ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರಾದ ಪೂರ್ಣಚಂದ್ರ ತೇಜಸ್ವಿಯವರು ೧೯೬೨ರಲ್ಲಿ ಬರೆದು ಮುಗಿಸಿ, ಪ್ರಕಟಿಸದೇ ಇಟ್ಟ ಅವರ ಮೊದಲ ಕಾದಂಬರಿ ‘ಕಾಡು ಮತ್ತು ಕ್ರೌರ್‍ಯ’ವನ್ನು ಈಗ ಪ್ರಕಟಿಸಿರುವ ತೇಜಸ್ವಿಯವರ ಮಿತ್ರ ಬಿ.ಎನ್. ಶ್ರೀರಾಮ್ ತಮ್ಮ ಪ್ರಕಾಶಕರ ಮಾತಿನಲ್ಲಿ ಹೇಳುತ್ತಾರೆ: ‘ತೇಜಸ್ವಿ ನಿಗೂಢ ಮನುಷ್ಯರು ಮತ್ತು ಸ್ವರೂಪಗಳನ್ನು ಬರೆದ ಮೇಲೆ ಏಕೋ ಏನೋ ತಮ್ಮ ಪ್ರಥಮ ಕಾದಂಬರಿ ಪ್ರಕಟಣೆಯ ಬಗ್ಗೆ ಮೌನ ತಳೆದರು. ಪ್ರಕಟಿಸೋಣವೆಂದು ಒತ್ತಾಯಿಸಿದಾಗ ಒಂದು ಮುಗುಳ್ನಗೆ ಬೀರುತ್ತಿದ್ದರು. ಅದು ಸಮ್ಮತಿಯೋ ನಿರಾಕರಣೆಯೋ ನಮಗೆ ತಿಳಿಯದಾಯ್ತು’.
ಆದರೆ ಈ ಕಾದಂಬರಿ ಓದಿದ ನನಗೆ ತೇಜಸ್ವಿಯವರ ಮುಗುಳ್ನಗೆ ಕಲಾವಿದ ಲಿಯನಾರ್ಡೊ ಡಾವಿನ್ಸಿಯ ಮೊನಾಲಿಸಾಳ ಮುಗುಳ್ನಗೆಯಷ್ಟು ನಿಗೂಢವಾಗೇನೂ ಕಾಣದೆ, ಆ ನಗೆಯಲ್ಲಿ ನಿರಾಕರಣೆಯ ಸೂಚನೆಯೇ ಇದ್ದಿರಬಹುದು ಎನ್ನಿಸಿತು! ಹಾಗನ್ನಿಸಲು ಹಲವು ಕಾರಣಗಳಿವೆ: ಈ ಕಾದಂಬರಿಯ ಎಳೆಗಳು ತಮ್ಮ ಮುಂದಿನ ಕತೆ, ಕಾದಂಬರಿಗಳಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿ ಬೆಳೆದಿರುವುದರಿಂದ ಕೂಡ ತೇಜಸ್ವಿ ಈ ಕಾದಂಬರಿಯನ್ನು ಪ್ರಕಟಿಸದಿರಲು ತೀರ್ಮಾನಿಸಿರಬಹುದು. ಉದಾಹರಣೆಗೆ, ಈ ಕಾದಂಬರಿಯ ಸೋಮು ಮತ್ತು ಲಿಂಗ ಅವರ ಬೇರೆ ಕತೆಗಳಲ್ಲಿ ಬೆಳೆದಿದ್ದಾರೆ. ‘ಉರ್ವಶಿ’ ಕತೆಯಲ್ಲಿ ಸೋಮುವಿನ ಒಂದು ರೂಪವಿದೆ.
