ADVERTISEMENT

ನಾಡಿಗಾಗಿ ಕಾಡು, ಕಾಡಿಗಾಗಿ ಗಿರಿ

ಘನಶ್ಯಾಮ ಡಿ.ಎಂ.
Published 23 ನವೆಂಬರ್ 2013, 19:30 IST
Last Updated 23 ನವೆಂಬರ್ 2013, 19:30 IST

ಅದು ಚಿಕ್ಕಮಗಳೂರಿನ ಕೊರೆಯುವ ಚಳಿ ದಿನಗಳ ಒಂದು ಮುಂಜಾವು, ಬೆಳಿಗ್ಗೆ 5.45ಕ್ಕೆ ಡಿ.ವಿ. ಗಿರೀಶ್ ಅವರ ಫೋನ್– ‘ರೆಡೀನಾ...?’ ಎನ್ನುವ ಪ್ರಶ್ನೆ. ‘ಇದೋ ಬಂದೆ’ ಎಂದು ಓಡಿದೆ. ಅಂಬಳೆ ಕೆರೆ, ಬೇಲೂರು ಕೆರೆ, ಬೆಳವಾಡಿ ಕೆರೆ ನೋಡಿಕೊಂಡು ಚಿಕ್ಕಮಗಳೂರಿನ ಕೋಟೆಕೆರೆ ಸನಿಹಕ್ಕೆ ಬಂದೆವು. ದಾರಿಯುದ್ದಕ್ಕೂ ಪಕ್ಷಿ ಜಗತ್ತಿನ ವೀಕ್ಷಕ ವಿವರಣೆ. ಒಂದೊಂದು ಪಕ್ಷಿಗೂ ಇರುವ ಪಾರಿಸರಿಕ ಮಹತ್ವ, ಅದು ಎಲ್ಲಿಂದ ಬರುತ್ತದೆ, ಅದರ ಆಹಾರ ಪದ್ಧತಿ, ಜೀವನ ಕ್ರಮ, ವಲಸೆ ಹಕ್ಕಿಯ ಒತ್ತಡಗಳು ಇತ್ಯಾದಿ ಇತ್ಯಾದಿ...

ಹಾದಿ ಮಧ್ಯೆ ಕಳಸಾಪುರ ಸಮೀಪ ಜಿಪ್ಸಿ ಘಕ್ಕನೆ ನಿಂತಿತು. ಯಾರೋ ಒಂದಿಬ್ಬರು ಮೊಲ ಹಿಡಿಯಲು ತಂತಿ ಉರುಳು ಹಾಕಿ, ಮೀನಿನ ಬಲೆ ಹರಡಿದ್ದರು. ಜೀಪ್‌ನಲ್ಲಿದ್ದ ವೀರೇಶ್ ಮತ್ತು ಅಮಿತ್ ಚುರುಕಾಗಿ ಇಳಿದು ಓಡಿದರು. ಒಂದಷ್ಟು ದೂರ ಓಡಿದ ಮೇಲೆ ‘ಸಿಗಲಿಲ್ಲ ಸಾರ್’ ಎಂದು ಹ್ಯಾಪು ಮೋರೆ ಹಾಕಿಕೊಂಡು ಹಿಂತಿರುಗಿದರು. ‘ಆ ತಂತಿ– ಬಲೆ ಎತ್ತಾಕ್ಕೊಳ್ರೋ. ಫಾರೆಸ್ಟ್‌ನರ್ವಿಗೆ ಕೊಡೋಣ’ ಎಂದು ಆದೇಶಿಸಿ ಮಿಲಿಟರಿ ಆಫೀಸರ್ ಗತ್ತಿನಲ್ಲಿ ಗಿರೀಶ್ ಜಿಪ್ಸಿ ಸ್ಟಾರ್ಟ್ ಮಾಡಿದರು.

