ADVERTISEMENT

ಗುಜರಿ ಬಾಬಣ್ಣನ ಬಟರ್‌ಫ್ಲೈ ಎಫೆಕ್ಟ್

ಕಥಾ ಸ್ಪರ್ಧೆ 2012- ಮೆಚ್ಚುಗೆ ಪಡೆದ ಕಥೆ

ಕೇಶವ ಕುಡ್ಲ
Published 8 ಡಿಸೆಂಬರ್ 2012, 22:00 IST
Last Updated 8 ಡಿಸೆಂಬರ್ 2012, 22:00 IST

ಕೋಡಂಗಲ್ಲಿನ ಮುಖ್ಯ ಬೀದಿಯಲ್ಲಿ ನಡೆಯುತ್ತಿದ್ದ ಬಾಬಣ್ಣನ ಭುಜದ ಮೇಲೆ ಎಂದಿನಂತೆ ಗುಜರಿ ಸಾಮಾನು ತುಂಬಿಕೊಳ್ಳುವ ಗೋಣೀಚೀಲವು ಇರಲಿಲ್ಲ. ಅಸಲಿಗೆ ಅವನು ಆ ಸಮಯದಲ್ಲಿ ಈ ಲೋಕದಲ್ಲಿಯೇ ಇದ್ದಂತಿರಲಿಲ್ಲ. ಏನನ್ನೋ ಯೋಚಿಸುತ್ತಾ ಕಳೆದುಹೋದಂತಿದ್ದ.

ಅವನು ಕೈ ಬೀಸಿಕೊಂಡು ಹೋಗುತ್ತಿದ್ದುದನ್ನು ಕಂಡ ನೆಲಮನೆ ಸುಬ್ರಾಯಪ್ಪನವರು `ಏ ಬಾಬಣ್ಣ ಬಾ ಇಲ್ಲಿ' ಎಂದರು. ದೇವಾಲಯದ ಘಂಟೆಯಂತೆ ಬಹಳ ದೂರದವರೆಗೂ ಕೇಳಿಸುವಂತಹ ಸುಬ್ರಾಯಪ್ಪನವರ ಧ್ವನಿ ಹತ್ತಿರದಲ್ಲೆ ನಡೆದುಹೋಗುತ್ತಿದ್ದ ಬಾಬಣ್ಣನ ಕಿವಿಗೆ ಕೇಳಿಸಲಿಲ್ಲವೆಂದರೆ ಅವನು ನಿಜಕ್ಕೂ ಗಹನವಾದ ಚಿಂತೆಯಲ್ಲೆ ಮುಳುಗಿರಬಹುದು!

ತನ್ನ ಘರ್ಜನೆಯಂತಹ ಮಾತನ್ನೂ ಕೇಳಿಸಿಕೊಳ್ಳದಂತೆ ಹೋಗುತ್ತಿದ್ದ ಬಾಬಣ್ಣನನ್ನು ನೋಡಿ ತನ್ನ ಧ್ವನಿಗೇ ಅವಮಾನವಾಯಿತೆಂದು ಭಾವಿಸಿದ ಸುಬ್ರಾಯಪ್ಪ `ಏ ಬಾಬಣ್ಣ ನಿಲ್ಲೊ? ಎಂದು ಕೂಗುತ್ತಾ ಗೇಟಿನ ಬಳಿಯೇ ಬಂದು ಅವನನ್ನು ತರುಬಿ ನಿಲ್ಲಿಸಿದರು. ಆಗಷ್ಟೆ ಎಚ್ಚೆತ್ತುಕೊಂಡ ಬಾಬಣ್ಣ `ಏನ್ಸಾರ್?' ಎಂದು ಕೇಳಿದ.

ADVERTISEMENT


`ಇದೇನೋ ಬಾಬಣ್ಣ ನೀನು ಈ ಕಡೆ ಬಂದು ಎಷ್ಟು ದಿನಾ ಆಯ್ತೋ? ಇವಳಂತೂ ನಿನ್ನ ದಾರಿ ಕಾಯ್ತಾನೆ ಇದ್ದಾಳೆ. ನೋಡಿಲ್ಲಿ, ಪೇಪರ್ ನಾಲ್ಕು ತಿಂಗಳಿಂದ ಹಾಗೆ ರಾಶಿ ಬಿದ್ದಿದೆ. ಮೇಲಿನ ಮಹಡಿ ಕಟ್ಟೋವಾಗ ಉಳಿದ ಪ್ಲಾಸ್ಟಿಕ್ ಪೈಪ್ ತುಂಡು ಮತ್ತೆ ಹಳೆ ಕಬ್ಬಿಣ ರಾಶಿ ಬಿದ್ದಿದೆ. ತಗೊಂಡು ಹೋಗು' ಅಂದರು. ಬಾಬಣ್ಣ ನಿರಾಸಕ್ತಿಯಿಂದ `ಇಲ್ಲ ಸಾರ್ ಅದೇನೂ ಬ್ಯಾಡ' ಅಂದುಬಿಟ್ಟ.

ಸುಬ್ರಾಯಪ್ಪನವರು ಇವನಿಗೇನಾಯ್ತು ಅನ್ನುವಂತೆ ನೋಡುತ್ತ `ಇದೇನೋ ಹೀಗಂತೀ? ಮೊದಲಾದ್ರೆ ಏನೂ ಇಲ್ಲ ಅಂದ್ರೂ ಮನೇ ಸುತ್ತಾ ನೀನೆ ಹುಡುಕಿ ಲೆಕ್ಕಮಾಡಿ ತಗಂಡು ಹೋಗ್ತಾ ಇದ್ದೆ... ಬಾಯಿಲ್ಲಿ ನೋಡು ಅಷ್ಟೋಂದು ಪೇಪರ್ ರಾಶಿ ಬಿದ್ದಿದೆ. ಮಕ್ಕಳ ಸ್ಕೂಲ್ ಪುಸ್ತಕನೆ ಒಂದು ಮೂಟೆ ಆಗಿದೆ. ಮೇಲೆ ಕೆನೋಪಿಲಿ ಒಂದಷ್ಟು ಹೊಸಮನೆ ಸಾಮಾನಿದೆ.

ಎಲ್ಲಾ ಲೆಕ್ಕ ಹಾಕು, ಆಮೇಲೆ ಆಟೋ ತಂದು ತಗಂಡು ಹೋಗುವಿಯಂತೆ. ಇದೆಲ್ಲ ಬಾಬಣ್ಣಾ ತಗಂಡು ಹೋದ್ರೆ ಮನೆಯ ಒಂದಷ್ಟು ಗಲೀಜು ಖಾಲಿ ಆಗುತ್ತೆ ಅಂತ ಇವಳು ಹೇಳ್ತಾ ಇದ್ಲು' ಎಂದು ಸುಬ್ರಾಯಪ್ಪ ಅವಸರ ಮಾಡಿದರು. `ನನ್ನ ನೋಡಿದ್ರೆ ನಿಮಗೆ ಮನೆ ಕ್ಲೀನ್ ಮಾಡೋನ ತರಾ ಕಾಣ್ತೀನಿ ಅಲ್ವಾ ಸಾರ್? ನಿಮಗೆ ಮನೆ ಕಸ ಖಾಲಿ ಆಗೋದು ಮುಖ್ಯ ನಾನು ಮುಖ್ಯ ಅಲ್ಲ.

ಬಾಬಣ್ಣ ಇಲದಿದ್ರೆ ಮನೆ ಕೊಳಕಾಗಿರುತ್ತೆ, ಮನೆಯಲ್ಲಿ ಗಲೀಜು ಕಂಡಾಗ ನಾನು ನೆನಪಾಗ್ತೀನಿ ಅಲ್ವ? ನಿಮ್ಮೆಲ್ಲರ ಮನೆ ಗುಜರಿ ಖಾಲಿ ಮಾಡಿಮಾಡಿ ನನ್ನ ಬದುಕೆ ಗುಜರಿ ಆಗಿದೆ' ಎಂದುಬಿಟ್ಟ ಬಾಬಣ್ಣ.
ಅವನ ಮಾತು ಒಂದು ರೀತಿಯಲ್ಲಿ ಉಢಾಫೆಯಂತೆ ಧ್ವನಿಸಿದ್ದರಿಂದ ಕೋಪಗೊಂಡ ಸುಬ್ರಾಯಪ್ಪ `ಗುಜರಿ ಕೆಲಸಾನೆ ಬಿಟ್ಟುಬಿಟ್ಟೆಯ? ಹೊಟ್ಟೆಗೇನು ತಣ್ಣೀರು ಹೊಯ್ಕೋತೀಯ?' ಎಂದರು.