‘ಹುಲಿಯೂರಿನ ಸರಹದ್ದು’ ಕತೆಯಲ್ಲಿ ಬರುವ ಸೋಮು ಹಿರಿಯರನ್ನು ಧಿಕ್ಕರಿಸಿ ನಳಿನಾಕ್ಷಿಯನ್ನು ಪ್ರೀತಿಸಿದ್ದಾನೆ; ಸನಾತನಿಗಳ ವಿರುದ್ಧ ಬಂಡೆದ್ದಿದ್ದಾನೆ. ಈ ಪ್ರೇಮ ಮತ್ತು ಬಂಡಾಯ ‘ಕಾಡು ಮತ್ತು ಕ್ರೌರ್‍ಯ’ದಲ್ಲೂ ಇದೆ. ಇಲ್ಲಿ ‘ಮರಿ ವಿಜ್ಞಾನಿ’ ಎನ್ನಿಸಿಕೊಳ್ಳುವ ಮಾರ್‍ಯ ಕರ್ವಾಲೋ ಕಾದಂಬರಿಯಲ್ಲಿ ಪ್ರಬುದ್ಧವಾದ ದೇಶೀ ವಿಜ್ಞಾನಿ ಮಂದಣ್ಣನಾಗಿ ಅರಳಿದ್ದಾನೆ. ‘ಹುಲಿಯೂರಿನ ಸರಹದ್ದು’ ಸಂಕಲನದ ಕತೆಗಳನ್ನು ಬರೆದ ಆಸುಪಾಸಿನಲ್ಲಿ ತೇಜಸ್ವಿ ಈ ಕಾದಂಬರಿಯನ್ನು ಬರೆಯುತ್ತಿದ್ದಂತೆ ಕಾಣುತ್ತದೆ; ಆದರೆ ಇದಾದ ನಂತರ ಅವರು ಬರೆದ ‘ಅವನತಿ’, ‘ನಿಗೂಢ ಮನುಷ್ಯರು’ ಕತೆಗಳ ಘಟ್ಟದಲ್ಲಿ ಗಳಿಸಿಕೊಂಡ ಪ್ರಬುದ್ಧ ಕಲೆಗಾರಿಕೆಯ ನೆರವಿನಿಂದ ಈ ಕಾದಂಬರಿಯನ್ನು ತಿದ್ದಿದಂತಿಲ್ಲ. ಜೊತೆಗೆ, ಅದೇ ಆಗ ಸ್ವಂತಿಕೆಯ ಹುಡುಕಾಟದಲ್ಲಿದ್ದ ತೇಜಸ್ವಿಯವರಿಗೆ ಕುವೆಂಪು ಚಿಂತನೆ ಹಾಗೂ ಅವರ ಭಾವಗೀತಾತ್ಮಕ ಗದ್ಯದ ಪ್ರಭಾವ ಈ ಬರವಣಿಗೆಯಲ್ಲಿ ಸಹಜವಾಗಿ ಬೆರೆಯದೆ, ಒಡೆದು ಕಾಣುವುದರ ಬಗ್ಗೆ ಮುಜುಗರ ಕೂಡ ಹುಟ್ಟಿರಬಹುದು. ಆದರೂ ಮುಂದೆ ತೇಜಸ್ವಿಯವರ ಸಾಹಿತ್ಯದಲ್ಲಿ ಕಾಣುವ ಬಗೆಬಗೆಯ ಲೋಕಗಳ ಬೀಜಗಳು ಈ ಕಾದಂಬರಿಯಲ್ಲೇ ಇವೆಯೆನ್ನುವುದು ನಿಜ.
ಆದರೆ ಅರವತ್ತರ ದಶಕದ ತಮ್ಮ ಈ ಕಾದಂಬರಿಯಲ್ಲಿರುವ ಸ್ವಪರೀಕ್ಷೆಯ ಮಾದರಿಯನ್ನು ಎಪ್ಪತ್ತರ ದಶಕದ ‘ಅಬಚೂರಿನ ಪೋಸ್ಟಾಫೀಸು’ ಸಂಕಲನದ ಕತೆಗಳ ಹೊತ್ತಿಗೆ ತೇಜಸ್ವಿ ಕೈಬಿಟ್ಟಿದ್ದರು. ತೇಜಸ್ವಿಯವರ ಕಥನದಲ್ಲಿ ಒಳಮುಖಿ ಚಲನೆ ಕಡಿಮೆಯಾಗಿ ಅದು ಹೊರಮುಖಿಯಾಗತೊಡಗಿತ್ತು; ಸಾಂಕೇತಿಕ ಮಾರ್ಗವನ್ನು ತೊರೆಯಲೆತ್ನಿಸುತ್ತಿತ್ತು. ಅತ್ತ ‘ಕಾಡು ಮತ್ತು ಕ್ರೌರ್‍ಯ’ದಲ್ಲಿ ಪ್ರಕೃತಿಯ ಕ್ರೌರ್‍ಯ ಹಾಗೂ ಸಾಂಪ್ರದಾಯಿಕ ಭಾರತದ ಕ್ರೌರ್‍ಯಗಳೆರಡೂ ಸಂಕೇತಗಳ ಮಟ್ಟದಲ್ಲೂ ಬೆರೆತಿದ್ದವು. ೧೯೭೨ರ ಹೊತ್ತಿಗೆ ಶ್ರೀಕೃಷ್ಣ ಆಲನಹಳ್ಳಿ ಕಾಡಿನ ಕ್ರೌರ್‍ಯವನ್ನು ತಮ್ಮ ‘ಕಾಡು’ ಕಾದಂಬರಿಯಲ್ಲಿ ಸಾಂಕೇತಿಕವಾಗಿಯೂ ಮಂಡಿಸಿ ಯಶಸ್ವಿಯಾದರು. ಆದರೆ ೧೯೭೩ರಲ್ಲಿ ತೇಜಸ್ವಿ ತಮ್ಮ ‘ಅಬಚೂರಿನ ಪೋಸ್ಟಾಫೀಸು’ ಮುನ್ನುಡಿಯಲ್ಲಿ ನವ್ಯದ ಈ ಬಗೆಯ ಸಾಂಕೇತಿಕ ಮಾರ್ಗವನ್ನು ತಿರಸ್ಕರಿಸಿದ್ದರು. ಹೀಗಾಗಿ, ಸಾಂಕೇತಿಕ ಮಾದರಿಗಳನ್ನು ಬಳಸಿರುವ ತಮ್ಮ ಕಾದಂಬರಿಯನ್ನು ಮತ್ತೆ ತಿದ್ದಲು ತೇಜಸ್ವಿಯವರೊಳಗೆ ಒಂದು ಬಗೆಯ ಹಿಂಜರಿಕೆ ಹುಟ್ಟಿರಬಹುದು.
