ADVERTISEMENT

ಗಡಿಯಾರ ಕರಗುವ ಸಮಯ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2012, 19:30 IST
Last Updated 28 ಏಪ್ರಿಲ್ 2012, 19:30 IST
ಗಡಿಯಾರ ಕರಗುವ ಸಮಯ
ಗಡಿಯಾರ ಕರಗುವ ಸಮಯ   

ವಿಶ್ವಪ್ರಸಿದ್ಧ ಕಲಾಕೃತಿಗಳೊಂದಿಗೆ ಕನ್ನಡ ಮನಸ್ಸುಗಳ ಸಂವಾದದ ಈ ಮಾಲಿಕೆ ವಾರ
ಬಿಟ್ಟು ವಾರ ಪ್ರಕಟಗೊಳ್ಳಲಿದೆ. ಕಲಾಕಾರ ಹಾಗೂ ಕಲಾಕೃತಿಯ ಪರಿಚಯ ಮತ್ತು
ಆ ಕಲಾಕೃತಿಗೆ ಕವಿತೆ/ಕಥಾರೂಪದ ಪ್ರತಿಕ್ರಿಯೆಯ ವಿಶಿಷ್ಟ ಪ್ರಯೋಗವಿದು.

                                        =====

ಚಿತ್ರರೂಪಕ

ಸರ್ರಿಯಲಿಸಂ ಪಂಥದ ಬಹು ಮುಖ್ಯ ಕಲಾವಿದ ಸಾಲ್ವಡೋರ್ ಡಾಲಿಯ (1904 - 1989) ಪ್ರಸಿದ್ಧ ಕೃತಿ ಇದು. `ಪರ್ಸಿಸ್ಟೆನ್ಸ್ ಆಫ್ ಮೆಮೊರಿ~ ಎಂಬ ಶೀರ್ಷಿಕೆ ಇದಕ್ಕೆ. ಸರ್ರಿಯಲಿಸಂನ ದಾರಿ ಹಿಡಿದ ಕಲಾವಿದರು ಹೊರ ಲೋಕಕ್ಕಿಂತ ಒಳ ಲೋಕಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದರು. 

ಅವರು ಅರಸಿದ್ದು ಕನಸಿನ ಲೋಕವನ್ನು. ಸಿಗ್ಮಂಡ್ ಫ್ರಾಯ್ಡನ ಸುಪ್ತ ಮನಸ್ಸಿನ ವಿಚಾರಗಳು ಎಲ್ಲೆಡೆ ಚರ್ಚೆಯಲ್ಲಿದ್ದವು. ಸರ‌್ರಿಯಲಿಸ್ಟರು ಸಹ ಸುಪ್ತ ಮನಸ್ಸನ್ನು ಪ್ರವೇಶಿಸಲು ಅತಾರ್ಕಿಕವಾದ ಸೃಜನಾತ್ಮಕ ದಾರಿಯೆಂಬಂತೆ ತಮ್ಮ ಚಿತ್ರಗಳನ್ನು ಬಳಸಿದರು.

ನಮ್ಮ ಪ್ರಜ್ಞೆಯ ಪರಿಧಿಯ ಅಂಚಿನಲ್ಲಿಂದ ಸುಪ್ತ ಮನಸ್ಸನ್ನು ಹೊಕ್ಕ ಪ್ರತಿಮೆಗಳು ಕನಸಿನಲ್ಲಿ ಮತ್ತೊಂದಾವುದೋ ಘಟನೆಯೊಂದಿಗೆ ಸೇರಿಕೊಂಡು ನಮ್ಮನ್ನು ಬೆಚ್ಚಿಬೀಳಿಸುವಂತಹ ಬಹು ಕಾಲ ನೆನಪಿರುವ ನಿರಂತರ ಕಾಡುವ ನೆನಪುಗಳಾಗಿ ಪರಿವರ್ತಿತವಾಗುತ್ತದೆ. ಈ ಚಿತ್ರದಲ್ಲಿ ಅಂತಹದೊಂದು ಅನುಭವವನ್ನು ಕಾಣಬಹುದು.

ಮಧ್ಯದಲ್ಲಿರುವ, ಅಸ್ಪಷ್ಟವಾಗಿ ಮುಖವನ್ನು ಹೋಲುವ ಆಕಾರವು ಅರೆಗಣ್ಣು ಮುಚ್ಚಿ ಕನಸನ್ನು ಕಾಣುತ್ತಿರುವಂತಿದೆ. ಸುತ್ತಲೂ ಜೇಬು ಗಡಿಯಾರಗಳು ಕರಗುತ್ತಿದ್ದು ಸಮಯವೇ ಕರಗಿ ಜಾರಿ ಹೋಗುತ್ತಿರುವ ಭಾವವನ್ನು ನೀಡುತ್ತದೆ.