ಅವರ ಹೆಂಡತಿ ನಳಿನಾಂಬ ಹೊರಬಂದವರು `ಏನಂತೆ ಅವಂದು ರಗಳೆ, ಗುಜರಿ ಬೇಡವಂತ?' ಎಂದರು. ಹೆಂಡತಿಯ ಕಡೆ ತಿರುಗಿದ ಸುಬ್ರಾಯಪ್ಪ `ಇವನಿಗೂ ಬಂದಿರೋ ಆಹಂಕಾರ ನೋಡು. ನಾನೇನು ಮನೆ ಕ್ಲೀನ್ ಮಾಡೋವನ ಅಂತ ತಲೆಹರಟೆ ಮಾಡ್ತಾನೆ. ಇವನಿಗೆ ಬೇಡದಿದ್ರೆ ಹೋಯ್ತು, ಗುಜರಿಯವರೂ ಆಹಂಕಾರ ಮಾಡೋ ಕಾಲ ಬಂತು ನೋಡು' ಎನ್ನುತ್ತಾ ಬಾಬಣ್ಣನ ಕಡೆ ತಿರುಗಿ ನೋಡುವಾಗ ಅವನಾಗಲೆ ಗೇಟು ದಾಟಿ ಅಲ್ಲೆಲ್ಲೋ ಹೋಗುತ್ತಿದ್ದ.

ಬಾಬಣ್ಣನ ಗುಜರಿ ವ್ಯಾಪಾರ ಮಗುಚಿಕೊಂಡು ಹೆಚ್ಚುಕಡಿಮೆ ವರ್ಷವಾಗುತ್ತಾ ಬಂದಿತ್ತು. ಇತ್ತೀಚೆಗೆ ತನ್ನ ಗೋಡೋನಿನಲ್ಲಿ ರಾಶಿ ಹಾಕಿದ್ದ ಹಳೆ ಪಾತ್ರೆ, ಹಳೆ ಕಬ್ಣ, ಹಳೆ ಪೇಪರ್ ರಾಶಿ ಹಾಗೆ ಬಿದ್ದಿತ್ತು. ಮೊದಲಾದರೆ ಪ್ರತೀ ತಿಂಗಳು ಒಂದು ಲಾರಿ ಲೋಡ್ ಹಳೆ ಕಾಗದ ಮಾರಿ ಎರಡು ಮೂರು ಲಾರಿ ಲೋಡ್‌ನಷ್ಟು ಹಳೆ ಕಬ್ಬಿಣವನ್ನು ಐರನ್ ಫ್ಯಾಕ್ಟರಿಗೆ ಕಳಿಸಿಬಿಡುತ್ತಿದ್ದ.

ಗುಜರಿ ಜೊತೆಗೆ ಬಾಬಣ್ಣ ಇನ್ಶೂರನ್ಸ್ ಕಂಪೆನಿಗಳಲ್ಲಿ ಆಕ್ಸಿಡೆಂಟ್ ಆಗಿ ಬಿದ್ದ ವಾಹನಗಳ ಜಜ್ಜಿಹೋದ ಬಿಡಿಭಾಗಗಳನ್ನು ಟೆಂಡರ್ ಹಾಕಿ ಖರೀದಿಸುವಷ್ಟು ಚುರುಕಾಗಿಬಿಟ್ಟು  `ಸಾಲ್ವೇಜ್ ಬೈಯರ್' ಎಂಬ ಗೌರವಾನ್ವಿತ ಹೆಸರು ಪಡೆದಿದ್ದ. ಅದರಲ್ಲಿ ರಿಪೇರಿ ಮಾಡಿ ಮಾರುವಂತಹ ಬಿಡಿಭಾಗಗಳನ್ನು ಲಾಭಕ್ಕೆ ಮಾರಿ, ತೀರಾ ಜಖಂ ಆದವನ್ನು ಮಾತ್ರ ಹಳೆ ಕಬ್ಬಿಣದ ಜೊತೆಗೆ ಐರನ್ ಫ್ಯಾಕ್ಟರಿಗೆ ಕಳಿಸಿಬಿಡುತ್ತಿದ್ದ.

ಹಳೆ ಕಬ್ಬಿಣವನ್ನು ಕರಗಿಸುವ ಫ್ಯಾಕ್ಟರಿಯವರು ಬಳ್ಳಾರಿಯ ಗಣಿಯಿಂದ ಕಡಿಮೆ ರೇಟಿಗೆ ಅದಿರು ಸಿಕ್ಕತೊಡಗಿದ ಮೇಲೆ ಬಾಬಣ್ಣನಂಥವರ ಹಳೆ ತುಕ್ಕು ಹಿಡಿದ ಕಬ್ಬಿಣ ಕರಗಿಸೋದು ಲಾಭದಾಯಕವಲ್ಲ ಅಂತ ಕಂಡುಕೊಂಡುಬಿಟ್ಟಿದ್ದರು. ಈಗ ಬಳ್ಳಾರಿಯ ಅದಿರೂ ನಿಂತಿದೆ. ಮತ್ತೆ ತನ್ನ ಗುಜರಿಗೆ ಡಿಮ್ಯಾಂಡ್ ಬರಬಹುದು ಅಂತ ಆಸೆ ಪಡುತ್ತ ಫ್ಯಾಕ್ಟರಿಗೆ ಫೋನ್ ಮಾಡಿದ್ರೆ ಬ್ಯಾಡ ಅಂದು ಬಿಡ್ತಾರೆ.

ಮತ್ತೆ ಫ್ಯಾಕ್ಟರಿ ಹೇಗೆ ನಡೆಸ್ತಾರೋ ಅಂತ ಯೋಚನೆ ಮಾಡ್ತಾ ಇದ್ದಾಗ ಬಾಬಣ್ಣನ ಗುಜರಿ ಸಾಗಿಸ್ತಾ ಇದ್ದ ಲಾರಿ ಪನ್ನಾಭ `ಇನ್ನ ಗುಜರಿ ಮಾರಿ ಜೀವನ ನಡೆಸ್ತೀನಿ ಅನ್ನೋದು ಮರೆತುಬಿಡು ಬಾಬಣ್ಣ, ಇಡೀ ಪ್ರಪಂಚದಲ್ಲಿ ಹೊಸ ಕಬ್ಬಿಣಕ್ಕೆ ಡಿಮ್ಯಾಂಡ್ ಇಲ್ಲವಂತೆ. ಫ್ಯಾಕ್ಟರಿಯವರೆಲ್ಲ ಕಬ್ಬಿಣ ತಯಾರ್ಸೊದನ್ನೆ ನಿಲ್ಲಿಸಿದಾರೆ. ಇನ್ನ ನಿನ್ನ ಗುಜರಿ ಯಾರಿಗೆ ಬೇಕು? ಬೇರೆ ಏನಾದ್ರೂ ದಾರಿ ಹುಡುಕ್ಕೋ' ಎಂದಿದ್ದ.

`ಅಲ್ಲ ಪನ್ನಾಭ ಪ್ರಪಂಚಕ್ಕೆ ಕಬ್ಬಿಣವೇ ಬ್ಯಾಡ ಅನ್ನೋ ಕಾಲವೂ ಬಂತ?' ಅಂತ ಬಾಬಣ್ಣ ಅಚ್ಚರಿ ವ್ಯಕ್ತಪಡಿಸಿದ್ದ.`ಇಷ್ಟು ದಿನ ನಮ್ಮ ಫ್ಯಾಕ್ಟರಿಗಳೂ ಅದುರಿನ ಗಣಿಗಳೂ ನಡೀತಾ ಇದ್ದದ್ದೆ ಚೀನಾದವ್ರ ಮೇಲೆ. ಚೀನಾದವ್ರ ನಾವು ಯಾರಿಗಿಂತ ಕಮ್ಮಿ ಇಲ್ಲ ಅಂತ ತೋರ್ಸಿಕೊಳ್ಳೋಕೆ ಜನ ವಾಸ ಮಾಡದೆ ಇರೋ ಕಡೆ ಎಲ್ಲ ಹೊಸಹೊಸ ನಗರಗಳನ್ನೆ ಕಟ್ಟಿಬಿಟ್ರು.

ಅವರಿಗೆ ಎಷ್ಟು ಕಬ್ಬಿಣ ಇದ್ರೂ ಸಾಲ್ತಾ ಇರ್ಲಿಲ್ಲ. ಆವಾಗ್ಲೆ ಬಳ್ಳಾರಿಯಿಂದ ಅದಿರು ಸಾಗಿಸೋಕೆ ಲಾರಿಗಳಿಗೂ ಡಿಮ್ಯಾಂಡ್ ಬಂದಿತ್ತು. ಅದನ್ನೆಲ್ಲ ನಂಬಿಕೊಂಡು ನಾನೂ ಹಳೆ ಲಾರಿ ಜೊತೆ ಹನ್ನೆರಡು ಚಕ್ರದ್ದು ಲಾರೀನ ಹದಿನೈದು ಲಕ್ಷ ಸಾಲ ಮಾಡಿ ತೆಗೆದೆ. ಈಗ ಚೀನಾಕ್ಕೂ ದುಡ್ಡಿಗೆ ಬರ ಬಂತಂತೆ, ಅದನ್ನೆ ನಂಬಿಕೊಂಡಿದ್ದ ಗಣಿನೂ ನೆಲ ಕಚ್ಚಿತು.

