ಹೊಲಸಾಗಿದೆ ಹೊದ್ದ ಹೊದಿಕೆ
ಬಳಸೀ ಬಳಸೀ ಪಿಸಿಯುತ್ತಿದೆ,
ಮೂಲ ಬಣ್ಣದ ಗುರುತೂ ಮರೆತು,
ದಟ್ಟಿ ವಾಸನೆಯ ಮುಸುಕಿನಲ್ಲಿ
ಮತ್ತವೇ ಹರಿದ ಕನಸುಗಳು,
ಪೂರ್ತಿಯಾಗದ ಚಿತ್ರಗಳು.
ಹೊದಿಕೆಯೆಸೆದು ನಿರುಮ್ಮಳವಾಗುವುದು
ಕಡು ಕಷ್ಟ. ಚಳಿಗೆ, ಗಾಳಿಗೆ
ಜೊತೆಗೆ ಬತ್ತಲು ಗೊತ್ತಾಗುವ ಭಯಕ್ಕೆ
ಬದಲಿಸುವುದು ಇನ್ನೂ ಕಷ್ಟ
ಹೊಸತು ತರುವುದಕ್ಕೆ ಸಾಲದ ತಿಳಿವಳಿಕೆ
ಜೊತೆಗೇ ಇರುವ ಅನುಭವದ ಕೊರತೆ
ಮಲಿನವಾಗಿದೆಯೆಂದು ಒಗೆಯುವುದಕ್ಕೆ
ಶತಮಾನಗಳ ಕೊಳೆ, ತಲೆಮಾರುಗಳ ಕಮಟು
ತೆಗೆಯುವುದಕ್ಕೆ ಬೇಕಾದ ಬುರುಜು ನೊರೆ ಸ್ವಚ್ಛ ನೀರು
ಇರುವ ಜಾಗವ ಅರಿವ ಜಾಗರದ ಪರಿವೆ
ಕಂಬಳಿ, ರಗ್ಗು, ಬುರ್ನಾಸು
ಅಥವ ಅಂಥದೇ ಯಾವುದೋ ಹಚ್ಚಡ
ಹೊದೆದವರಿಗೆಲ್ಲ ಈ ಇದೇ ಪ್ರಶ್ನೆ
ಸಿಗುತ್ತದೆಯೇ ಕೊಳೆ ತೆಗೆವ ಸಾಬೂನು
ಸ್ವಚ್ಛವಾಗುವ ಸಾಲಲ್ಲಿ ನಾನೂ ನೀನೂ!
(ಕಬೀರನ ಒಂದು ವಚನದಿಂದ ಪ್ರೇರಿತ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.