ADVERTISEMENT

ಥಾಲಿ ಡಾನ್ಸ್‌

ಜಯಂತ ಕಾಯ್ಕಿಣಿ
Published 1 ಮಾರ್ಚ್ 2014, 19:30 IST
Last Updated 1 ಮಾರ್ಚ್ 2014, 19:30 IST

ಹೆದರಿದವನು ಕುಣಿಯುವಾಗ ದಯವಿಟ್ಟು
ನೋಡದಿರಿ
ಅವನ ಹೀಚು ಆಂಗಿಕ ನಿಮ್ಮನ್ನು ಬದಲಾಯಿಸೀತು
ನಿಮ್ಮ ಸುಖನಿದ್ರೆ ಕೆಡಿಸೀತು

ಯಾವುದೋ ಇಲಾಖೆಯ ಅನುದಾನಕ್ಕಾಗಿ
ಯಾವುದೋ ಗಂಜಿ ಉಡುಪಿನ ಮಂತ್ರಿಯ ಸ್ವಾಗತಕ್ಕೆ
ಅವನು ಹೀಗೆ ವೇದಿಕೆಯಲ್ಲಿ ಕುಣಿಯುತ್ತಿಲ್ಲ...
ಅದು ಅವನ ನಿತ್ಯದ ಒಪ್ಪೊತ್ತಿನ ಥಾಲೀ ಡಾನ್ಸ...
ಮರಣದ ಅಂಚಿಂದ
ಗಾಳಿಯ ಕೊಂಬೆಗಳನ್ನು ಹಿಡಿದು ಎದ್ದು ಸಂಭಾಳಿಸಿ
ಇಲ್ಲದ ವಸ್ತ್ರ ವಸ್ತು ವಿನ್ಯಾಸಗಳನ್ನು ಊಹಿಸಿ ಊಹಿಸಿ
ಅವು ಜಾರಿದಾಗೆಲ್ಲ ಸೆರಗು ಕಟ್ಟಿ
ಮುಖ್ಯ ಸ್ಪಾಟ್‌ಲೈಟ್‌ನೆಡೆಗೆ ಕೊನೆಯ
ಬಿಡ್ತಿಗೆಯಲ್ಲಿ ನಡೆಯುತ್ತಾನಲ್ಲ ಈ ಇದೇ
ಕ್ಷಣದಲ್ಲಿ ಹಠಾತ್ತನೆ ಅವನಿಗೆ

ನೆನಪಾಗಿದೆ...
ಇಲ್ಲಿ ಕೂತವರೆಲ್ಲ ಅವನಿಂದ ಅಗಣಿತ
ಸಾಲ ಪಡೆದಿದ್ದಾರೆ... ಬಡೇಸೋಪಿನ ತಟ್ಟೆಯಲ್ಲಿ
ಟಿಪ್ಸ ಬಿಡುತ್ತ ಬಿಟ್ಟಿದ್ದು ಜಾಸ್ತಿ ಆಯಿತೋ ಎಂದು
ಹಲ್ಲು ಗಿಂಜುತ್ತ ಮಹಾ ಮಾನಸಿಕ ಚೌಕಾಶಿ ನಡೆಸಿದ್ದಾರೆ...
ಬಿಟ್ಟ ಚಿಲ್ಲರೆ ಮತ್ತು ಬಡೇಸೋಪಿನ ನಡುವೆ ಒಂದು
ಕ್ಷಣಭಂಗುರವಾದ ಮಾತು ಇದೆ... ಸಾರ್ವಜನಿಕ
ಸಾಮೂಹಿಕ ವಿವಾಹದಲ್ಲಿ ನೆಲಕ್ಕೆ ಬಿದ್ದು ಬೆರೆತು
ಹೋದ ಮಿಶ್ರ ಅಕ್ಷತೆಯ ಅಕ್ಕಿ ಕಾಳಿನಂತೆ...
ಕಂಕುಳಲ್ಲಿ ತಾಮ್ರದ ತಾಟು ಹಿಡಿದು ವಿಂಗಿನಲ್ಲಿ
ವಿಧೇಯನಾಗಿ ನಿಂತ ಮಾಣಿ ಅವನು... ಅಮ್ಮನ
ಉದರದಲ್ಲಿದ್ದಾಗಲೇ ಒದೆಯುವುದನ್ನು
ಕಲಿತಿದ್ದಾನೆ... ಮೊದಲು ಅಮ್ಮನನ್ನೇ
ಒದೆಯುತ್ತಾನೆ...

ADVERTISEMENT

ತೀರ್ಪಿನ ದಿನ ಅರ್ಧ ಜಗತ್ತು ಕುಣಿಯುತ್ತದೆ
ಗುಲಾಲಿನಲ್ಲಿ ಮುಖ ಮರೆಸಿಕೊಂಡು...
ಉಳಿದರ್ಧ ಎತ್ತ ನೋಡುವದು ಅಂತ ತಿಳಿಯದೆ
ಹೆದರುತ್ತ ನಗುತ್ತದೆ ಭಯಾನಕವಾಗಿ
ಮನೆ ಸೀರೆಯಲ್ಲೆ ಅಕ್ಕಂದಿರು
ಕೆಲಸ ಅರ್ಧಕ್ಕೆ ಬಿಟ್ಟು ಓಡೋಡಿ ಬಂದು
ಪಾಗಾರದ ಆಚೆಯಿಂದ ಮೆರವಣಿಗೆ ನೋಡುತ್ತಾರೆ...
ಇಡೀ ಜಗತ್ತು ಒಂದು ಸುಂದರ ಗೋಲ ತಟ್ಟೆಯಾಗಿ
ಅವನ ಪದತಲಕ್ಕೆ ಬರುತ್ತದೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.