ಬಾಡಿಗೆ ಇಲ್ಲದೆ ಸಾಲ ಮಾಡಿದ ನನ್ನಂತೋರೂ ನೆಲ ಕಚ್ಚಿದ್ವಿ. ಹೊಸ ಲಾರಿನ ಫೈನಾನ್ಸಿನವರು ಜಪ್ತಿ ಮಾಡಿದ್ರು, ನನಗೀಗ ಹಳೇ ಲಾರೀನೇ ಗತಿ. ಅದಕ್ಕೂ ನಿನ್ನಂತೋರಿಂದ ಸಿಕ್ತಾ ಇದ್ದ ಬಾಡಿಗೇನೂ ಇಲ್ಲ. ಈ ಸರ್ತಿ ಕಾರ್ಪೊರೇಶನ್ ಕಸ ತೆಗೆಯೋ ಟೆಂಡರ್ ಹಾಕಿದೀನಿ. ಅದು ಸಿಕ್ಕಿದ್ರೆ ಹೇಗೋ ಜೀವನ ಮಾಡಬಹುದು. ಮಗಳ ಮದುವೆ ಮಾತುಕಥೆ ಬೇರೆ ನಡೀತ ಇದೆ.

ಲಾರಿ ಸಾಲದ ಬಡ್ಡಿ ಹಣಕ್ಕೆ ನನ್ನ ಹೆಂಡತಿ ಮೈಮೇಲೆ ಇದ್ದ ಚಿನ್ನ ಮಾರಬೇಕಾಯ್ತು. ಇದ್ದ ಚಿನ್ನ ಮಾರಿದೋನಿಗೆ ಮಗಳ ಮದುವೆಗೆ ಹೊಸ ಚಿನ್ನ ಮಾಡಿಸೋ ಯೋಗ್ಯತೆ ಎಲ್ಲಿದೆ? ನನ್ನ ಕಷ್ಟದ ಮುಂದೆ ನಿನ್ನದು ಏನು ಮಹಾ?' ಎಂದು ನಿಟ್ಟುಸಿರುಬಿಟ್ಟ.

ಕಷ್ಟ ಅಂತ ಬಾಯಲ್ಲಿ ಹೇಳ್ತಾನೆ, ನೋಡಿದರೆ ತಾಪತ್ರಯ ಏನೂ ಇದ್ದಹಾಗಿಲ್ಲ. ಇಸ್ಪೀಟ್ ಕುಡಿತ ಎಲ್ಲಾ ನಡೀತಾನೆ ಇದೆ! ಅಂದುಕೊಳ್ಳುತ್ತ `ನನ್ನ ಮಗಳೂ ಬೆಳೆದಿದಾಳೆ. ಅವಳಿಗೂ ಮದುವೆ ಮಾಡಬೇಕು, ಈ ಭಂಗದ ಬದುಕಲ್ಲಿ ಹೆಂಗೆ ಮಾಡೋದೋ?' ಎನ್ನುತ್ತ ಬಾಬಣ್ಣ ನಿಟ್ಟುಸಿರುಗರೆದ. `ಅಲ್ವೋ ಬಾಬಣ್ಣ ನಿನ್ನ ಮಗಳ ಮದುವೆಗೆ ಈಗಲೇ ಏನೋ ಆತುರ? ಕಷ್ಟ ಎಲ್ಲ ಮುಗೀಲಿ ಆಮೇಲೆ ಮಾಡದಾಗುತ್ತೆ' ಎಂದ ಪನ್ನಾಭ.

ತನ್ನ ಮಗಳ ಮದುವೆ ವಿಷಯ ಮಾತಾಡ್ತಾನೆ ಆದರೆ ನನ್ನ ಮಗಳ ಮದುವೆಗೆ ಯಾಕೆ ಆತುರ ಅಂತಾನಲ್ಲ! ಎಂದು ಬಾಬಣ್ಣ ಅಚ್ಚರಿಪಡುತ್ತ ಏನೂ ಪ್ರತಿಕ್ರಿಯಿಸದೆ ಸುಮ್ಮನಾದ. ಆದರೆ ಅವನ ಮನಸ್ಸಿನಲ್ಲಿದ್ದದ್ದೆ ಬೇರೆ.

ಅದೆಲ್ಲೊ ನಾನು ನೋಡದೆ ಇರೋ ಯಾವುದೋ ಚೀನಾ ದೇಶದಲ್ಲಿ ಬಡತನ ಬಂದರೆ ನನ್ನ ಸಂಸಾರ ಹಾಳಾಗೋಕೆ ಹ್ಯಾಗೆ ಸಾಧ್ಯ? ಅಂತ ಅದೆಷ್ಟೆ ಯೋಚನೆ ಮಾಡಿದ್ರೂ ಅವನಿಗೆ ಅರ್ಥವೇ ಆಗಲಿಲ್ಲ.
ಮಹಾ ಮಹಾ ಅರ್ಥಶಾಸ್ತ್ರಜ್ಞರೆ ಕಂಡುಕೊಳ್ಳಲಾರದ ಸತ್ಯ ಯಕಃಶ್ಚಿತ್ ಗುಜರಿ ಬಾಬಣ್ಣನಿಗೆ ಅರ್ಥವಾಗಬಹುದೆ?
***
ಎಲ್ಲರಿಗೂ ಇರುವಂತೆ ಬಾಬಣ್ಣನಿಗೂ ಹಲವಾರು ಸಾಂಸಾರಿಕ ತಾಪತ್ರಯಗಳು ಇದ್ದವು. ಗುಜರಿ ಸಂಗ್ರಹ ಮಾಡುತ್ತಿದ್ದಾಗ ಸುಮಾರಾಗಿ ನಡೆಯುತ್ತಿದ್ದ ಸಂಸಾರವು ಇನ್ಶೂರನ್ಸ್‌ನ  `ಸಾಲ್ವೇಜ್ ಬೈಯರ್' ಆದಮೇಲೆ ಚೆನ್ನಾಗೆ ನಡೆಯುತ್ತಿತ್ತು. ಈಗ ಕಬ್ಬಿಣಕ್ಕೆ ಮಾರ್ಕೆಟ್ ಇಲ್ಲ ಎಂದಾದಾಗ ಆದಾಯವೆ ಇಲ್ಲವಾಗಿ ಹಳೇಪೇಪರ್ ಮಾರಾಟ ಮಾತ್ರ ಉಳಿದಿದ್ದು.

ಅದು ಜೀವನಕ್ಕೆ ಸಾಕಾಗುತ್ತಲೇ ಇರಲಿಲ್ಲ. ಮಗಳು ಬೆಳೆದು ನಿಂತಿದ್ದಳು. ಮದುವೆ ಮಾಡಲಾಗದ ಅಶಕ್ತತೆ ಒಂದುಕಡೆ ಇದ್ದರೆ ಬೆಳೆದ ಮಗಳು ಬಡತನವನ್ನು ಸಹಿಸದೆ ಸದಾ ಜಗಳವಾಡುತ್ತಿದ್ದುದು ಮತ್ತೊಂದು ರೀತಿಯ ಅಶಾಂತಿಗೆ ಕಾರಣವಾಗಿತ್ತು. ಒಂದಷ್ಟು ಸಾಲ ತೆಗೆದು ಏನಾದರೂ ಬೇರೆ ಬ್ಯಾರ ಮಾಡಲು ಸಾಧ್ಯವೇನೋ ಎಂದು ಆಲೋಚಿಸುತ್ತ ಬ್ಯಾಂಕಿಗೆ ಹೋಗಿ ಗುಜರಿ ಕಾರಣದಿಂದಾಗಿಯೆ ಪರಿಚಯವಾಗಿದ್ದ ಮ್ಯಾನೇಜರನನ್ನು ಸಾಲಕ್ಕಾಗಿ ಬೇಡಿಕೊಂಡ.