ಅಂದರೆ, ಕತೆಗಾರನೊಬ್ಬ ತನ್ನ ಬರವಣಿಗೆಯ ಒಂದು ಹಂತದಲ್ಲಿ ಬದಲಿಸಿಕೊಂಡ ಕಥನತತ್ವ ಕೂಡ ಅವನನ್ನು ತನ್ನ ಹಳೆಯ ಕೃತಿಗಳ ಕಡೆಗೆ ಹೋಗದಂತೆ ತಡೆಯಬಹುದು! ಬದಲಾದ ತಮ್ಮ ಕಥನತತ್ವದಿಂದಾಗಿ ತೇಜಸ್ವಿಯವರಿಗೆ ತಮ್ಮ ಮೊದಲ ಕಾದಂಬರಿಯ ಬಗ್ಗೆ ಅತೃಪ್ತಿ ಹುಟ್ಟಿ ಅದನ್ನು ಪ್ರಕಟಿಸದೆ ಬಿಟ್ಟಿರಬಹುದು. ಈ ಹಿನ್ನೆಲೆಯಲ್ಲಿ ಲೇಖಕನೊಬ್ಬ ಒಂದು ಘಟ್ಟದಲ್ಲಿ ಮಾಡುವ ತಾತ್ವಿಕ ಘೋಷಣೆಗಳಿಗೆ ತಾನೇ ಬಂಧಿಯಾಗಬೇಕಾಗಿ ಬರುತ್ತದೆಯೇ ಎಂಬ ಕುತೂಹಲಕರ ಪ್ರಶ್ನೆ ಏಳುತ್ತದೆ. ಹಾಗೆ ನೋಡಿದರೆ, ತೇಜಸ್ವಿ ೧೯೭೩ರಲ್ಲಿ ನವ್ಯಶೈಲಿಯ ಬಗ್ಗೆ ಭಿನ್ನಮತ ವ್ಯಕ್ತಪಡಿಸಿದರೂ ಆನಂತರ ಬಂದ ಅವರ ‘ನಿಗೂಢ ಮನುಷ್ಯರು’ ಒಂದು ಉತ್ತಮ ನವ್ಯಕೃತಿಯಾಗಿಯೂ ಕಾಣುತ್ತದೆ. ‘ಕಾಡು ಮತ್ತು ಕ್ರೌರ್‍ಯ’ದ ಕೆಲವು ಭಾಗಗಳನ್ನು ಸೂಕ್ಷ್ಮವಾಗಿ ವಿಸ್ತರಿಸಿರುವ ‘ನಿಗೂಢ ಮನುಷ್ಯರು’ ಕಾದಂಬರಿಯಾಗಿ ಬೆಳೆಯದೆ ನೀಳ್ಗತೆಯಾಯಿತು. ತೇಜಸ್ವಿ ತಮ್ಮ ಪೂರ್ಣ ಪ್ರಮಾಣದ ಕಾದಂಬರಿ ‘ಕರ್ವಾಲೋ’ವನ್ನು ಪತ್ರಿಕೆಯಲ್ಲಿ ಪ್ರಕಟಿಸಿದ್ದು ತಮ್ಮ ಮೊದಲ ಕಾದಂಬರಿ ಬರೆದ ಹದಿನೇಳು ವರ್ಷಗಳ ನಂತರ; ತಮ್ಮ ಸಣ್ಣಕತೆಯ ಬಂಧವನ್ನು ಪರ್ಫೆಕ್ಟ್ ಮಾಡಿಕೊಂಡ ಮೇಲೆ.
