ADVERTISEMENT

ನಿಜವಾದ ಸಂಪಾದನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2010, 12:25 IST
Last Updated 20 ಡಿಸೆಂಬರ್ 2010, 12:25 IST

ಕೈತುಂಬಾ ಗಳಿಸುತ್ತಿದ್ದ ಅವನು ವ್ಯಯಿಸುವುದರಲ್ಲಿ ಮಾತ್ರ ಜಿಪುಣ. ಅವನ ಬಳಿ ಹಣ ಹೆಚ್ಚುತ್ತಾ ಹೋದಂತೆ ಅವನಿಗೆ ನಿದ್ರೆ ಬಾರದಾಯಿತು. ತಾನು ಗಳಿಸಿದ ಹಣ ಮತ್ತು ಒಡವೆಗಳು ಸುರಕ್ಷಿತವಾಗಿಲ್ಲ ಎಂದು ಪದೇ ಪದೇ ಅನಿಸತೊಡಗಿತು. ಅದರಿಂದ ಒಂದು ದಿನ ಹೆಂಡತಿ ಮತ್ತು ಮಗನಿಗೆ ತಿಳಿಸದೇ ಹಣ ಮತ್ತು ಒಡವೆಗಳನ್ನು ಬಟ್ಟೆಯಲ್ಲಿ ಕಟ್ಟಿ ಮನೆಯ ಹಿಂದೆ ಹೂತಿಟ್ಟ.

ಆದರೆ ಪ್ರತೀದಿನ ಬೆಳಿಗ್ಗೆ-ರಾತ್ರಿ ಅದನ್ನು ಅಗೆದು ನೋಡಿ ಹಣ, ಒಡವೆ ಇರುವುದನ್ನು ಖಚಿತಪಡಿಸಿಕೊಂಡು ಮಲಗುತ್ತಿದ್ದ. ಒಂದು ದಿನ ಅದು ಮಗನ ಅರಿವಿಗೂ ಬಂತು. ಆದರೆ ಪ್ರಾಮಾಣಿಕನಾಗಿದ್ದ ಮಗ ಅದರ ಬಗೆಗೆ ಹೆಚ್ಚು ಯೋಚಿಸಲಿಲ್ಲ.

ಒಂದು ದಿನ ಅವರ ಮನೆಯ ಕೆಲಸದಾಳು, ‘ತನ್ನ ಮಗಳು ಬಾಣಂತಿ. ಮನೆಯಲ್ಲಿ ಊಟವಿಲ್ಲ. ದಯವಿಟ್ಟು ಹಣದ ಸಹಾಯ ಮಾಡಿ’ ಎಂದು ಕೇಳಿದಾಗ ಜಿಪುಣ ತನ್ನ ಬಳಿ ಹಣ ಇಲ್ಲ ಎಂದು ಹೇಳಿ ಕಳುಹಿಸಿದ.ಪ್ರತೀ ದಿನ ಹಣವನ್ನು ಹೂತಿಡುತ್ತಿರುವ ತನ್ನ ಅಪ್ಪ ಕಷ್ಟ ಎಂದು ಬಂದವರಿಗೆ ಹಣ ನೀಡಲಿಲ್ಲವಲ್ಲ ಎಂದು ಮಗ ನೊಂದುಕೊಂಡ. ರಾತ್ರಿ ಅಪ್ಪ ಮಲಗಿದ ನಂತರ ಹೂತಿಟ್ಟ ಹಣವನ್ನು ಕದ್ದು ಬಡವನಿಗೆ ನೀಡಿದ.

ಹಣ ಕಳುವಾಗಿರುವುದು ಜಿಪುಣನ ಗಮನಕ್ಕೆ ಬಂದು ಅವನು ಗೋಳಾಡಲು ಆರಂಭಿಸಿದ. ಆಗ ಮಗ, ತಾನು ಹಣವನ್ನು ಬಡವನಿಗೆ ಕೊಟ್ಟಿರುವುದಾಗಿ ಹೇಳಿ, ‘ಅಪ್ಪ ಹಣ ಇರುವುದೇ ಖರ್ಚು ಮಾಡಲು. ಅದು ನಿರುಪಯೋಗಿಯಾಗಿ ಬಿದ್ದಿರುವ ಬದಲು ಯಾರಿಗಾದರೂ ಉಪಯೋಗವಾಗುವುದು ಒಳಿತು’ ಎಂದು ಹೇಳಿದ.

ಆಗ ಜಿಪುಣ ಅದನ್ನು ನಿನಗಾಗಿಯೇ ನಾನು ಸಂಪಾದಿಸಿ ಇಡುತ್ತಿದ್ದೆ ಎಂದ. ಆಗ ಮಗ, ‘ನೀನು ನನಗಾಗಿ ಸಂಪಾದಿಸಿ ಇಡಬೇಕಿರುವುದು ಹಣವನ್ನಲ್ಲ. ಒಳ್ಳೆಯತನವನ್ನು. ನನಗೆ ಬೇಕಾದ ಹಣವನ್ನು ನಾನೇ ಸಂಪಾದಿಸಿಕೊಳ್ಳುತ್ತೇನೆ. ನನಗಾಗಿ ನೀನು ಸಂಪಾದಿಸಿದ ಹಣವನ್ನು ಖರ್ಚು ಮಾಡದೇ ಜಿಪುಣತನದ ಜೀವನ ನಡೆಸುವ ಅಗತ್ಯವಿಲ್ಲ. ದಾನ ಮಾಡುವ ಸಾಮರ್ಥ್ಯವಿದ್ದರೂ ಕೂಡಿ ಇಡುವ ಕೆಲಸವನ್ನು ಇನ್ನು ಮುಂದೆ ಮಾಡಬೇಡ’ ಎಂದು ಹೇಳಿದಾಗ ಅಪ್ಪ ತಲೆತಗ್ಗಿಸಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.