ಪರಿಚಯದ ಮ್ಯಾನೇಜರ್ ಎಂದು ಏನೋ ಧೈರ್ಯದಲ್ಲಿ ಸಾಲ ಕೇಳಲು ಹೋದರೆ ಆತ `ಸಣ್ಣಸಣ್ಣ ಸಾಲ ಕೊಡೋಡು ನಿಲ್ಲಿಸಿಬಿಟ್ಟಿದೀವಿ ಬಾಬಣ್ಣ' ಎಂದು ಆಸೆಗೆ ತಣ್ಣೀರು ಎರಚಿಬಿಟ್ಟಿದ್ದ. `ಈ ಇನ್‌ಫ್ಲೇಶನ್ ಕಾಲದಲ್ಲಿ ನೀನೇನು ಮಾಡ್ತೀಯ ಬಾಬಣ್ಣ? ಈಗೇನಿದ್ರೂ ಕೋಟಿ ಇದ್ರೆ ವ್ಯವಹಾರ. ಡಾಲರ್ ಬೆಲೆ ಎಷ್ಟು ಏರಿದೆ ಗೊತ್ತಾ? ರೂಪಾಯಿಗೆ ಬೆಲೆಯೇ ಇಲ್ಲ, ಶೇರುಪೇಟೆ ಕೂಡಾ ಬಿದ್ದುಹೋಗಿದೆ.

ಅಮೆರಿಕಾದ ಅರ್ಥವ್ಯವಸ್ಥೆ ಸರಿಯಾಗಿದ್ರೆ ನಾನೂ ನೀನೂ ಎಲ್ಲ ಸರಿಯಾಗಿರಬಹುದು. ಅಮೆರಿಕಾವೆ ಚೇತರಿಸಿಕೊಂಡಿಲ್ಲ. ಈಗ ಯೂರೋಪ್ ಸಹಾ ಸಾಲದ ಬಿಕ್ಕಟ್ಟಲ್ಲಿ ಬಿದ್ದಿದೆ. ಇಡೀ ಪ್ರಪಂಚವೇ ಕುಸಿದ ಅರ್ಥವ್ಯವಸ್ಥೆಯಲ್ಲಿ ನರಳುತ್ತಾ ಇರೋವಾಗ ನೀನು ಹೊಸತಾಗಿ ಯಾಕೆ ಸಾಲದ ಬಲೆಗೆ ಬೀಳ್ತೀಯ?' ಎಂದು ಕೇಳಿದರು.

ನಾನೊಬ್ಬ ಗುಜರಿ ವ್ಯಾಪಾರಿ. ಅಮೆರಿಕಾ ಯೂರೋಪ್ ಸಾಲ ಕಟ್ಟಿಕೊಂಡು ನನಗೇನಾಗಬೇಕಾಗಿದೆ? ಈ ಮನುಷ್ಯನಿಗೆ ಮಾತನಾಡೋ ಚಟ. ಇಲ್ಲವಾದ್ರೆ ಇದನ್ನೆಲ್ಲ ನನಗೇಕೆ ಹೇಳಬೇಕು? ಎಂದುಕೊಂಡ. ಮ್ಯಾನೇಜರನ ಮಾತು ಏನೂ ಅರ್ಥವಾಗಲಿಲ್ಲವಾದರೂ ತನಗೆ ಈ ಮನುಷ್ಯನಿಂದ ಸಾಲ ಸಿಕ್ಕುವುದಿಲ್ಲ ಎಂಬುದು ಅರ್ಥವಾಗಿ ಬಾಬಣ್ಣ ಹೊರಬಂದ.

ಯಾರನ್ನು ಕೇಳಿದರೂ ಎಲ್ಲರೂ ಪ್ರಪಂಚದ ಹಣಕಾಸಿನ ಬಗ್ಗೆ ಮಾತನಾಡ್ತಾರೆ. ತನಗೆ ಒಂದು ಐವತ್ತು ಸಾವಿರ ಸಿಕ್ಕರೂ ಸಾಕಿತ್ತು. ಹೇಗೋ ಬದುಕಿಕೊಳುತ್ತಿದ್ದೆ. ಮೊನ್ನೆ ಹೋಟೆಲಲ್ಲಿ ಕಾಪಿ ಕುಡೀತಾ ಮಾತಿಗೆ ಸಿಕ್ಕಿದ ಚಂದ್ರಾಚಾರಿ ಜೊತೆ ನಮ್ಮ ಹಣಕಾಸಿನ ಮುಗ್ಗಟ್ಟು ಯಾವಾಗ ತೀರುತ್ತೋ? ಎಂದದ್ದಕ್ಕೆ ಅಲ್ಲೇ ಇದ್ದ ಯಾರೋ ಕಾಲೇಜು ಹುಡುಗ `ಜಿ-ಇಪ್ಪತ್ತು ಗುಂಪಿನ ದೇಶಗಳೆಲ್ಲ ಮುಂದಿನ ತಿಂಗಳು ಸಭೆ ಸೇರ್ತಾರಂತೆ.

ಅಲ್ಲಿ ಆರ್ಥಿಕ ತಜ್ಞರೆಲ್ಲ ಭಾಷಣಾ ಮಾಡಿ ಯುರೋಪ್, ಗ್ರೀಸ್ ದೇಶಗಳನ್ನು ಹಣಕಾಸಿನ ಮುಗ್ಗಟ್ಟಿನಿಂದ ಪಾರುಮಾಡಲಿದ್ದಾರಂತೆ. ಆಮೇಲೆ ನಿಮ್ಮ ಕಷ್ಟಗಳು ತೀರಬಹುದು' ಎಂದು ನಕ್ಕಿದ್ದ. `ನಾವು ಏನೇ ಕಷ್ಟ ಹೇಳಿಕೊಂಡರೂ ಎಲ್ಲರೂ ಅದಕ್ಕೆ ಚೀನಾ ಅಮೆರಿಕಾ ಯುರೋಪ್ ಕಾರಣ ಅಂತಾರೆ, ಅವೆಲ್ಲ ಎಲ್ಲಿದ್ದಾವೋ? ನಮಗೂ ಅವಕ್ಕೂ ಏನು ಸಂಬಂಧವೋ?' ಎಂದದ್ದಕ್ಕೆ ಆ ಹುಡುಗ ಏರಿದ ಧ್ವನಿಯಲ್ಲಿ `ಇದಕ್ಕೆಲ್ಲ ಸರ್ಕಾರನೆ ಕಾರಣ.

ಉದಾರೀಕರಣ ಗ್ಲೋಬಲೈಸೇಶನ್ ಅಂತ ಕುಣಿದು ಕುಣಿದು ನಮಗೂ ನಿಮಗೂ ಈ ಗತಿ ತಂದಿದಾರೆ, ನಮ್ಮ ದೇಶದ ಆರ್ಥಿಕತೆ ದೇಶೀಯವಾಗಿ ಇದ್ದಹಾಗೆ ಇದ್ದಿದ್ದರೆ ಅಮೆರಿಕಾದಲ್ಲಿ ಮಳೆ ಬಂದರೆ ಇಲ್ಲಿ ಕೊಡೆ ಹಿಡಿಯಬೇಕಾಗಿರಲಿಲ್ಲ. ಎಲ್ಲರಿಗೂ ಸುಖ ಬೇಕು. ದುಡ್ಡಿದ್ದವರು ಉಪಭೋಗ ಸಂಸ್ಕೃತಿಗೆ ಮರುಳಾದದ್ದಕ್ಕೆ ನಾವೆಲ್ಲ ಬೆಲೆ ತೆರಬೇಕಾಗಿದೆ.

ಇದೊಂದು ರೀತಿ ನವವಸಾಹತುಶಾಹಿ. ಬಂಡವಾಳಶಾಹಿಗಳ ಕಣ್ಣಿಗೆ ನಾವು ಕೇವಲ ಗ್ರಾಹಕರಾಗಿ ಕಾಣ್ತೀವೆ ಹೊರತು ಮನುಷ್ಯರ ತರಹ ಕಾಣೋದೇ ಇಲ್ಲ. ಎಲ್ಲಾ ನಾಮರ್ದಗಳು. ಪ್ರತಿಯೊಂದಕ್ಕೂ ಅಮೆರಿಕಾ ಯುರೋಪ್ ಅಂತ ಕುಣಿದು ಈ ದೇಶಕ್ಕೆ ಇಂಥಾ ಗತಿ ತಂದ್ರು' ಎಂದು ಅಬ್ಬರಿಸಿದ.