ಇಷ್ಟಾಗಿಯೂ ತೇಜಸ್ವಿಯವರ ‘ಕಾಡು ಮತ್ತು ಕ್ರೌರ್‍ಯ’ದ ಆ ಕಾಲದ ಹಲಬಗೆಯ ಬಿಕ್ಕಟ್ಟುಗಳು, ತೇಜಸ್ವಿಯವರ ಮೂಲ ಕಾಳಜಿಗಳು, ವ್ಯಗ್ರತೆ ಹಾಗೂ ಅವರ ಬರವಣಿಗೆಯ ಮುಂದಿನ ದಿಕ್ಕುಗಳನ್ನು ನಿಖರವಾಗಿ ಬಿಂಬಿಸುತ್ತದೆ. ಈ ಕಾದಂಬರಿಯಲ್ಲಿ ಪ್ರಕೃತಿಲೋಕದ ಅನಿರೀಕ್ಷಿತ ನಡೆಗಳು ತಂದೊಡ್ಡುವ ಕ್ರೌರ್‍ಯ ಒಂದೆಡೆ ಇದೆ; ಮತ್ತೊಂದೆಡೆ ಹಳ್ಳಿಗರನ್ನು ಸಾಂಪ್ರದಾಯಿಕ ನಂಬಿಕೆಗಳ ಭೀಕರ ಲೋಕದಲ್ಲಿರಿಸಿ, ಆ ಮೂಲಕ ಅವರ ಮೇಲೆ ಅಧಿಕಾರ ಚಲಾಯಿಸಿ ಅವರನ್ನು ನಾಶ ಮಾಡುವ ವಾಮಾಚಾರಿಗಳ ಕ್ರೌರ್‍ಯವಿದೆ. ವಾಮಾಚಾರಿಗಳನ್ನು ವಿರೋಧಿಸುವ ತರುಣ ಸೋಮು ಅದೇ ಆಗ ಹೊಸ ವಿದ್ಯಾಭ್ಯಾಸ ಪಡೆದು ಈ ಊರಿಗೆ ಬಂದು, ಜಾತಿ ಮೀರಿ ನಳಿನಿಯನ್ನು ಮದುವೆಯಾಗಬೇಕಾದ ಘಟ್ಟದಲ್ಲಿ ಪ್ರೇಮ, ಕಾಮ, ದೇಹ ಇತ್ಯಾದಿಗಳ ಬಗ್ಗೆ ಗೊಂದಲದಲ್ಲಿದ್ದಾನೆ. ಆದರೆ ನಳಿನಿ ಈ ಬಗ್ಗೆ ಸೋಮುವಿಗಿಂತ ಹೆಚ್ಚು ಸ್ಪಷ್ಟವಾಗಿದ್ದಾಳೆ. ಸೋಮು ಹಾಗೂ ನಳಿನಿ ಇಬ್ಬರಲ್ಲೂ ಆ ಕಾಲದ ನವ್ಯ ಕತೆ, ಕಾದಂಬರಿಗಳಲ್ಲಿ ಹೆಚ್ಚು ಕಾಣಬರುವ ಅಸ್ತಿತ್ವವಾದಿ ತಲ್ಲಣಗಳಿವೆ. ಇಲ್ಲಿ ಸಾವು, ಕಾಮ ಮುಂತಾದ ತೀವ್ರ ಅನುಭವಗಳಿಗೂ ಅಸ್ತಿತ್ವದ ಮೂಲ ಪ್ರಶ್ನೆಗಳಿಗೂ ಇರುವ ಸಂಬಂಧವನ್ನು ಗ್ರಹಿಸುವಲ್ಲಿ ಅಸ್ತಿತ್ವವಾದಿ ಚಿಂತನೆಯ ಪ್ರಭಾವವೂ ಇದೆ. ಹಾಗೆಯೇ ತೇಜಸ್ವಿ ಅರವತ್ತರ ದಶಕದ ಗ್ರಾಮೀಣ ಭಾರತದಲ್ಲಿ ಕಂಡ ಹೆಬ್ಬೆಟ್ಟೊತ್ತುವ ಪಶುಸದೃಶ ಸಮುದಾಯಗಳ ಮೌಢ್ಯಗಳ ಲೋಕವೂ ಇಲ್ಲಿದೆ. ಆ ದಶಕಗಳಲ್ಲಿ ಕಂಡ ಭೂ ಸುಧಾರಣೆಯ ಬಗ್ಗೆ ಸನಾತನಿಗಳ ಗೊಣಗಾಟ ಹಾಗೂ ಮಲೆನಾಡಿನಲ್ಲಿ ಶುರುವಾಗಿದ್ದ ಹೊಸ ಚಲನೆಗಳನ್ನು ಕೂಡ ಈ ಕಾದಂಬರಿ ದಾಖಲಿಸಿದೆ. ತೇಜಸ್ವಿಯವರ ಕಥನ ಇನ್ನೂ ಪಳಗದ ಕಾಲದಲ್ಲಿ ಅವರ ತೀವ್ರ ಸೃಜನಶೀಲ ಎನರ್ಜಿಯ ಸ್ಫೋಟದಿಂದ ಹುಟ್ಟಿರುವ ಅದ್ಭುತ ಭಾಗಗಳೂ ಇಲ್ಲಿವೆ. ಕಾದಂಬರಿಯ ಕೊನೆಗೆ ‘ಈ ಮೌಢ್ಯದ ನಾಡಿನಲಿ ವಿದ್ಯೆಯ ವಿವೇಕದ ಕಾಲುವೆ ಹರಿಸಿಬಿಡಬೇಕು’ ಎನ್ನುವ ಸೋಮು ನಗರದಿಂದ ವಾಪಸು ಬಂದು ಹಳ್ಳಿಯಲ್ಲಿ ನೆಲೆಸುವ ಸೂಚನೆಗಳಿವೆ; ಲಿಂಗ ಹಳ್ಳಿಯ ಊಳಿಗ ಬಿಟ್ಟು ನಗರದ ಕಡೆಗೆ ಹೊರಡುತ್ತಾನೆ. ಇವೆರಡೂ ಅಂಶಗಳು ಕಾದಂಬರಿಗೆ ಸ್ಪಷ್ಟ ಮುಕ್ತಾಯವನ್ನೂ ಕೊಟ್ಟಿವೆ. ಹಾಗೆಯೇ ಈ ಕಾದಂಬರಿಯ ತೇಜಸ್ಸು ಖ್ಯಾತ ಕಲಾವಿದ ಕೆ.ಟಿ. ಶಿವಪ್ರಸಾದರ ಚಿತ್ರವ್ಯಾಖ್ಯಾನಗಳಿಂದಲೂ ಹೆಚ್ಚಿದೆ.
