ಕರುಣಾಳು ಕತ್ತಲೆಗೆ ವಂದಿಸುತ್ತಾ...
ಝಲ್ ಅನ್ನುತ್ತೆ ಎದೆ
ಉಲ್ಟಾ ಹೊಡೆಯುತ್ತೆ ತಲೆ ಪಕ್ಕದಲ್ಲಿ ಕೈ
ಮೇಲಕ್ಕೆ ಕೆಳಕ್ಕೆ ಆಡುತ್ತೆ ಕಾಲು
ಅದೆಷ್ಟೋ ದೂರದ ಕಾರಿನ ಸದ್ದಿಗೆ
ಮೂಲೇಲಿ ದೂಳಿಡಿದ ಟೋಪಿ
ತಲೆಮೇಲ್ ಕೂತಾಗ ಬೆತ್ತ ಕೈ ಹಿಡಿದು
ಪೋಲೀಸನ ಠೀವಿ ಬಂದಂಗೆ
ಹುಮ್ಮಸ್ಸಲ್ಲಿ ಬೀಗ್ತದೆ ಮನಸ್ಸು
ನೆನಪಿಸುತ್ತೆ ತಾನಿರೋದನ್ನ ನಿಂತ ಕಾಲುಗಳು
ಮಾತ್ರ ಕ್ರೂರ ಬೆಳಕಿನಲ್ಲಿ
ಅಲೆದಾಡುವಾಗ ಯಾಮಿಕನಾಗಿ
ಮೆಲುಕು ಹಾಕುತ್ತೆ ಉಸಿರು
ಬೆಚ್ಚಗಿದ್ದ ನೆನಪುಗಳ
ತನ್ನ ನುಂಗುವ ಚಳಿಯ ಅಂಗೈಯಲ್ಲಿ
ಓಡುವಾಗ ಮಾಲೀಕನ ಹಿಂದೆ
ಸುಸ್ತಾಗಿ ಬೆವರುತ್ತೆ ಮೈಯಿ
ಮುಖದ ಮೇಲಿದ್ದರೂ ಅವನ ಉಗುಳು
ಒರೆಸಿಕೊಳ್ಳದೆ ಬೆರೆಸಿಕೊಳ್ಳುತ್ತಾ
ಮಂಜ ಹನಿ ಮಾಡಿಕೊಂಡು
ಸಹಿಸುತ್ತದೆ ಕಣ್ಣುರೆಪ್ಪೆ ಕೆಂಪಾಗಿ
ಸೂತಕದ ದಿನಗಳು ಸರಿಯುವಾಗ
ಅದಲಿ ಬದಲಿಯಾದ ವರ್ತಮಾನದಲ್ಲಿ
ಕರುಣಾಳು ಕತ್ತಲೆಗೆ ವಂದಿಸುತ್ತಾ
ಇದನ್ನೆಲ್ಲಾ ಹೊತ್ತ ನಾನೂ
ನೇವರಿಸಿಕೊಳ್ಳುತ್ತೇನೆ ನಂಬಿಕೆಯ
ನನ್ನದೇ ಕೈಗಳಿಂದ
ಕತ್ತಲೆ ತೋರಿಸಿದ ಔದಾರ್ಯ
ಬೆಳಕಿಗೂ ಬರಲಿ ಅಂತ
-ಸತ್ಯಮಂಗಲ ಮಹದೇವ.
*****************************************************************************************************
ಎರಡು ಕವಿತೆ
ಎಸ್. ಮಂಜುನಾಥ್
ರೊಟ್ಟಿ
ಕಡೆಗೆ ಕಂಡಿದ್ದು
ರೊಟ್ಟಿ ಬಡಿಯುವ ಕೈಯಿ
ನಟರಾಜನ ಭೂವ್ಯೋಮ ನರ್ತನದ
ಅಷ್ಟೂ ಕೈಗಳಿಳಿಸಿ
ಈ ಎರಡು ಕೈಯಿ
ಖಾನಾವಳಿಯ ಕತ್ತಲಲ್ಲಿ
ಬೆಂಕಿ ಹೊಗೆ ಸುರುಳಿ
ಸೂರಿಂದಿಳಿದ ಕಿರಣಾವಳಿ
ಕುಣಿದಿದೆ ಮುಂಗೈ ಮೇಲೆ
ತದಿಕಿಟ ತದಿಕಿಟ ಲಯಕೆ
ಕಾದಿವೆ ಬಾಯ್ಕಳಿದು
ಹಸುಮಕ್ಕಳಾಗಿ
ದೇವ ದಾನವ ಮನುಜರು
ಬೀಳುವ ರೊಟ್ಟಿಗಾಗಿ
ಹರಿದಾಡುವ ಇರ ಕ್ರಿಮಿ ಅದರ
ಕಣಕಾಗಿ
ಬೆಂಕಿಯಲಿ ಸುಟ್ಟಿದ್ದು ಬೆಂಕಿಯನೆ ತಣಿಸುವುದು
ಬೆಂಕಿಯನು ಇಟ್ಟಂಥ ಮಾಕಾಲನ!