ಅದೊಂದು ಆವೇಶದ ಭಾಷಣದಂತೆ ಕೇಳಿಸಿದರೂ ಅವನು ಏನು ಹೇಳಿದನೋ ಒಂದು ಪದವೂ ಅರ್ಥವಾಗಲಿಲ್ಲ. ಅಷ್ಟಕ್ಕೂ ಈ ಹುಡುಗ ಇಷ್ಟೊಂದು ಕೋಪಗೊಳ್ಳುವ ಅವಶ್ಯಕತೆ ಏನಿತ್ತೋ ಗೊತ್ತಾಗದೆ ಬಾಬಣ್ಣ ಚಂದ್ರಾಚಾರಿಯ ಮುಖ ನೋಡಿದ. `ಅವರೆಲ್ಲ ಬಿಸಿರಕ್ತದ ಯುವಕರು. ವ್ಯವಸ್ಥೆಯ ವಿರುದ್ಧ ಹೋರಾಡೋ ಕ್ರಾಂತಿಕಾರಿಗಳು, ನಡಿ ನಾವು ಹೋಗೋಣ' ಎಂದ ಚಂದ್ರಾಚಾರಿಯ ಮಾತುಗಳೂ ಅರ್ಥವಾಗದೆ ಬಾಬಣ್ಣ ಯಥಾಪ್ರಕಾರ ಕಕ್ಕಾಬಿಕ್ಕಿಯಾದ.

ಬಿಸಿಲು ಹೆಚ್ಚಗ್ತಾ ಇದೆ ಎನ್ನಿಸಿ ಬೇಗ ಮನೆ ಸೇರೋಣ ಎಂದು ಸೈಕಲ್ ಹತ್ತಿಕೊಂಡು ಹೊರಟ. ಬರುಬರುತ್ತಾ ಶೆಕೆ ಏರ್ತಾನೆ ಇದೆ ಅನ್ನಿಸಿತು. ಇದನ್ನು ಯಾರ ಹತ್ತಿರವಾದ್ರೂ ಮಾತನಾಡಿದರೆ ಅದಕ್ಕೂ ಅಮೆರಿಕಾ ಚೀನಾ ಯುರೋಪ್ ಕಾರಣ ಅಂದುಬಿಟ್ಟಾರು ಎನ್ನಿಸಿ ಭಯವಾಗಿ ಸುಮ್ಮನೆ ಸೈಕಲ್ ತುಳಿಯತೊಡಗಿದ.

ಮನೆಗೆ ಹೋಗುವಾಗ ಮನೆಯ ಎದುರಲ್ಲಿ ಪನ್ನಾಭನ ಬೈಕ್ ಕಾಣಿಸಿ ಬಾಬಣ್ಣ ಸ್ವಲ್ಪ ಗೆಲುವಾದ. `ಓ ಪನ್ನಾಭ ಬಂದಿದಾನೆ ಅಂತ ಕಾಣುತ್ತೆ, ಅವನ ಹತ್ತಿರ ಮಾತನಾಡಿದರೆ ಮನಸ್ಸು ಹಗುರಾಗುತ್ತದೆ'ಎನ್ನಿಸಿತು. ಒಳಗೆ ಪನ್ನಾಭ ತನ್ನ ಮಗಳು ಕಲ್ಯಾಣಿಯ ಜೊತೆ ಮಾತನಾಡುತ್ತಾ ಕುಳಿತಿದ್ದ. ಇವರಿಬ್ಬರನ್ನೆ ಬಿಟ್ಟು ಅವಳೆಲ್ಲಿ ಹೋದಳು ಎಂದು ಹೆಂಡತಿಯನ್ನು ಹುಡುಕುತ್ತ ಅತ್ತಿತ್ತ ನೋಡುವಾಗ ಬಾಬಣ್ಣನ ಹೆಂಡತಿ ಕಾಫಿ ತಂದು ಪನ್ನಾಭನಿಗೆ ಕೊಟ್ಟಳು.

ಅದನ್ನು ಕುಡಿಯುತ್ತ ಪನ್ನಾಭ ತನ್ನ ಮಗಳಿಗೆ ಒಂದು ಗಂಡು ನೋಡಿರುವುದಾಗಿಯೂ ವರದಕ್ಷಿಣೆ, ಚಿನ್ನ ಜಾಸ್ತಿ ಕೇಳದಿದ್ದರೆ ಈ ವರ್ಷವೇ ಮದುವೆ ಮಾಡಿಬಿಡುತ್ತೇನೆಂದೂ ಹೇಳಿದ. ಹಾಗೆ ನನ್ನ ಮಗಳಿಗೂ ಒಂದು ಗಂಡು ನೋಡಿ ಪುಣ್ಯ ಕಟ್ಟಿಕೋ ಎಂದು ಬಾಬಣ್ಣ ಹೇಳಿದ್ದಕ್ಕೆ `ಈಗಲೆ ಯಾಕೆ ಅವಸರ ಮಾಡ್ತಿ? ಎಲ್ಲ ಸರಿಯಾಗಲಿ ಮಾಡಿದರೆ ಆಗುತ್ತೆ' ಎನ್ನುತ್ತಾ ಹೊರಟೇಬಿಟ್ಟ.

ಅವನೊಡನೆ ಮಾತನಾಡಿ ಸ್ವಲ್ಪ ಹಗುರಾಗಬೇಕೆಂದುಕೊಂಡಿದ್ದ ಬಾಬಣ್ಣ ನಿರಾಶನಾದ. ಪನ್ನಾಭ ಹೋದನಂತರ ಬಾಬಣ್ಣನ ಹೆಂಡತಿ ಒಂದು ಸರವನ್ನು ತೆಗೆದು  `ನೋಡಿ ರೋಲ್ಡ್‌ಗೋಲ್ಡ್ ಸರ, ಪನ್ನಾಭ ಅವರಿಗೆ ಹೇಳಿ ಪೇಟೆಯಿಂದ ತರಿಸಿದ್ದು' ಎಂದು ತೋರಿಸಿದಳು. `ನೋಡೋದಕ್ಕೆ ಚಿನ್ನದ್ದೇ ಇದ್ದ ಹಾಗಿದೆ' ಎಂದು ಬಾಬಣ್ಣ ಶಂಕೆ ವ್ಯಕ್ತಪಡಿಸಿದ.

`ಈಗೆಲ್ಲಾ ಒಂದು ಗ್ರಾಂ ಚಿನ್ನದ ಸರ ಬರುತ್ತಲ್ಲ ಅದಕ್ಕೆ ಚಿನ್ನದಹಾಗೆ ಕಾಣುತ್ತೆ' ಆಕೆ ಸರವನ್ನು ಮೆಚ್ಚಿಕೊಳ್ಳುತ್ತಾ ಹೇಳಿದಳು. `ಅದಕ್ಕಾದರೂ ಎರಡು ಸಾವಿರವಾದರೂ ಆಗುತ್ತಲ್ಲ, ದುಡ್ಡೆಲಿತ್ತು?' ಎಂದು ಕೇಳಿದ್ದಕ್ಕೆ `ಮನೆ ಖರ್ಚಿನಲ್ಲಿ ಮಿಕ್ಕಿದ್ದು.

ನೀವೇನೂ ಕೊಡಬೇಕಾಗಿಲ್ಲ ಚಿಂತೆ ಮಾಡಬೇಡಿ' ಎನ್ನುತ್ತಾ ಅವಮಾನಕಾರಿಯಾಗಿ ನಕ್ಕಳು. ಜೊತೆಗೆ ಮಗಳೂ ನಕ್ಕಾಗ ಬಡತನ ಬಂದಮೇಲೆ ಇವರೆಲ್ಲ ನನಗೆ ಬೆಲೆ ಕೊಡುವುದನ್ನೆ ಮರೆತಿದ್ದಾರೆ. ಇವರೆಲ್ಲರ ನಡುವೆ ನನಗೆ ಅಸ್ತಿತ್ವವೇ ಇಲ್ಲವೇನೋ ಎನ್ನಿಸಿ ಬಾಬಣ್ಣ ಸಂಕೋಚ ಅನುಭವಿಸಿದ.

ಮರುದಿನ ಬೆಳಗ್ಗೆ ಮಗಳು ಎಲ್ಲೋ ಹೊರಟು ನಿಂತಿದ್ದಳು. ನಿನ್ನೆ ನೋಡಿದ ಸರ ಅವಳ ಕುತ್ತಿಗೆಯಲ್ಲಿತ್ತು. ಅವಳ ಮೈಮೇಲಿದ್ದದ್ದು ತುಂಬಾ ಬೆಲೆಬಾಳುವ ಬಟ್ಟೆ ಎನ್ನಿಸಿತು. ಅದಂತೂ ತಾನು ಕೊಡಿಸಿದ್ದು ಅಲ್ಲ ಎಂಬುದು ಅವನಿಗೆ ಖಚಿತವಾಗಿತ್ತು. ಸಾಲದ್ದಕ್ಕೆ ಮಗಳ ತುಟಿ ಮಾಮೂಲಿಗಿಂತ ಬಣ್ಣವಾಗಿ ಹೊಳೆಯುತ್ತಿತ್ತು. ಅವಳೇನಾದರೂ ಲಿಪ್‌ಸ್ಟಿಕ್ ಹಚ್ಚಿರಬಹುದೆ ಎಂದು ಅನುಮಾನವಾಯಿತು.