ಆದರೆ ತೇಜಸ್ವಿ ಒಂದು ಸಲ ಬರೆದು ಪಕ್ಕಕ್ಕಿಟ್ಟಂತೆ ಕಾಣುವ ಈ ಕಾದಂಬರಿಯ ಹಸ್ತಪ್ರತಿಯಲ್ಲಿ ಅವರು ಇನ್ನಷ್ಟು ತಿದ್ದಬೇಕೆಂದು ಬಯಸಿರಬಹುದಾದ ಹಸಿ ಹಸಿ ಭಾಗಗಳು ಹತ್ತಾರು ಕಡೆ ಹಾಗೇ ಉಳಿದುಬಿಟ್ಟಿವೆ. ಎಲ್ಲ ಲೇಖಕ, ಲೇಖಕಿಯರಲ್ಲೂ ಕಾಣುವಂತೆ ಮೊದಲ ಡ್ರಾಫ್ಟಿನ ಅನೇಕ ಸಮಸ್ಯೆಗಳು ಇಲ್ಲೂ ಕಾಣುತ್ತವೆ. ಪ್ಯಾರಾಗಳು ಸರ್ವನಾಮಗಳಿಂದ ಆರಂಭವಾಗಿ ಅಸಂಗತವಾಗಿ ಕಾಣತೊಡಗುತ್ತವೆ. ಯಾವುದು ಯಾರ ಮಾತು ಎಂಬುದು ತಿಳಿಯದೆ ಅನೇಕ ಕಡೆ ಗೊಂದಲವಾಗುತ್ತದೆ. ಕೊಂಡಿಯಿಲ್ಲದ ವಾಕ್ಯಗಳು, ಇನ್‌ವರ್ಟೆಡ್ ಕಾಮಾಗಳು ಬೇಕಾಬಿಟ್ಟಿ ಎದುರಾಗುತ್ತವೆ. ಇವು ಹಸ್ತಪ್ರತಿಯಲ್ಲಿದ್ದ ದೋಷಗಳೋ ಮುದ್ರಣದ ದೋಷಗಳೋ ಎಂಬುದನ್ನು ಊಹಿಸುವುದು ಕಷ್ಟ. ಆದರೆ ನೂರೈವತ್ತು ಪುಟಗಳ ಈ ಕಾದಂಬರಿಯ ಆರಂಭದ ತಾಂತ್ರಿಕ ಪುಟದಿಂದ ಹಿಡಿದು ಕೊನೆಯ ಪುಟದವರೆಗೆ ಲೆಕ್ಕವಿಲ್ಲದಷ್ಟು ಅಚ್ಚಿನ ತಪ್ಪುಗಳು ನಮ್ಮನ್ನು ಕಂಗೆಡಿಸುತ್ತವೆ. ಒಟ್ಟಿನಲ್ಲಿ ದೊಡ್ಡ ಲೇಖಕರೊಬ್ಬರ ನಿರ್ಗಮನದ ನಂತರ ಅವರ ಪುಸ್ತಕ ಹೇಗೆ ಪ್ರಕಟವಾಗಬಾರದು ಎಂಬುದಕ್ಕೆ ಈ ಪ್ರಕಟಣೆ ಒಂದು ಮಾದರಿಯಂತಿದೆ. ತೇಜಸ್ವಿ ಬದುಕಿದ್ದಾಗಲೇ ಪ್ರಕಟವಾಗಿದ್ದ ಮಾಯಾಲೋಕದಲ್ಲಿ ಉಳಿದಿದ್ದ ಒಂದೆರಡು ಅಚ್ಚಿನ ದೋಷಗಳ ಬಗೆಗೇ ‘ಥೂ ಥೂ! ಶೇಮ್ ಕಣ್ರೀ! ಎಷ್ಟೊಂದು ತಪ್ಪು ಉಳಿದುಬಿಟ್ಟಿವೆ’ ಎಂದು ನನ್ನೊಡನೆ ಪೇಚಾಡಿಕೊಂಡಿದ್ದ ತೇಜಸ್ವಿ ‘ಕಾಡು ಮತ್ತು ಕ್ರೌರ್‍ಯ’ದ ಮುದ್ರಣದ ತಪ್ಪುಗಳನ್ನು ಕಂಡಿದ್ದರೆ ಗ್ಯಾರಂಟಿ ದಿಗ್ಭ್ರಮೆಗೊಂಡಿರುತ್ತಿದ್ದರು.