ಚಿಕ್ಕಮಗಳೂರಿನಲ್ಲಿ ಕಾಫಿ  ಹೀರುವಾಗ, ‘ನೀವಿಬ್ರು ಬೇಟೆಗಾರರನ್ನು ಹಿಡಿಯೋಕೆ ಓಡಿದ್ದು ಒಳ್ಳೇದಾಯ್ತು. ನಮ್ಮ ಜೀವ ಹೋದ್ರೂ ನಮ್ಮ ಕಣ್ಣೆದುರು ಅನ್ಯಾಯ ನಡೆಯೋಕೆ ಬಿಡಬಾರದು. ಹಾಗಂತ ಹುಂಬರಂತೆ ಹೋಗಬಾರದು. ಎದುರಿಗಿರೋನ ಸಾಮರ್ಥ್ಯ, ಅವರನ್ನು ಸೋಲಿಸಲು ನಾವೇನು ಮಾಡಬಹುದು ಎಂದು ಮೊದಲು ಯೋಚಿಸಬೇಕು. ಅವರು ಹೆದರಿ ಓಡಿ ಹೋದ್ರು ಒಳ್ಳೇದಾಯ್ತು. ತಿರುಗಿ ಬಿದ್ದು ನಿಮ್ಮ ಮೇಲೆ ಮಚ್ಚು ಬೀಸಿದ್ದರೆ ಏನು ಮಾಡಬೇಕಿತ್ತು?’ ಎಂದು ತಿಳಿ ಹೇಳಿದ್ದರು.

ಗಿರೀಶ್‌ರ ಕಡೆಯೇ ನೋಡುತ್ತಾ ಅವರ ಮಾತನ್ನೇ ಗಮನಿಸುತ್ತಿದ್ದೆ. ಅಂದು ಯಾವುದೋ ಪಕ್ಷಿಯ ಫೋಟೊ ತೆಗೆಯುವ ಭರದಲ್ಲಿ ಫೋಟೊಗ್ರಾಫರ್ ಒಬ್ಬರು ಅತಿಯಾಗಿ ವರ್ತಿಸಿದ್ದರು. ‘ನನಗೆ ಕ್ಯಾಮೆರಾಗಿಂತ ಬೈನಾಕ್ಯುಲರ್ ಇಷ್ಟ. ಬೈನಾಕ್ಯುಲರ್ ಇದ್ದೋರು ಪಕ್ಷಿಗಳನ್ನು ಅರ್ಥ ಮಾಡಿಕೊಳ್ಳೋಕೆ ಶ್ರಮಿಸ್ತಾರೆ. ಕ್ಯಾಮೆರಾ ಇದ್ದೋರು ಯಾವುದಕ್ಕೆ ಏನೇ ಆದ್ರೂ ನಂಗೆ ಫೋಟೊ ಸಿಕ್ರೆ ಸಾಕು ಅಂತ ಪರಿಸರ ಹಾಳು ಮಾಡ್ತಾರೆ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.
‘ಇಡೀ ರಾಜ್ಯಕ್ಕೆ ನೀರು ಕೊಡೋದು ನಮ್ಮ ಜಿಲ್ಲೆ. ಹೇಮಾವತಿ, ತುಂಗಾ, ಭದ್ರಾ, ವೇದಾವತಿ ಹೀಗೆ ಹಲವು ನದಿಗಳಿಗೆ ಇಲ್ಲಿನ ನೀರೇ ಆಗಬೇಕು. ಇಲ್ಲಿನ ಕಾಡು– ಹುಲ್ಲುಗಾವಲು ಸ್ಪಾಂಜ್ ಥರ ನೀರು ಹಿಡಿದಿಟ್ಟುಕೊಂಡು ವರ್ಷವಿಡೀ ಹರಿಸುತ್ತವೆ. ಚಿಕ್ಕಮಗಳೂರಿನ ಪರಿಸರ ಕ್ಷೇಮವಾಗಿದ್ದರೆ ಇಡಿ ಕರ್ನಾಟಕ ಸುಖವಾಗಿರುತ್ತೆ’ ಎಂದು ಜಿಲ್ಲೆಯ ಬಗ್ಗೆ ಹೇಳುವಾಗ ಗಿರೀಶ್‌ರ ಮಾತುಗಳಲ್ಲಿ ಹೆಮ್ಮೆ– ಅಭಿಮಾನ.

