ಹಳೆಯದೊಂದು ಮಾತು, ನಿಮಗೂ ಗೊತ್ತು;
ಸತ್ತವರು ನಕ್ಷತ್ರಗಳಾಗಿ ಮಿನುಗುತ್ತಾರೆ-
ಕಗ್ಗತ್ತಲ ರಾತ್ರಿಗಳಲ್ಲಿ ಕತ್ತೆತ್ತಿದರೆ
ಆಕಾಶದಂಗಳದ ತುಂಬ ಲಕ್ಷ ನಕ್ಷತ್ರ ಸಂತೆ
ಮಿಣುಕುವವೆಷ್ಟೋ, ಮಿನುಗುವವೆಷ್ಟೋ
ಇತಿಹಾಸವಾದವರ ಆತ್ಮಕತೆಗಳ ಪುಟಗಳಾಗಿ,
ಸಪ್ತರ್ಷಿಗಳ ಹೋಮಾಗ್ನಿಯ ಝಳಕ್ಕೆ
ಕಂಪಿಸಿಯೂ ಧೃತಿಗೆಡದ ಅರುಂಧತಿ-
ಯರಂತೇ ಕದಲದೇ ನಿಂತಲ್ಲೇ ನಿಂತಿರುವ ಧೃವ ತಾರೆ-
ಗಳೆಷ್ಟೋ ದಿಕ್ಕು ತಪ್ಪಿದವರಿಗೆ ಮಾರ್ಗದರ್ಶಕರಾಗಿ?
ಎಲ್ಲೆಲ್ಲೋ ಚದುರಿಹೋಗಿರುವ ವ್ಯೋಮ ಕಾಯಗಳನ್ನೆಲ್ಲ
ಗೆರೆ ಎಳೆದು ಪೋಣಿಸಿದರೆ ದ್ವಾದಶ ರಾಶಿ
ಬೆಳಗು ಬೈಗುಗಳಲ್ಲಷ್ಟೇ ನೆತ್ತರಲ್ಲಾಡುವ ಸೂರ್ಯ
ಚಂದ್ರರನ್ನೂ ಸೇರಿಸಿದರಷ್ಟೇ ಸೌರಮಂಡಲ ಸಂಪೂರ್ಣ.
ಸೆಕೆಯುಬ್ಬಿ ನಿದ್ರೆಬಾರದ ರಾತ್ರಿಗಳಲ್ಲಿ
ಕಿಟಕಿಯಿಂದಲೇ ನಕ್ಷತ್ರಗಳನ್ನೆಣಿಸುವ ನನಗೆ
ಖಗೋಳಜ್ಞಾನವಿಲ್ಲದೆಯೂ, ಭೂಮಿಯಾಚೆಗೆ
ಇರಬಹುದಾದ ಜಗತ್ತಿನ ಕುರಿತು ಕುತೂಹಲ;
ಧೇನಿಸುತ್ತಿದ್ದರಷ್ಟೇ ಜಗದಗಲಕ್ಕೆ ದೃಷ್ಟಿ
ಇಲ್ಲವಾದರೆ ಕಣ್ಣಗಲಕ್ಕಿಳಿಯುವ ಜಗತ್ತು
ವಸಿಷ್ಠರೆದುರಿನ ವಿಶ್ವಾಮಿತ್ರನಂತೆ ಅವಿವೇಕ, ಪಾಪ
ಯಾರೋ ಹರಿಶ್ಚಂದ್ರ ವೃಥಾ ನರಳಬೇಕಲ್ಲ ಎಂಬ ದಿಗಿಲು.
ಸೂರ್ಯನೂ ಒಂದು ನಕ್ಷತ್ರ ಎನ್ನುವುದನ್ನೇ
ಲಕ್ಷನಕ್ಷತ್ರಗಳ ನಡುವೆ ಸೂರ್ಯನೂ ಒಬ್ಬ-
ನೆಂದೆಣಿಸಿದರೆ ಮತ್ತೆಷ್ಟೆಷ್ಟೋ ಸೌರಮಂಡಲಗಳು
ಗ್ರಹ, ಉಪಗ್ರಹ, ಮಳೆ,ಮಣ್ಣು, ಜೀವರಾಶಿ.
ಕಾಣದ ಜಗತ್ತುಗಳಲ್ಲೆಲ್ಲೋ ಹುಟ್ಟಿ ಸತ್ತವರೆಲ್ಲ
ತಾರೆಗಳಾಗಿ ಮಿನುಗುವುದಕ್ಕೇ ಆಕಾಶದ ಅನಂತ ಅಗಲ
ನಿರ್ಮಾಣವಾಗಿರಬೇಕು, ಅಸಂಖ್ಯಾತ ಸೂರ್ಯ ಚಂದ್ರರ ಜೊತೆಗೆ
ಸುತ್ತುತ್ತಲೇ ಇರುವ ಅನ್ಯ ಗ್ರಹಗಳ ಲೆಕ್ಕ ಯಾರಿಗೆ ಸಿಕ್ಕಬೇಕು?
ನಿರಂತರ ಸಂಶೋಧನೆಯಿಂದ ಸಿಕ್ಕಿರುವ ದೇವಕಣ-
ವಾದರೂ ತೆರೆಸಲಿ ಮುಚ್ಚಿರುವ ಕಣ್ಣುಗಳೊಳಗಿರುವ ಋಣ
ದ ಸೆಲೆಗಳನ್ನು, ನಕ್ಷತ್ರವಾಗುವ ಆಸೆಗಳನ್ನು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.