‘ಕಾಡು ಮತ್ತು ಕ್ರೌರ್‍ಯ’ದ ಅದಕ್ಷ ಪ್ರಕಟಣೆಯ ಈ ಅನುಭವದ ಹಿನ್ನೆಲೆಯಲ್ಲಿ, ಲೇಖಕನೊಬ್ಬ ತಾನು ಬದುಕಿದ್ದಾಗ ಹಲವು ಕಾರಣಗಳಿಗಾಗಿ ಪ್ರಕಟಿಸದೇ ಬಿಟ್ಟ ಕೃತಿಗಳನ್ನು ಅನಂತರ ಪ್ರಕಟಿಸುವ ನಿಟ್ಟಿನಲ್ಲಿ ಅವರ ಮಿತ್ರರ, ವಾರಸುದಾರರ ಜವಾಬ್ದಾರಿಯನ್ನು ಕುರಿತಾದ ಕೆಲವು ಗಂಭೀರ ಪ್ರಶ್ನೆಗಳನ್ನು ಗಮನಿಸಬೇಕು: ಜಗತ್ತಿನ ಬಹು ದೊಡ್ಡ ಕಾದಂಬರಿಕಾರರ ಸಾಲಿನಲ್ಲಿರುವ ಫ್ರಾಂಜ್ ಕಾಫ್ಕಾ ತನ್ನ ಕತೆ, ಕಾದಂಬರಿಗಳನ್ನು ಸುಟ್ಟು ಹಾಕುವಂತೆ ಗೆಳೆಯ ಮ್ಯಾಕ್ಸ್ ಬ್ರಾಡ್‌ಗೆ ಹೇಳಿದ. ಆದರೆ ಆ ಕೃತಿಗಳ ಮಹತ್ವ ಬಲ್ಲ ಮ್ಯಾಕ್ಸ್ ಬ್ರಾಡ್, ಕಾಫ್ಕಾ ಸತ್ತ ನಂತರ ಅವನ್ನು ಅಚ್ಚು ಹಾಕಿಸಿದ್ದರಿಂದ ಮಾನವನ ಆಳದ ಸತ್ಯವನ್ನು, ದಿಗ್ಭ್ರಾಂತಿಯನ್ನು ಹೇಳುವ ಕಾಫ್ಕಾ ನಮಗೆ ಸಿಕ್ಕಿದ. ಇಟಲಿಯ ಮಹಾಕವಿ ವರ್ಜಿಲ್ ತನ್ನ ‘ಇನಿಯಡ್’ ಮಹಾಕಾವ್ಯದ ಬಗ್ಗೆ ತೀವ್ರ ಅಸಮಾಧಾನಗೊಂಡು ಹಸ್ತಪ್ರತಿಯನ್ನು ಸುಟ್ಟು ಹಾಕುವಂತೆ ಹೇಳಿದ. ಆದರೆ ರೋಮ್‌ನ ರಾಜ ಅಗಸ್ಟಸ್ ಸೀಸರ್ ಹಾಗೆ ಮಾಡದೆ ಹಸ್ತಪ್ರತಿಯನ್ನು ಪ್ರಕಟಿಸಿದ್ದರಿಂದ ಜಗತ್ತಿಗೆ ಶ್ರೇಷ್ಠ ಮಹಾಕಾವ್ಯವೊಂದು ಸಿಕ್ಕಿತು.