ಅದೆಲ್ಲದರ ಬಗ್ಗೆ ಕೇಳಬೇಕೆನ್ನಿಸಿದರೂ ತಾಯಿ ಮಗಳು ಸಮರ್ಪಕ ಉತ್ತರ ಕೊಡುವುದನ್ನು ಯಾವಾಗಲೋ ಬಿಟ್ಟಿದ್ದಾರೆ. ಹೊಸ ಬಟ್ಟೆ ಲಿಪ್‌ಸ್ಟಿಕ್‌ಗಳ ಮೂಲವನ್ನು ಕೆದಕುತ್ತಾ ಹೋದರೆ ತನಗೆ ಅವಮಾನವಾಗಬಹುದು ಎನ್ನಿಸಿತು. ಬಡತನವು ಮನುಷ್ಯನನ್ನು ಇಷ್ಟೊಂದು ಅವಮಾನಕ್ಕೆ ದೂಡಿಬಿಡುತ್ತದಲ್ಲ ಎನ್ನಿಸಿ ತನ್ನ ಬಗ್ಗೆಯೆ ಆಲೋಚಿಸಿಕೊಳ್ಳುತ್ತ ಬಾಬಣ್ಣ ಕುಗ್ಗಿಹೋದ.
***
ಇತ್ತೀಚಿನ ದಿನಗಳಲ್ಲಿ ಸೈಕಲ್ ತುಳಿಯುತ್ತಾ ಗೊತ್ತುಗುರಿಯಿಲ್ಲದೆ ಹೋಗಿಬಿಡುವುದು ಬಾಬಣ್ಣನ ಆಸಕ್ತಿಯ ವಿಷಯವಾಗಿತ್ತು. ಮೊದಲಿನಿಂದಲೂ ಎಲ್ಲಾದರೂ ಹೋಗುವುದಿದ್ದರೆ ಸೈಕಲ್ ಹೊಡೆಯುವುದು ಬಾಬಣ್ಣನ ರೂಢಿ. ಗುಜರಿ ಬಾಬಣ್ಣ ಆಗಿದ್ದಾಗಲೂ ಅಷ್ಟೆ. ಎಲ್ಲಾದರೂ ಬೇರೆ ಕೆಲಸಕ್ಕೆ ಹೋಗುವುದಿದ್ದರೆ ಸೈಕಲ್ಲನ್ನೆ ಉಪಯೋಗಿಸುತ್ತಿದ್ದ. ಆದರೆ ಗುಜರಿ ಕಲೆಕ್ಷನ್‌ಗೆ ಹೋಗುವಾಗ ಮನೆಮನೆಯ ಮುಂದೆ ನಿಂತು ಮಾತನಾಡಬೇಕಾದ ಕಾರಣ ಹೆಗಲ ಮೇಲೆ ಚೀಲ ಹಾಕಿಕೊಂಡು ನಡೆಯುವುದು ಸೂಕ್ತವಾಗಿರುತ್ತಿತ್ತು.

ಗುಜರಿ ಬಾಬಣ್ಣ ಹೋಗಿ ಆಮೇಲೆ `ಸಾಲ್ವೇಜ್ ಬೈಯರ್ ಬಾಬಣ್ಣ' ಆದಾಗಲೂ ಅಷ್ಟೆ. ಕೈನಲ್ಲಿ ಅಷ್ಟಿಷ್ಟು ದುಡ್ಡು ಬಂದಾಗಲೂ ಅವನು ಮೋಟಾರ್ ಬೈಕ್ ಕೊಳ್ಳಲಿಲ್ಲ. ಈಗಂತೂ ಬಡತನವೇ ಕಿತ್ತುತಿನ್ನುತ್ತಿರುವಾಗ ಖರ್ಚಿಲ್ಲದ ಸೈಕಲ್ಲೇ ಸರಿ ಎಂದು ಅವನ ಅಭಿಪ್ರಾಯ. ಈಗಂತೂ ಸರಿಯೇಸರಿ! ಮಾಡಲೇನೂ ಕೆಲಸವಿಲ್ಲ. ಮನೆಗೆ ಅಷ್ಟಿಷ್ಟು ದುಡ್ಡು ಊಟಕ್ಕಾಗುವಷ್ಟು ದುಡಿದು ಕೊಡುತ್ತಿದ್ದರೂ ಇತ್ತೀಚೆಗೆ ಹೆಂಡತಿ ಮತ್ತು ಮಗಳು ಅವನನ್ನು ನಾಲಾಯಕ್ ಗಂಡಸು ಎಂದು ಪರಿಗಣಿಸಿಬಿಟ್ಟದ್ದು ಅವನಿಗೆ ಅವಮಾನಕಾರೀ ವಿಷಯವಾಗಿತ್ತು.

ಸೈಕಲ್ ಹೊಡೆಯುವಷ್ಟೂ ಸಮಯ ತಾನು ಅವರೆಲ್ಲರಿಂದಲೂ ಮತ್ತು ಅವರು ನಿರ್ಮಿಸಿರುವ ಉಸಿರುಕಟ್ಟಿಸುವಂತಹ ಅವಮಾನಕಾರೀ ಪರಿಸರದಿಂದಲೂ ದೂರ ಹೋಗುತ್ತಿದ್ದೇನೆನ್ನಿಸಿ ಗೆಲುವಿನ ಭಾವನೆ ಮೂಡುತ್ತಿತ್ತು. ಕೆಲವೇ ಕ್ಷಣಗಳಾದರೂ ಗೆಲುವಿನ ಭಾವನೆ ಕೊಡುವ ಕಾರಣಕ್ಕೆ ಸೈಕಲ್ ಸವಾರಿ ಅವನಿಗೆ ಪ್ರಿಯವಾಗುತ್ತಿತ್ತು. ಅಂದೂ ಸಹ ಹಾಗೆ ಸೈಕಲ್ ಹೊಡೆಯುತ್ತಿದ್ದ ಬಾಬಣ್ಣನ ತಲೆ ತುಂಬಾ ತುಂಬಿಕೊಂಡದ್ದು ಜಾಗತಿಕ ವಿದ್ಯಮಾನಗಳು!

ಕೋಡಂಗಲ್ಲಿನ ಸಣ್ಣ ಗುಜರಿ ವ್ಯಾಪಾರಿಗೆ ತೃಣಮಾತ್ರವೂ ಅರ್ಥವಾಗದ ಜಾಗತಿಕ ವಿದ್ಯಮಾನಗಳು ತಲೆಯಲ್ಲಿ ತುಂಬಿಕೊಂಡು ಕಾಡುತ್ತಿವೆ ಎಂದರೆ ಅವೆಷ್ಟು ಪ್ರಭಾವಶಾಲಿ ಆಗಿರಬಹುದು? ಅಲ್ಲಲ್ಲಿ ಮಾತಿನ ನಡುವೆ ಕೇಳಿಸಿಕೊಂಡಿದ್ದ ವಿಶ್ವ ಆರ್ಥಿಕತೆ, ಉದಾರೀಕರಣ, ಡಾಲರ್ ಬೆಲೆ, ಯೂರೋಪ್ ಸಂಕಷ್ಟ, ಗ್ರೀಸ್ ಬಡತನ, ಚೀನಾದ ಹುಸಿ ಆರ್ಥಿಕತೆ ಇವೆಲ್ಲ ಅದು ಹೇಗೆ ಎಲ್ಲೋ ಮೂಲೆಯಲ್ಲಿ ಗುಜರಿ ಮಾರಿಕೊಂಡಿರುವ ನನ್ನ ಸಂಕಷ್ಟಕ್ಕೆ ಕಾರಣವಾಗಬಲ್ಲದು? ಎಂಬುದು ಎಷ್ಟು ಅಳೆದು ಸುರಿದು ಲೆಕ್ಕ ಹಾಕಿದರೂ ಅರ್ಥವಾಗಲೊಲ್ಲದು.

ಮೊನ್ನೆ ಅಕೌಂಟಿನಲ್ಲಿ ಉಳಿದಿದ್ದ ಸ್ವಲ್ಪ ಹಣ ತರೋದಕ್ಕೆ ಬ್ಯಾಂಕಿಗೆ ಹೋದಾಗ ಕ್ಯಾಶ್ ಕೌಂಟರಿನಲ್ಲಿ ಜನ ಇಲ್ಲದ ಕಾರಣ ಕ್ಯಾಶಿಯರ್ ಪ್ರಭು ಜೊತೆ ಮಾತನಾಡುತ್ತಾ ನಿಂತಾಗ ಮಾಮೂಲಿನಂತೆ ಇದೇ ವಿಷಯ ಪ್ರಸ್ತಾಪಿಸಿದ್ದ. ಅದಕ್ಕೆ ಕ್ಯಾಶಿಯರ್ ಪ್ರಭು ನಗುತ್ತ `ಅದು ಹಾಗೆ ಬಾಬಣ್ಣ, ಅಮೆರಿಕಾದಲ್ಲಿ ಒಂದು ಚಿಟ್ಟೆ ರೆಕ್ಕೆ ಬಡುದ್ರೆ ಆಸ್ಟ್ರೇಲಿಯಾದಲ್ಲಿ ಬಿರುಗಾಳಿ ಏಳುತ್ತಂತೆ.

