೧
ನಾ
ಸತ್ತ ಮೇಲೆ ಸಾವು ಕೊನೆಯೇ?
ಸೇರಿ ಬರುವೆ ಬಯಲು
ನನ್ನ ಶವವೇನಾಗಬೇಕೆಂದು ಬರೆಯುವೆ ಉಯಿಲು
ದೇಹದಾನದ ವರದಲಾಗುವೆ ರೋಗಸವಾಲು
ತಜ್ಞರ ಹುಡುಕಾಟದಲ್ಲಿ ರೋಗ ಸೆಲೆಯ ತಿಣುಕಾಟವಿರಲಿ
ವೈದ್ಯರ ಪ್ರಯತ್ನದಲ್ಲಿ ವಿಜ್ಞಾನದ ಯತ್ನವಿರಲಿ
ವಿದ್ಯಾರ್ಥಿ ಹೊಸ ಹುಡುಕಾಟಕ್ಕೂ ಕೊಡುವೆ ಫಲದ ಫಸಲನು
ರೋಗಮೂಲ ನಾಶವಾಗಿ, ಜೀವಮೂಲ ಆತ್ಮವಾಗಿ
ಎಲುಬಿನ ಗೂಡಲೂ ರೋಗದಂಟಿನ ಗಂಟಿದೆ
ನಶ್ವರ ಶರೀರದಲ್ಲೂ ಬದುಕುವಾಸೆ ಚಿಗುರದೇ?
ಆದರೂ ನಾ ಶವ
ಶವವಾದರೂ ಬಯಸೆ ನಾಶವ
೨
ಸಾವಿನಾಚೆ ಆತ್ಮದಾಚೆ, ಜ್ಞಾನವೆಂಬ ದಿಗಂತದಾಚೆ
ವಿಜ್ಞಾನದ ವ್ಯೋಮದಲ್ಲಿ ಈಜು ಹೊಡೆಯುವೆ
ಧೂಮವಲಯದ ಯಮದಲ್ಲಿ, ಮಲಮೂತ್ರದ ಮಜ್ಜನದಲಿ
ಅಣು ಅಣುವಿನ ಕಣದಲ್ಲೂ ಕಣಾದವಾಗುವೆ
ಅಯಾನಿನ ನಿಧನಿಧಾನದ ಯಾನದ ಗುಂಟ
ಚಲನವಲನದ ರುಜುವಾತಾಗಿ
ಋಣಧನ ವಿದ್ಯುತ್ತಿನಲ್ಲೂ ಶಕ್ತಿ ತುಂಬುವೆ
ಜೀವ ಸಂಕುಲದ ಸೆಲೆಯಾಗಿ ಬದುಕಬಯಸುವೆ
ಆದರೂ ನಾ ಶವ
ಶವವಾದರೂ ಬಯಸೆ ನಾಶವ
೩
ವಾದ ಸಂವಾದದಲಿ ಸಂಬಂಧದ ಸೂತ್ರ ಹಿಡಿದು
ನಾದಬಿಂದು ಕಲಾತೀತ ಜೀವ ಬಂದು ಕಳಾತೀತ
ಅಣು ಅಣುವಿನ ಯಾನದ ರಸಾಯನ
ಕೊಳೆತ ಕೊಳೆ ತೊಳೆವ ಜೀವ ಪಾವನ
ಬದುಕು ವಾಂಛೆಯಲಿ ಸಂಚರಿಸಿ
ಹೊಳೆವ ಬೆಳಕೇ ಮಿಂಚಾಗಿ
ಕಣ ಕಣದ ನಾದದಲ್ಲೂ ಕಣಾದನ ಸಂದೇಶ ಸಾರುವೆ
ಅಲ್ಲಿ ಇಲ್ಲಿ ಎಲ್ಲೆಲ್ಲೂ,
ಕಂಡಲ್ಲಿ ಕಾಣದಲ್ಲಿ ಅಂಡಾಂಡ ಪಿಂಡವಾಗಿ
ಜಗದ ಸಿರಿಯ ರೂಪದಲ್ಲಿ, ನೆಲದನಲದ ಉಸಿರಾಗಿ
ಹಸಿರ ಸಿರಿಯ ಕಣ್ಣೋಟದಲ್ಲಿ, ಬೀಜ ಬಸಿರ ಬಿಸುಪಾಗಿ
ವಾದವಿರಲಿ ವಿವಾದವಿರಲಿ, ಬದುಕ ಪಸೆ ಇದೆ ಜೀವದಲ್ಲಿ
ಸಸ್ಯ ಬುಡದ ಬೇರಲ್ಲಿ ಅಂತರಾಳವಾಗುವೆ
ನೀರಿನಾಳದ ದಾರಿಗುಂಟ ಹರಿಯುವೆ
ಕೊಂಬೆ ರೆಂಬೆ ಮೊಗ್ಗಾಗಿ, ಹೂವ ಮಕರಂದ ಸಿಹಿಯಾಗಿ
ದುಂಬಿಗಮೃತವಾಗಿ ಬದುಕುವೆ, ಅಮರತ್ವದ ಸಂದೇಶ ಸಾರುವೆ
ಆದರೂ ನಾ ಶವ
ಶವವಾದರೂ ಬಯಸೆ ನಾಶವ
೪
ಶಿವಶಿವೆಯರ ವಾದದಲ್ಲಿ ಬುದ್ಧನ ಮೌನ ಮಾತಾಗಿ
ಬಸವ ಕಾಯಕ ತತ್ವದಲಿ, ಅಲ್ಲಮನ ಜ್ಞಾನವಾಗಿ
ಮಾರ್ಕ್ಸ್‌ನ ಸಮತೆಯಲ್ಲಿ ಮನದ ಮಲ್ಲಿಕಾರ್ಜುನನಾಗಿ
ಮಾತಾಗಿ ಕಥೆಯಾಗಿ ಕತೆಯ ಹೇಳುವೆ
ಕೇಳುಗರಿದ್ದಲ್ಲಿಗೆ ಬದುಕಿ ಬರುವೆನಿಲ್ಲಿಗೆ
ಇಹಲೋಕದ ಸ್ವರ್ಗ ಚಂದ
ಇದೇ ಅಂದ ಇದೇ ಚಂದ
ಇದಕೆ ಮಿಗಿಲು ಯಾವುದೆಂದು
ಕೈಲಾಸವೇ ಇಲ್ಲಿದೆಯೆಂದು
ಬದುಕಿ ಬರುವೆನಿಲ್ಲಿಗೆ ಕೇಳುಗರಿದ್ದಲ್ಲಿಗೆ
ಆದರೂ ನಾ ಶವ
ಶವವಾದರೂ ಬಯಸೆ ನಾಶವ
–ಶಂಕರಯ್ಯ ಆರ್. ಘಂಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.