ಕನ್ನಡದಲ್ಲಿ ಇದಕ್ಕಿಂತ ಕೊಂಚ ಭಿನ್ನವಾದ ಪ್ರಸಂಗಗಳಿವೆ. ಶ್ರೇಷ್ಠ ಸಂಸ್ಕೃತಿ ಚಿಂತಕರಲ್ಲೊಬ್ಬರಾದ ಡಿ.ಆರ್. ನಾಗರಾಜ್ ತಮ್ಮ ‘ಶಕ್ತಿ ಶಾರದೆಯ ಮೇಳ’ದ ಎರಡನೆಯ ಮದ್ರಣದ ಸಮಯದಲ್ಲಿ ಅಲ್ಲಮನ ‘ಅಳಿಸಲಾಗದ ಲಿಪಿಯನು ಬರೆಯಬಾರದು’ ಎಂಬ ಮಾತನ್ನು ಉಲ್ಲೇಖಿಸಿ, ತಮ್ಮ ಬರವಣಿಗೆಯ ಕೊರತೆಗಳ ಬಗ್ಗೆ ತೀವ್ರ ಅತೃಪ್ತಿಯನ್ನು ತೋಡಿಕೊಂಡಿದ್ದರು. ಇದಾದ ಮೇಲೆ ೧೯೯೬ರಲ್ಲಿ ಅವರು ಪ್ರಕಟಿಸಿದ ಮಹತ್ವದ ಪುಸ್ತಕ ‘ಸಾಹಿತ್ಯ ಕಥನ’ದ ಬರಹಗಳಲ್ಲಿ ತಮ್ಮ ಹಿಂದಿನ ಪುಸ್ತಕದಲ್ಲಿರದ ವ್ಯಾಪ್ತಿ, ಸ್ವಂತಿಕೆ ಹಾಗೂ ಖಚಿತವಾದ ತಾತ್ವೀಕರಣವನ್ನು ಸಾಧಿಸಿದರು. ಅದರ ಮುದ್ರಣ, ಕರಡು ಇತ್ಯಾದಿಗಳನ್ನು ನೋಡಿಕೊಳ್ಳುತ್ತಿದ್ದ ನನಗೆ ಅವರು ಆ ಕಾಲಕ್ಕೆ ಪತ್ರಿಕೆಗಳಲ್ಲಿ ಪ್ರಕಟಿಸಿದ್ದ ಕೆಲವು ಸಾಂದರ್ಭಿಕ ಬರಹಗಳನ್ನು ಕೈಬಿಟ್ಟಿದ್ದು ಗೊತ್ತಿದೆ. ಆದರೆ ಅವರು ತೀರಿಕೊಂಡ ನಂತರ ಪ್ರಕಟವಾದ ‘ಸಂಸ್ಕೃತಿ ಕಥನ’ದಲ್ಲಿ ಅವರ ಉತ್ತಮ ಹೊಸ ಬರಹಗಳ ಜೊತೆಗೆ, ಅವರು ಕೈಬಿಟ್ಟಿದ್ದ ಬರಹಗಳೂ ಸೇರಿಕೊಂಡಿವೆ. ಈ ಪುಸ್ತಕ ಓದುವಾಗ ಡಿ.ಆರ್. ಅವರ ಎಲ್ಲ ಬರಹಗಳೂ ಪ್ರಕಟವಾಗಿವೆಯೆಂಬ ಸಮಾಧಾನದ ಜೊತೆಗೇ ಅವರ ತೆಳು ಬರಹಗಳನ್ನು ಪ್ರಕಟಿಸಿರುವುದರ ಬಗ್ಗೆ ಅಸಮಾಧಾನವೂ ಹುಟ್ಟುತ್ತದೆ. ಇಲ್ಲಿನ ಕೆಲವು ಬರಹಗಳನ್ನು ಪ್ರಕಟಿಸುವುದರ ಬಗ್ಗೆ ಡಿ.ಆರ್. ಕೂಡ ತೇಜಸ್ವಿಯಂತೆ ನಿರಾಕರಣೆಯ ಮುಗುಳ್ನಗೆಯನ್ನೇ ಬೀರುತ್ತಿದ್ದರೇನೋ!
ಆದರೆ ಇದೇ ಮಾತನ್ನು ಡಿ.ಆರ್. ತಿದ್ದಿ ಬರೆಯಬೇಕೆಂದಿದ್ದ ಅವರ ಕೊನೆಯ ಪುಸ್ತಕ ‘ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ’ಯ ಪ್ರಕಟಣೆಯ ಬಗ್ಗೆ ಹೇಳಲಾಗದು. ಡಿ.ಆರ್. ಒಂದು ಹಂತದವರೆಗೂ ಬರೆದು ಮುಗಿಸಿದ್ದ ಹಸ್ತಪ್ರತಿಯ ಸಣ್ಣಪುಟ್ಟ ಕೊರತೆಗಳನ್ನು ಅವರ ಆಲೋಚನಾಕ್ರಮವನ್ನು ಬಲ್ಲ ಆಶಾದೇವಿ ತಿದ್ದಿದರು; ಆಮೇಲೆ ಕಿ.