ADVERTISEMENT

ಚಂದಪದ್ಯ: ಕಂಬಳ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST
ಚಂದಪದ್ಯ: ಕಂಬಳ
ಚಂದಪದ್ಯ: ಕಂಬಳ   


ಕಂಬಳವೆನೆ ಕುಣಿದಾಡುವುದೆನ್ನೆದೆ
ಕಂಬಳವೆನೆ ಮೈ ನಿಮಿರುವುದು
ಕಂಬಳ ನೋಡುವುದೆಂದರೆ ಮೈ ಮನ
ಕಾತರದಲಿ ನಲಿದಾಡುವುದು
ಕೆಸರಲಿ ಓಡುವ ಕೋಣದ ಜೋಡಿಯ
ನೋಡುವುದೇ ಮಹದಾನಂದ
ಕೆಸರನು ಆ ಕಡೆ ಈ ಕಡೆ ಚಿಮ್ಮುವ
ಪರಿಯನು ನೋಡುವುದೇ ಚೆಂದ

ಸೊಂಟಕೆ ದಟ್ಟಿಯ ತಲೆಗೆ ರುಮಾಲನು
ಸುತ್ತಿರುವಂತಹ ಬಲಶಾಲಿ
ಕೋಣದ ಹಿಂಗಡೆ ಕೋಲನು ಬೀಸುತ
ಓಡುತ ಸಾಗುವ ವೇಗದಲಿ

ಕೋಣದ ಬಾಲವ ತಿರುಚುತ ಕೆರಳಿಸಿ
ಚಾಟಿಯ ಝಳಪಿಸಿ ಜಗ್ಗುವನು
ಕೋಣವು ರಭಸದಿ ಮುಂದಕೆ ನುಗ್ಗುತ
ಸಾಗುತಲಿರೆ ಮುನ್ನುಗ್ಗುವನು
ಹಾಹಾ! ಹೋಹೋ! ಎನ್ನುತ ಮಂದಿಯು
ಜೋರಲಿ ಕೂಗುತ ನಲಿಯುವರು
ಓಹೋ! ಹೋಹೋ! ಎನ್ನುತ ತಮ್ಮಯ
ಕೈಗಳ ತಟ್ಟುತ ಕುಣಿಯುವರು

ADVERTISEMENT

ಎತ್ತರ ಎತ್ತರ ಚಿಮ್ಮುವ ಕೆಸರಿನ
ಕಾರಂಜಿಯು ಮನ ಸೆಳೆಯುವುದು
ಕೆಸರಿನ ಓಕುಳಿ ಮಂದಿಯ ಮನಸಿಗೆ
ಮುದವನು ನೀಡುತ ಇಳಿಯುವುದು

ಇಂತಹ ಸುಂದರ ಕಂಬಳದಾಟವು
ನಾಡಿನ ಎಲ್ಲಾ ಕಡೆಯಲ್ಲಿ
ಇದ್ದರೆ ಎಂತಹ ಸೊಗಸಾಗಿರುವುದು
ಅನ್ನಿಸದಿರುವುದೆ ಮನದಲ್ಲಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.