊರಕೀತು?

ಬೇಂದ್ರೆಯವರ ಸಂವೇದನಾಶೀಲತೆ ಸಂಕೀರ್ಣವಾದುದು. `ಅವರ ಕಲ್ಪನಾ ವಿಲಾಸ' ವಿಶ್ವ ವಿಶಾಲವಾಗಿ ಭೂಮಿ ಆಕಾಶವನ್ನು ಒಳಗೊಂಡು ವಿಹರಿಸುತ್ತದೆ. ಸೂರ್ಯೋದಯವನ್ನು ಕವಿ- `ಶಾಂತಿ ರಸವೇ ಪ್ರೀತಿಯಿಂದ ಮೈದೋರೀತಣ್ಣ / ಇದು ಬರಿಬೆಳಕಲ್ಲೋ ಅಣ್ಣ' ಎಂದು ಉದ್ಘರಿಸುತ್ತಾರೆ.

ADVERTISEMENT

ಈ ಕಾವ್ಯ ಶೋಧದ ಪಯಣ ಬದುಕಿನ ಏಳು ಬೀಳುಗಳನ್ನು ಸುತ್ತಿ ಸಾವರಿಸುತ್ತಾ ಹೊರಡುತ್ತದೆ. ನೋವು ನಲಿವುಗಳನ್ನೆಲ್ಲಾ ನುಂಗಿಕೊಂಡು `ಒಲವನ್ನು' ಸಾಕ್ಷಾತ್ಕರಿಸಿಕೊಳ್ಳುವ ಮಾರ್ಗದಲ್ಲಿ ಪ್ರಕೃತಿ, ದೇಶ ಭಾಷೆ, ಚರಿತ್ರೆ ಪುರಾಣಗಳ ಮೂಲಕ, ಭಾವ ಕಲ್ಪನೆಯ ಹಾರುಗುದುರೆಯನ್ನು ಏರಿ ಸವಾರರಾಗಿ ಹೊರಟು ಬದುಕನ್ನು ಸಂಭ್ರಮಿಸುತ್ತಾ ಸಾಗುತ್ತದೆ.

ಭಾವದ ಭೃಂಗ, ಕಲ್ಪನಾ ವಿಲಾಸದಲ್ಲಿ ಪರಿಕ್ರಮಿಸುತ್ತಾ ಒಲವಿನ ಉಯ್ಯಾಲೆಯಲ್ಲಿ ಜೀಕುತ್ತಾ `ಒಲವಿನನುಭೂತಿ'ಯತ್ತ ಹೆಜ್ಜೆಹಾಕುತ್ತದೆ. ಬೇಂದ್ರೆ ಕಾವ್ಯಾನುಭವವನ್ನು ನರ್ತನದಂಥ ದೃಶ್ಯ ಮಾಧ್ಯಮಕ್ಕೆ ಅಳವಡಿಸಿ ತೋರಿಸುವುದು ಇನ್ನಷ್ಟು ಪರಿಶ್ರಮ ಮತ್ತು ಸಿದ್ಧತೆಯನ್ನು ನಿರೀಕ್ಷಿಸುತ್ತದೆ. ಅದೂ ಮಾನಸಿಕ ಥೆರಪಿಯಾಗಿ ಪ್ರಫುಲ್ಲಗೊಳಿಸಲು.

ಬೇಂದ್ರೆಯವರ ಕಾವ್ಯ ಸಂವೇದನೆ ಬದುಕಿನ ಬವಣೆಗಳಲ್ಲಿ ಬೇಯುತ್ತಾ ಉದ್ದೀಪನಗೊಳ್ಳುವ ಅವರ ಒಲವಿನ ಅಧ್ಯಾತ್ಮ ಶಿಖರವನ್ನು ಮುಟ್ಟುವುದು:

ನೆಲ ಮುಗಿಲನಪ್ಪಿತು
ಚೆಲುವನ್ನು ಒಪ್ಪಿತು 
ಸಾವೊಮ್ಮೆ ತಪ್ಪಿತು
ಎಂಬ ಮೃತ್ಯುಂಜಯ ಕಾವ್ಯತತ್ವ ದರ್ಶನದಲ್ಲಿ, ಒಲವಿನ ಅನುಭೂತಿಯಾಗಿ, ಶ್ರವಣ ಪ್ರತಿಮೆ (Auditary Images)  ಗಳಿಂದ ಬೇಂದ್ರೆ ಕಾವ್ಯಶಿಲ್ಪವನ್ನು ಕಟ್ಟುತ್ತಾರೆ. `ಮಾತಿನ ನವನೀತ'ವನ್ನು ಉಣಬಡಿಸುತ್ತಾರೆ.