ಅದಕ್ಕೆ ಬಟರ್ ಫ್ಲೈ ಎಫೆಕ್ಟ್ ಅಂತಾರೆ. ಈಗ ಇಂಡಿಯಾದ ಕಥೆನೂ ಅದೆ, ನಿನ್ನ ಕಥೆನೂ ಅದೆ' ಎಂದ `ಹಾಗಂದ್ರೇನು' ಎಂದುಕೊಳ್ಳುತ್ತ ಚಿಂತಾಮಗ್ನನಾದಾಗ ಅವನ ತೊಳಲಾಟವನ್ನು ಅರ್ಥ ಮಾಡಿಕೊಂಡು ಪ್ರಭು `ಹಾಗಂದ್ರೆ ಎಲ್ಲೋ ಒಂದು ಕಡೆ ಸಂಬಂಧವಿಲ್ಲದೆ ನಡೆದ ಸಂಗತಿ ಮತ್ತೆಲ್ಲೋ ತಲ್ಲಣಕ್ಕೆ, ದುರಂತಕ್ಕೆ ಕಾರಣವಾಗುವುದನ್ನು ಬಟರ್ ಫ್ಲೈ ಎಫೆಕ್ಟ್ ಅಂತಾರೆ.

ಅದೆಲ್ಲ ಫಿಸಿಕ್ಸ್ ಥಿಯರಿಗಳು ಅದು ನಿನಗರ್ಥವಾಗಲ್ಲ ಬಿಡು' ಎನ್ನುತ್ತಾ ಮುಂದಿನ ಗಿರಾಕಿಗೆ ಕ್ಯಾಶ್ ಎಣಿಸತೊಡಗಿದ. ಬಾಬಣ್ಣ ಈ ಓದಿಕೊಂಡವರು ಮತ್ತೊಬ್ಬರಿಗೆ ಅರ್ಥವಾಗದ ಹಾಗೆ ಮಾತನಾಡೋದನ್ನ ಯಾಕೆ ಕಲೀತಾರೋ ಎಂದುಕೊಳ್ಳುತ್ತಾ ಹೊರಬಂದಿದ್ದ. ತನ್ನ ಸಂಸಾರದಲ್ಲಿ ಬಿರುಗಾಳಿ ಬೀಸುತ್ತಾ ಇರೋದಕ್ಕೆ ಎಲ್ಲೋ ಚಿಟ್ಟೆ ರೆಕ್ಕೆ ಬೀಸಿದ್ದು ಕಾರಣ ಎಂದದ್ದು ಮಾತ್ರ ಅವನಿಗೆ ಹಾಸ್ಯಾಸ್ಪದವಾಗಿ ಕಾಣಿಸತೊಡಗಿತ್ತು.

ಮನಸ್ಸಿನ ತುಂಬ ತುಂಬಿಕೊಂಡಿದ್ದ ಆ ಎಲ್ಲಾ ಆಲೋಚನೆಗಳನ್ನು ನಿಯಂತ್ರಿಸಲಾರದೆ, ಅವುಗಳಿಂದ ಬಿಡಿಸಿಕೊಂಡೂ ಬರಲಾರದೆ ಅದೇ ಗುಂಗಿನಲ್ಲಿ ತಾನೆಲ್ಲಿ ಹೋಗುತ್ತಿದ್ದೇನೆ ಎಂಬುದನ್ನೂ ಗಮನಿಸಿದೆ ಕತ್ತಲಾಗುತ್ತಿದ್ದರೂ ಬಾಬಣ್ಣ ಸೈಕಲ್ ತುಳಿಯುತ್ತಲೇ ಇದ್ದ. ಸಂಜೆ ಪನ್ನಾಭನ ಮನೆಗೆ ಹೋಗಿ ಅವನ ಜೊತೆ ಮಾತನಾಡುತ್ತಾ ಮನಸ್ಸಿನ ದುಗುಡ ಕಡಿಮೆ ಮಾಡಿಕೊಳ್ಳೋಣ ಎನ್ನಿಸಿ ಅವನ ಮನೆಗೆ ಹೋಗಿದ್ದ. ಆದರೆ ಪನ್ನಾಭ ಮನೆಯಲ್ಲಿ ಇರಲೇ ಇಲ್ಲ.

ನಿರಾಸೆಯಾಗಿ ಸೈಕಲ್ ಹತ್ತಿದ. ಮನೆಗೆ ಹೋದರೆ ಹೆಂಡತಿ ಮಗಳ ಅವಹೇಳನದ ಚುಚ್ಚು ಮಾತು ಕೇಳಬೇಕಾಗುತ್ತದೆ ಎಂಬ ಭಯದಲ್ಲಿ ಇತ್ತೀಚೆಗೆ ಅವನು ಮನೆಗೆ ತೀರಾ ತಡವಾಗಿ ಹೋಗುತ್ತಿದ್ದ. ಹೋಗಿ ಒಂದಷ್ಟು ಉಂಡು ಮಲಗುವುದಕ್ಕಷ್ಟೆ ಆತ ಮನೆಯನ್ನು ಆಶ್ರಯಿಸಿದ್ದ.

ಉಳಿದಂತೆ ಅಲ್ಲಿಲ್ಲಿ ಸುತ್ತುತ್ತ ಜೀವನೋಪಾಯಕ್ಕೆ ಏನಾದರೂ ಹೊಸ ಮಾರ್ಗಗಳು ಸಿಕ್ಕಬಹುದೆ ಎಂಬ ಅನ್ವೇಷಣೆ ನಡೆಸುತ್ತಿದ್ದ. ಈಗ ಮನೆಗೆ ಹೋಗಿ ಮಾಡುವುದು ಏನೂ ಇಲ್ಲ ಎಂದು ಸೈಕಲ್ ತುಳಿಯುತ್ತಾ ಇದ್ದವನು ಕತ್ತಲಾದುದನ್ನು ಗಮನಿಸಿ ತಾನೆಲ್ಲಿದ್ದೇನೆ ನೋಡಿಕೊಂಡ. ಅವನಾಗಲೆ ಊರಿನಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಸಿದ್ಧರ ಗುಡ್ಡದ ಹತ್ತಿರ ಬಂದುಬಿಟ್ಟಿದ್ದ!

ಹಸಿರು ಹೊದ್ದು ಮಲಗಿದ್ದ ಆ ಪುಟ್ಟ ಗುಡ್ಡದ ನೆತ್ತಿಯಲ್ಲಿ ಒಂದು ದೇವರ ಗುಡಿ ಇದೆ. ವರ್ಷಕ್ಕೊಮ್ಮೆ ಅದರ ಜಾತ್ರೆ ನಡೆಯುತ್ತದೆ. ಉಳಿದಂತೆ ವರ್ಷವಿಡೀ ಅದಕ್ಕೆ ಪೂಜೆ ಇಲ್ಲ. ಅದು ಬೇರೆ ಯಾವುದೋ ದೇವತೆಯ ಶಾಪವಂತೆ! ವರ್ಷವಿಡೀ ಆ ದೇವಾಲಯದಲ್ಲಿ ಚಟುವಟಿಕೆಗಳೇನೂ ಇರುವುದಿಲ್ಲವಾದ ಕಾರಣ ಜನರೂ ಆ ಕಡೆ ಹೋಗುವುದಿಲ್ಲ. ಹಿಂದೆ ಯಾರೋ ಸಿದ್ಧರುಗಳು ತಪಸ್ಸು ಮಾಡಲು ಆ ಗುಡ್ಡವನ್ನು ಬಳಸುತ್ತಿದ್ದರಂತೆ.

ತಾನೂ ಅಲ್ಲಿ ಧ್ಯಾನಸ್ಥನಾಗಿ ಕುಳಿತರೆ ಮನಸ್ಸಿನ ತಳಮಳ ಒಂದಷ್ಟು ಕಡಿಮೆ ಆಗಬಹುದೇನೋ ಎನ್ನಿಸಿ ಮೆಟ್ಟಿಲುಗಳು ಆರಂಭವಾಗುವಲ್ಲಿ ಸೈಕಲ್ ನಿಲ್ಲಿಸಿ ಬೀಗ ಹಾಕಿ ಮೆಟ್ಟಲು ಏರತೊಡಗಿದ. ದೇವಾಲಯ ಇರುವ ಪ್ರದೇಶ ನಿರ್ಜನವಾಗಿರುವ ಕಾರಣ ಪ್ರಾಯದ ಜೋಡಿಗಳ ಅವಾಂತರಗಳಿಗೆ ಪ್ರಶಸ್ತವಾಗಿದೆ ಎಂಬ ಸುದ್ದಿ ಅವನ ಕಿವಿಗೂ ಬಿದ್ದಿತ್ತು.