ಗಡಿಯಾರದ ಆಕಾರದ ಪ್ರಮಾಣಕ್ಕೂ ಇಡೀ ನಿಸರ್ಗದೃಶ್ಯದಲ್ಲಿ ಕಂಡು ಬರುವ ಮರ ಕಟ್ಟೆ ಇತ್ಯಾದಿ ವಸ್ತುಗಳಿಗಿರುವ ಪ್ರಮಾಣಕ್ಕೂ ಸಾಂಗತ್ಯವಿಲ್ಲದಿರುವುದು ಈ ಪ್ರತಿಮೆಯು ನಿಜ ಲೋಕದಲ್ಲ ಎಂದು ನಮಗೆ ಖಾತ್ರಿ ಮಾಡುತ್ತದೆ.

ಇರುವೆಗಳು ಗಡಿಯಾರವನ್ನು ತಿನ್ನುತ್ತಿರುವ ವಿವರ ಸಹ ಇದೇ ಕೆಲಸ ಮಾಡುತ್ತದೆ. ಜೊತೆಗೇ ಇದು ಯಾವ ದೇಶ ಯಾವ ಕಾಲ ಎಂಬ ನಿರ್ದೇಶನವಿಲ್ಲದಿರುವುದು ಇಂತಹ ಅತಂತ್ರ ಸ್ಥಿತಿಯನ್ನು ಹೆಚ್ಚು ಮಾಡುತ್ತದೆ.

ಮುಖ್ಯವಾಗಿ ಇಲ್ಲಿ ಮೂಡಿಬರುವುದು ಸಮಯದ ಗ್ರಹಿಕೆ ಎಂಬುದು ನಿಖರವಾಗಿ ಹಿಡಿದಿಡಲಾಗದ ಅನುಭವ ಎಂಬ ಭಾವ. ಇಲ್ಲಿ ಕಂಡು ಬರುವ ಮರಕ್ಕೆ ಜೀವದ ಒಂದು ವೃತ್ತ ಮುಗಿದು ಅದು ಒಣಗಿ ಬಾಡಿ ಹೋಗಿದೆಯಾದರೆ ಹಿಂದೆ ಇರುವ ಬೆಟ್ಟಗಳು ಹಾಗು ಜಲ ರಾಶಿ ಮಾನಸ ಸರೋವರದಂತೆ ಸದಾ ಕಾಲವೂ ಇರುವಂತಿದೆ.
 
ಇನ್ನು ಗಡಿಯಾರವನ್ನು ತಿನ್ನುತ್ತಿರುವ ಇರುವೆಗಳು ಕೆಲವೇ ದಿನ ಬಾಳುವ ಜೀವಗಳು. ಮತ್ತು ಇಷ್ಟೊಂದು ಭಿನ್ನವಾದ ಸಮಯದ ಅವಸ್ಥೆಗಳು ಯಾರದೋ ಕನಸಿನಲ್ಲಿ ಆಗುತ್ತಿದೆ ಎಂದಾಗ ಇಲ್ಲಿ ಕಾಣ ಸಿಗುವ ಸಮಯದ ಕಲಸು ಮೇಲೋಗರದ ಅಂದಾಜು ಸಿಕ್ಕೀತು.

ಈ ಚಿತ್ರದಲ್ಲಿ ಹೊರ ಲೋಕದ ಯಾವುದೇ ತಂತು ನೋಡಲಿಕ್ಕೆ ಕಾಣದಿದ್ದರೂ ಇದು ಸೃಷ್ಟಿಯಾದ ವರುಷ 1931ರಲ್ಲಿ ಮುಖ್ಯವಾಗಿ ಅಮೆರಿಕ ಹಾಗೂ ಯೂರೋಪ್‌ನಲ್ಲಿ ವಾಣಿಜ್ಯ ಕುಸಿದು ಅಪಾರ ಸಂಕಟಕ್ಕೆ ಜನ ಈಡಾಗಿದ್ದರು. ಅದನ್ನು `ಗ್ರೇಟ್ ಡಿಪ್ರೆಷನ್~ ಎಂದು ಕರೆಯಲಾಯಿತು.

ಎಲ್ಲರೂ ನಂಬಿಕೊಂಡಿದ್ದ ವ್ಯಾವಹಾರಿಕ ಲೋಕ ಅವರ ಕಣ್ಣು ಮುಂದೆಯೇ ಕರಗಿ ಹೋಗಿ ದುಃಸ್ವಪ್ನವಾಯಿತು. ಇದು ಒಂದರ್ಥದಲ್ಲಿ ಆ ಕರಗಿ ಹೋದ ಸಮಯದ ಅಸಂಗತ ಪ್ರತಿಮೆ ಸಹ. ಇಲ್ಲಿ ಇಳಿ ಸಂಜೆಯ ಉದ್ದನೆ ನೆರಳು ಆರಂಭವಾಗಿದ್ದು ಇನ್ನೇನು ಕತ್ತಲು ಕವಿದು ಈ ಸ್ವಪ್ನ ಲೋಕಕ್ಕೆ ತೆರೆ ಬೀಳಲಿದೆ.

ಲೇಖಕರು ಪ್ರಸಿದ್ಧ ಕಲಾವಿದರು ಮತ್ತು ಕಲಾ ವಿಶ್ಲೇಷಕರು         
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.