ಕುಣಿಯೋಣು ಬಾರದಲ್ಲಿ: `ಪಾದ ಪದ್ಧತಿಯಲ್ಲಿ ಪದ ಕೂಡಿ ಬರುವಾಗ / ಅನುರಾಗವನುರಣಿಸಿ ತಣಿಸುತಿರೆ' ಎಂದು ಹೇಳುವ ಕವಿಯ ಕಲ್ಪನಾ ವಿಲಾಸದಲ್ಲಿ `ನಾದದ ನದಿಯೊಂದು ನಡೆದಾಂಗ' ಆಗಿಬಿಡುತ್ತದೆ. 

`ಒಲವೇ ನಮ್ಮ ಬದುಕು' ಬೇಂದ್ರೆಯವರ ಜೀವನ ಸಿದ್ಧಾಂತ. ಅವರ ಕಾವ್ಯ ದರ್ಶನ ಇರುವುದೇ `ಒಲವಿನನುಭೂತಿಯಲ್ಲಿ'. ಅದು ಪ್ರೀತಿ- ಪ್ರೇಮ-ಕಾಮ ಎಂಬ ಸಬ್‌ಲೇನ್‌ಗಳಲ್ಲಿ ಸಂಚರಿಸಿ ಒಲವಿನ ಮುಖ್ಯಹಾದಿಗೆ ಬಂದು ದೈವಿ ಭಾವದಿಂದ ಅವಿನಾಭಾವವನ್ನು ಪಡೆಯುತ್ತದೆ.

ಪತಿ ಪತ್ನಿಯರು ಸಂಸಾರದ ಎಲ್ಲ ಜಂಜಾಟಗಳಲ್ಲಿ ಬೆಂದು, ನಾಡು ನುಡಿ; ದೇಶಪ್ರೇಮ (ಗಾಂಧಿ ಚಳವಳಿ), ರಾಜಕಾರಣ ಇವೆಲ್ಲವನ್ನು ಒಳಗೊಂಡು ಹಾಡಿನ ಮೋಡಿಯಲ್ಲಿ ಒಲವಿನ ಸಾಕ್ಷಾತ್ಕಾರದತ್ತ ಪಾಕಗೊಳ್ಳುವ ವಿನ್ಯಾಸ `ಸಖೀಗೀತ'ವಾಗಿದೆ. ಬೇಂದ್ರೆಯವರ `ಸಖೀಭಾವ', `ದಾಂಪತ್ಯಗೀತ'ಕ್ಕಿಂತ ಉನ್ನತ ಅಭೀಪ್ಸೆಯುಳ್ಳದ್ದಾಗಿ ಕಾವ್ಯರಸ ಒಲವಿನ ದೀಪ್ತಿಯ ಉಗಮಸ್ಥಾನವಾಗಿದೆ.

ಅದು ಇದೆ ಎದೆಯಲ್ಲಿ, ಬೆಳಕಿನ ಬದಿಯಲ್ಲಿ
ರಸಗಂಗಾನದಿಯಲ್ಲಿ ಅದರುಗಮ
ಹೆಸರದಕೆ ಪ್ರೀತಿಯು, ಹಿಗ್ಗಿನರೀತಿಯು
ಆತ್ಮದ ನೀತಿಯು ಮಧುಸಂಗಮ

ಇಂಥ `ಆತ್ಮತತ್ವ'ದ ಮಧು ಸಂಗಮ ರಸಸ್ಥಾನ ಇರುವ ಕವಿತೆ, ಡಾ. ಪವಿತ್ರ ಅವರ ನೃತ್ಯ ವಿನ್ಯಾಸದಲ್ಲಿ ಬಿಟ್ಟುಹೋಗಿರುವುದು ಆಶ್ಚರ್ಯವೇ? 
*** 
ಅಸರಂತ ಕೂಗುವ ಕೋಗಿಲದ ದನಿ ಹಿಡಿದು ಹೊರಟ ಸಾಧಕನ ದುರ್ಗಮ ಮಾರ್ಗವನ್ನು ಶೋಧಿಸುವ ಬೇಂದ್ರೆಯವರ ಸಂಕೀರ್ಣವೂ ಜಟಿಲವೂ ಆದ ಕವಿತೆ `ಜೋಗಿ'. ಈ ಕವಿತೆಯ ಕೊನೆಯ ನಾಲ್ಕು ಪಂಕ್ತಿಗಳು ಹೀಗಿವೆ:

ಯಾವ ಸ್ವರಾ ಇದು ಯಾವ ಕೋಗಿಲಾ ಯಾವ ಮರವೊ ಏನೋ / ಯಾಕ ಹಿಂಗ ಅಸರಂತ ಕೂಗುತದ ಏನು ಇದಕೆ ಬ್ಯಾನ್ಯೊ / ಸುತ್ತ ಗುಡ್ಡ ನುಗ್ಗಾಗಿ ಹೋದವೋ ಓಗೊಟ್ಟು ಇದಕ? / ಬಿಸಿಲು ಕುಣಿದ ಬೆವತದ ಈಗ ಬಂದದ ಮಳಿಯ ಹದಕ