‘ವೈಜ್ಞಾನಿಕ ವನ್ಯಜೀವಿ ಸಂರಕ್ಷಣೆ’ ವಿಚಾರದಲ್ಲಿ ಗಿರೀಶ್ ಅವರದ್ದು ದೊಡ್ಡ ಹೆಸರು. ಉಲ್ಲಾಸ ಕಾರಂತ, ಸಾಂಬಾ ಅವರಂಥ ತಜ್ಞರಿಗೆ ಬೆನ್ನೆಲುಬಾಗಿ ನಿಂತವರು ಈ ಗಿರೀಶ್. ಕ್ಯಾಮೆರಾ ಟ್ರಾಪಿಂಗ್ (ಹುಲಿಗಳ ಗಣತಿ), ಲೈನ್ ಟ್ರಾನ್ಸಕ್ಟ್ (ನಿರ್ದಿಷ್ಟ ಪಥದಲ್ಲಿ ಸಂಚರಿಸುವ ಮೂಲಕ ವನ್ಯಜೀವಿ ಮಾಹಿತಿ ಸಂಗ್ರಹ) ವಿಧಾನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಾಡುಗಳಲ್ಲಿರುವ ವನ್ಯಜೀವಿಗಳ ಬಗ್ಗೆ ನಿಖರ ಮಾಹಿತಿ ಅವರಲ್ಲಿದೆ. ಮುತ್ತೋಡಿ ಕಾಡಿನ ಪ್ರತಿ ಮರವನ್ನೂ ಅವರು ನೋಡಿದ್ದಾರೆ. ಕಾಡಿನಲ್ಲಿ ಯಾವುದೇ ಜೀವಿಯ ಕೂಗು ಕೇಳಿದರೂ ಸಾಕು; ಇದು ಇಂಥದ್ದೇ ಪ್ರಾಣಿಯ ಕೂಗು- ಇಂಥ ಕಾರಣಕ್ಕೇ (ಸಂಗಾತಿ ಬಯಸಿ, ಹೆದರಿಕೆಯಿಂದ, ಎಚ್ಚರಿಕೆಗಾಗಿ ಇತ್ಯಾದಿ) ಹೀಗೆ ಕೂಗುತ್ತಿದೆ ಎಂದು ವಿವರಿಸುವ ತಿಳಿವು ಅವರದು.

ಭದ್ರಾ ಅಭಯಾರಣ್ಯದಲ್ಲಿ ಬೆಂಕಿ ಬಿದ್ದಾಗ, ಮುತ್ತೋಡಿ ಪುನರ್ವಸತಿ, ಕುದುರೆಮುಖ ಎತ್ತಂಗಡಿ, ಕೆಮ್ಮಣ್ಣುಗುಂಡಿ ಉಳಿವು, ಗಾಳಿಯಂತ್ರ ವಿವಾದ, ಬ್ರಿಗೇಡ್ ರೆಸಾರ್ಟ್‌ವಿವಾದ, ಬಾಸೂರು ಕಾವಲ್ ಸೀಳುವ ದಾರಿ, ಮೂಡಿಗೆರೆ- ಸಿಸಿಲ ಮಾರ್ಗ ಇತ್ಯಾದಿ ಸಂದರ್ಭದಲ್ಲಿ ಗಿರೀಶ್ ತಳೆದ ನಿಲುವು ಮತ್ತು ನಡೆಸಿದ ಹೋರಾಟವನ್ನು ಇತಿಹಾಸ ನೆನಪಿನಲ್ಲಿಡುತ್ತದೆ.

