ಕನ್ನಡವೆಂದರೆ ಏನಪ್ಪಾ ಮರಿ?–
ಅಪ್ಪಿ ಮುದ್ದಿಸುವ ತಾಯಿ!
ಇನ್ನೂ ಬೇಕು, ಬೇಕು ಎನ್ನಿಸುವ
ಸವಿ ಸವಿ ಕೊಬರಿ ಮಿಠಾಯಿ!
ಕನ್ನಡವೆಂದರೆ ಏನಪ್ಪಾ ಮರಿ?–
ರಸಪುರಿ ಮಾವಿನ ಹಣ್ಣು!
ಎಳೆಯ ಬಿಸಿಲಿನಲಿ ಥಳಥಳ ಹೊಳೆಯುವ
ನವಿಲುಗರಿಯ ಕಣ್ಣು!
ಕನ್ನಡವೆಂದರೆ ಏನಪ್ಪಾ ಮರಿ?–
ಜಾಜಿ ಮಲ್ಲಿಗೆಯ ಕಂಪು!
ಪುಟ್ಟ ಕೃಷ್ಣನ ತುಟಿಯಲಿ ಹೊಮ್ಮಿದ
ಕೊಳಲಿನ ನಾದದ ಇಂಪು!
ಕನ್ನಡವೆಂದರೆ– ಸುಂದರ ಕನಸಲಿ
ಕುಣಿಕುಣಿದಾಡುವ ಮನಸು!
ತುಂಗೆ, ಭದ್ರೆ, ಕಾವೇರಿಯರಾಡುವ
ಶ್ಯಾಮಲ ಲಾಸ್ಯದ ನೆಲಸು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.