ಸಾಧನೆಯ ದುರ್ಗಮ ದಾರಿಯನ್ನೆಲ್ಲಾ ಹಾದು ಹದಕ್ಕೆ ಬಂದು ಸಿದ್ಧಿಯತ್ತ ಕುಣಿತದ ಹೆಜ್ಜೆಯನ್ನು ಹಾಕಲು ಸಜ್ಜಾಗಿರುವ ಕಾವ್ಯ ಮಾರ್ಗದಲ್ಲಿ `ಕುಣಿಯೋಣ ಬಾರ' ಕವಿತೆ ಮಹತ್ವದ ಹೆಜ್ಜೆ ಎಂಬುದು ಬೇಂದ್ರೆ ಓದುಗರ ಅಭಿಮತ. ಬೇಂದ್ರೆಯವರಿಗೆ ಎಲ್ಲಾ ಕಷ್ಟ ಕಾರ್ಪಣ್ಯಗಳ ನಡುವೆಯೂ ಸಂಭ್ರಮದಿಂದ ಬದುಕಿ ಸಾಧಿಸಬೇಕೆಂಬುದೇ ಮುಖ್ಯ ಗುರಿ.

ಅದಕ್ಕಾಗಿ ಅವರು ಬಡತನವನ್ನು ವೈಭವೀಕರಿಸುತ್ತಾರೆ. ಕೆನ್ನೆತುಂಬ ಮುತ್ತ ಪಡೆದು, ಜೀವ ಫಲವನ್ನು ಹೊತ್ತು ಸಂಭ್ರಮಿಸುವ ಅವರ ಹೆಣ್ಣಿನ ಚಿತ್ರಣ ಒಂದು ಸಖೀ ಭಾವದ ಸಹಿಷ್ಣುತೆಯ ಚಿತ್ರಣವೇ ಆಗಿದೆ. `ನೀ ಹಿಂಗ ನೋಡಬ್ಯಾಡ' ಎಂಬುದರಲ್ಲಿ ಮಗನ ಸಾವಿನ ದುಃಖವನ್ನು ಭರಿಸುವ ಪರಿ, ಬರೀ ದುಃಖದ ಮಡುವಾಗದೆ ಅದನ್ನು ಮೀರುವ ಪರಿಕ್ರಮಣದಲ್ಲಿ ಪರಿಪಾಕದತ್ತ ಹೆಜ್ಜೆಯಾಗಿ ಕಾಣುತ್ತದೆ.

ಈ ಕವಿತೆಗಳ ನರ್ತನದಲ್ಲಿ ಪವಿತ್ರರವರು ಜನಪ್ರಿಯತೆಗೆ ಮಾರುಹೋದಂತೆ ಕಾಣುತ್ತದೆ. ಆದರೆ ಬೇಂದ್ರೆಯವರಿಗೆ ಇಂಥ ಅನೇಕ ನೋವಿನ ನೈರಾಷ್ಯದ ಪ್ರಸಂಗಗಳು ಪರಿಪಾಕದ ಆತ್ಮ ಸಂಗಾತದತ್ತ ಇಡುವ ಹೆಜ್ಜೆಗಳು ಎಂಬುದು ಮಹತ್ವದ್ದಾಗಿದೆ.

ಬದುಕಿನ ಭಾವುಕವಾದ, ಬವಣೆಯ ಎಲ್ಲ ಹೆಜ್ಜೆಗಳು ಅನುಭೂತಿಯ ದರ್ಶನದ ಕಡೆಗೆ ಹೆಜ್ಜೆ ಹಾಕಿದವುಗಳೇ. ಅಂಥ ದರ್ಶನವನ್ನು ಒಂದು ಸಾವಯವ ಹೆಣಿಗೆಗೆ ತಂದು ರೂಪಕೊಟ್ಟು ಪ್ರದರ್ಶಿಸಬೇಕಾಗುತ್ತದೆ ಎಂಬುದು ನನ್ನ ಅಭಿಮತ.
***
`ಪಾತರಗಿತ್ತಿ' ಕವಿತೆಯಲ್ಲಿ ಕಾಣುವ ಸಂಚಾರಿ ಭಾವದ ಚಂಚಲತೆ, ಹಾರಾಡುವ  ಕವಿ ಮನಸ್ಸು `ಒಲವಿನನುಭೂತಿ'ಯನ್ನು ಅರಸುತ್ತಾ ಹೊರಟ ಬಣ್ಣವೈಭವದ ಚಲನಶೀಲ ಮನಸ್ಸಿನ ಒಂದು ಸಾಂದರ್ಭಿಕ ಸ್ಥಿತಿ ಮಾತ್ರ ಆಗಿದ್ದು, ಅದರ ಜನಪದ ಧಾಟಿಯ ಹೆಜ್ಜೆಯ ಗೆಜ್ಜೆಯ ನಾದ ಸೌಂದರ್ಯಾನುಭೂತಿಯನ್ನ ಅರಸುವ ಪಾಸಿಂಗ್ ಸ್ಥಿತಿ. ಅದರ ಸಂಮೋಹಕ ನಡಿಗೆಗೆ ಆಕರ್ಷಿತರಾದ ಪವಿತ್ರರವರು ಪ್ರದರ್ಶಿಸಿದ ರೀತಿ ಮೋಹಕವಾಗಿತ್ತು.

