ADVERTISEMENT

ನವರಾತ್ರಿಯ ಸಾಂಸ್ಕೃತಿಕ ಸೊಬಗು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2010, 18:30 IST
Last Updated 20 ಅಕ್ಟೋಬರ್ 2010, 18:30 IST

ನವರಾತ್ರಿ ಮೈಸೂರಿನಲ್ಲಿ ಒಂದು ವೈಭವೋಪೇತ ರೂಪ ಪಡೆದರೆ, ರಾಜಧಾನಿ ಬೆಂಗಳೂರೇನೂ ಕಡಿಮೆ ಇಲ್ಲ. ಮೈದಾನಗಳಲ್ಲಿ ಸಾಮೂಹಿಕ ದುರ್ಗಾಪೂಜೆ ನಡೆದರೆ, ದೇವಾಲಯಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರನ್ನು ಆಕರ್ಷಿಸಿದವು. ಬಹುತೇಕ ಎಲ್ಲ ದೇವಸ್ಥಾನಗಳು ವಿಶೇಷ ಪೂಜೆ ಪುನಸ್ಕಾರಗಳನ್ನು ನಡೆಸಿದರೂ, ದೇವಿ ಸನ್ನಿಧಾನಗಳಿರುವೆಡೆ ವಿಶಿಷ್ಟ ಅಲಂಕಾರಗಳು ಗಮನ ಸೆಳೆದವು.

ಅಂಥ ಒಂದು ಸನ್ನಿಧಾನವೇ ಬಸವೇಶ್ವರ ನಗರದ ಶ್ರೀ ಆವನಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನ.  ಇಲ್ಲಿ ನವರಾತ್ರಿಯ ಅಂಗವಾಗಿ ದುರ್ಗಾಸಪ್ತಶತಿ, ಭಾಷ್ಯತ್ರಯ, ರಾಮಾಯಣ ಪಾರಾಯಣ, ಚಂಡಿಕಾ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಅಭಿನವ ವಿದ್ಯಾಶಂಕರ ಭಾರತಿ ಸ್ವಾಮಿಗಳ ಮಾರ್ಗದರ್ಶನದಲ್ಲಿ ಶ್ರದ್ಧಾಪೂರ್ವಕವಾಗಿ ನಡೆದವು.

ಅಲ್ಲದೆ ಜಂಭುನಾಥ ಘನಪಾಟಿ (ಯಜುರ್ವೇದ), ಎಸ್. ವಿ. ಶ್ಯಾಮಭಟ್ (ಋಗ್ವೇದ), ಸುಧಾ ರಘುನಾಥನ್ (ಗಾಯನ), ಟಿ.ಎ.ಎಸ್. ಮಣಿ (ಮೃದಂಗ) ಹಾಗೂ ಕೆ.ಎಂ. ಶ್ರೀನಿವಾಸಮೂರ್ತಿ (ಸಮಾಜ ಸೇವೆ) ಅವರುಗಳನ್ನು ‘ಆಸ್ಥಾನ ವಿದ್ವಾನ್’ ಬಿರುದಿನಿಂದ ಗೌರವಿಸಲಾಯಿತು. ಗಾಯನವಲ್ಲದೆ ಯುಗಳ ಗಾಯನ, ವೀಣೆ, ವೇಣುವಾದನ ಹಾಗೂ ಯಕ್ಷಗಾನಗಳು ಜನಬೆಂಬಲದಿಂದ ನಡೆದವು.

ಇಲ್ಲಿ ಕಳೆದ ವಾರ ಹಾಡಿದ ಸಾಕೇತರಾಮನ್ ಅವರು ಸಂಗೀತಾಭಿಮಾನಿಗಳಿಗೆ ಸುಪರಿಚಿತರಲ್ಲದೇ ಹೋದರೂ, ಹೊಸಬರೇನಲ್ಲ. ಒಂದು ಸಂಗೀತ ಕುಟುಂಬದಿಂದ ಬಂದು, ಹಿರಿಯರಲ್ಲಿ ಕ್ರಮಬದ್ಧ ಶಿಕ್ಷಣ ಪಡೆದು, ನಗರದಲ್ಲಿ ಒಂದು ವಿದ್ಯುನ್ಮಾನ ಕಚೇರಿಯಲ್ಲಿ ಉದ್ಯೋಗದಲ್ಲಿದ್ದಾರೆ. ಅವರ ಆಯ್ಕೆ - ನಿರೂಪಣೆಗಳೆರಡೂ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.

ADVERTISEMENT

ನಾಸಿಕ ಭೂಷಣಿ ರಾಗದ ’ಮಾರ ವೈರಿರಮಣಿ’ ಕೃತಿ ಹೃದ್ಯವಾಗಿ ಮೂಡಿತು. ಕಿರು ಸ್ವರ ಪ್ರಸ್ತಾರದೊಂದಿಗೆ, ಸ್ವಲ್ಪ ದ್ರುತ ಕಾಲದಲ್ಲಿ ಹಾಡಿದ ‘ಅಂಬಾ ಪರದೇವತೆ’ ಕೃತಿಯು, ಒಂದು ಕಾಲದಲ್ಲಿ ಬಹುವಾಗಿ ಚಾಲ್ತಿಯಲ್ಲಿದ್ದಿತ್ತು. ರಾಗಾಲಾಪನೆ ಸ್ವರ ಪ್ರಸ್ತಾರಗಳಿಂದ ವಿಸ್ತಾರಗೊಂಡ ‘ಮರಕತವಲ್ಲಿ’ ಕಾರ್ಯಕ್ರಮದ ಪ್ರಧಾನ ರಚನೆಯಾಗಿತ್ತು. ಮಧುರ ಕಂಠ, ಲಾಲಿತ್ಯಪೂರ್ಣ ಸಂಗತಿಗಳು, ಭಾವಪೂರ್ಣ ನಿರೂಪಣೆಗಳು ಸಾಕೇತರಾಮನ್ ಅವರ ಗಾಯನವನ್ನು ಪ್ರಿಯವಾಗಿಸಿದವು.

ಉತ್ತರಾರ್ಧದಲ್ಲಿ ಶ್ರೀಜಗದೀಶ್ವರಿ ದುರ್ಗಾ ಮಾತಾ, ತಿರುಪತಿ ವೆಂಕಟರಮಣ, ಮಾನಸ ಸಂಚರರೆ, ವಿಶ್ವೇಶ್ವರ ದರುಶನ್ ಕರೆ ಮುಂತಾದ ಜನಪ್ರಿಯ ಭಕ್ತಿ ಗೀತೆಗಳನ್ನು ಹಾಡಿದರು. ಪಿಟೀಲಿನಲ್ಲಿ ಎಚ್.ಕೆ. ವೆಂಕಟರಾಂ, ಮೃದಂಗದಲ್ಲಿ ಎಚ್.ಎಸ್. ಸುಧೀಂದ್ರ ಹಾಗೂ ಘಟದಲ್ಲಿ ಎಸ್. ಎನ್. ನಾರಾಯಣಮೂರ್ತಿ ಕಛೇರಿಯ ಯಶಸ್ಸಿನಲ್ಲಿ ಪಾಲ್ಗೊಂಡರು.

ಮಧುರ ಗಾಯನ:
ಶನಿವಾರದಂದು ಶ್ರೀಮಠದಲ್ಲಿ ಕಾರ್ಯಕ್ರಮ ನೀಡಿದ ನಾಲ್ವರಲ್ಲಿ ಮೂವರು ‘ಗಾನಕಲಾಶ್ರೀ’ ಬಿರುದಾಂಕಿತರು. ಗಾಯಕಿ ಎಂ.ಎಸ್. ಶೀಲಾ, ಪಿಟೀಲು ವಾದಕಿ ನಳಿನಾ ಮೋಹನ್ ಮತ್ತು ಮೃದಂಗ ವಾದಕ ಸಿ. ಚೆಲುವರಾಜ್ ಅವರು ಈ ಗೌರವಕ್ಕೆ ಭಾಜನರು. ಅವರೊಂದಿಗೆ ಘಟ ವಾದ್ಯ ನುಡಿಸಿದವರು ದಯಾನಂದ ಮೋಹಿತೆ.
ದೇವಿ ಹಾಗೂ ಸರಸ್ವತಿಯರ ಮೇಲಿನ ರಚನೆಗಳನ್ನೇ ಹೆಚ್ಚಾಗಿ ಆಯ್ದುದು ಸಂದರ್ಭೋಚಿತವಾಗಿತ್ತು. ಮೊದಲಿನಿಂದಲೂ ‘ಸರಸೀರುಹಾಸನಪ್ರಿಯೆ’ ಕೇಳುಗರಿಗೆ ಪ್ರಿಯವಾದುದೇ.

ದೀಕ್ಷಿತರ ಅಭಯಾಂಬಾ ನವಾವರಣದಿಂದ ಆಯ್ದ ಒಂದು ಕೃತಿಯ ನಂತರ ಹಳೆಯ ಮೈಸೂರಿನಲ್ಲಿ ಒಂದು ಕಾಲಕ್ಕೆ ಬಹು ಬಳಕೆಯಲ್ಲಿದ್ದ ‘ಸಾರಸಮುಖಿ’, ಮುತ್ತಯ್ಯ ಭಾಗವತರ ಒಂದು ಸುಪರಿಚಿತ ಕೀರ್ತನೆ, ವಿಸ್ತಾರಕ್ಕೆ ‘ಅಮ್ಮ ರಾವಮ್ಮ’ ಆರಿಸಿದ್ದೇ ಅಭಿನಂದನೀಯ. ಆಲಾಪನೆ, ಸ್ವರಗಳಿಂದ ಕೃತಿಯನ್ನು ಬೆಳಗಿಸಿದರು. ನೆರವಲ್ (ತಾಮರಸ ನೇತ್ರ) ಸಹ ಕೃತಿಗೂ - ರಾಗಕ್ಕೂ ಪೂರಕವಾಗಿ ಹೊಮ್ಮಿತು.
‘ಮಾಮವಸದಾ’ ಮತ್ತು ‘ದುರ್ಗಾದೇವಿ’ ನಂತರ ಮಧ್ಯಮಾವತಿ ರಾಗವನ್ನು ಹಿತಮಿತವಾಗಿ ಪಸರಿಸಿ, ಕೃತಿಗೆ ಮುನ್ನುಡಿ ಹಾಕಿದರು. ಘನವಾದ ಕೃತಿ ‘ಧರ್ಮಸಂವರ್ಧಿನಿ’ಯನ್ನು ಪ್ರೌಢವಾಗೂ, ಆಹ್ಲಾದಕರವಾಗೂ ನಿರೂಪಿಸಿದರು. ಪಕ್ಕ ವಾದ್ಯಗಾರರು ತಮ್ಮ ಹೊಣೆಯನ್ನು ಚೆನ್ನಾಗಿ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.