‘ಇದು ನನ್ನೂರು– ನನ್ನ ಜಿಲ್ಲೆ. ಇದು ಕ್ಷೇಮವಾಗಿದ್ದರೆ ಇಡೀ ರಾಜ್ಯ ಕ್ಷೇಮವಾಗಿರುತ್ತೆ. ಕಾಡಿಗಾಗಿ ಕಾಡು ಉಳಿಯಬೇಕು ಅನ್ನೋದನ್ನು ನಾನು ಒಪ್ಪಲ್ಲ. ನಾಡಿಗಾಗಿ ಕಾಡು ಉಳಿಯಬೇಕು. ಅದರ ಕಾರಣ ಮತ್ತು ನಿರ್ವಹಣೆ ವೈಜ್ಞಾನಿಕವಾಗಿರಬೇಕು. ಒಂದು ಹಂತದವರೆಗೆ ಭಾವುಕತೆ ಓಕೆ. ಅರಣ್ಯ ಸಂರಕ್ಷಣೆಗೆ ಅದಷ್ಟೇ ಸಾಕಾಗದು. ಕುದುರೆಮುಖದಂಥ ದೈತ್ಯ ಕಂಪೆನಿಯನ್ನು ನ್ಯಾಯಾಲಯದಲ್ಲಿ ನಾವು ಸೋಲಿಸಲು ವೈಜ್ಞಾನಿಕ ವಿಧಾನದ ಪರಿಸರ ಮಾಹಿತಿ ಸಂಗ್ರಹಣೆಯೇ ಕಾರಣ. ಹೊಸ ತಲೆಮಾರು ಪರಿಸರ ಅಧ್ಯಯನವನ್ನು ಗಂಭೀರ ವಿಷಯವಾಗಿ ತೆಗೆದುಕೊಂಡಾಗ ಮಾತ್ರ ಈ ನಾಡು ಉಳಿಯುತ್ತದೆ’ ಎನ್ನುವುದು ಗಿರೀಶ್‌ರ ಪ್ರತಿಪಾದನೆ.

ಗಿರೀಶ್ ಅವರನ್ನು ಹುಡುಕಿಕೊಂಡು ವಿಕಾಸವಾದದ ಹರಿಕಾರ ಚಾಲ್ಸ್ ಡಾರ್ವಿನ್ ಮರಿ ಮೊಮ್ಮಗಳು ರೂತ್ ಪಡೆಲ್ ಚಿಕ್ಕಮಗಳೂರಿಗೆ ಬಂದಿದ್ದರು. ಅವರ ಪುಸ್ತಕದಲ್ಲಿ (ಟೈಬರ್ ಇನ್ ರೆಡ್ ವೆದರ್) ಭದ್ರಾ ಅರಣ್ಯ ಮತ್ತು ಗಿರೀಶ್ ಬಗ್ಗೆ ಲೇಖನ ಇದೆ. ದೇಶ ವಿದೇಶದ ಹತ್ತಾರು ತಜ್ಞರು ಅವರ ಬಳಿ ಮಾಹಿತಿ ಕೋರಿ ಬರುವುದು ಸಾಮಾನ್ಯ ಸಂಗತಿ.

ಒಮ್ಮೆ ಬಾಬಾಬುಡನ್‌ಗಿರಿಯ ಶ್ರೀಗುರು ದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾಕ್ಕೆ ತಾಯಿಯಿಂದ ಬೇರ್ಪಟ್ಟ ಹುಲಿಮರಿ ಬಂದಿತ್ತು. ಕಾರ್ತೀಕ ಮಾಸದ ಚಳಿಯಲ್ಲಿ ನಡುಗುತ್ತಿದ್ದ ಹುಲಿಮರಿಯನ್ನು ರಕ್ಷಿಸಿ, ರಾತ್ರೋರಾತ್ರಿ ಚಿಕ್ಕಮಗಳೂರಿನ ಕೋಳಿ ಅಂಗಡಿ ತಡಕಾಡಿ; ಚಿಕನ್ ತಿನ್ನಿಸಿ, ಅರಣ್ಯ ಇಲಾಖೆ ನೆರವಿನೊಂದಿಗೆ ಮೈಸೂರು ಮೃಗಾಲಯಕ್ಕೆ ಕರೆದೊಯ್ದು ಬಿಟ್ಟು ಬಂದರು. ‘ಅನಸೂಯ’ ಹೆಸರಿನ ಹುಲಿಮರಿ ಇಂದು ಮೈಸೂರು ಮೃಗಾಲಯದ ನಿವಾಸಿ.
ಉತ್ಸಾಹದ ಚಿಲುಮೆ ಗಿರೀಶ್ ಕೆಲವೊಮ್ಮೆ ಖಿನ್ನರಾಗುವುದೂ ಇದೆ. ‘ಏನೂ ಉಳಿಯಲ್ಲ, ಎಲ್ಲಾನೂ ಹೊಡಕೊಂಡು ತಿಂತಾರೆ, ಎಲ್ಲರೂ ಹೊಡೆದು ಒಳಗೆ ಹಾಕಿಕೊಳ್ಳೋರೆ. ಪ್ರಾಂಪ್ಟ್ ಆಫೀಸರ್ಸ್ ಬಂದ್ರೆ ಟ್ರಾನ್ಸ್‌ಫರ್ ಮಾಡಿಸ್ತಾರೆ. ಹೊಡಕೊಂಡು ತಿನ್ನೋರು ಬಂದ್ರೆ ಭಜನೆ ಮಾಡ್ತಾರೆ’ ಎನ್ನುವುದು ಅವರ ವಿಷಾದ.