ಹಾಗಾಗಿ ದೇವಾಲಯದ ಕಡೆ ಹೋಗುವ ಬದಲಾಗಿ ಎಡಕ್ಕೆ ತಿರುಗಿಕೊಂಡು ಅಲ್ಲಿದ್ದ ಬಂಡೆಯೊಂದರ ಮೇಲೆ ಹತ್ತಿ ಚಕ್ಕಂಬಕ್ಕಲ ಹಾಕಿ ಕುಳಿತ. ಬಂಡೆ ತುಸು ಎತ್ತರದಲ್ಲಿದ್ದ ಕಾರಣ ಅವನು ಯಾರಿಗೂ ಕಾಣದಿದ್ದರೂ ಕೆಳಗೆ ಮೆಟ್ಟಲಿಳಿದು ಹೋಗುವವರು ಅವನಿಗೆ ಚೆನ್ನಾಗಿಯೆ ಕಾಣಿಸುತ್ತಿದ್ದರು.

ತನ್ನ ದುರವಸ್ಥೆ, ಹಣದ ಮುಗ್ಗಟ್ಟು, ಅವಮಾನಕಾರೀ ಬದುಕು, ಹೆಂಡತಿ ಮಕ್ಕಳ ತಿರಸ್ಕಾರ ಎಲ್ಲವನ್ನೂ ಧ್ಯಾನಿಸುತ್ತ ಕುಳಿತಿದ್ದಾಗ ದೇವಾಲಯದ ಕಡೆಯಿಂದ ಮೆಟ್ಟಲ ಮೇಲೆ ಯಾರೋ ಬಿರುಬಿರನೆ ಇಳಿದು ಬರುತ್ತಿರುವ ಶಬ್ದ ಕೇಳಿ ಕುತೂಹಲದಿಂದ ಗಮನಿಸಿದಾಗ ಬಾಬಣ್ಣ ಬೆಚ್ಚಿಬಿದ್ದ. ಅದು ಅವನ ಮಗಳು ಕಲ್ಯಾಣಿ! ಇವಳದ್ದೇನು ಅವಾಂತರವೋ ಎಂದು ಗಾಬರಿಗೊಂಡು ನೋಡಿದರೆ ಅವಳ ಜೊತೆಯಲ್ಲಿ ಯಾವ ಗಂಡಸೂ ಇಲ್ಲದ್ದನ್ನು ನೋಡಿ `ಸದ್ಯ ಒಬ್ಬಳೆ' ಎಂದು ಸಮಾಧಾನ ಪಟ್ಟುಕೊಂಡ.

ಮನೆಗೆ ಹೋಗಿ ಗದರಿಸಿಕೊಳ್ಳಬೇಕು ಎನ್ನಿಸಿದರೂ ತಾಯಿ ಮಗಳಿಬ್ಬರೂ ನನ್ನ ಮಾತು ಕೇಳದ ಹಂತವನ್ನು ಮುಟ್ಟಿಬಿಟ್ಟಿದ್ದಾರೆ ಎಂದೆನ್ನಿಸಿ ವಿಷಾದಗೊಂಡ. ಅವಳು ಹೋದ ಕೆಲವೇ ನಿಮಿಷಗಳಲ್ಲಿ ಮತ್ತಾರೋ ಗಂಡಸು ಮೆಟ್ಟಲಿಳಿದು ಬರುವುದು ಕಾಣಿಸಿತು. ಕತ್ತಲು ಮತ್ತು ಚಂದ್ರನ ನಸುಬೆಳಕಿನ ಮಿಶ್ರಣದಲ್ಲಿ ಯಾರೋ ದೃಢಕಾಯ ಗಂಡಸು ಬಿಯರ್ ಬಾಟಲನ್ನು ಎತ್ತಿ ಕುಡಿಯುತ್ತಲೇ ಮೆಟ್ಟಿಲಿಳಿಯುವುದು ಕಾಣಿಸಿತು.

ಆತ ಬಾಬಣ್ಣ ಕುಳಿತಿದ್ದ ಬಂಡೆಯ ಹತ್ತಿರವೇ ನಿಂತು ಬಾಟಲಿನಲ್ಲಿದ್ದ ಬಿಯರನ್ನು ಪೂರ್ಣ ಖಾಲಿ ಮಾಡಿ ಅಲ್ಲೆ ಎಸೆದು ಸರಸರನೆ ಇಳಿಯತೊಡಗಿದ. ಆ ಕ್ಷಣ ಅವನಾರೆಂದು ಬಾಬಣ್ಣನಿಗೆ ಸ್ಪಷ್ಟವಾಗಿ ಗೊತ್ತಾಯಿತು. ತನ್ನ ಮಗಳ ಜೊತೆ ಇದುವರೆಗೂ ಏಕಾಂತದಲ್ಲಿ ಇದ್ದವನು ಗೆಳೆಯ ಪನ್ನಾಭ! ಅಯ್ಯೋ...

ಅವನ ವಯಸ್ಸೇನು ಇವಳ ವಯಸ್ಸೇನು? ಈ ಕಾರಣಕ್ಕೆ ಪನ್ನಾಭ ತನ್ನ ಮಗಳ ಮದುವೆ ಮುಂದೂಡುವ ಸಲಹೆ ಕೊಡುತ್ತಿದ್ದನೆ? ತನ್ನ ಮಗಳ ಲಿಪ್‌ಸ್ಟಿಕ್, ಹೊಸ ಉಡುಪುಗಳು, ಮೊನ್ನೆ ನೋಡಿದ ಚಿನ್ನದ ಸರ ಎಲ್ಲದರ ರಹಸ್ಯ ಬಿಚ್ಚಿಕೊಳ್ಳತೊಡಗಿತು. ಹಾಗಾದರೆ ತಾಯಿಯೇ ಮಗಳಿಗೆ ಬೆಂಬಲವಾಗಿ ನಿಂತಿದ್ದಾಳೆಯೆ? ತಾನು ಮಗಳ ಮದುವೆ ಮಾಡುವುದಿಲ್ಲ ಎಂದು ಅವರೆಲ್ಲ ನಂಬಿಕೊಂಡಂತಿದೆ. ಅಯ್ಯೋ ಈ ಪ್ರಾಯದ ಆಸೆಗಳಿಗೆ, ಬಯಕೆಗಳಿಗೆ ಬಡತನವನ್ನು ಮೆಟ್ಟಿ ನಿಲ್ಲುವ ಶಕ್ತಿ ಇಲ್ಲವೆ...?


`...ದೇವರೆ ಚೀನಾ ಉದ್ಧಾರವಾಗಲಿ, ಯೂರೋಪ್ ಗ್ರೀಸ್ ದೇಶಗಳು ಸಾಲದಿಂದ ಹೊರಬರಲಿ, ರಶ್ಯಾ ಅಮೆರಿಕಾಗಳು ಶ್ರಿಮಂತವಾಗಲಿ. ಚಿಟ್ಟೆಗಳು ರೆಕ್ಕೆ ಬಡಿಯುವುದನ್ನು ನಿಲ್ಲಿಸಲಿ ಆಗಲಾದರೂ ನನ್ನ ಬದುಕು ಹಳಿಗೆ ಬರಬಹುದು. ನನ್ನ ಗುಜರಿ ವ್ಯಾಪಾರ ಸುಧಾರಿಸಬಹುದು. ಮಗಳ ಮದುವೆ ಮಾಡಿ ಮರ್ಯಾದೆ ಉಳಿಸಿಕೊಳ್ಳಬಹುದು. ದೇವರೆ... ಚೀನಾ ಅಮೆರಿಕಾ ಯೂರೋಪುಳಿಗೆ ಒಳಿತು ಮಾಡು. ಆ ದೇಶಗಳನ್ನು ಉದ್ಧಾರ ಮಾಡು ದೇವರೆ' ಎಂದು ಆರ್ತನಾದ ಮಾಡುತ್ತ ಅಲ್ಲೇ ಕುಳಿತುಬಿಟ್ಟ ಬಾಬಣ್ಣ.
ಕಣ್ಣಿಂದ ಜಿನುಗುತ್ತಿದ್ದ ಕಣ್ಣೀರನ್ನು ಒರೆಸಿಕೊಳುವ ಪ್ರಯತ್ನವನ್ನೂ ಮಾಡಲಿಲ್ಲ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.