ಅದಾವ ಗೊಡವೆಯೂ ಇರದೆ
ಆಡುತ್ತಲಿದೆ ಕೈಯಿ
ತನ್ನದೇ ಪರಿವೆಯಲ್ಲಿ
ಎದ್ದು ಹೊರಟಾಗ ಬಿಟ್ಟು
ಕೊಣವೆ ಮಣೆ ಕಾವಲಿ
ಆಗಸದಲೊಂದು ರೊಟ್ಟಿ
ಬೆಳಗಿ ಆ ತಾಯಿಗಾಗಿ
ಅದಕೆಂತಲೇ ಈ ಬಡಿತ
ಡಮರುವಿನ ಮೂಲ ಮಿಡಿತ
ಐಹೊಳೆಯ ಜೋಡಿಶಿಲ್ಪಗಳು
ಉಳಿ ಚಾಣ ಮತ್ತೊಂದ ಬಳಸಿ
ಕಟೆದಿದ್ದಲ್ಲ; ಗಾಳಿಘಟ್ಟಿಯ ಮಾಡಿ
ಇಳಿಸಿಟ್ಟರೋ
ಮುದ ತುಂಬಿ ಮಿಡಿಯುತ್ತ ನಿಂತೆವು
ನಿರಾಕಾರ ನಿರಾಬಂಧದಲ್ಲಿದ್ದವರಿಗೆ
ಆಕೃತಿಯ ಆನಂದ ಸಿಕ್ಕಂತೆ
ಬೇಕಿತ್ತು ನಮಗೂ ಮಾತು, ಸ್ಪರ್ಶ
ಮಾತು ಬಂದ ಮಕ್ಕಳಂತೆ ಉಲಿದಾಡಿ
ನವುರಾಗಿ ಮುಟ್ಟುತ್ತ ಪುಲಕಿತರಾಗಿ;
ಹುಡುಕುತ್ತಲೇ ಇತ್ತು ಗಾಳಿ
ಕರೆಯುತ್ತ ಸೆಳೆಯುತ್ತಲೇ ಇತ್ತು
ಬಾನು ತೊರೆದ ಮಕ್ಕಳನು
ಈ ಜೀವ ಸಂಭ್ರಮಿತ ದೇವರುಗಳನ್ನು
ಬಂದೆವೋ ಬಂದುಬಿಟ್ಟೆವು ಎನ್ನುತ್ತಲೇ ಉಳಿದೆವು
ಕಾಲನ ಕಲ್ಲೇಟು ಸುತ್ತಿಗೆಯೇಟು
ಒಂದೊಂದಕೂ ಉಕ್ಕಿ
ಸಂತಸದ ಬಿತ್ತಗಳ ಒಕ್ಕಿ
ಕೆತ್ತಿ ಹೋದರೂ ದಿವ್ಯ ಮುಖ ಕಣ್ಣು
ಮುರಿದುಬಿದ್ದರೂ ಬಿನ್ನಾಣ ಕಾಲು
ಊನವಾಗದೆ ಪ್ರಾಣ ಹಿಗ್ಗುತ್ತ
ಗರ್ಭಗುಡಿ ಲಿಂಗ ಕೈಲಾಸಕ್ಕೆ
ಮಿಂಚಿ ಹಾರಿದ ಗಳಿಗೆ ಒಮ್ಮೆ
ಅವಾಕ್ಕಾಗಿ
ಮತ್ತೆ ನುಡಿ ಹೂಗಳ ಸುರಿಸುತ್ತಲಿರುವ ಗಿಡಗಳಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.