ಅಂದಹಾಗೆ, ಕಾಡು ಅಲೆಯುವುದನ್ನೇ ಉದ್ಯೋಗ ಮಾಡಿಕೊಂಡಿರುವ ಗಿರೀಶ್ ಮನೆ ಕಡೆ ಗಮನ ಕೊಡೋಕೆ ಆಗಲ್ಲ ಅಂತ್ಲೇ ಮದುವೆಯಾಗಿಲ್ಲ.
ಸ್ಕೌಟ್‌ಮಾಸ್ಟ್ರು ಷಡಕ್ಷರಿ, ವನ್ಯಜೀವಿ ಪ್ರೇಮಿ ಸೇತ್ನಾ ಅವರಂಥ ಹಿರಿಯರಿಂದ ಆರಂಭವಾದ ಚಿಕ್ಕಮಗಳೂರಿನ ಪರಿಸರ ಸಂರಕ್ಷಣಾ ಚಳವಳಿ ಡಿ.ವಿ. ಗಿರೀಶ್– ಗಿರಿಜಾಶಂಕರರ ಕಾಲದಲ್ಲಿ ವೇಗ ಪಡೆಯಿತು. ಮುಂದೆ ಉಲ್ಲಾಸ ಕಾರಂತರ ಮಾರ್ಗದರ್ಶನದಲ್ಲಿ ಕುದುರೆಮುಖ ಕೇಸ್ ಗೆದ್ದ ಮೇಲೆ ಇಡಿ ದೇಶ ಅತ್ತ ತಿರುಗಿತು. ಇಂದು ಶ್ರೀದೇವ್ ಹುಲಿಕೆರೆ, ವೀರೇಶ್‌ ಅವರಂಥ ಯುವಕರು ಪರಿಸರ ಚಳವಳಿ ಮುಂಚೂಣಿಗೆ ಬಂದಿದ್ದಾರೆ. ತನ್ನ ಆಸೆಯನ್ನು ಮುಂದಿನ ತಲೆಮಾರು ಅರ್ಥ ಮಾಡಿಕೊಳ್ಳುತ್ತಿದೆ ಎಂಬ ನೆಮ್ಮದಿ ಗಿರೀಶ್‌ಅವರಂಥವರಿಗೆ ಮೂಡಿದೆ.

ಗಿರಿ ಗರಿಮೆ
ವೈಲ್ಡ್‌ಲೈಫ್ ಕನ್ಸರ್ ವೇಶನ್ ಸೊಸೈಟಿಯ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಾರ್ಲ್ ಜೀಸ್ ವೈಲ್ಡ್ ಲೈಫ್ ಕನ್ಸರ್ವೇಶನ್ ಅವಾರ್ಡ್, ಟೈಗರ್ ಗೋಲ್ಡ್– ಇವು ಗಿರೀಶ್ ಅವರಿಗೆ ಸಂದಿರುವ ಕೆಲವು ಪುರಸ್ಕಾರಗಳು. ಇದೀಗ ಗಿರೀಶರಿಗೆ ಸ್ಕಾಟ್ಲೆಂಡ್‌ನ ಪ್ರತಿಷ್ಠಿತ ದಿ ರಾಯಲ್ ಬ್ಯಾಂಕ್ ಆಫ್ ಸ್ಕಾಟ್ಲೆಂಡ್ ‘ಪ್ರೊಟೆಕ್ಟ್ ದಿ ಟೈಗರ್’ ಪ್ರಶಸ್ತಿ.