ರಂ. ನಾಗರಾಜ್ ಇದನ್ನು ಪ್ರಕಟಣೆಗೆ ಸಿದ್ಧ ಮಾಡಿದರು. ಆದರೂ ಈ ಪುಸ್ತಕದಲ್ಲಿ ಹಲವು ದೋಷಗಳು ಉಳಿದಿವೆ. ಅವನ್ನು ಮುಂದಿನ ಮುದ್ರಣದ ಸಂದರ್ಭದಲ್ಲಿ ತಿದ್ದಿಕೊಳ್ಳಬಹುದು. ಆದರೆ ಬೇಂದ್ರೆ ತೀರಿಕೊಂಡ ನಂತರ ವಾಮನಬೇಂದ್ರೆ ಪ್ರಕಟಿಸಿದ ಬೇಂದ್ರೆಯವರ ಬೃಹತ್ ಸಂಪುಟಗಳ ಅಸಂಬದ್ಧ ಸಂಯೋಜನೆ, ಅಪ್ರಬುದ್ಧ ಟಿಪ್ಪಣಿಗಳು ಹಾಗೂ ವರ್ಗೀಕರಣಗಳು ಬೇಂದ್ರೆ ಕಾವ್ಯವನ್ನು ಓದುಗರಿಂದ ದೂರವಿಡಲು ಎಲ್ಲ ಪ್ರಯತ್ನಗಳನ್ನೂ ಮಾಡಿದಂತಿವೆ! ಈ ದೃಷ್ಟಿಯಿಂದ ಬೇಂದ್ರೆಗಿಂತ ಕುವೆಂಪು ಭಾಗ್ಯಶಾಲಿ. ಕುವೆಂಪು ಬದುಕಿದ್ದಾಗಲೇ ಅವರ ಬಹುತೇಕ ಕೃತಿಗಳು ಪ್ರಕಟವಾಗಿದ್ದವು. ಆನಂತರ ಅವರ ಕೃತಿಗಳ ಮರುಮುದ್ರಣ ನೋಡಿಕೊಳ್ಳಲು ತೇಜಸ್ವಿ ಅಥವಾ ಶಿವಾರೆಡ್ಡಿಯವರಿದ್ದರು.
ಆದರೆ ತೇಜಸ್ವಿಯವರ ‘ಕಾಡು ಮತ್ತು ಕ್ರೌರ್‍ಯ’ ಪ್ರಕಟಿಸಿದವರಿಗೆ ಒಬ್ಬ ದೊಡ್ಡ ಲೇಖಕ ತಿದ್ದದೇ ಇಟ್ಟ ಪುಸ್ತಕವೊಂದನ್ನು ಸಾಧ್ಯವಾದಷ್ಟೂ ಸುಸಂಬದ್ಧವಾಗಿ ಕಾಣುವಂತೆ ಮಾಡುವ ಸಂಪಾದಕೀಯ ಕೌಶಲಯವಾಗಲೀ, ಕೊನೆಯ ಪಕ್ಷ ಕರಡಿನ ದೋಷಗಳನ್ನಾದರೂ ಸರಿಯಾಗಿ ತಿದ್ದುವ ಕರ್ತವ್ಯಪ್ರಜ್ಞೆಯಾಗಲೀ ಬದ್ಧತೆಯಾಗಲೀ ಇದ್ದಂತಿಲ್ಲ. ಈ ಕೃತಿಯನ್ನು ಪ್ರಕಟಿಸಲೇಬೇಕೆಂದಿದ್ದರೆ ತೇಜಸ್ವಿಯವರ ಸಂವೇದನೆಯನ್ನು ಚೆನ್ನಾಗಿ ಬಲ್ಲ ಸತ್ಯನಿಷ್ಠ ವಿಮರ್ಶಕರಾದ ಜಿ.ಎಚ್. ನಾಯಕ್ ಅವರ ಕೈಗೆ ಕೊಟ್ಟು ಇಲ್ಲಿನ ಕೆಲಬಗೆಯ ಅಸಂಗತತೆಗಳನ್ನಾದರೂ ತೊಡೆಯಬಹುದಿತ್ತು. ಇನ್ನೂ ಕಾಲ ಮಿಂಚಿಲ್ಲ. ಯಾವುದೋ ಮಾಯಾಲೋಕದಲ್ಲಿ ಈ ಕೃತಿಯ ಪ್ರಕಟಣೆಯ ಸುದ್ದಿ ಕೇಳಿ ತೇಜಸ್ವಿ ಸಿಟ್ಟಿನಿಂದ ಮುಗುಳ್ನಗೆ ಎಸೆವ ಮುನ್ನ ಈ ಪುಸ್ತಕದ ಸರಬರಾಜನ್ನು ನಿಲ್ಲಿಸಿ, ಅದನ್ನು ತೇಜಸ್ವಿಯವರ ಒಟ್ಟು ಸಂವೇದನೆಗೆ ಧಕ್ಕೆಯಾಗದಂತೆ ದಕ್ಷವಾಗಿ ಎಡಿಟ್ ಮಾಡಿ ಪ್ರಕಟಿಸುವುದು ತೇಜಸ್ವಿಯವರಂಥ ದೊಡ್ಡ ಲೇಖಕರಿಗೆ ನಾವು ಸಲ್ಲಿಸಲೇಬೇಕಾದ ಕನಿಷ್ಠ ಗೌರವವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.