ತಾವು ಪ್ರಸ್ತುತ ಪಡಿಸಿದ ಕವಿತೆಗಳ ಮೂಲಕ ಬೇಂದ್ರೆಯವರ ದರ್ಶನವನ್ನು (ವಿಕಾಸ ವಿನ್ಯಾಸ ಮತ್ತು ತತ್ವ ಸಿದ್ಧಾಂತವನ್ನು) ಅನಾವರಣಗೊಳಿಸುವ ಪ್ರಯತ್ನ ಇದೆಂದು ಪವಿತ್ರ ಅವರು ಪ್ರಾತ್ಯಕ್ಷಿಕೆಯ ವ್ಯಾಖ್ಯಾನದಲ್ಲಿ ಹೇಳಿದರು.

ಆದರೆ ನರ್ತಿಸಿದ ಕವಿತೆಗಳಿಂದ ಈ ಎಲ್ಲ ಹಂತಗಳಲ್ಲಿ `ಒಲವಿನನುಭೂತಿ'ಯಾಗಿ ಏರುವಿಕೆಗೆ ಬೇಕಾದ ಸಾವಯವ ಸಮಗ್ರೀಕರಣ ಕಾಣುವುದಿಲ್ಲ. ಅದಕ್ಕೆ ಬೇಕಾದ ನೇಯ್ಗೆಯ ಸೂಕ್ಷ್ಮಗಳ ಅವಶ್ಯಕತೆಯಿದೆ. ಇಲ್ಲವಾದರೆ ವ್ಯಾವಹಾರಿಕ ಪ್ರೀತಿ ಪ್ರಣಯ ಎಲ್ಲವೂ ಅಧ್ಯಾತ್ಮದ ಬಿಡಿ ಪ್ರಸಂಗಗಳಾಗಿ ಬಿಡುವ ಅಪಾಯವಿದೆ.

ಬೇಂದ್ರೆಯವರ ಹೆಜ್ಜೆ ಗೆಜ್ಜೆಯ ನಾದಮಯತೆ ಶಿಷ್ಟಪರಂಪರೆಯಿಂದಷ್ಟೇ ಮೂಡಿಬಂದದ್ದಲ್ಲ. ಜನಪದ ಧಾಟಿಗಳಿಂದಲೂ ರೂಪುಗೊಂಡದ್ದು. ಹಾಗಾಗಿ ಒಂದಿಷ್ಟು ಜನಪದ ಕಾಸ್ಟ್ಯೂಮ್ಸ ಮತ್ತು ಒಂದೆರಡಾದರೂ ಸಮೂಹ ನರ್ತನಗಳಿಂದ ಭಾವಾಭಿವ್ಯಕ್ತಿಗೆ ಪೂರಕವಾಗಿ `ಒಲವಿನನುಭೂತಿ'ಯನ್ನು ಕಾಣಿಸಬೇಕಾಗುತ್ತದೆ. 

ಪವಿತ್ರರವರ ಪ್ರಯೋಗದಲ್ಲಿ ಸುಧಾರಣೆಯ ಸಾಧ್ಯತೆಗಳು ಇದ್ದೇ ಇವೆ. ಬೇಂದ್ರೆ ಅವರ ಕವಿತೆಗಳ ಮರು ಓದಿಗೆ, ಆ ಮೂಲಕ ಹೊಸ ಸಂಭ್ರಮಕ್ಕೆ ಪವಿತ್ರ ತಮ್ಮ ನೃತ್ಯ ಪ್ರಾತ್ಯಕ್ಷಿಕೆಯ ಮೂಲಕ ಕಾರಣರಾಗಿದ್ದಾರೆ. ಅವರ ಪ್ರಯತ್ನ ಅಭಿನಂದನೆಗೆ ಅರ್ಹವಾದುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.