ಪಶ್ಚಿಮಘಟ್ಟದ ಕುದುರೆಮುಖ- ಮುತ್ತೋಡಿ ಅಭಯಾರಣ್ಯಗಳ ಉಳಿವಿಗೆ ಗಿರೀಶರು ನೀಡಿದ ಕೊಡುಗೆ ದೊಡ್ಡದು. 2001–-02ರಲ್ಲಿ ಭದ್ರ ಅಭಯಾರಣ್ಯದಲ್ಲಿದ್ದ 450ಕ್ಕೂ ಹೆಚ್ಚು ಕುಟುಂಬಗಳ ಸ್ವಯಂ ಪ್ರೇರಿತ ಪುನರ್ವಸತಿ ವಿಚಾರದಲ್ಲಿ ಅವರು ವಹಿಸಿದ ಪಾತ್ರ ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಇದನ್ನು ಭದ್ರಾ ಪುನರ್ವಸತಿ ಯೋಜನೆ ಹುಲಿ ಉಳಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

2001-–02ರಲ್ಲಿ ಮುತ್ತೋಡಿ ವ್ಯಾಪ್ತಿಯ 13 ಹಳ್ಳಿಗಳ (ಮುತ್ತೋಡಿ, ಕೆಸವೆ, ಮಾಡ್ಲ, ದಬ್ಬಗಾರು, ಕರ್ವಾನಿ, ಹೆಬ್ಬೆ, ಕಂಚಿಗಾರು, ಹೆಗ್ಗಾರು, ಮತ್ವಾನಿ, ಹಿರೇಬೆಳ್ಳು, ಒಡ್ಡಿಹಟ್ಟಿ, ಪರದೇಶಪ್ಪನಮಠ, ಹಿಪ್ಲಾ) ಜನರು ಕಾಡುಪ್ರಾಣಿ ಹಾವಳಿ ಮತ್ತು ಸೌಲಭ್ಯ ಕೊರತೆಯಿಂದ ಪುನರ್ವಸತಿಗೆ ಒಪ್ಪಿಕೊಂಡಿದ್ದರು. ಇವರೆಲ್ಲರಿಗೂ ತರೀಕೆರೆ ತಾಲ್ಲೂಕು ಲಕ್ಕವಳ್ಳಿ ಸಮೀಪ ಯೋಗ್ಯ ರೀತಿಯಲ್ಲಿ ಪುನರ್ವಸತಿ ಕಲ್ಪಿಸಲಾಯಿತು. ಇದು ನಮ್ಮ ದೇಶದ ಅತ್ಯುತ್ತಮ ಪುನರ್ವಸತಿ ಎಂದೇ ಪರಿಗಣಿತವಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಜೈರಾಂ ರಮೇಶ್ ಸಹ ಈಚೆಗೆ ಲಕ್ಕವಳ್ಳಿಗೆ ಭೇಟಿ ನೀಡಿ ಪುನರ್ವಸತಿ ಪರಿಶೀಲಿಸಿದ್ದರು.

ಮುತ್ತೋಡಿ ವ್ಯಾಪ್ತಿಯ ಹಳ್ಳಿಗಳ ಪುನರ್ವಸತಿಯ ಪರಿಣಾಮ ಇದೀಗ ಭದ್ರಾ ಅಭಯಾರಣ್ಯದಲ್ಲಿ ಗೋಚರಿಸುತ್ತಿದೆ. ಸುಮಾರು 3000 ದನಗಳು ಕಾಡಿನಿಂದ ಆಚೆ ಹೋದ ನಂತರ ಕಾಡಿನ ಮೇಲಿದ್ದ ಒತ್ತಡ ಕಡಿಮೆಯಾಗಿದೆ. ಕಾಡು ಅದ್ಭುತವಾಗಿ ವಾಪಸ್ (ಬೌನ್ಸ್ ಬ್ಯಾಕ್) ಬಂದಿದೆ. ಹಡ್ಲುಗಳಲ್ಲಿ ಆನೆಯೆತ್ತರದ ಹುಲ್ಲು ಬೆಳೆದಿದೆ. ಪ್ರಸ್ತುತ ಭದ್ರಾ ಅಭಯಾರಣ್ಯದಲ್ಲಿ ಸುಮಾರು 20 ಹುಲಿಗಳು ಇವೆ. 2001ರಲ್ಲಿ ಈ ಪ್ರಮಾಣ 10 ಸಹ ಮೀರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT